ಗಡಿಗಳಲ್ಲಿ ಸಾರ್ವಜನಿಕರ ಓಡಾಟ ನಿರ್ಬಂಧಿಸಿ: ಸಚಿವ ಜೆ.ಸಿ ಮಾಧುಸ್ವಾಮಿ

ಎಲ್ಲಾ ಶಾಸಕರ ಅಭಿಪ್ರಾಯ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಜನಗಳ ಓಡಾಟ ನಿರ್ಬಂಧ ಅಗತ್ಯ. ಅದೇ ರೀತಿ ಅಗತ್ಯಕ್ಕೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದೆಂದರು.

ಜೆ.ಸಿ. ಮಾಧು ಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ

ಜೆ.ಸಿ. ಮಾಧು ಸ್ವಾಮಿ ನೇತೃತ್ವದಲ್ಲಿ ನಡೆದ ಸಭೆ

  • Share this:
ಹಾಸನ: ಸುತ್ತಮುತ್ತಲಿನ ಎಲ್ಲಾ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವುದರಿಂದ ಹಾಸನದ ಗಡಿಭಾಗಗಳನ್ನು ಬಂದ್ ಮಾಡಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿ ಎಂದು ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ. ಮಾಧುಸ್ವಾಮಿ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಲೋಕಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರೊಂದಿಗೆ ಎಲ್ಲಾ ತಾಲ್ಲೂಕುಗಳ ಟಾಸ್ಕ್ ಫೋರ್ಸ್ ಸಮಿತಿಯೊಂದಿಗೆ ವೀಡಿಯೋ ಸಂವಾದ ನಡೆಸಿ ಸಚಿವರು ಈ ನಿರ್ದೇಶನ ನೀಡಿದರು.

ಸಕಲೇಶಪುರ ಕ್ಷೇತ್ರದ ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರಿದ್ದರು. ಶಾಸಕರಾದ ಹೆಚ್.ಡಿ ರೇವಣ್ಣ, ಕೆ.ಎಂ. ಶಿವಲಿಂಗೇಗೌಡ, ಸಿ.ಎನ್. ಬಾಲಕೃಷ್ಣ, ಕೆ.ಎಸ್. ಲಿಂಗೇಶ್ ಅವರು ತಾಲ್ಲೂಕು ಕೆಂದ್ರಗಳಿಂದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಪಾಲ್ಗೊಂಡು ಹಲವು ವಿಷಯಗಳ ಕುರಿತು ಚರ್ಚಿಸಿದರು. ಕೊರೊನಾ ಸೋಂಕು ನಿರೀಕ್ಷೆಮೀರಿ ದೇಶವನ್ನು ವ್ಯಾಪಿಸಿದ್ದು ಈಗ ಸಾಮಾಜಿಕ ಹಾಗೂ ದೈಹಿಕ ಅಂತರ ಕಾಯ್ದುಕೊಳ್ಳದಿದ್ದರೆ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಮಾಧುಸ್ವಾಮಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಈವರೆಗೂ ಸೋಂಕಿತ ಪ್ರಕರಣಗಳು ಪತ್ತೆಯಾಗದೇ ಇರುವುದು ಸಂತೋಷದ ವಿಚಾರ. ಆದರೆ ಇದೇ ಪರಿಸ್ಥಿತಿಯನ್ನು ಮುಂದಿನ ಒಂದು ತಿಂಗಳವರೆಗೆ ಕಾಯ್ದುಕೊಳ್ಳುವ ಸವಾಲು ನಮ್ಮ ಮುಂದಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಮನೆಮನೆಗೆ ಕಳಿಸಿ ತಪಾಸಣೆ ನಡೆಸಿ, ಜ್ವರದ ಲಕ್ಷಣ ಇರುವವರನ್ನು ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಇನ್ನಷ್ಟು ತಪಾಸಣೆ ನಡೆಸಿ ಗರಿಷ್ಠ ಮುಂಜಾಗ್ರತೆ ವಹಿಸಿ ಎಂದು ಸೂಚಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿಂದು 7 ಮಂದಿಗೆ ಕೊರೋನಾ; ಸೋಂಕಿತರ ಸಂಖ್ಯೆ 83ಕ್ಕೇರಿಕೆ

ಮಾರುಕಟ್ಟೆಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಜನಸಂದಣಿ ನಿಯಂತ್ರಿಸಬೇಕು. ಅದಕ್ಕೆ ವಿವಿಧ ಕಡೆಗಳಲ್ಲಿ ಮಾರುಕಟ್ಟೆ ವಿಸ್ತರಣೆ ಅಗತ್ಯ, ಜೊತೆಗೆ ಇನ್ನು ಮುಂದೆ ಪ್ರತಿದಿನ ಮಧ್ಯಾಹ್ನದವರೆಗೆ ಮಾತ್ರ ದಿನಸಿ ಅಂಗಡಿಗಳು ತೆಗೆದಿರಬೇಕು. ಸಾರ್ವಜನಿಕರು ಅನಗತ್ಯ ಓಡಾಟ ತಪ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು.

ದ್ವಿಚಕ್ರ ವಾಹನ ಸವಾರರು ಸುಮ್ಮನೆ ಅತ್ತಿಂದಿತ್ತ ಓಡಾಡುವುದನ್ನು ತಪ್ಪಿಸಲು ಪೆಟ್ರೋಲ್ ವಿತರಣೆಯಲ್ಲಿ ಮಿತಿ ಹೇರಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಸಚಿವರು ತಿಳಿಸಿದರು. ಆರೋಗ್ಯ ಇಲಾಖೆಗೆ ಬೇಕಾದ ಮಾಸ್ಕ್ ಸ್ಯಾನಿಟೈಸರ್‍ಗಳ ಪೂರೈಕೆ ಹಾಗೂ ಪಿ.ಪಿ. ಕಿಟ್‍ಗಳ ಪೂರೈಕೆಗೆ ಸರ್ಕಾರ ನಿರ್ಧರಿಸಿದೆ. ಅನುದಾನದಲ್ಲಿ ಕೊರತೆ ಇಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಗರಿಷ್ಠ ಜಾಗೃತಿ ವಹಿಸಬೇಕು, ತಾಲ್ಲೂಕು ಆಡಳಿತಗಳು ಗ್ರಾಮ ಮಟ್ಟದಲ್ಲಿ ಹೆಚ್ಚು ಅರಿವು ಹಾಗೂ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು. ಇನ್ನು ಎರಡು ಮೂರು ತಿಂಗಳಿಗೆ ಸಾಕಾಗುವಷ್ಟು ಪಡಿತರ ಆಹಾರ ಸಾಮಗ್ರಿಗಳನ್ನು ಆದಷ್ಟು ಬೇಗ ವಿತರಣೆಯಾಗಬೇಕು. ಸಾಧ್ಯವಾದರೆ ಮನೆಮನೆಗೆ ಅವುಗಳನ್ನು ತಲುಪಿಸಬೇಕು. ಆಹಾರ ಇಲ್ಲದೇ ಪರದಾಡುವವರು, ನಿರ್ಗತಿಕರುಗಳಿಗೆ ಜಿಲ್ಲಾಡಳಿತ ಆಹಾರ ತಯಾರಿಸಿ ಪೂರೈಕೆ ಮಾಡಬೇಕು ಎಂದು ಸಚಿವರು ಆದೇಶಿಸಿದರು.

ಆಹಾರ ಸಾಮಗ್ರಿಗಳ ಸಾಗಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ಜಿಲ್ಲೆ ಹಾಗೂ ರಾಜ್ಯದ ನಿರ್ಬಂಧವನ್ನು ತೆಗೆಯಲಾಗಿದೆ. ಔಷಧ ಮಾರಾಟಗಾರರು ಸ್ವತಃ ಹಾಸನಕ್ಕೆ ಬಂದು ದಾಸ್ತಾನು ಪಡೆದು ಹೋಗಲು ಪಾಸ್ ವಿತರಣೆ ಮಾಡಬೇಕು. ಎಲ್ಲಿಯೂ ಮಧುಮೇಹ ಹಾಗೂ ಬಿ.ಪಿ ಮಾತ್ರೆ ಸೇರಿದಂತೆ ಅತ್ಯಂತ ಅಗತ್ಯ ಔಷಧಿಗಳ ಕೊರತೆಯುಂಟಾಗದಂತೆ ಆರೊಗ್ಯ ಇಲಾಖೆ ನಿಗಾವಹಿಸಬೇಕು ಎಂದರು.

ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳು ನಿರಂತರ ಸೇವೆ ಸಲ್ಲಿಸಬೇಕು. ಒ.ಪಿ.ಡಿಯಲ್ಲಿ ರೋಗಿಗಳ ತಪಾಸಣೆ ಮಾಡಬೇಕು. ಯಾವುದೇ ಸರ್ಕಾರಿ ವೈದ್ಯರು ರಜೆ ತೆಗೆದುಕೊಳ್ಳುವಂತಿಲ್ಲ. ಸೇವೆ ನೀಡದ ಖಾಸಗಿ ನರ್ಸಿಂಗ್ ಹೊಂಗಳು ಹಾಗೂ ವೈದ್ಯರ ಪರವಾನಗಿ ರದ್ದುಪಡಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಜೆ.ಸಿ ಮಾಧುಸ್ವಾಮಿ ಸೂಚನೆ ನೀಡಿದರು.

ಇದನ್ನೂ ಓದಿ: ನಾಲ್ಕೈದು ರಾಜ್ಯ ಸರ್ಕಾರಗಳನ್ನು ಒಪ್ಪಿಸಿದ ವಿಜಯಪುರ ಅಧಿಕಾರಿಗಳು; ತವರಿಗೆ ಮರಳಿದ 3 ಸಾವಿರ ಉತ್ತರ ಭಾರತೀಯ ಕಾರ್ಮಿಕರು

ಲೋಕ ಸಭಾ ಸದಸ್ಯರಾದ ಪ್ರಜ್ವಲ್ ರೇವಣ್ಣ ಅವರು ಹಣ್ಣು, ತರಕಾರಿ ಮಾರುಕಟ್ಟೆ ನಿಯಂತ್ರಣ ಹಾಗೂ ವ್ಯವಸ್ಥಿತ ವಿಲೇವಾರಿ ಬಗ್ಗೆ ಸೂಚನೆ ನೀಡಿದರು. ಹೋಂ ಗಾರ್ಡ್‍ಗಳಿಗೆ ವೇತನ ಹಾಗೂ ಸಾರಿಗೆ ಸಮಸ್ಯೆ ಬಗೆಹರಿಯಬೇಕು. ಜಿಲ್ಲಾ ಗಡಿಗಳ ಬಂದ್ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿ ತುರ್ತು ಬಳಕೆಗೆ ಅವಕಾಶ ಕಲ್ಪಿಸಬೇಕು. ಪೆಟ್ರೋಲ್ ಬಂಕ್‍ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ವಿತರಣೆ ಕಡಿಮೆ ಮಾಡಬೇಕು. ದಿನಸಿ ಪದಾರ್ಥ ಮನೆಮನೆಗೆ ತಲುಪಿದರೆ ಸೂಕ್ತ ಎಂದರು. ವೈನ್ ಸ್ಟೋರ್, ಬಾರ್ ರೆಸ್ಟೋರೆಂಟ್‍ಗಳಲ್ಲಿ ಮಧ್ಯ ಮಾರಾಟ ನಿಷೇಧಿಸಿ ಸೀಲ್ ಮಾಡಿದ್ದರೂ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ. ಸ್ಟಾಕ್‍ಗಳನ್ನು ಗಮನಿಸಿ ಅಕ್ರಮದಲ್ಲಿ ತೊಡಗಿದ್ದವರ ಪರವಾನಗಿ ರದ್ದು ಪಡಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪ್ರಜ್ವಲ್ ರೇವಣ್ಣ ತಿಳಿಸಿದರು.

ಶಾಸಕರಾದ ಹೆಚ್.ಡಿ ರೇವಣ್ಣ ಅವರು ಇಂತಹ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು, ಹೂವು ಮಾರಾಟಗಾರರು ಸಹ ಸಂಕಷ್ಟದಲ್ಲಿ ಇದ್ದು ಅವರಿಗೂ ಪಡಿತರ ವಿತರಿಸಿ ಎಂದರು. ಜಿಲ್ಲೆಯ ಕೆರೆಕಟ್ಟೆಗಳು ಬತ್ತಿಹೋಗಿದ್ದು ಕೊಳವೆ ಬಾವಿಗಳಲ್ಲಿಯೂ ಸಹ ನೀರಿಲ್ಲ, ಹಾಗಾಗಿ ಹೇಮಾವತಿ ಜಲಾಶಯದಿಂದ ಸ್ವಲ್ಪ ನೀರು ಹರಿಸಿದಲ್ಲಿ ಸ್ವಲ್ಪ ಅಂತರ್ಜಲ ಹೆಚ್ಚಿ ಸಾಂಕ್ರಾಮಿಕ ರೋಗಗಳು ಕಡಿಮೆಯಾಗಬಹುದು ಇದರಿಂದ ಬರನಿರ್ವಹಣೆ ಸುಗಮವಾಗುತ್ತದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರವೇ ಈ ಬಗ್ಗೆ ಅವಕಾಶದ ಮಿತಿಯೊಳಗೆ ಕ್ರಮವಹಿಸಲಾಗುವುದು ಎಂದರು.

ಶಾಸಕರಾದ ಹೆಚ್.ಕೆ. ಕುಮಾರಸ್ವಾಮಿ ಅವರು ಮಾತನಾಡಿ, ಕೂಡುರಸ್ತೆಗೆ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಹಾಗೂ ಸಕಲೇಶಪುರ ಹಾಗೂ ಆಲೂರು ತಾಲ್ಲೂಕುಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಿಸಿ ಎಂದರಲ್ಲದೆ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಗಡಿ ಭಾಗಗಳನ್ನು ಬಂದ್ ಮಾಡಿಸಿ ಎಂದರು.

ಶಾಸಕರಾದ ಸಿ.ಎನ್. ಬಾಲಕೃಷ್ಣ ಅವರು ಮಾತನಾಡಿ, ಶುಗರ್ ಮತ್ತು ಬಿ.ಪಿ ಮಾತ್ರೆಗಳು ಎಲ್ಲಾ ಔಷಧ ಮಾರಾಟ ಅಂಗಡಿಗಳಲ್ಲಿ ಲಭ್ಯವಿರುವಂತೆ ಮಾಡಿ. ಗಡಿ ಭಾಗಗಳನ್ನು ಸಂಪೂರ್ಣ ಬಂದ್ ಮಾಡಿ ಎಂದು ಕೋರಿದರು. ಹಾಗೂ ಚನ್ನರಾಯಪಟ್ಟಣದಲ್ಲಿ ಮಾಡಲಾಗಿರುವ ಮಾರುಕಟ್ಟೆ ವ್ಯವಸ್ಥೆ ಬಗ್ಗೆ ವಿವರಿಸಿದರು.

ಶಾಸಕರಾದ ಕೆ.ಎಂ ಶಿವಲಿಂಗೇಗೌಡ ಅವರು ಮಾತನಾಡಿ ಜಿಲ್ಲಾ ಗಡಿಗಳನ್ನು ನಿಯಂತ್ರಿಸಿ ದಿನಗಳಲ್ಲಿ ಅನಗತ್ಯ ಓಡಾಡುವವರನ್ನು ತಡೆಯಿರಿ. ಬೆಂಗಳೂರಿನಿಂದ ಆಗಮಿಸಿರುವ 20 ಸಾವಿರಕ್ಕೂ ಅಧಿಕ ಮಂದಿಯ ಆರೋಗ್ಯ ತಪಾಸಣೆ ನಡೆಸಿ ನಿರಂತರ ನಿಗಾವಹಿಸಿ, ಬಾಡಿಗೆ ವಾಹನಗಳಲ್ಲಿ ಜನ ಸಾಗಾಟವನ್ನು ಸಂಪೂರ್ಣವಾಗಿ ತಡೆಯಿರಿ ಎಂದರು.

ಬೇಲೂರು ಕ್ಷೇತ್ರದ ಶಾಸಕರಾದ ಲಿಂಗೇಶ್ ಅವರು ಮಾತನಾಡಿ ತಾಲ್ಲೂಕು ಆಸ್ಪತ್ರೆಯಲ್ಲಿ ವೆಂಟಿಲೇಟರ್ ಇದ್ದು ವೈದ್ಯರ ಕೊರತೆ ಹಾಗೂ ಮಾಸ್ಕ್‍ಗಳ ಕೊರತೆ ಇದೆ. ಅದನ್ನು ಸರಿಪಡಿಸಿ. ಬೇಸಿಗೆ ಪ್ರಾರಂಭವಾಗಿದ್ದು 30 ಹಳ್ಳಿಗಳಲ್ಲಿ ನೀರಿನ ಅಭಾವ ಎದುರಾಗುತ್ತಿದೆ. ಆ ಬಗ್ಗೆಯೂ ಜಿಲ್ಲಾಡಳಿತ ಗಮನ ಹರಿಸಬೇಕು ಎಂದರು.

ಎಲ್ಲಾ ಶಾಸಕರ ಅಭಿಪ್ರಾಯ ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಜನಗಳ ಓಡಾಟ ನಿರ್ಬಂಧ ಅಗತ್ಯ. ಅದೇ ರೀತಿ ಅಗತ್ಯಕ್ಕೆ ಅನುಗುಣವಾಗಿ ವೈದ್ಯಕೀಯ ಸೌಲಭ್ಯ ಒದಗಿಸಲಾಗುವುದು. ಜಿಲ್ಲಾಡಳಿತ ಕೊರೋನಾ ನಿಯಂತ್ರಣದ ಜೊತೆಗೆ ಬರ ನಿರ್ವಹಣೆಯ ಬಗ್ಗೆಯೂ ನಿಗಾವಹಿಸಿ ಎಂದರು.

ಜಿಲ್ಲಾಧಿಕಾರಿ ಆರ್. ಗಿರೀಶ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ ಪರಮೇಶ್ ಅವರು ಈ ವರೆಗೆ ಜಿಲ್ಲಾಡಳಿತ ವಹಿಸಿರುವ ಮುಂಜಾಗ್ರತಾ ಕ್ರಮಗಳು, ಸಿದ್ಧತೆಗಳು ಹಾಲಿ ಲಭ್ಯವಿರುವ ಸೌಲಭ್ಯ ಹಾಗೂ ಮುಂದಿನ ಸವಾಲುಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.

ವರದಿ: ಡಿಎಂಜಿ ಹಳ್ಳಿ ಅಶೋಕ್

First published: