news18-kannada Updated:July 15, 2020, 6:21 PM IST
ಸುರೇಶ್ ಕುಮಾರ್
ಚಾಮರಾಜನಗರ(ಜು.15): ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ 55 ವರ್ಷ ಮೇಲ್ಪಟ್ಟವರು ಹಾಗು ತೀವ್ರ ಆರೋಗ್ಯ ಸಮಸ್ಯೆ ಇರುವವರು ಕರ್ತವ್ಯಕ್ಕೆ ಬರವುದು ಬೇಡ ಎಂದು ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಆಗಲಿದ್ದು, ಸಿಬ್ಬಂದಿ ಕೊರತೆ ನೀಗಿಸಲು ಹೋಂ ಗಾರ್ಡ್ ಗಳನ್ನು ನೇಮಕ ಮಾಡಿಕೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಪೊಲೀಸ್ ಸಿಬ್ಬಂದಿ ಕೊರತೆಯಿಂದ ಚೆಕ್ ಪೋಸ್ಟ್ , ಗಡಿಭಾಗ ಹಾಗೂ ಕಂಟೈನ್ಮೆಂಟ್ ಜೋನ್ ಸೇರಿದಂತೆ ಬೇರೆ ಬೇರೆ ಕಡೆ ಬಂದೋಬಸ್ತ್ಗೆ ತೊಂದರೆಯಾಗಲಿದೆ. ಹಾಗಾಗಿ ಅಗತ್ಯ ಸಂಖ್ಯೆಯಲ್ಲಿ ಹೋಂ ಗಾರ್ಡ್ ನೇಮಕಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈ ನೇಮಕಕ್ಕೆ ಆರ್ಥಿಕ ಇಲಾಖೆ ಮುಖ್ಯಸ್ಥರು ಹಾಗು ರಾಜ್ಯದ ಮುಖ್ಯಕಾರ್ಯದರ್ಶಿಯ ಅವರೊಡನೆ ಚರ್ಚಿಸಿ ಕೂಡಲೇ ಅನುಮೋದನೆ ಕೊಡಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.
ಕೋವಿಡ್-19 ಪರೀಕ್ಷೆಗೆ ಚಾಮರಾಜನಗರ ಜಿಲ್ಲೆಗೆ ಒಂದು ಸಾವಿರ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ಕಿಟ್ಗಳು ಬಂದಿವೆ. 70 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಹೃದ್ರೋಗಿಗಳು, ಕ್ಯಾನ್ಸರ್ ರೋಗಿಗಲು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿರುವವರು ಹೀಗೆ ತುರ್ತು ಅಗತ್ಯ ಇರುವ ವ್ಯಕ್ತಿಗಳ ಕೋವಿಡ್ ಪರೀಕ್ಷೆಗೆ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಬಳಸಲಾಗವುದು. ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷೆ ನಡೆಸಿದರೆ ಒಂದು ಗಂಟೆಯೊಳಗೆ ಫಲಿತಾಂಶ ಬರಲಿದ್ದು, ತುರ್ತು ಚಿಕಿತ್ಸೆಗೆ ಅನುಕೂಲವಾಗಲಿದೆ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ವರದಿ ಬರಲು ಮೂರ್ನಾಲ್ಕು ಹಿಡಿಯುತ್ತಿದೆ. ಪ್ರಯೋಗಾಲಯ ಸೀಲ್ ಡೌನ್ ಆಗಿದ್ದರಿಂದ ತೊಂದರೆಯಾಗಿತ್ತು. ಇದೀಗ ಕೋವಿಡ್ ಟೆಸ್ಟ್ ಚುರುಕುಗೊಳಿಸಲು ಕ್ರಮ ವಹಿಸಲಾಗಿದೆ. ಟೆಸ್ಟಿಂಗ್ ರಿಪೋರ್ಟ್ ನಿಧಾನವಾದಷ್ಟು ಸಂಬಂಧಪಟ್ಟ ವ್ಯಕ್ತಿಯಿಂದ ಸೋಂಕು ಹರಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಗಂಟಲು ದ್ರವ ಸಂಗ್ರಹಿಸಿದ 24 ಗಂಟೆಯೊಳಗೆ ಕೆಲವು ಪ್ರಕ್ರರಣಗಳಲ್ಲಿ 48 ಗಂಟೆಯೊಳಗೆ ಫಲಿತಾಂಶ ನೀಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು
ಕಂಟೈನ್ಮೆಂಟ್ ಜೋನ್ನಲ್ಲಿ ಅಗತ್ಯ ಇರುವವರಿಗೆ ಆಹಾರ ಕಿಟ್ ಒದಗಿಸಲು ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಆಯಾ ಗ್ರಾಮ ಪಂಚಾಯ್ತಿಗಳಿಗೆ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಸಭೆಗೆ ಆಹ್ವಾನಿಸದ್ದಕ್ಕೆ ಕಾಂಗ್ರೆಸ್ ಶಾಸಕರ ಗಲಾಟೆ: ಸಚಿವರಿಂದ ಕ್ಷಮೆ ಯಾಚನೆ
ಚಾಮರಾಜನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಸಭೆಗಳಿಗೆ ಆಹ್ವಾನ ನೀಡದೆ ಇರುವುದರಿಂದ ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರು ಹಾಗೂ ಜನ ಪ್ರತಿನಿಧಿಗಳು ಗದ್ದಲ ನಡೆಸಿ ಸಚಿವ ಸುರೇಶ್ ಕುಮಾರ್ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು.ಇಂದು ಚಾಮರಾಜನಗರ ಆಗಮಿಸಿದ್ದ ಸಚಿವ ಸುರೇಶ್ ಕುಮಾರ್, ಹೆದ್ದಾರಿ ಪ್ರಾಧಿಕಾರ, ಕೃಷಿ ಇಲಾಖೆ, ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದರು. ಆದರೆ ಈ ಸಭೆಗೆ ಕಾಂಗ್ರೆಸ್ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ ಹಾಗೂ ಇನ್ನಿತರ ಜನಪ್ರತಿನಿಧಿಗಳನ್ನು ಆಹ್ವಾನಿಸಿರಲಿಲ್ಲ. ಆದರೆ ಕೋವಿಡ್ಗೆ ಸಂಬಂಧಿಸಿದ ಸಭೆಗೆ ಮಾತ್ರ ಆಹ್ವಾನಿಸಲಾಗಿತ್ತು. ಇದರಿಂದ ಕೆರಳಿದ ಕಾಂಗ್ರೆಸ್ ಶಾಸಕರು ಹಾಗು ಇತರ ಜನಪ್ರತಿನಿಧಿಗಳು ಕೋವಿಡ್ ಸಭೆಗೆ ಆಗಮಿಸಿ ಗಲಾಟೆ ನಡೆಸಿದರು. ಸಚಿವ ಸುರೇಶ್ ಕುಮಾರ್ ವಿರುದ್ದ ಧಿಕ್ಕಾರದ ಘೋಷಣೆ ಕೂಗಿದರು.
ಇದನ್ನೂ ಓದಿ: Mumbai Rain: ಮುಂಬೈನಲ್ಲಿ ಭಾರೀ ಮಳೆ; 18 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಣೆ
ತಕ್ಷಣ ಎಚ್ಚೆತ್ತ ಸಚಿವ ಸುರೇಶ್ ಕುಮಾರ್, 35ನೇ ಬಾರಿಗೆ ಚಾಮರಾಜನಗರಕ್ಕೆ ಬರುತ್ತಿದ್ದೇನೆ. ಎಲ್ಲರಿಗು ತಿಳಿಸಿಯೇ ಬರುತ್ತಿದೆ. ಒಮ್ಮೆಯು ಹೀಗೆ ಆಗಿರಲಿಲ್ಲ. ನಿಮಗೆಲ್ಲಾ ಆಹ್ವಾನ ಇರಬೇಕಿತ್ತು. ಈ ಬಾರಿ ಮಾತ್ರ ಚ್ಯುತಿಯಾಗಿದೆ ಎಂದ ಆಗಿರುವ ಆತಾಚುರ್ಯಕ್ಕೆ ಸುರೇಶ್ ಕುಮಾರ್ ಕ್ಷಮೆ ಕೋರಿದರು. ಇದರಿಂದ ಸಮಾಧಾನಗೊಂಡ ಕಾಂಗ್ರೆಸ್ ಶಾಸಕರು ಹಾಗು ಇತರ ಜನಪ್ರತಿನಿಧಿಗಳು ಕೋವಿಡ್ ಸಭೆಯಲ್ಲಿ ಪಾಲ್ಗೊಂಡರು.
Published by:
Ganesh Nachikethu
First published:
July 15, 2020, 6:21 PM IST