ಬೆಂಗಳೂರು(ಜು.24): ಮಾನ್ಯ ಸಿದ್ದರಾಮಯ್ಯನವರು ನಾನು ಅಧಿಕಾರದ ಅಹಂನಿಂದ ಮಾತನಾಡಿದ್ದೇನೆ, ನನಗೆ ಉಪಕಾರ ಸ್ಮರಣೆ ಇರಬೇಕು ಎಂದಿದ್ದಾರೆ. ಅವರು ಈ ಹಿಂದೆ ನೀಡಿರುವ ಸಹಕಾರ ಮತ್ತು ಮಾರ್ಗದರ್ಶನವನ್ನು ಸದಾ ಸ್ಮರಿಸುತ್ತೇನೆ. ನನ್ನ ಅಳಿಲು ಸೇವೆಯನ್ನು ಅವರೂ ಸಹ ಮರೆತಿಲ್ಲ ಅಂತಾ ಭಾವಿಸಿದ್ದೇನೆ ಎಂದು ಟ್ವೀಟ್ ಮಾಡುವ ಮೂಲಕ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ಧಾರೆ.
ಕಳೆದ 5 ತಿಂಗಳಿನಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಜವಾಬ್ದಾರಿ ಹೊತ್ತು ಕಾರ್ಯ ಕ್ಷಮತೆಯಿಂದ ಅವಿರತವಾಗಿ ಶ್ರಮಿಸುತ್ತಿರುವೆ. ಈ ಸನ್ನಿವೇಶದಲ್ಲಿ ನನ್ನ ಇಲಾಖೆಯ ವಿರುದ್ಧ ಸತ್ಯಕ್ಕೆ ದೂರವಾದ ಅರೋಪಗಳು ಬಂದಾಗ ಜವಾಬ್ದಾರಿಯುತವಾಗಿ ವಾಸ್ತವಾಂಶವನ್ನು ಜನರ ಮುಂದಿಟ್ಟದ್ದೇನೆ. ಇದರಲ್ಲಿ ಯಾವುದೇ ವೈಯಕ್ತಿಕ ನಿಂದನೆ ಅಥವಾ ಅಪಹಾಸ್ಯದ ಉದ್ದೇಶವಿಲ್ಲ ಎಂದು ತಾವು ನಡೆಸಿದ ಸುದ್ದಿಗೋಷ್ಠಿ ಬಗ್ಗೆ ಸುಧಾಕರ್ ಸ್ಪಷ್ಟನೆ ಕೊಟ್ಟಿದ್ಧಾರೆ.
ಈ ಮುನ್ನ ಕೊರೋನಾ ಪರಿಕರಗಳ ಖರೀದಿಯಲ್ಲಿ ರಾಜ್ಯ ಸರ್ಕಾರ ಅವ್ಯವಹಾರ ನಡೆಸಿಲ್ಲ, ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರೆ ಭಯವೇಕೆ? ನೀವು ಪ್ರಾಮಾಣಿಕರಾಗಿದ್ದರೆ ಸಿಟ್ಟಿಂಗ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಿ. ತಮ್ಮನ್ನು ತಾವು ಪ್ರಾಮಾಣಿಕರು ಎಂದು ನಿರೂಪಿಸಿಕೊಳ್ಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಚಿವ ಡಾ ಕೆ. ಸುಧಾಕರ್ಗೆ ಸವಾಲು ಹಾಕಿದ್ದರು.
ರಾಜ್ಯದಲ್ಲಿ ಕೊರೋನಾ ತಾಂಡವವಾಡುತ್ತಿದೆ. ಸರಾಸರಿಯಾಗಿ ಒಂದು ದಿನಕ್ಕೆ 4 ಸಾವಿರಕ್ಕಿಂತ ಅಧಿಕ ಜನ ರಾಜ್ಯದಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಆದರೆ, ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆಸಿದೆ. ಎಲ್ಲಾ ವಸ್ತುಗಳನ್ನು ದುಪ್ಪಟ್ಟು ಬೆಲೆ ನೀಡಿ ಖರೀದಿಸಿದೆ. ಈ ಮೂಲಕ ಸಚಿವರು ಸಾವಿರಾರು ಕೋಟಿ ಹಣ ಲೂಟಿ ಹೊಡೆದಿದ್ದಾರೆ ಎಂದು ಸಿದ್ದರಾಮಯ್ಯ ಕಳೆದ ಹಲವು ದಿನಗಳಿಂದ ಆರೋಪಿಸುತ್ತಲೇ ಇದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡುತ್ತಲೇ ಇರುವ ಸಚಿವ ಸುಧಾಕರ್, “ಕೊರೋನಾ ಪರಿಕರಗಳ ಖರೀದಿಯಲ್ಲಿ ಅವ್ಯವಹಾರ ನಡೆದಿಲ್ಲ. ಸಿದ್ದರಾಮಯ್ಯನವರಿಗೆ ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ ಹಾಗೂ ವೆಚ್ಚ ಅಂದರೆ ಏನೂ ಎಂದೇ ಗೊತ್ತಿಲ್ಲ” ಎಂದು ಹೀಯಾಳಿಸಿದ್ದರು.
ಇದನ್ನೂ ಓದಿ: ನೀವು ಪ್ರಾಮಾಣಿಕರಾಗಿದ್ದರೆ ಕೊರೋನಾ ಅವ್ಯವಹಾರದ ಕುರಿತು ತನಿಖೆ ನಡೆಸಿ; ಸಚಿವ ಸುಧಾಕರ್ಗೆ ಸಿದ್ದರಾಮಯ್ಯ ಸವಾಲ್
ಸಚಿವ ಸುಧಾಕರ್ ಮಾತಿಗೆ ಮತ್ತೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಪ್ರಸ್ತಾವನೆ, ಮಂಜೂರಾತಿ, ಅನುಮೋದನೆ, ವೆಚ್ಚ ಅಂದರೆ ಏನು ಎಂದು ಗೊತ್ತಿಲ್ಲದೇ ನಾನು 13 ಬಜೆಟ್ ಮಂಡಿಸಿದ್ದೇನಾ..? ನಾನು ಎಷ್ಟು ವರ್ಷ ಮಂತ್ರಿ ಆಗಿದ್ದೆ, ಉಪಮುಖ್ಯಮಂತ್ರಿ, ಸಿಎಂ ಆಗಿಯೂ ಕೆಲಸ ಮಾಡಿದ್ದೇನೆ. ಆದರೆ, ಸುಧಾಕರ್ ಎಷ್ಟು ವರ್ಷ ಸಚಿವರಾಗಿದ್ದಾರೆ? ಎಂದು ಪ್ರಶ್ನಿಸಿದ ಅವರು, ಅಧಿಕಾರದ ಅಹಂನಿಂದ ಮಾತನಾಡಬಾರದು” ಎಂದು ಸುಧಾಕರ್ ಅವರಿಗೆ ಕಿವಿಮಾತು ಹೇಳಿದ್ದಾರೆ. ಇದಕ್ಕೆ ಈಗ ಸುಧಾಕರ್ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ