ಅಂತರ್ಜಲ ಹೆಚ್ಚಳ ಕಾಮಗಾರಿಗೆ ಚಾಲನೆ ; ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಲಿದೆ 252 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 252 ಕೋಟಿ ರೂ. ವೆಚ್ಚದಲ್ಲಿ, ಅಂತರ್ಜಲ ಚೇತನ ಯೋಜನೆಗೆ ಚಾಲನೆ ದೊರೆತಿರುವುದು ಇದೀಗ ಜಿಲ್ಲೆಯ ಕೃಷಿ ಕೂಲಿ ಕಾರ್ಮಿಕರಲ್ಲಿ ಕೊರೊನಾ ಸಂಕಷ್ಟದ ನಡುವೆಯೂ, ಮಂದಹಾಸ ಮೂಡುವಂತೆ ಮಾಡಿದೆ.

ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿದ ಸಚಿವ ಕೆ ಎಸ್ ಈಶ್ವರಪ್ಪ

ಅಂತರ್ಜಲ ಚೇತನ ಯೋಜನೆಗೆ ಚಾಲನೆ ನೀಡಿದ ಸಚಿವ ಕೆ ಎಸ್ ಈಶ್ವರಪ್ಪ

  • Share this:
ಶಿವಮೊಗ್ಗ(ಮೇ.06): ದುಡಿಯುವ ಕೈಗಳಿಗೆ ಕೆಲಸ ನೀಡಬೇಕೆನ್ನುವ ಗುರಿ ಒಂದು ಕಡೆ, ಕೊರೋನಾ ಸಂಕಷ್ಟ ಕಾಲದಲ್ಲಿ  ಕೆಲಸವಿಲ್ಲದೇ, ಜನರು ಕಂಗಾಲಾಗಿರುವುದು ಮತ್ತೊಂದು ಕಡೆ. ಈ ಸಂದರ್ಭದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ವಿವಿಧ ಯೋಜನೆಗಳಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿದೆ. ಈಗಾಗಲೇ, ಎನ್ಆರ್​​ಇಜಿ ಯೋಜನೆ ಅಡಿಯಲ್ಲಿ ಸಾವಿರಾರು ಜನರಿಗೆ ಕೆಲಸ ನೀಡಿರುವ ಇಲಾಖೆ ಇದೀಗ, ಅಂತರ್ಜಲ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ ನೀಡಿ, ಸಾವಿರಾರೂ ಜನರಿಗೆ ಕೆಲಸ ಒದಗಿಸಿದೆ.

ಈಗಾಗಲೇ, ರಾಜ್ಯ ಸರ್ಕಾರ, ದುಡಿಯುವ ಕೈಗಳಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಈ ಕೊರೊನಾ ಮಹಾಮಾರಿ ಅಟ್ಟಹಾಸದ ನಡುವೆಯೂ ನರೇಗಾ ಯೋಜನೆಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕಾಮಗಾರಿಗಳನ್ನು ಜಾರಿಗೊಳಿಸಿರುವುದು ಶ್ಲಾಘನೆಗೆ ಕಾರಣವಾಗಿದೆ. ಇದೀಗ ಅದೇ ಎನ್ಆರ್​ಇಜಿ ಯೋಜನೆಯಡಿಯಲ್ಲಿಯೇ, ಮಹತ್ವಾಕಾಂಕ್ಷೆಯ ಯೋಜನೆಗೂ ಚಾಲನೆ ನೀಡಿದೆ.  ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 252 ಕೋಟಿ ರೂ. ವೆಚ್ಚದಲ್ಲಿ, ಅಂತರ್ಜಲ ಚೇತನ ಯೋಜನೆಗೆ ಚಾಲನೆ ದೊರೆತಿರುವುದು ಇದೀಗ ಜಿಲ್ಲೆಯ ಕೃಷಿ ಕೂಲಿ ಕಾರ್ಮಿಕರಲ್ಲಿ ಕೊರೊನಾ ಸಂಕಷ್ಟದ ನಡುವೆಯೂ, ಮಂದಹಾಸ ಮೂಡುವಂತೆ ಮಾಡಿದೆ.

ರಾಜ್ಯದಲ್ಲಿ ಪ್ರಥಮ ಹಂತದಲ್ಲಿ ಒಟ್ಟು 9 ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದೆ. ಈ ಯೋಜನೆಗೆ ಶಿವಮೊಗ್ಗ ಜಿಲ್ಲೆಯಿಂದಲೇ ಚಾಲನೆ ಕೊಡಲಾಗಿದೆ. ರಾಜ್ಯದಲ್ಲಿ, ಸುಮಾರು 23 ಸಾವಿರ ಕೆರೆಗಳಿದ್ದು, ಅವುಗಳ ಪೈಕಿ 5300 ಕೆರೆಗಳು, ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇವೆ. ಶ್ರೀ ರವಿಶಂಕರ್ ಗುರೂಜಿ ಅವರ ಸಂಸ್ಥೆಯ ಸಹಯೋಗದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಸಂಸ್ಥೆಯು ತಾಂತ್ರಿಕ ನೆರವು ಹಾಗೂ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದು, ಈ ಮಹತ್ವದ  ಕಾಮಗಾರಿಗಳಿಗೆ ಮಾರ್ಗದರ್ಶನ ಮಾಡಲಿದೆ. ಮುಂದಿನ ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಯೋಜಿಸಲಾಗಿದ್ದು, ಈ ಯೋಜನೆಯಡಿಯಲ್ಲಿ, ಜಿಲ್ಲೆಯ 1650 ಗ್ರಾಮಗಳ ವ್ಯಾಪ್ತಿಯಲ್ಲಿ, 345 ಕಿರು ಜಲಾನಯನಗಳ ಸುಮಾರು 5 ಸಾವಿರ ಚದರ ಕಿ.ಮೀ. ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗುವ ಗುರಿ ಹೊಂದಲಾಗಿದೆ.

ಇನ್ನು ಈ  ಯೋಜನೆಯಡಿಯಲ್ಲಿ, 16,255 ಬೋಲ್ಡರ್ ಚೆಕ್ ನಿರ್ಮಾಣ, 15,948 ಇಂಗುಬಾವಿ, 307 ಇಂಗು ಕೊಳವೆ, 221 ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳು ನಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್​ಗಳ ವ್ಯಾಪ್ತಿಯಲ್ಲಿ ಈ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ.

ಈ ಯೋಜನೆಯಿಂದ ಸುಮಾರು 8.82 ಲಕ್ಷ ಜನರಿಗೆ ಸದುಪಯೋಗವಾಗಲಿದ್ದು, ಗ್ರಾಮೀಣ ಭಾಗದ ಜನರು ಇದೀಗ, ಇಂತಹ ಸಂಕಷ್ಟದ ಸಮಯದಲ್ಲಿ ಈ ಯೋಜನೆಗೆ ಜಾರಿಗೆ ತಂದಿರುವುದರಿಂದ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪನವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಯೋಜನೆ ಮೂಲಕ ರಾಜ್ಯದಲ್ಲಿ ಮತ್ತೇ ಅಂತರ್ಜಲ ಪ್ರಮಾಣ ಹೆಚ್ಚಿಸುವ ಸದುದ್ದೇಶ ಹೊಂದಲಾಗಿದೆ.

ಇದನ್ನೂ ಓದಿ : ಪೊಲೀಸ್ ಕಾನ್ಸ್​​ಟೇಬಲ್​​ಗೆ ಪಾಸಿಟಿವ್ ; ನಾಲ್ಕು ತಿಂಗಳ ಮಗು ಸೇರಿ ನಾಲ್ವರು ಡಿಸ್ಚಾರ್ಜ್

ಮಳೆಗಾಲದ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ನೀರು ಹರಿದು ಹೋಗುವುದನ್ನು ತಪ್ಪಿಸಿ, ಗುಂಡಿಗಳಲ್ಲಿ ಭೂಮಿ ಒಳಗೆ  ಇಂಗುವಂತೆ ಮಾಡುವ ಮೂಲಕ ಅಂತರ್ಜಲ ವೃದ್ಧಿ ಮಾಡುವ ಯೋಜನೆ ಇದಾಗಿದೆ. ಒಳ್ಳೆಯ ರೀತಿಯಲ್ಲಿ ಈ ಯೋಜನೆ ಅನುಷ್ಠಾನ ಗೊಂಡರೆ, ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ.
First published: