ಮುಖ್ಯಮಂತ್ರಿ ಕೈಮುಗಿದು ಕೇಳಿಕೊಂಡರೂ ದೇಶದ ರಾಜಧಾನಿಯಿಂದ ವಲಸೆ ಹೊರಟಿರುವ ಕಾರ್ಮಿಕರು

ಇದು ಕೇವಲ ಆರು ದಿನ ಲಾಕ್ ಡೌನ್ ಮಾತ್ರ. ಎಲ್ಲೂ ಹೋಗಬೇಡಿ ಎಂದು ಕಾರ್ಮಿಕರಲ್ಲಿ ಕೇಳಿಕೊಳ್ಳುತ್ತೇನೆ. ನೀವು ಊರಿಗೆ ವಾಪಸ್ ಹೋದರೆ ಸಮಯ, ಹಣ, ಶ್ರಮ ಎಲ್ಲವೂ ವ್ಯರ್ಥ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಮಾಡಿಕೊಂಡ ಮನವಿಗೆ ಕಾರ್ಮಿಕರು ಕಿವಿಗೊಟ್ಟಿಲ್ಲ.

ದೆಹಲಿಯಿಂದ ಕಾರ್ಮಿಕರ ವಲಸೆ

ದೆಹಲಿಯಿಂದ ಕಾರ್ಮಿಕರ ವಲಸೆ

  • News18
  • Last Updated :
  • Share this:
ನವದೆಹಲಿ(ಏ. 20): ಕಳೆದ ವರ್ಷ ಕೊರೋನಾ ನಿಯಂತ್ರಿಸಲು ಕೇಂದ್ರ ಸರ್ಕಾರ ದೇಶವ್ಯಾಪಿ ಲಾಕ್ ಡೌನ್ ಘೋಷಿಸಿತ್ತು. ಅದಾದ ಬಳಿಕ ವಲಸೆ ಕಾರ್ಮಿಕರು ಸಿಕ್ಕ ಸಿಕ್ಕ ವಾಹನಗಳಲ್ಲಿ ತಮ್ಮೂರುಗಳಿಗೆ ವಾಪಸ್ ಹೋಗಿದ್ದರು. ಆ ಮಹಾವಲಸೆ ಎಲ್ಲಾ ಸರ್ಕಾರಗಳಿಗೂ ಮಹಾತಲೆನೋವು ಸೃಷ್ಟಿಸಿತ್ತು. ಈಗ ಅಂಥದ್ದೇ ಮತ್ತೊಂದು ಮಹಾವಲಸೆ ನಡೆಯುವ ಸೂಚನೆ ಇದೆ. ದೇಶದ ರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ಘೋಷಣೆ ಮಾಡಿದ ಬೆನ್ನಲ್ಲೇ ಸಾವಿರಾರು ಕಾರ್ಮಿಕರು ಅಲ್ಲಿಂದ ನಿರ್ಗಮಿಸುತ್ತಿದ್ದಾರೆ. ಎಲ್ಲೂ ಹೋಗಬೇಡಿ, ನಾನಿದ್ದೇನೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಪದೇ ಪದೇ ಮನವಿ ಮಾಡಿದರೂ ಕಾರ್ಮಿಕರು ನಿಲ್ಲುತ್ತಿಲ್ಲ. ಆನಂದ್ ವಿಹಾರ್ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಇವತ್ತು ಮಂಗಳವಾರ ಸರಿಸುಮಾರು 5 ಸಾವಿರ ಮಂದಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಹೋಗಲು ಆಗಮಿಸಿದ್ದು ಕಂಡುಬಂದಿದೆ.

“ನೀವೆಲ್ಲೂ ಹೋಗಬೇಡಿ. ಸರ್ಕಾರ ನಿಮ್ಮ ಯೋಗಕ್ಷೇಮದ ಜವಾಬ್ದಾರಿ ಹೊರುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನನ್ನ ಮೇಲೆ ವಿಶ್ವಾಸ ಇಡಿ” ಎಂದು ಒಂದು ವಾರ ಕಾಲ ಲಾಕ್ ಡೌನ್ ಘೋಷಣೆ ಮಾಡುವ ಸಂದರ್ಭದಲ್ಲೂ ಅರವಿಂದ್ ಕೇಜ್ರಿವಾಲ್ ಅವರು ಕಾರ್ಮಿಕರಿಗೆ ಕೈಮುಗಿದು ಕೇಳಿಕೊಂಡಿದ್ದರು. ಆದರೆ, ಕಳೆದ ವರ್ಷದ ಕೇಂದ್ರ ಸರ್ಕಾರ ಘೋಷಿಸಿದ್ದ ಮೂರು ವಾರಗಳ ಲಾಕ್ ಡೌನ್ ಇನ್ನಷ್ಟು ಕಾಲ ಮುಂದುವರಿದ ಉದಾಹರಣೆ ಕಣ್ಮುಂದೆ ಇದ್ದ ಕಾರಣ ದೆಹಲಿಯಲ್ಲಿ ಕರ್ಫ್ಯೂ ಹೆಚ್ಚು ಅವಧಿಯವರೆಗೆ ಮುಂದುವರಿಯಬಹುದು ಎಂಬ ಭಯ ಇಲ್ಲಿಯ ಕಾರ್ಮಿಕರದ್ದು. ಮೇಲಾಗಿ, ಕೋವಿಡ್ ಪ್ರಕರಣಗಳು ಹಿಂದೆಂದಿಗಿಂತಲೂ ಎಗ್ಗಿಲ್ಲದೇ ಏರಿಕೆ ಕಾಣುತ್ತಿರುವುದರಿಂದ ಸದ್ಯಕ್ಕಂತೂ ಕೋವಿಡ್ ಮತ್ತು ಲಾಕ್ ಡೌನ್​ನಿಂದ ಮುಕ್ತಿ ಸಿಗುವ ಸಾಧ್ಯತೆ ಇಲ್ಲ ಎಂಬ ಎಣಿಕೆ ವಲಸೆ ಕಾರ್ಮಿಕರದ್ದು.

ಅನಿಶ್ಚಿತ ಸ್ಥಿತಿಯಲ್ಲಿ ಇಲ್ಲಿ ಎಷ್ಟು ದಿನ ಇರಲು ಸಾಧ್ಯ? ಇಲ್ಲಿ ಜೀವನ ನಿರ್ವಹಣೆ ಕಷ್ಟಸಾಧ್ಯ. ತಮ್ಮ ಊರಿಗೆ ಹೋದರೆ ಹೇಗಾದರೂ ಗಂಜಿ ತಿಂದು ಬದುಕು ನಡೆಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾರ್ಮಿಕರು ತಂತಮ್ಮ ಊರುಗಳಿಗೆ ಹೊರಟಿದ್ದಾರೆ. ಬಲವಂತವಾಗಿ ಕಾರ್ಮಿಕರನ್ನು ಇರಿಸಿಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಮಿಕರಿಗೆ ತಮ್ಮ ಊರುಗಳಿಗೆ ಸುರಕ್ಷಿತವಾಗಿ ಹೋಗಲು ನೆರವಾಗುತ್ತಿದ್ದಾರೆ. ಅದೇ ವೇಳೆ, ಊರಿಗೆ ವಾಪಸ್ ಹೋಗುವ ಬದಲು ಸಹನೆ ತೋರಿ ಇಲ್ಲಿಯೇ ಕೆಲ ದಿನಗಳ ಕಾಲ ಉಳಿದುಕೊಳ್ಳಬೇಕೆಂದು ಪೊಲೀಸರೂ ಕೂಡ ಕಾರ್ಮಿಕರನ್ನ ಒಪ್ಪಿಸುವ ಪ್ರಯತ್ನವನ್ನಂತೂ ಮಾಡುತ್ತಿದ್ದಾರೆ. ಆದರೂ ಕಾರ್ಮಿಕರು ಕೇಳುವ ತಾಳ್ಮೆ ತೋರುತ್ತಿಲ್ಲ.

ಇದನ್ನೂ ಓದಿ: ಕಂಬಳ ಕೂಟದ ಚಿಗರೆಮರಿ ಬೋಳಂತೂರು ಕಾಟಿ ನಿಧನ; ವೇಗದ ಸರದಾರನ ಅಗಲಿಕೆಗೆ ಕಂಬಳಪ್ರಿಯರ ಕಣ್ಣೀರು

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಆನ್​ಲೈನ್​ನಲ್ಲಿ ಮತ್ತೊಮ್ಮೆ ಮನವಿ ಮಾಡಿದ್ದಾರೆ. “ಇದು ಆರು ದಿನಗಳ ಕಾಲ ಮಾತ್ರ ಇರುವ ಲಾಕ್ ಡೌನ್ ಆಗಿದೆ. ವಲಸೆ ಕಾರ್ಮಿಕರೇ ದೆಹಲಿ ಬಿಟ್ಟು ಹೋಗಬೇಡಿ. ನೀವು ಸುಮ್ಮನೆ ಸಮಯ, ಹಣ ಮತ್ತು ಶಕ್ತಿ ವ್ಯಯ ಮಾಡಿಕೊಳ್ಳುತ್ತೀರಿ. ದೆಹಲಿಯಲ್ಲೇ ಉಳಿಯಿರಿ… ಲಾಕ್ ಡೌನ್ ವೇಳೆ ಅದೆಷ್ಟು ಜನರು ಕೆಲಸ ಮತ್ತು ಕೂಲಿ ಕಳೆದುಕೊಳ್ಳುತ್ತಾರೆಂಬುದು ನಂಗೆ ಗೊತ್ತು. ಅದರಲ್ಲೂ ಬಡ ಜನರು ಮತ್ತು ದಿನಗೂಲಿ ಕಾರ್ಮಿಕರಿಗೆ ಇದು ಬಹಳ ಕಠಿಣ ಪರಿಸ್ಥಿತಿ ಆಗಿದೆ” ಎಂದು ಕೇಜ್ರಿವಾಲ್ ಕೇಳಿಕೊಂಡಿದ್ದಾರೆ.

ಬಿಹಾರ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಿಂದ ಲಕ್ಷಾಂತರ ಕಾರ್ಮಿಕರು ದೆಹಲಿಯಲ್ಲಿದ್ದಾರೆ. ದೆಹಲಿ ಮಾತ್ರವಲ್ಲ ಕರ್ನಾಟಕ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಅನ್ಯ ರಾಜ್ಯಗಳ ಕಾರ್ಮಿಕರು ಕೆಲಸ ಅರಸಿಕೊಂಡು ಹೋಗಿರುತ್ತಾರೆ. ಎಲ್ಲೆಡೆಯೂ ಕೋವಿಡ್ ಸ್ಥಿತಿ ಗಂಭೀರವಾಗಿರುವುದರಿಂದ ಕಾರ್ಮಿಕರು ವಾಪಸ್ ತಂತಮ್ಮ ಊರುಗಳಿಗೆ ಹೋಗುವ ಪ್ರಕ್ರಿಯೆ ನಡೆದಿದೆ. ಕೊರೋನಾ ಅತಿಹೆಚ್ಚು ಇರುವ ಮಹಾರಾಷ್ಟ್ರದಲ್ಲಿ ಉತ್ತರ ಕರ್ನಾಟಕದ ಕಾರ್ಮಿಕರು ಬಹಳಷ್ಟಿದ್ದಾರೆ. ಇವರೂ ಇದೀಗ ಊರುಗಳಿಗೆ ಮರಳಿದ್ಧಾರೆ. ಬೆಂಗಳೂರಿನಲ್ಲಿ ಕಠಿಣ ಕ್ರಮಗಳನ್ನ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಸಿಲಿಕಾನ್ ಸಿಟಿಯಿಂದಲೂ ಕಾರ್ಮಿಕರು ತಮ್ಮತಮ್ಮ ಊರುಗಳಿಗೆ ವಲಸೆ ಹೋಗಲು ಅಣಿಯಾಗಿದ್ದಾರೆ. ಆದರೆ, ಈ ವಲಸೆ ಹಲವು ಅಪಾಯಗಳಿಗೂ ಕಾರಣವಾಗಲಿದೆ. ಮೊದಲಿಗೆ, ಅಭಿವೃದ್ಧಿ ಚಟುವಟಿಕೆಗೆ ಕಾರ್ಮಿಕರ ಕೊರತೆ ಎದುರಾಗುತ್ತದೆ. ಜೊತೆಗೆ, ದೊಡ್ಡ ನಗರಗಳಲ್ಲಿ ಕೋವಿಡ್ ಸೋಂಕು ಹೆಚ್ಚು ಇರುವ ಕಾರಣ ಇಲ್ಲಿರುವ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿ ಅಲ್ಲಿಯೂ ಸೋಂಕು ಹಬ್ಬಿಸುವ ಅಪಾಯವಂತೂ ಇದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಹೇಗಾದರೂ ಮನವೊಲಿಸಿ, ಅವರಿಗೆ ಅಗತ್ಯ ಸಹಾಯಧನ ನೀಡಿ ಅವರನ್ನ ಇರುವ ಸ್ಥಳದಲ್ಲೇ ಉಳಿಸಿಕೊಳ್ಳುವ ಪ್ರಯತ್ನಗಳನ್ನ ಸರ್ಕಾರಗಳು ಮಾಡುವುದು ಅಗತ್ಯವಾಗಿರುತ್ತದೆ.
Published by:Vijayasarthy SN
First published: