HOME » NEWS » Coronavirus-latest-news » MIGRANTS WORKERS CREATING ANXIETY IN UTTARA KANNADA DISTRICT PEOPLES OPPOSITION TO QUARANTINE HK

ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ವಲಸಿಗರು; ಕ್ವಾರಂಟೈನ್ ಮಾಡಲು ಸ್ಥಳೀಯರ ವಿರೋಧ

news18-kannada
Updated:May 18, 2020, 9:37 AM IST
ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ ವಲಸಿಗರು; ಕ್ವಾರಂಟೈನ್ ಮಾಡಲು ಸ್ಥಳೀಯರ ವಿರೋಧ
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಮೇ 18): ನಿರಾಳವಾಗಿದ್ದ ಜಿಲ್ಲೆಯಲ್ಲೀಗ ವಲಸಿಗರ ಸಮಸ್ಯೆ ಕಾಡಲಾರಂಭಿಸಿದೆ. ಹಸಿರು ವಲಯ ಅಂತ ಇದ್ದ ಬಹುತೇಕ ಜಿಲ್ಲೆಗಳಲ್ಲಿ ವಲಸಿಗರಿಂದ ಕೊರೋನಾ ಸೋಂಕು ಹರಡಲಾರಂಭಿಸಿರುವುದು ಆಘಾತಕಾರಿ. ಈ ಬೆನ್ನಲ್ಲೆ ಈಗ ಉತ್ತರ ಕನ್ನಡ ಜಿಲ್ಲೆಗೂ ಕೂಡಾ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು, ಜಿಲ್ಲೆಯ ಜನ ಕ್ವಾರಂಟೈನ್​ಗೆ ವಿರೋಧ ಮಾಡುತ್ತಿದ್ದಾರೆ.

ಜಿಲ್ಲಾಡಳಿತಕ್ಕೆ ವಲಸಿಗರ ತಲೆ ನೋವಿನ ಜತೆಯಾಗಿ ಕ್ವಾರಂಟೈನ್ ಕೇಂದ್ರ ಸುತ್ತ ಮುತ್ತ ಇರುವ ಜನರನ್ನ ತಿಳಿ ಹೇಳುವುದು ದೊಡ್ಡ ಸವಾಲಾಗಿದೆ. ಈಗಾಗಲೆ ಉತ್ತರ ಕನ್ನಡ ಜಿಲ್ಲೆಗೆ ಮುಂಬೈ, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಮಹಾ ವಲಸೆ ಆರಂಭವಾಗಿ ಒಂದು ವಾರವೇ ಕಳೆದಿದೆ. ಬಂದ ವಲಸಿಗರಿಗೆಲ್ಲ ಆಯಾ ಜಿಲ್ಲೆಯಲ್ಲಿ ಆಯಾ ಊರಿನವರಿಗೆ ಸ್ಥಳೀಯ ಹಾಸ್ಟೆಲ್, ಸಭಾಭವನ, ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಈ ಕೇಂದ್ರದ ಸುತ್ತಮುತ್ತ ಇರುವ ಜನರು ಪ್ರತಿದಿನವೂ ತಗಾದೆ ತೆಗೆದು ಗಲಾಟೆ ಮಾಡುತ್ತಿದ್ದಾರೆ. ವಲಸಿಗರಿಂದ ನಮ್ಮಲ್ಲಿ ಕೊರೋನಾ ಹರಡುತ್ತದೆ ಎಂದು ಮಾಹಿತಿ ಕೊರತೆಯಿಂದ ಆಡಳಿತ ವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು, ಈಗಾಗಲೇ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಮಹಾರಾಷ್ಟ್ರದ ಲಿಂಕ್ ಮೂಲಕ ಒಂದು ಕೊರೋನಾ ಸೋಂಕು ಪತ್ತೆ ಆಗಿದೆ. ಇದರ ಬೆನ್ನಲ್ಲೆ ಮಹಾರಾಷ್ಟ್ರದಿಂದ ಬಂದ ನೂರಾರು ಜನರಿಗೆ ಕುಮಟಾ ತಾಲೂಕಿನ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಇಲ್ಲಿನ ಜನರು ಕೂಡಲೆ ಕ್ವಾರಂಟೈನ್ ಕೇಂದ್ರ ಸ್ಥಳಾಂತರಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ವಲಸಿಗರಿಂದ ಕೊರೋನಾ ಸೋಂಕು ಹರಡುತ್ತೆ ಎನ್ನುವ ಭಯ ಈಗ ಜಿಲ್ಲೆಯನ್ನು ವ್ಯಾಪಿಸಿದೆ. ಕೇವಲ ಇದು ಕಾರವಾರ, ಕುಮಟಾ ಅಷ್ಟೇ ಅಲ್ಲ ಜಿಲ್ಲೆಯ ನಾನಾ ಕಡೆ ಇದೇ ಸಮಸ್ಯೆ ಶುರುವಾಗಿದೆ. ಅಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಕೊರೋನಾ ಸೋಂಕು‌ ಹರಡುವಿಕೆಯ ಬಗ್ಗೆ ಮಾಹಿತಿ ನೀಡಿ ‌ಜನರನ್ನ ಸಮಾಧಾನ ಮಾಡುವುದು ದೊಡ್ಡ ಕೆಲಸವಾಗಿಬಿಟ್ಟಿದೆ.

ಇದನ್ನೂ ಓದಿ : ಸಕ್ಕರೆನಾಡಿನಲ್ಲಿ ಆಶಾ ಕಾರ್ಯಕರ್ತೆಯರು, ಪೊಲೀಸರ ನೆರವಿಗೆ ನಿಂತ ಸಮಾಜ ಸೇವಕ

ಒಂದೆಡೆ ಕೊರೋನಾ ಹತೋಟಿಗೆ ತರಲು ಜಿಲ್ಲಾಡಳಿತ ಹರಸಾಹ ಪಡುತ್ತಿದೆ. ಇನ್ನೊಂದೆಡೆ ವಲಸಿಗರಿಗೆ ನಿಯಂತ್ರಣದಲ್ಲಿಡುವ ಸವಾಲು ಎದುರಿಸುತ್ತಿದೆ. ಮುಂದೆ ಏನಾಗುತ್ತೆ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.

(ವರದಿ : ದರ್ಶನ್​ ನಾಯ್ಕ)
First published: May 18, 2020, 9:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories