ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ತೆರಳಲು ವಲಸಿಗರ ದಟ್ಟಣೆ; ಫಾವರ್ಡ್‌ ಮೆಸೇಜ್ ಅನ್ನೇ ನಂಬಿ ಬಂದವರ ಆಶಾಭಂಗ

ದರಲ್ಲಿ ಬಹುತೇಕರಿಗೆ ಮೆಸೇಜ್ ಬರದೇ ಹೋದರೂ ತಮಗೆ ಬಂದ ಮೆಸೇಜ್ ಬೇರೆಯವರಿಗೆ ಫಾರ್ವಡ್ ಮಾಡಿದ್ದಾರೆ. ಈ ಫಾರ್ವರ್ಡ್ ಮೆಸೇಜ್ ತೋರಿಸಿ ತಾವು ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಆಗಮಿಸಿದ್ದೇ ವಲಸಿಗರ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ.

news18-kannada
Updated:May 23, 2020, 8:47 PM IST
ಶ್ರಮಿಕ್ ಎಕ್ಸ್‌ಪ್ರೆಸ್‌ನಲ್ಲಿ ತೆರಳಲು ವಲಸಿಗರ ದಟ್ಟಣೆ; ಫಾವರ್ಡ್‌ ಮೆಸೇಜ್ ಅನ್ನೇ ನಂಬಿ ಬಂದವರ ಆಶಾಭಂಗ
ಶ್ರಮಿಕ್‌ ರೈಲಿನ ಮೂಲಕ ವಲಸೆ ಕಾರ್ಮಿಕರನ್ನು ಕಳುಹಿಸಲಾಗುತ್ತಿರುವುದು.
  • Share this:
ಬೆಂಗಳೂರು (ಮೇ 23); ಫಾರ್ವರ್ಡ್ ಮೆಸೇಜ್‌ ನೋಡಿಕೊಂಡು ಸಾವಿರಾರು ವಲಸಿಗರು ತಮ್ಮೂರಿಗೆ ತೆರಳಲು ಗಂಟುಮೂಟೆ ಕಟ್ಟಿಕೊಂಡು ಆಗಮಿಸಿದ ದೃಶ್ಯಕ್ಕೆ ಬೆಂಗಳೂರಿನ ಅರಮನೆ ಮೈದಾನ ಇಂದು ಸಾಕ್ಷಿಯಾಗಿತ್ತು. ಬೆಂಗಳೂರಿನಲ್ಲಿರುವ ಮಣಿಪುರ ಹಾಗೂ ಓಡಿಸ್ಸಾ ಮೂಲದ ಕಾರ್ಮಿಕರು, ನಿವಾಸಿಗಳು ಅರಮನೆ ಮೈದಾನದಲ್ಲಿ ರಸ್ತೆ ಬದಿ ಕಿಲೋಮೀಟರ್ ಗಟ್ಟಲೆ ಕ್ಯೂ ನಿಂತು ಶ್ರಮಿಕ್ ಎಕ್ಸ್ ಪ್ರೆಸ್ ಮೂಲಕ ತಮ್ಮೂರಿಗೆ ತೆರಳಲು ಆಗಮಿಸಿದ್ದರು.

ಕೊರೊನೋ ವೈರಸ್ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದಂತೆ ತಮ್ಮೂರಿಗೆ ತೆರಳುವ ವಲಸಿಗರ ಸಂಖ್ಯೆಯೂ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಕಳೆದೊಂದು ವಾರದಿಂದ ಶ್ರಮಿಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಹೋಗುತ್ತಿದ್ದಾರೆ. ಆದರಿಂದು ಬೆಂಗಳೂರು ಅರಮನೆ ಮೈದಾನದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಲಸಿಗರು  ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಆಗಮಿಸಿದ್ದರು.

ಶ್ರಮಿಕ ಎಕ್ಸ್‌ಪ್ರೆಸ್ ಮೂಲಕ ತೆರಳಲು ಇಂದು ಅರಮನೆ ಮೈದಾನದ ರಸ್ತೆಯುದ್ದಕ್ಕೂ ವಲಸಿಗರ ಕ್ಯೂ ನಾಲ್ಕು ಕಿಲೋಮೀಟರ್‌ ಮೀರಿತ್ತು. ಮಡದಿ, ಮಕ್ಕಳು ಜೊತೆ ಆಗಮಿಸಿದ್ದ ಸಾವಿರಾರು ವಲಸಿಗರ ಕುಟುಂಬ ಹೇಗಾದ್ರೂ ಮಾಡಿ ತಮ್ಮೂರಿಗೆ ತೆರಳಲು ತುದಿಗಾಲಿನಲ್ಲಿ ನಿಂತ ದೃಶ್ಯ ಮನಕಲಕುವಂತಿತ್ತು.

ಮೆಸೇಜ್ ತಂದ ಗೊಂದಲ:

ಕೇಂದ್ರ ಸರ್ಕಾರ ವಿವಿಧ ರಾಜ್ಯಗಳ ವಲಸಿಗರನ್ನು ಶ್ರಮಿಕ್‌ ವಿಶೇಷ ರೈಲಿನ ಮೂಲಕ ಕಳೆದ ಎರಡು ವಾರದಿಂದ ಅವರವರ ರಾಜ್ಯಕ್ಕೆ ಸೇರಿಸುತ್ತಿದೆ. ಈವರೆಗೆ ಕನಿಷ್ಟ ಒಂದೂವರೆ ಲಕ್ಷ ವಲಸೆ‌ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತಲುಪಿದ್ದಾರೆ. ರಾಜ್ಯದ ಸೇವಾ ಸಿಂಧು ಹಾಗೂ ತಮ್ಮ ತಮ್ಮ ರಾಜ್ಯಗಳ ವೆಬ್‌ಸೈಟ್ ನಲ್ಲಿ ನೋಂದಣಿ ಮಾಡಿಸಿ ತಮ್ಮೂರಿಗೆ ತೆರಳಲು ವಲಸಿಗರು ಇಂದು ಸಹ ಆಗಮಿಸಿದ್ದರು.

ಆದರೆ, ಇದರಲ್ಲಿ ಬಹುತೇಕರಿಗೆ ಮೆಸೇಜ್ ಬರದೇ ಹೋದರೂ ತಮಗೆ ಬಂದ ಮೆಸೇಜ್ ಬೇರೆಯವರಿಗೆ ಫಾರ್ವಡ್ ಮಾಡಿದ್ದಾರೆ. ಈ ಫಾರ್ವರ್ಡ್ ಮೆಸೇಜ್ ತೋರಿಸಿ ತಾವು ತಮ್ಮ ತಮ್ಮ ರಾಜ್ಯಗಳಿಗೆ ತೆರಳಲು ಆಗಮಿಸಿದ್ದೇ ವಲಸಿಗರ ದಟ್ಟಣೆ ಹೆಚ್ಚಾಗಲು ಕಾರಣವಾಗಿದೆ.

ಅಂತರವಿಲ್ಲ, ಮೂರ್ಛೆಹೋದ ಮಣಿಪುರ ಯುವಕ:ಶ್ರಮಿಕ್‌ ರೈಲಿನಲ್ಲಿ ಊರಿಗೆ ಹೋಗಲು ಬೆಂಗಳೂರಿನ ಅರಮನೆ ಮೈದಾನದ ಬದಿಯಲ್ಲಿ ಕಿಲೋಮೀಟರ್ ಗಟ್ಟಲೆ ಸಾವಿರಾರು ವಲಸಿಗರು ಕ್ಯೂ ಸಾಗಿತ್ತು. ಜನದಟ್ಟಣೆ ಹೆಚ್ಚಿದ್ದರಿಂದ ಸಾಮಾಜಿಕ ಅಂತರ ಅಸಾಧ್ಯವಾಗಿತ್ತು. ಈ ವೇಳೆ ಸ್ಥಳಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ್‌ ಭೇಟಿ ನೀಡಿ ವಲಸಿಗರನ್ನು ಮಾತಾಡಿಸುತ್ತಿದ್ದರು. ಬಿಸಿಲು ಹೆಚ್ಚಿರುವುದರಿಂದ ಮಣಿಪುರದ ಯುವಕ ಮೂರ್ಛೆ ಹೋಗಿ ಬಿದ್ದಿದ್ದಾನೆ. ಈ ವೇಳೆ ಸ್ವತಃ ಸಚಿವ ಸುಧಾಕರ್‌ ಪ್ರಥಮ ಚಿಕಿತ್ಸೆ ನೀಡಿ ಪೊಲೀಸ್ ವಾಹನದ ಮೂಲಕ‌ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

ಬೇಸರದಿಂದ ಹಿಂದಿರುಗಿದ ಜನ: 

ಹೆಚ್ಚಿನ ಸಂಖ್ಯೆಯಲ್ಲಿ ಫಾರ್ವರ್ಡ್ ಮೆಸೇಜ್ ನೋಡಿಕೊಂಡು ಬಂದಿದ್ದ ಕಾರಣ ಸೂಕ್ತ ದಾಖಲೆ ಇಲ್ಲದ ಮಣಿಪುರ ರಾಜ್ಯದವರನ್ನು ವಾಪಾಸ್ ಕಳುಹಿಸಲಾಯಿತು. ಯಾರು ನೋಂದಣಿ ಮಾಡಿದ್ದರೋ ಅವರಿಗೆ ಮಾತ್ರ ಅರಮನೆ ಮೈದಾನದಲ್ಲಿ ಒಳಬಿಟ್ಟು ಸ್ಕ್ರೀನಿಂಗ್ ಮಾಡಿ ಬಿಎಂಟಿಸಿ ಬಸ್ ಮೂಲಕ ಶ್ರಮಿಕ ರೈಲು ನಿಲ್ದಾಣಕ್ಕೆ‌ ಕಳುಹಿಸಲಾಯಿತು. ಪರಿಣಾಮ ತಮ್ಮೂರಿಗೆ ತೆರಳಲು ಆಗಮಿಸಿದ್ದ ಜನ ಪೆಚ್ಚು ಮೋರೆ ಹಾಕಿ ಹಿಂದಿರುಗಿದ್ದ ದೃಶ್ಯ ನಿಜಕ್ಕೂ ಮನಕಲಕುವಂತಿತ್ತು.

ಇದನ್ನೂ ಓದಿ : ಕೊರೋನಾ ತಡೆಯೋದಕ್ಕೆ ಈ ಊರಲ್ಲಿ ಮಾಡ್ತಾರೆ ವಿಶೇಷ ಹಬ್ಬ; ಈ ಸಂಪ್ರದಾಯದ ಹಿನ್ನೆಲೆ ಏನು ಗೊತ್ತಾ?
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading