• Home
  • »
  • News
  • »
  • coronavirus-latest-news
  • »
  • ಬ್ಯಾಂಕಾಕ್​​ನಿಂದ ಹೈದ್ರಾಬಾದ್​ ತಲುಪಿದ ಆಕ್ಸಿಜನ್ ಟ್ಯಾಂಕರ್​​​ಗಳು; MEILನಿಂದ ಉಚಿತ ವಿತರಣೆ

ಬ್ಯಾಂಕಾಕ್​​ನಿಂದ ಹೈದ್ರಾಬಾದ್​ ತಲುಪಿದ ಆಕ್ಸಿಜನ್ ಟ್ಯಾಂಕರ್​​​ಗಳು; MEILನಿಂದ ಉಚಿತ ವಿತರಣೆ

ಆಕ್ಸಿಜನ್​ ಸಿಲಿಂಡರ್​

ಆಕ್ಸಿಜನ್​ ಸಿಲಿಂಡರ್​

ಪ್ರತಿ ಕ್ರಯೋಜೆನಿಕ್​​ ಟ್ಯಾಂಕರ್​​ನಿಂದ 1.40 ಕೋಟಿ ಲೀಟರ್​ ಮೆಡಿಕಲ್​​ ಆಕ್ಸಿಜನ್ ಉತ್ಪಾದಿಸಬಹುದಾಗಿದೆ. ಎಲ್ಲಾ 11 ಟ್ಯಾಂಕರ್​ಗಳ ಮೂಲಕ ಒಟ್ಟು 15.40 ಕೋಟಿ ಲೀಟರ್​ ಮೆಡಿಕಲ್​ ಆಕ್ಸಿಜನ್​ ಉತ್ಪಾದನೆ ಆಗಲಿದೆ.

  • Share this:

ಹೈದ್ರಾಬಾದ್​: ಕೊರೋನಾ 2ನೇ ಅಲೆಯಿಂದ ದೇಶಾದ್ಯಂತ ಮೆಡಿಕಲ್​ ಆಕ್ಸಿಜನ್​ಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಸೋಂಕಿತರ ಪ್ರಾಣ ಉಳಿಸುವ ಪ್ರಾಣವಾಯುವನ್ನು ಹೊಂದಿಸಲು ಸರ್ಕಾರಗಳು ಹರಸಾಹಸಪಡುತ್ತಿವೆ. ವಿದೇಶಗಳಿಂದಲೂ ಆಕ್ಸಿಜನ್​ ಟ್ಯಾಂಕರ್​ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಥೈಯ್​​ಲ್ಯಾಂಡ್​​ ದೇಶದ ರಾಜಧಾನಿ ಬ್ಯಾಂಕಾಕ್​ನಿಂದ ತೆಲಂಗಾಣಕ್ಕೆ ಆಕ್ಸಿಜನ್​ ಕ್ರಯೋಜೆನಿಕ್​​ ಟ್ಯಾಂಕರ್​​ ಆಮದು ಯಶಸ್ವಿಯಾಗಿದೆ. ಮೊದಲ ಹಂತದಲ್ಲಿ 3 ಟ್ಯಾಂಕರ್​ಗಳು ಇಲ್ಲಿನ ಬೇಗಂಪೇಟ ವಾಯುಪಡೆ ನಿಲ್ದಾಣದಲ್ಲಿ ಬಂದಿಳಿದಿವೆ. ಈ ಟ್ಯಾಂಕರ್​ಗಳನ್ನು MEIL ಆಮದು ಮಾಡಿಕೊಂಡಿದ್ದು, ತೆಲಂಗಾಣದ ಆಸ್ಪತ್ರೆಗಳಿಗೆ ಈ ಟ್ಯಾಂಕರ್​ಗಳ ಮೂಲಕ ಉಚಿತವಾಗಿ ಆಕ್ಸಿಜನ್​ ಒದಗಿಸಲಿದ್ದಾರೆ.


MEIL ಸಂಸ್ಥೆ ಒಟ್ಟು 11 ಆಕ್ಸಿಜನ್​ ಕ್ರಯೋಜೆನಿಕ್​​ ಟ್ಯಾಂಕರ್​ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ. ಇಂದು 3 ಟ್ಯಾಂಕರ್​ಗಳು ಬಂದಿಳಿದಿದ್ದು, ಉಳಿತ 8 ಟ್ಯಾಂಕರ್​ಗಳು ಸದ್ಯದಲ್ಲೇ ತೆಲಂಗಾಣವನ್ನು ತಲುಪಲಿವೆ. ಪ್ರತಿ ಕ್ರಯೋಜೆನಿಕ್​​ ಟ್ಯಾಂಕರ್​​ನಿಂದ 1.40 ಕೋಟಿ ಲೀಟರ್​ ಮೆಡಿಕಲ್​​ ಆಕ್ಸಿಜನ್ ಉತ್ಪಾದಿಸಬಹುದಾಗಿದೆ. ಎಲ್ಲಾ 11 ಟ್ಯಾಂಕರ್​ಗಳ ಮೂಲಕ ಒಟ್ಟು 15.40 ಕೋಟಿ ಲೀಟರ್​ ಮೆಡಿಕಲ್​ ಆಕ್ಸಿಜನ್​ ಉತ್ಪಾದನೆ ಆಗಲಿದೆ. ತೆಲಂಗಾಣದಲ್ಲಿ ಆಕ್ಸಿಜನ್​ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಹಣಕಾಸು ಸಚಿವ ಟಿ.ಹರೀಶ್​ ರಾಂ ಹಾಗೂ ಅಧಿಕಾರಿಗಳ ತಂಡ ಸತತ ಪ್ರಯತ್ನದ ಮೂಲಕ ಬ್ಯಾಂಕಾಂಕ್​ನಿಂದ ಟ್ಯಾಕರ್​ಗಳನ್ನು ಆಮದು ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.


ಈ ಒಟ್ಟಾರೆ ಆಕ್ಸಿಜನ್​​ ಆಮದು ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ಕೇಂದ್ರ ರಕ್ಷಣಾ ಇಲಾಖೆ ವಹಿಸಿತ್ತು. ಲಿಕ್ವಿಡ್​ ಆಕ್ಸಿಜನನ್ನು ಉತ್ಪಾದನಾ ಘಟಕದಿಂದ ಆಸ್ಪತ್ರೆಗಳಿಗೆ ಸಾಗಿಸುವುದು ಕಷ್ಟದ ಕೆಲಸ. ಈಗ 11 ಟ್ಯಾಂಕರ್​ಗಳ ಮೂಲಕ ರಾಜ್ಯದಲ್ಲಿ ಅಗತ್ಯವಿರುವ ಆಸ್ಪತ್ರೆಗಳಿಗೆ ​​ ಆಕ್ಸಿಜನ್​​ ಪೂರೈಸುವುದು ಸುಗಮವಾಗಲಿದೆ. ಬ್ಯಾಂಕಾಂಕ್​ನಿಂದ ಆಮದಾಗಿರುವ 1 ಟ್ಯಾಂಕರ್​ನ್ನು ನಿರ್ಮಿಸಲು 3 ತಿಂಗಳುಗಳ ಸಮಯ ಹಿಡಿಯುತ್ತದೆ. ಹೀಗಾಗಿ ವಿದೇಶದಿಂದ ಟ್ಯಾಂಕರ್​ಗಳನ್ನು ತುರ್ತು ಬಳಕೆಗಾಗಿ ಆಮದು ಮಾಡಿಕೊಳ್ಳಲಾಗಿದೆ ಎಂದು MEIL ಉಪಾಧ್ಯಕ್ಷ ಪಿ.ರಾಜೇಶ್​ ಶೆಟ್ಟಿ ತಿಳಿಸಿದರು.


ಇದನ್ನೂ ಓದಿ: ಶಾಸಕ ಸ್ಥಾನ ಸೋತ ಮಮತಾ ಬ್ಯಾನರ್ಜಿ ನೈತಿಕವಾಗಿ ಮುಖ್ಯಮಂತ್ರಿ ಆಗಬಾರದಿತ್ತು; ಸುವೆಂದು ಅಧಿಕಾರಿ


ಇನ್ನು ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 2,57,299 ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,62,89,290ಕ್ಕೆ ಏರಿಕೆ ಆಗಿದೆ.‌ ಆದರೆ ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ. ಒಂದೇ ದಿನ 4,194 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,95,525ಕ್ಕೆ ಏರಿಕೆ ಆಗಿದೆ. ಈವರೆಗೆ 2,30,70,365 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಇನ್ನೂ 29,23,400 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಕೋವಿಡ್​ ನಿಯಮವಾದ ಮಾಸ್ಕ್​​ ಧಾರಣೆ, ಸಾಮಾಜಿಕ ಅಂತರವನ್ನು ತಪ್ಪದೇಪಾಲಿಸಬೇಕಿದೆ. ಲಾಕ್​​ಡೌನ್​, ಕರ್ಫ್ಯೂ ನಿಯಮಗಳನ್ನು ಪಾಲಿಸುವ ಮೂಲಕ ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಜೊತೆಗೆ ಲಸಿಕೆ ಪಡೆದು ಕೊರೋನಾ ವಿರುದ್ಧದ ಯುದ್ಧದಲ್ಲಿ ಕೈ ಜೋಡಿಸಬೇಕಿದೆ.

Published by:Kavya V
First published: