ಬೆಂಗಳೂರು (ಮೇ 05); ಸತತ ಲಾಕ್ಡೌನ್ನಿಂದಾಗಿ ಕಂಗೆಟ್ಟಿರುವ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿನತ್ತ ಹೊರಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಪರಿಣಾಮ ನಾಲ್ಕನೇ ದಿನವಾದ ಇಂದು ಸಹ ಮೆಜೆಸ್ಟಿಕ್ನಲ್ಲಿ ಜನ ಜಂಗುಳಿ ಅಧಿಕವಾಗಿದೆ.
ಲಾಕ್ಡೌನ್ ಕಳೆದ 42 ದಿನಗಳಿಂದ ಚಾಲ್ತಿಯಲ್ಲಿದೆ. ಕೇಂದ್ರ ಸರ್ಕಾರ ಮೂರನೇ ಬಾರಿಗೆ ಲಾಕ್ಡೌನ್ ಅವಧಿಯನ್ನು ವಿಸ್ತರಿಸಿದೆ. ಪರಿಣಾಮ ರಾಜ್ಯ ಮತ್ತು ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಕೆಲಸಕ್ಕೆಂದು ಬಂದಿದ್ದ ವಲಸೆ ಕಾರ್ಮಿಕರು ಇತ್ತ ಕೂಲಿಯೂ ಇಲ್ಲದೆ ಅತ್ತ ಊಟವೂ ಇಲ್ಲದೆ ಕಂಗೆಟ್ಟಿದ್ದರು. ಹೀಗಾಗಿ ಇವರನ್ನು ಬಸ್ ಮೂಲಕ ಸ್ವಂತ ಊರಿಗೆ ಕಳುಹಿಸಲು ರಾಜ್ಯ ಸರ್ಕಾರ ಮುಂದಾಗಿತ್ತು.
ಕಳೆದ ಭಾನುವಾರ ಒಟ್ಟು 500 ಬಸ್ಗಳ ಮೂಲಕ ವಲಸೆ ಕಾರ್ಮಿಕರನ್ನು ಕಳುಹಿಸಿಕೊಡಲಾಗಿತ್ತು. ಸೋಮವಾರ ಸಹ ವಲಸೆ ಕಾರ್ಮಿಕರ ಸಂಚಾರಕ್ಕೆ 800 ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ, ರಾಜ್ಯದ ಇತರೆ ಭಾಗಗಳಿಂದಲೂ 200 ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಕಳೆದ ಮೂರು ದಿನಗಳಿಂದ ಒಟ್ಟು 59,880 ಕಾರ್ಮಿಕರು ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸಿದ್ದಾರೆ. ಹೀಗಾಗಿ ಇಂದೂ ಸಹ ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು, ಮೆಜೆಸ್ಟಿಕ್ ಸುತ್ತ ಜನ ಜಂಗುಳಿಯೇ ನೆರೆದಿದೆ. ಜನ ತಮ್ಮ ಊರುಗಳಿಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. 9 ಗಂಟೆಗೆ ಬಸ್ ಸಂಚಾರ ಆರಂಭವಾಗಲಿದ್ದು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ 10 ಗಂಟೆಗೆ ಮೆಜೆಸ್ಟಿಕ್ ಗೆ ಭೇಟಿ ನೀಡಿ ಎಲ್ಲರಿಗೂ ಮಾಸ್ಕ್ ವಿತರಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ