HOME » NEWS » Coronavirus-latest-news » MINISTERS AND OFFICERS MAY DO VIDEO CONFERENCE TO OVERSEE SITUATION INSTEAD OF VISITING PHYSICALLY MVS SNVS

Coronavirus: ಸಚಿವರು, ಅಧಿಕಾರಿಗಳಿಗೆ ಸೋಂಕು ತಗುಲಲ್ವಾ? ಜಿಲ್ಲಾ ಪ್ರವಾಸದ ಬದಲು ವಿಡಿಯೋ ಕಾನ್ಫರೆನ್ಸ್ ಆಗಲ್ವಾ?

ಈಗ ಪ್ರತಿಯೊಂದು ಜಿಲ್ಲಾ ಕೇಂದ್ರಗಳಷ್ಟೇ ಅಲ್ಲ, ತಾಲೂಕು ಕೇಂದ್ರಗಳಲ್ಲಿಯೂ ತಹಸೀಲ್ದಾರ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡುವಷ್ಟು ತಂತ್ರಜ್ಞಾನ ಬೆಳೆದಿದೆ.

news18-kannada
Updated:April 13, 2020, 1:03 PM IST
Coronavirus: ಸಚಿವರು, ಅಧಿಕಾರಿಗಳಿಗೆ ಸೋಂಕು ತಗುಲಲ್ವಾ? ಜಿಲ್ಲಾ ಪ್ರವಾಸದ ಬದಲು ವಿಡಿಯೋ ಕಾನ್ಫರೆನ್ಸ್ ಆಗಲ್ವಾ?
ವಿಡಿಯೋ ಕಾನ್ಫೆರೆನ್ಸ್ ನಡೆಸುತ್ತಿರುವ ಒಂದು ಫೈಲ್ ಚಿತ್ರ
  • Share this:
ವಿಜಯಪುರ(ಏ. 13): ವಿಶ್ವಾದ್ಯಂತ ಈಗ ಕೊರೊನಾ ಅಟ್ಟಹಾಸ, ಕೊರೊನಾ ಭೀತಿ ಎಲ್ಲರನ್ನೂ ಕಾಡುತ್ತಿದೆ.  ಜನರಷ್ಟೇ ಅಲ್ಲ, ಈಗ ಪ್ರಾಣಿಗಳಿಗೂ ಈ ಸೋಂಕು ಪಸರಿಸಿದ್ದು, ಜೀವ ಸಂಕುಲಕ್ಕೆ ಆತಂಕ ತಂದೊಡ್ಡಿದೆ. ಕೊರೊನಾ ಎಮರ್ಜೆನ್ಸಿ ಆರಂಭವಾದಾಗಿನಿಂದ ಸರಕಾರಗಳ ನಿರ್ದೇಶನದಂತೆ ಬಹುತೇಕ ಜನರು ತಮ್ಮ ಮನೆಗಳಲ್ಲಿಯೇ ಲಾಕ್ ಡೌನ್ ಆಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಸಚಿವರು ಜಿಲ್ಲಾವಾರು ಪ್ರವಾಸ ಕೈಗೊಳ್ಳುವ ಮೂಲಕ ಕೆಲಸ ಮಾಡುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ, ಜನರಿಗೆ ಹತ್ತಿರವಾಗುವ ಮತ್ತು ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. 

ಸಚಿವರು ಜಿಲ್ಲಾವಾರು ಪ್ರವಾಸದಿಂದ ತಾವು ಕ್ರಿಯಾಶೀಲರಾಗಿರುವುದನ್ನು ತೋರಿಸಬಹುದಾಗಿದೆ. ಆದರೆ, ಈ ಸಚಿವರೂ ಕೂಡ ಮನುಷ್ಯರಲ್ಲವೇ? ಕೊರೊನಾ ಇವರಿಗೇನೂ ವಿಶೇಷ ವಿನಾಯಿತಿ ನೀಡುತ್ತಿದೆಯಾ ಎಂಬ ಭೀತಿ ಈಗ ಆವರಿಸಿದೆ. ಇದಕ್ಕೆ ಕಾರಣ ಇಷ್ಟೇ, ಸಚಿವರು ಜಿಲ್ಲಾ ಪ್ರವಾಸ ಕೈಗೊಳ್ಳುವಾಗ ಮೂರ್ನಾಲ್ಕು ಜನರೊಂದಿಗೆ ಬಂದಿರುತ್ತಾರೆ. ಅವರಿಗಾಗಲಿ ಅಥವಾ ಅವರು ಬಂದಿರುವ ಜಿಲ್ಲೆಗಳಲ್ಲಿ ಸಭೆ ನಡೆಸುವ ಸ್ಥಳದಲ್ಲಿರುವವರಿಗಾಗಲಿ ಈ ಅದೃಶ್ಯ ವೈರಸ್ ಸೋಂಕಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ? ಹೀಗೆ ಪ್ರಯಾಣ ಮಾಡುವುದರಿಂದ ಅವರು ಎಲ್ಲಿಂದಲೋ ಕೊರೊನಾ ತರುತ್ತಾರೋ ಅಥವಾ ಇಲ್ಲಿಂದ ಕೊರೊನಾ ತೆಗೆದುಕೊಂಡು ಬೇರೆ ಕಡೆ ಹೋಗುತ್ತಾರೋ ಗೊತ್ತಿಲ್ಲ.

ಇಂದಿನ ಆಧುನಿಕ ಯುಗದಲ್ಲಿ ನಗರವಾಸಿಗಳಿಂತ ಬುದ್ಧಿವಂತರಾಗಿರುವ ಗ್ರಾಮೀಣ ಭಾಗದ ಜನ ಮೊಬೈಲಿನಲ್ಲಿಯೇ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರೆ. ವಾಟ್ಸಪ್ ಮೂಲಕ ಚಾಟ್ ಮಾಡುತ್ತಾರೆ. ಫೇಸ್ ಬುಕ್ ಮೂಲಕ ಲೈವ್ ಸಂದೇಶ ನೀಡುತ್ತಾರೆ. ಈ ತಂತ್ರಜ್ಞಾನವನ್ನು ವಿಡಿಯೋ ಕಾನ್ಫರೆನ್ಸ್ ನಡೆಸುವ ಮೂಲಕ ರಾಜ್ಯದ ಸಚಿವರು ಯಾಕೆ ಅಧಿಕಾರಿಗಳ ಸಭೆ ನಡೆಸಬಾರದು? ಇದರಿಂದ ಸಚಿವರು ಪ್ರವಾಸ ಕೈಗೊಳ್ಳುವ ಸಮಯ ಮತ್ತು ಹಣ ಉಳಿತಾಯವಾಗುವುದಿಲ್ಲವೇ? ಸುರಕ್ಷಿತ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸಿದಂತಾಗುವುದಿಲ್ಲವೇ? ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ: ಹಾಸನ ಪೊಲೀಸರ ಹೊಸ ವೆಬ್​ಸೈಟ್​ನಲ್ಲಿ ತುರ್ತು ಪಾಸ್​ಗೆ ಅರ್ಜಿ ಸಲ್ಲಿಸಲು ಅವಕಾಶ

ಬೇರೆ ಪರಿಸ್ಥಿತಿಯಲ್ಲಾದರೆ ಸಚಿವರು ಜಿಲ್ಲಾ ಪ್ರವಾಸ ಕೈಗೊಂಡರೆ ಈಗನಂತೆ ಭಯಪಡುವ ಅಗತ್ಯವಿಲ್ಲ. ಈಗ ಪರಿಸ್ಥಿತಿಯೇ ವಿಭಿನ್ನವಷ್ಟೇ ಅಲ್ಲ, ಭಯಾನಕವಾಗಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈಗ ಸಭೆಗಳಿಗಾಗಿ ವಿಡಿಯೋ ಕಾನ್ಫರೆನ್ಸ್ ಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಸಲಹೆ, ಸೂಚನೆ ನೀಡಿ ಮಾಹಿತಿ ಪಡೆದು ಕೊರೊನಾ ವಿರುದ್ಧದ ಹೋರಾಟಕ್ಕೆ ಕ್ರಮ ಕೈಗೊಳ್ಳುತ್ತಿದ್ದಾರೆ. ಇದಾದರೂ ರಾಜ್ಯ ಸರಕಾರ ಮತ್ತು ಸಚಿವರಿಗೆ ಅರ್ಥವಾಗಬಾರದೇ?

ರಾಜ್ಯದ ಕೆಲವು ಜಿಲ್ಲೆಗಳಂತೂ ಕೊರೊನಾ ಹಾಟ್ ಸ್ಪಾಟ್ ಗಳಾಗಿವೆ. ಬೆಂಗಳೂರು, ಮೈಸೂರು, ಕಲಬುರಗಿ, ಬಾಗಲಕೋಟೆಯಂಥ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.  ಈ ಜಿಲ್ಲೆಗಳಿಗೆ ಸಚಿವರು ಭೇಟಿ ನೀಡಿ ಸಭೆ ನಡೆಸಿ ಕೊರೊನಾ ಪರಿಣಾಮ ಕಡಿಮೆಯಾಗಿರುವ ಜಿಲ್ಲೆಗಳಿಗೆ ಹೋಗಿ ಅಲ್ಲಿಯೂ ಸಭೆ ನಡೆಸುವುದರಿಂದ ಅಪಾಯ ಇಲ್ವಾ ಎಂಬ ಪ್ರಶ್ನೆ ಕಾಡುತ್ತಿದೆ. ಕೊರೊನಾ ಪೀಡಿತ ಇಂಥ ಜಿಲ್ಲೆಗಳಿಗೆ ಸಚಿವರು ಭೇಟಿ ನೀಡುವುದರಿಂದ ಮತ್ತು ಸಭೆ ನಡೆಸುವುದರಿಂದ ಅಧಿಕಾರಿಗಳಿಗೆ ಸಭೆಗೆ ತಯಾರಿ ನಡೆಸಲು ಸಮಯ ಬೇಕಾಗುತ್ತದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಗಳನ್ನು ನಡೆಸುವುದರಿಂದ ಸಮಯವೂ ಉಳಿತಾಯವಾಗುತ್ತದೆ.  ಸುರಕ್ಷಿತೆಯೂ ಹೆಚ್ಚಾಗಿರುತ್ತೆ. ಸಾಮಾಜಿಕ ಅಂತರವನ್ನೂ ಕಾಪಾಡಲು ಸಾಧ್ಯವಾಗಲಿದೆ.

ಇದನ್ನೂ ಓದಿ: ಗುಮ್ಮಟ ನಗರಿಗೆ ಸಿಕ್ಸರ್ ಮೂಲಕ ಎಂಟ್ರಿ ಕೊಟ್ಟ ಕೊರೊನಾ; ಸಂಘಟಿತರಾಗಿ ಹೋರಾಡದಿದ್ದರೆ ಇಲ್ಲ ಉಳಿಗಾಲಈಗ ಪ್ರತಿಯೊಂದು ಜಿಲ್ಲಾ ಕೇಂದ್ರಗಳಷ್ಟೇ ಅಲ್ಲ, ತಾಲೂಕು ಕೇಂದ್ರಗಳಲ್ಲಿಯೂ ತಹಸೀಲ್ದಾರ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಮಾಡುವಷ್ಟು ತಂತ್ರಜ್ಞಾನ ಬೆಳೆದಿದೆ. ಸಚಿವರು ತಾವಿರುವ ಸ್ಥಳಗಳಲ್ಲಿಯೇ ಕುಳಿತು ಬೇಕಾದ ಜಿಲ್ಲೆಗಳ ಅಧಿಕಾರಿಗಳು ಮತ್ತು ಇಲಾಖೆಗಳ ಮುಖ್ಯಸ್ಥರೊಂದಿಗೆ ವಿಡಿಯೋ ಸಂವಾದ ನಡೆಸಬಹುದಾಗಿದೆ. ಅದರ ಬದಲು, ಯಾರದೋ ಟೀಕೆಗಳಿಗೆ ಹೆದರಿ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಜಿಲ್ಲಾ ಪ್ರವಾಸ ಮಾಡಬೇಕಾ? ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡಿದರೆ ಆಗಲ್ವಾ? ಈ ಸಚಿವರ ಪ್ರವಾಸ ಎಷ್ಟು ಸುರಕ್ಷಿತ? ಎಂಬ ಚರ್ಚೆ ಶುರವಾಗಿದೆ. ಅದರಲ್ಲಿಯೂ ರಾಜ್ಯ ಸಚಿವ ಸಂಪುಟದಲ್ಲಿ 60 ವರ್ಷ ಮೇಲ್ಪಟ್ಟ ಹಲವಾರು ಸಚಿವರಿದ್ದಾರೆ. ಈ ಹಿರಿಯ ಸಚಿವರಿಗೆ ಕೊರೊನಾ ಕಾಟ ಸ್ವಲ ಹೆಚ್ಚಾಗಿಯೇ ಇರುತ್ತದೆ ಎಂಬುದು ತಜ್ಞರ ಅಭಿಪ್ರಾಯವೂ ಆಗಿದೆ. ಕೊರೊನಾ ಕೂಡ ಅಷ್ಟೇ ಯಾವುದೇ ವಯಸ್ಸಿನ ಅಂತರ ಪರಿಗಣಿಸದೆ ಎಂಟ್ರಿ ಕೊಡುವ ಆತಂಕವೂ ಇದೆ. ಈ ವಿಚಾರದಲ್ಲಿ ಸಚಿವರು ಮತ್ತು ಅಧಿಕಾರಿಗಳೂ ಮನುಷ್ಯರಲ್ವಾ? ಕೊರೊನಾ ಇವರಿಗೇನಾದರೂ ವಿನಾಯಿತಿ ನೀಡುತ್ತದೆಯಾ? ಎಂಬುದೂ ಪ್ರಶ್ನಾಹ್ರವಾಗಿದೆ.

ಈ ಹಿಂದೆ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಿ.ಸಿ. ಪಾಟೀಲ್ ಇದೇ ವಿಡಿಯೋ ಕಾನ್ಫರೆನ್ಸ್ ತಂತ್ರಜ್ಞಾನ ಬಳಸಿ ಎರಡು ಬಾರಿ ಸಭೆ ನಡೆಸಿ ಮಾದರಿಯಾಗಿದ್ದಾರೆ. ಇನ್ನು ಮೇಲಾದರೂ ಉಳಿದ ಸಚಿವರು ಸಿ.ಸಿ. ಪಾಟೀಲ್ ಮಾದರಿಯನ್ನು ಅನುಸರಿಸಿದರೆ ಎಲ್ಲರಿಗೂ ಒಳಿತಾಗುವುದರಲ್ಲಿ ಸಂದೇಹವಿಲ್ಲ. ಇದರಿಂದ ಸಚಿವರು ತಮ್ಮ ಆರೋಗ್ಯದ ಜೊತೆಗೆ ಅಧಿಕಾರಿಗಳ ಆರೋಗ್ಯಕ್ಕೂ ಒತ್ತು ನೀಡಿದಂತಾಗಲಿದೆ. ಇದು ಪ್ರಜ್ಞಾವಂತ ನಾಗರಿಕರ ಆಗ್ರಹವೂ ಆಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕೇವಲ ಸಚಿವರು ಮತ್ತು ಜನಪ್ರತಿನಿಧಿಗಳು ಅಷ್ಟೇ ಅಲ್ಲ, ಅಧಿಕಾರಿಗಳು, ಸಿಬ್ಬಂದಿಗಳ ಆರೋಗ್ಯ ಕಾಪಾಡುವುದಕ್ಕೋಸ್ಕರ ಇನ್ನು ಮೇಲಾದರೂ ಆಧುನಿಕ ತಂತ್ರಜ್ಞಾನ ಬಳಸಿ ಕೊರೊನಾ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ.

ವರದಿ: ಮಹೇಶ್ ವಿ. ಶಟಗಾರ

First published: April 13, 2020, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories