ಗ್ರೀನ್ ಝೋನ್​​ನಲ್ಲಿದ್ದ ರಾಯಚೂರು ಜಿಲ್ಲೆಯನ್ನು ರೆಡ್ ಝೋನ್ ಮಾಡಿದ ವಲಸಿಗರು

ಈಗ ಕ್ವಾರಂಟೈನ್​ನಲ್ಲಿದ್ದವರಿಗೆ ಪಾಸಿಟಿವ್ ಬಂದಿರುವದರಿಂದ ಹೊರಗಡೆ ಇದ್ದವರಿಗೆ ಒಂದಿಷ್ಟು ಸಮಾಧಾನ ತಂದಿದೆ

news18-kannada
Updated:May 25, 2020, 12:41 PM IST
ಗ್ರೀನ್ ಝೋನ್​​ನಲ್ಲಿದ್ದ ರಾಯಚೂರು ಜಿಲ್ಲೆಯನ್ನು ರೆಡ್ ಝೋನ್ ಮಾಡಿದ ವಲಸಿಗರು
ರಸ್ತೆ ಬಂದ್​ ಮಾಡಿರುವ ಪೊಲೀಸರು
  • Share this:
ರಾಯಚೂರು(ಮೇ 25): ಇಡೀ ಜಗತ್ತನ್ನು ಕೊರೋನಾ ವೈರಸ್ ತಲ್ಲಣಗೊಳಿಸಿದ್ದರೆ, ಕಳೆದ ಮೇ 17 ರವರೆಗೂ ರಾಯಚೂರಿನಲ್ಲಿ ಒಂದೂ ಕೊರೋನಾ ವೈರಸ್ ಪ್ರಕರಣ ದಾಖಲಾಗಿರಲಿಲ್ಲ. ಮೇ 17ರ ಸಂಜೆಯಿಂದ ನಿನ್ನೆಯವರೆಗೂ 66 ಕೇಸ್ ಗಳು ವರದಿಯಾಗಿ ಗ್ರೀನ್ ವಲಯದಲ್ಲಿದ್ದ ಜಿಲ್ಲೆ ಈಗ ಆರೆಂಜ್ ಝೋನ್ ಆಗಿದೆ.

ಕೊರೋನಾ ವೈರಸ್ ಹರಡುತ್ತಿದ್ದಂತೆ ಆಂಧ್ರ, ತೆಲಂಗಾಣ ಹಾಗು ರಾಜ್ಯದ ರೆಡ್ ಝೋನ್ ಜಿಲ್ಲೆಗಳ ಗಡಿ ಹೊಂದಿದ್ದ ರಾಯಚೂರಿನಲ್ಲಿ ಜಿಲ್ಲಾಡಳಿತ ಬಿಗಿ ಕ್ರಮ ಕೈಗೊಂಡಿತ್ತು. ಗಡಿಗಳಿಂದ ರಾಜ್ಯಕ್ಕೆ ನುಸುಳುವವರನ್ನು ತಡೆಯಲಾಗಿತ್ತು. ಜಿಲ್ಲೆಯ ಗಡಿಗಳಲ್ಲಿಯೂ ಕಟ್ಟೆಚ್ಚರ ವಹಿಸಲಾಗಿತ್ತು. ಎಪಿಎಂಸಿಗೂ ಸಹ ಹೊರ ರಾಜ್ಯದ ಸಂಚಾರ ನಿಷೇಧಿಸಲಾಗಿತ್ತು. ಈ ಎಲ್ಲಾ ಬಿಗಿ ಕ್ರಮದಿಂದಾಗಿ ರಾಯಚೂರಿನಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿರಲಿಲ್ಲ. ಜಿಲ್ಲೆಯಲ್ಲಿ ನಿನ್ನೆಯವರೆಗೂ 10498 ಜನರ ರಕ್ತ ಹಾಗೂ ಗಂಟಲ ದ್ರವ ಮಾದರಿಯಲ್ಲಿ 5878 ನೆಗಟಿವ್ ಬಂದಿತ್ತು. ಆರಂಭದಲ್ಲಿ 174 ಜನರು ವಿದೇಶದಿಂದ ಬಂದಿದ್ದರು. ಅವರ ನೇರ ಸಂಪರ್ಕದಲ್ಲಿ 760 ಜನರ ಮೇಲೆ‌ ನಿಗಾ ವಹಿಸಲಾಗಿತ್ತು, ಮೊದಲ ಹಂತದ ಲಾಕ್ ಡೌನ್ ಆರಂಭವಾದ ತಕ್ಷಣ ರಾಜ್ಯದ ಒಳಗಡೆ ಇರುವ ಹಾಗೂ ಹೊರಗಡೆ ಇರುವ 47,432 ಜನ ಕೂಲಿಕಾರ್ಮಿಕರು‌ ಸ್ವಗ್ರಾಮಕ್ಕೆ ಮರಳಿದ್ದರು. ಅವರೆಲ್ಲರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಆಗಲೂ ಸಹ ಜಿಲ್ಲೆಯಲ್ಲಿ ಕೊರೊನಾ ಕಾಣಿಸಿಕೊಂಡಿರಲಿಲ್ಲ.

ಆದರೆ ಮೂರನೆಯ ಹಂತದ ಲಾಕ್ ಡೌನ್ ಆರಂಭವಾದ ತಕ್ಷಣ ಹೊರರಾಜ್ಯದಲ್ಲಿದ್ದವರು ಹಾಗು ರಾಜ್ಯದೊಳಗೆ ಇದ್ದವರನ್ನು ಸ್ವಗ್ರಾಮಕ್ಕೆ ಮರಳಲು ಸೂಚಿಸಲಾಗಿದೆ.‌ ಇದರಿಂದ ಬೆಂಗಳೂರು, ಮುಂಬೈ, ಪುನಾ, ಅಹಮದಾಬಾದ್, ಗುಂಟೂರು ಹಾಗು ಪ್ರಕಾಶಂ ಜಿಲ್ಲೆಯಲ್ಲಿ ಲಾಕ್ ಆಗಿದ್ದ ಕೂಲಿಕಾರ್ಮಿಕರು ರಾಯಚೂರು ಜಿಲ್ಲೆಗೆ ಆಗಮಿಸಿದ್ದಾರೆ. ಇಲ್ಲಿಯವರೆಗೂ ಜಿಲ್ಲೆಗೆ ಒಟ್ಟು 10811 ಜನರು ವಾಪಸ್ಸಾಗಿದ್ದಾರೆ. ಇನ್ನೂ ವಲಸಿಗರು ವಾಪಸ್ಸಾಗುವವರಿದ್ದರು. ಆದರೆ, ಅವರಿಗೆ ಈಗ ಪರವಾನಿಗೆ ರದ್ದು ಮಾಡಲಾಗಿದೆ. ವಲಸೆ ಬಂದ ಕಾರ್ಮಿಕರೆಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

ಒಂದು ವೇಳೆ ಮೊದಲು ಬಂದವರಂತೆ ನೇರವಾಗಿ ಗ್ರಾಮಗಳಲ್ಲಿ ಕ್ವಾರಂಟೈನ್ ಮಾಡಿದ್ದರೆ ಕೊರೋನಾ ಇನ್ನಷ್ಟು ಹರಡುವ ಭೀತಿ ಇತ್ತು. ಆದರೆ, ಈಗ ಕ್ವಾರಂಟೈನ್​ನಲ್ಲಿದ್ದವರಿಗೆ ಪಾಸಿಟಿವ್ ಬಂದಿರುವದರಿಂದ ಹೊರಗಡೆ ಇದ್ದವರಿಗೆ ಒಂದಿಷ್ಟು ಸಮಾಧಾನ ತಂದಿದೆ. ಈ‌ ಮಧ್ಯೆ ನಿನ್ನೆ ವರದಿಯಾದ ಪ್ರಕರಣಗಳಲ್ಲಿ ಮಲಿಯಾಬಾದಿನ 4 ವರ್ಷದ ಬಾಲಕಿ ಇದ್ದಾಳೆ. ಆಕೆ ಅನಾರೋಗ್ಯದಿಂದಾಗಿ ನಗರದ ಹಲವು ಆಸ್ಪತ್ರೆಗೆ ತಿರುಗಾಡಿದ್ದಾಳೆ. ಆಕೆಗೆ ಹೇಗೆ ಕೊರೋನಾ ಬಂದಿದೆ ಎಂಬುವುದು ನಿಗೂಡವಾಗಿದೆ. ಆಕೆಯ ಸಂಬಂಧಿಯೊಬ್ಬ ಕೊರಿಯರ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದು, ಆತನಿಗೆ ಮಹಾರಾಷ್ಟ್ರ ಪಾರ್ಸಲ್ ಬಂದಿದ್ದು, ಆತನ ವರದಿಗಾಗಿ ಕಾಯಿಯುತ್ತಿದ್ದಾರೆ. ಇನ್ನೂ ಪ್ರಕಾಶಂ ಜಿಲ್ಲೆಯಿಂದ ಬಂದ ಮಹಿಳೆಗೂ ಕೊರೋನಾ ಬಂದಿದ್ದು ಈ ಎರಡು ಪ್ರಕರಣ ಭಯ ಹುಟ್ಟಿಸಿವೆ.

ಇದನ್ನೂ ಓದಿ : ಕ್ವಾರಂಟೈನ್ ಮುಗಿಸಿದವರ ಮೇಲೆ ಪುಷ್ಪವೃಷ್ಟಿ ; ವಲಸಿಗರನ್ನು ಪ್ರೀತಿಯಿಂದ ಬರಮಾಡಿಕೊಂಡ ಗ್ರಾಮಸ್ಥರು

ಈಗ ವರದಿಯಾದ ಪ್ರಕರಣಗಳಲ್ಲಿ 64 ಜನರಿಗೆ ಮಹಾರಾಷ್ಟ್ರ ಲಿಂಕ್ ಇದ್ದು, ಅದರಲ್ಲಿ 62 ಜನರು ಮುಂಬೈಯಿಂದ ಬಂದವರಾಗಿದ್ದಾರೆ. ಈಗ ವರದಿಯಾದ ಪಾಸಿಟಿವ್ ಪ್ರಕರಣಗಳಲ್ಲಿ 44 ಪ್ರಕರಣಗಳು ದೇವದುರ್ಗಾ ತಾಲೂಕಿನ 3 ಕ್ವಾರಂಟೈನ್ ನಲ್ಲಿ ವರದಿಯಾಗಿದ್ದು, 4 ಪ್ರಕರಣಗಳು ಲಿಂಗಸಗೂರ ತಾಲೂಕಿನವರಾಗಿವೆ. ಇನ್ನು, ರಾಯಚೂರು ತಾಲೂಕಿನ 18 ಪ್ರಕರಣಗಳಿವೆ. ನಿನ್ನೆ ಒಂದು ಪಾಸಿಟಿವ್ ವರದಿಯಾಗಿಲ್ಲ, ಆದರೂ ಜನರಲ್ಲಿ ಆತಂಕ ದೂರವಾಗಿಲ್ಲ.
First published: May 25, 2020, 12:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading