ನವದೆಹಲಿ(ಮೇ.16): ಒಂದೆಡೆ ಕೊರೋನಾ ಲಾಕ್ಡೌನ್ನಿಂದ ಲಕ್ಷಾಂತರ ವಲಸೆ ಕಾರ್ಮಿಕರು ತವರಿಗೆ ವಾಪಸ್ಸಾಗದೆ ದೇಶದ ಪ್ರಮುಖ ನಗರಗಳಲ್ಲೇ ಇನ್ನೂ ಸಿಲುಕಿಕೊಂಡಿದ್ದಾರೆ. ಇನ್ನೊಂದೆಡೆ ಎಷ್ಟು ಗೋಗರೆದರೂ ರಾಜ್ಯ ಸರ್ಕಾರಗಳು ಸಾರಿಗೆ ವ್ಯವಸ್ಥೆ ಮಾಡದ ಕಾರಣ ಹತ್ತಾರು ಸಾವಿರ ವಲಸೆ ಕಾರ್ಮಿಕರು ಕಾಲ್ನಡಿಗೆ ಮೂಲಕ ತಮ್ಮ ಊರಿಗೆ ಹೋಗುತ್ತಿದ್ದಾರೆ. ಆಗಲೇ ಹಲವರು ನೂರಾರು ಕಿ.ಮೀ ಸಾಗುತ್ತಿದ್ದಾರೆ. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಕಾರ್ಮಿಕರಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಕೇಂದ್ರದ ಮೇಲೆ ವಿರೋಧ ಪಕ್ಷಗಳು ಕೆಂಡಕಾರಿವೆ. ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಗೃಹ ಇಲಾಖೆಯೂ ರಾಜ್ಯಗಳಿಗೆ ಕಟ್ಟುನಿಟ್ಟಾದ ಆದೇಶ ಹೊರಡಿಸಿದೆ. ಕೂಡಲೇ ವಲಸೆ ಕಾರ್ಮಿಕರ ಕಾಲ್ನಡಿಗೆ ತಪ್ಪಿಸಿ ಅವರನ್ನು ಬಸ್ಸು ಮತ್ತು ರೈಲು ಮೂಲಕ ಮನೆಗೆ ತಲುಪಿಸಿ ಎಂದು ಸೂಚಿಸಿದೆ.
ವಲಸೆ ಕಾರ್ಮಿಕರಿಗಾಗಿ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಿದ್ದೇವೆ. ಹೀಗಿದ್ದರೂ ಇನ್ನು ಅನೇಕರು ಕಾಲ್ನಡಿಗೆ ಮೂಲಕವೇ ಊರುಗಳಿಗೆ ತೆರಳುತ್ತಿದ್ದಾರೆ ಇಂತಹ ವಲಸೆ ಕಾರ್ಮಿಕರನ್ನು ಗುರುತಿಸಿ ಊಟ, ವಸತಿ ನೀಡಿ ರೈಲು ಅಥವಾ ಬಸ್ಸಿನ ಮೂಲಕ ಮನೆಗೆ ಕಳಿಸಿಕೊಡಿ ಎಂದು ಕೇಂದ್ರ ನಿರ್ದೇಶನ ನೀಡಿದೆ.
ಇನ್ನು, ಹೀಗೆ ದೇಶಾದ್ಯಂತ ಬಾಕಿಯಾಗಿರುವ ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಕೆಲವು ದಿನಗಳಿಂದ ತಮ್ಮ ಊರುಗಳಿಗೆ ಕಳುಹಿಸಿ ಕೊಡಲಾಗುತ್ತಿದೆ. ಆದರೂ, ಕೆಲವೊಂದು ವಲಸೆ ಕಾರ್ಮಿಕರು ಜಿಲ್ಲಾಡಳಿತದ ಮಾಹಿತಿ ಕೊರತೆಯಿಂದಾಗಿ ಅತಂತ್ರರಾಗಿ ಕಾಲ್ನಡಿಗೆ ಮೂಲಕ ಮನೆಗೆ ಹೋಗುತ್ತಿದ್ದಾರೆ.
ಇದನ್ನೂ ಓದಿ: ಕೋವಿಡ್-19 ವಿರುದ್ಧ ಸಮರ: ಭಾರತಕ್ಕೆ ವೆಂಟಿಲೇಟರ್ ದಾನ ಮಾಡುವುದಾಗಿ ಟ್ರಂಪ್ ಘೋಷಣೆ
ಹೊರ ರಾಜ್ಯದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು “ಸೇವಾ ಸಿಂಧು’ ಪೋರ್ಟಲ್ ಮುಖೇನ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಎರಡೂ ರಾಜ್ಯಗಳ ಒಪ್ಪಿಗೆ ಬಳಿಕ ಅವರನ್ನು ರೈಲು ಮುಖೇನ ತಮ್ಮ ಊರುಗಳಿಗೆ ಕಳುಹಿಸಲಾಗುತ್ತಿದೆ. ಇಂತಹ ಕಾರ್ಮಿಕನ್ನು ಕರೆದೊಯ್ಯಲು ಆಯಾ ರಾಜ್ಯದ ಜಿಲ್ಲಾಡಳಿತವು ರೈಲು ವ್ಯವಸ್ಥೆ ಮಾಡಿದ್ದು, ಆಯಾ ದಿನದಂದು ವಲಸೆ ಕಾರ್ಮಿಕರು ಇದ್ದ ಸ್ಥಳದಿಂದಲೇ ಬಸ್ ಅಥವಾ ರೈಲು ಮೂಲಕ ಕಳುಹಿಸಲಾಗುತ್ತಿದೆ. ಆದರೆ ಕೆಲವೊಬ್ಬರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು,ಇದರಿಂದಾಗಿ ಕಾರ್ಮಿಕರು ನಗರದಲ್ಲಿ ತಂಡೋಪತಂಡವಾಗಿ ಅಲ್ಲಲ್ಲಿ ಜಮಾಯಿಸುತ್ತಿದ್ದಾರೆ.
ಜತೆಗೆ ಬೇರೆ ರಾಜ್ಯಕ್ಕೆ ತೆರಳುವ ಬಹುತೇಕ ವಲಸೆ ಕಾರ್ಮಿಕರು ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿಲ್ಲ. ಬಸ್ ನಿಲ್ದಾಣದ ಬಳಿ ಜಮಾಯಿಸುವ ಸಾವಿರಾರು ಮಂದಿ ವಲಸೆ ಕಾರ್ಮಿಕರು ಒತ್ತೂತ್ತಾಗಿ ನಿಂತಿರುತ್ತಾರೆ. ಮಾಸ್ಕ್ ಹಾಕುವುದನ್ನು ಮರೆತಿರುತ್ತಾರೆ. ಇದು ರಾಜ್ಯ ಸರ್ಕಾರಗಳಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ