ಮೇ 3ರ ಬಳಿಕವೂ ಲಾಕ್​ಡೌನ್ ಮುಗಿಯುವುದು ಅನುಮಾನ; ಏಕೆ ಗೊತ್ತಾ?

ಜೂನ್ ಕೊನೆವರೆಗೆ ಅಥವಾ ಜುಲೈ ಮೊದಲ ವಾರದವರೆಗೂ ಲಾಕ್​ಡೌನ್ ಇದ್ದೇ ಇರಲಿದೆ. ಅಲ್ಲಿಯವರೆಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿರಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮೇ 3ರವರೆಗೆ ಕೊರೋನಾ ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬಂದಿರಲಿದೆ ಎಂಬುದನ್ನು ಆಧರಿಸಿ ಇನ್ನೊಂದು ಹಂತದ ಲಾಕ್​ಡೌನ್ ಸ್ವರೂಪ ಹೇಗಿರಬೇಕು ಎಂಬುದು ನಿರ್ಧಾರ ಆಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಕೊರೋನಾ ಮಹಾಮಾರಿ ನಿಯಂತ್ರಿಸಲು ಜಾರಿಗೆ ತಂದಿರುವ ಲಾಕ್​ಡೌನ್ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ತೊಂದರೆ ಉಂಟುಮಾಡಿದೆ‌. ಆದರೀಗ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಲಾಕ್​ಡೌನ್ ಮೇ 3ಕ್ಕೂ ಮುಗಿಯುವುದು ಅನುಮಾನ ಎಂಬ ಮಾಹಿತಿಗಳು ತಿಳಿದುಬರುತ್ತಿವೆ.

ಲಾಕ್​ಡೌನ್ ಇರುವುದರಿಂದ ದೇಶದ ಆರ್ಥಿಕತೆಗೆ ಭಾರೀ ಪೆಟ್ಟು ಬೀಳುತ್ತಿದೆ.‌ ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ ಮೊದಲ ಹಂತದ ಲಾಕ್​ಡೌನ್ ಇದ್ದಾಗ ದೇಶದ ಉತ್ಪಾದನೆಯಲ್ಲಿ ಶೇಕಡ 80ರಷ್ಟು ಕುಂಠಿತಗೊಂಡಿತ್ತು. ಎರಡನೇ ಹಂತದ ಲಾಕ್​ಡೌನ್ ನಡುವೆಯೂ ಏಪ್ರಿಲ್ 20ರಿಂದ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಿರುವುದರಿಂದ ಕನಿಷ್ಠ ಶೇಕಡ ‌50 ರಷ್ಟು ಉತ್ಪಾದನೆ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹೀಗೆ ದೇಶದ ಉತ್ಪಾದನೆ ಮೇಲೆ ಭಾರೀ‌ ಪರಿಣಾಮ ಬೀರುತ್ತಿರುವ ಲಾಕ್​ಡೌನ್ ಅನ್ನು ಮೊಟಕುಗೊಳಿಸಬೇಕೋ ಅಥವಾ ಕೊರೋನಾ ಸೋಂಕು ಹರಡುವಿಕೆ ಈಗಾಲೂ ನಿಯಂತ್ರಣಕ್ಕೆ ಬಂದಿಲ್ಲದ ಹಿನ್ನೆಲೆಯಲ್ಲಿ ಲಾಕ್​ಡೌನ್ ಅನ್ನು ಮುಂದುವರೆಸಬೇಕೋ ಎಂಬುದನ್ನು ನಿರ್ಧರಿಸುವುದು ಕೇಂದ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.

ಹೆಚ್ಚು ಕಡಿಮೆ ಇದೇ ಜಿಜ್ಞಾಸೆ ನಡುವೆಯೇ ಎರಡನೇ ಹಂತದ ಲಾಕ್​ಡೌನ್ ಘೋಷಣೆ ಮಾಡಲಾಗಿತ್ತು. ಆದರೆ ಆ ಲಾಕ್​ಡೌನ್ ನಿಂದ ಕೊರೋನಾ ಸೋಂಕು ಹರಡುವಿಕೆ ಕಡಿಮೆ ಆಗಿಲ್ಲ. ಲಾಕ್​ಡೌನ್ ನಿಯಮ ಸಡಿಲಿಸಿರುವುದರಿಂದ ಉತ್ಪಾದನೆಯ ಮಟ್ಟ ಎಷ್ಟು ಸುಧಾರಿಸುತ್ತದೆ ಎಂಬುದನ್ನು ಹೇಳಲು ಇನ್ನೂ ಒಂದು ವಾರ ಸಮಯಾವಕಾಶ ಬೇಕು. ಹಾಗಾಗಿ ಈಗ ಕೇಂದ್ರ ಸರ್ಕಾರ ಕೊರೋನಾ ಸೋಂಕು ಹರಡುವಿಕೆಯ ಪ್ರಮಾಣ ಮತ್ತು ಲಾಕ್​ಡೌನ್ ಸಡಿಲಿಸಿದ ಮೇಲೆ ಆಗುತ್ತಿರುವ ಬೆಳವಣಿಗೆಗಳೆರಡರ ಮೇಲೂ ವಿಶೇಷ ನಿಗಾವಹಿಸಿದೆ. ಅವುಗಳನ್ನು ಆಧರಿಸಿ ಇನ್ನೊಂದು ಹಂತದ ಲಾಕ್​ಡೌನ್ ಅನ್ನು ಜಾರಿಗೊಳಿಸಬೇಕೋ ಬೇಡವೋ ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದೆ‌.

ಸದ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಮೊದಲ ಹಂತದ ಲಾಕ್​ಡೌನ್ ಘೋಷಣೆಗೂ ಮುನ್ನ ಏಪ್ರಿಲ್ 19ರಂದು ಇಡೀ ದೇಶದಲ್ಲಿ ಕೇವಲ 166 ಕೊರೋನಾ ಸೋಂಕು ಪೀಡಿತರಿದ್ದರು. ಅವರಲ್ಲಿ 87 ಜನರನ್ನು ಇಂಟೆನ್ಸೀವ್ ಸೆಂಟರ್ ಯುನಿಟ್ ಇಡಲಾಗಿತ್ತು. 24 ಜನರಿಗೆ ವೆಂಟಿಲೇಟರ್ ಮತ್ತು 55 ಜನರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿತ್ತು. ಆದರೆ ಏಪ್ರಿಲ್ 22ರಷ್ಟರಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 18,601ಕ್ಕೆ ಏರಿಕೆಯಾಗಿದೆ. ಇದರಲ್ಲಿ ಗುಣಮುಖರಾದವರು ಕೇವಲ 3,251 ಜನ. ಇನ್ನೂ 14,759 ಪ್ರಕರಣಗಳು ಚಿಕಿತ್ಸೆ ಹಂತದಲ್ಲಿವೆ ಮತ್ತು ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 590ಕ್ಕೆ ಏರಿಕೆಯಾಗಿದೆ.

ಪರಿಸ್ಥಿತಿ ಹೀಗಿರುವುದರಿಂದ ಲಾಕ್​ಡೌನ್ ಮುಂದುವರೆಸದೆ ಬೇರೆ ದಾರಿಯೇ ಇಲ್ಲ ಎಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ. ಏಪ್ರಿಲ್ ಕಡೆಯವರೆಗೂ ಕೇಂದ್ರ ಸರ್ಕಾರ ಕಾದು ನೋಡಲಿದೆ. ನಡುವೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಲಿದೆ. ಕೊರೋನಾ ಮತ್ತು ಲಾಕ್​ಡೌನ್ ನಿರ್ವಹಣೆ ಹೇಗಾಗುತ್ತಿದೆ ಮತ್ತು ಮುಂದೇನು ಮಾಡಬೇಕೆಂದು‌ ರಚಿಸಲಾಗಿರುವ ವಿವಿಧ ಸಮಿತಿಗಳ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಗ್ರೂಪ್ ಆಫ್ ಮಿನಿಸ್ಟರ್ಸ್ ಸಲಹೆ ಶಿಫಾರಸು ತರಸಿಕೊಳ್ಳುತ್ತಿದೆ.

ಈಗಾಗಲೇ ಪ್ರಸ್ತಾಪಿಸಿದಂತೆ ಕೊರೋನಾ ನಿಯಂತ್ರಣ ಮಾಡಲು ಲಾಕ್​ಡೌನ್ ಜಾರಿಗೊಳಿಸಿದರೆ ಆರ್ಥಿಕತೆಯು ಹದಗೆಟ್ಟು ಜನ ಮುಂದೊಂದು ದಿನ ಹಸಿವಿನಿಂದ ಸಾಯಬಹುದು ಎಂಬ ಕಾರಣಕ್ಕೆ ಆರ್ಥಿಕ ಕ್ಷೇತ್ರದ ತಜ್ಞರು ಇನ್ನೊಂದು ಹಂತದ ಲಾಕ್​ಡೌನ್ ಜಾರಿಗೊಳಿಸಲು ಬಿಲ್ ಕುಲ್ ಒಪ್ಪುತ್ತಿಲ್ಲ. ಅವರಿಂದ ಅಂಥದೇ ದೃಢ ನಿಲುವು ಮುಂದುವರೆದರೆ ಮತ್ತು ಲಾಕ್​ಡೌನ್ ಸಡಿಲಿಕೆ ಬಳಿಕವೂ ಉತ್ಪಾದನೆ ವೃದ್ಧಿಯಾಗಿಲ್ಲ ಎಂಬ ವರದಿ ಉತ್ಪಾದನಾ ವಲಯದಿಂದ ಬಂದರೆ ಆಗ ಲಾಕ್​ಡೌನಿನ ಕೆಲ ನಿಯಮಗಳನ್ನು ಸಡಿಲಿಸಬಹುದಷ್ಟೇ. ಆದರೆ ಲಾಕ್​ಡೌನ್ ಅನ್ನು ಮುಂದುವರೆಸುವುದು ಮಾತ್ರ ಖಚಿತ ಎನ್ನುತ್ತವೆ ಕೇಂದ್ರ ಸರ್ಕಾರದ ಮೂಲಗಳು.

ಇದನ್ನು ಓದಿ: ರಾಷ್ಟ್ರಪತಿ ಭವನಕ್ಕೂ ತಟ್ಟಿದ ಕೊರೋನಾ ಭೀತಿ; ಓರ್ವ ಸಿಬ್ಬಂದಿಗೆ ಸೋಂಕು, 125 ಕುಟುಂಬಗಳ ಕ್ವಾರಂಟೈನ್

ಮೇ 3ರ ಬಳಿಕವೂ ಲಾಕ್​ಡೌನ್ ಮುಂದುವರೆಸಿ ಕ್ರಮೇಣ ಹಂತಹಂತವಾಗಿ ಲಾಕ್​ಡೌನ್ ತೆರವುಗೊಳಿಸಲು ನಿರ್ಧಾರ ಮಾಡಲಾಗಿದೆ. ಎರಡನೇ ಹಂತದ ಲಾಕ್​ಡೌನ್ ಘೋಷಣೆ ಮಾಡುವಾಗ ಕೃಷಿ, ಮೀನುಗಾರಿಕೆಗೆ ವಿನಾಯಿತಿ ನೀಡಲಾಗಿತ್ತು. ಏಪ್ರಿಲ್ 20ರ ನಂತರ ಕೈಗಾರಿಕಾ ಕ್ಷೇತ್ರಗಳಿಗೂ ವಿನಾಯಿತಿಯನ್ನು ವಿಸ್ತರಿಸಲಾಯಿತು. ಇದೇ ರೀತಿ ಹಂತಹಂತವಾಗಿ ಕೆಲವು ಕ್ಷೇತ್ರಗಳಿಗೆ ವಿನಾಯಿತಿ ಕೊಡಲಾಗುವುದು. ಹಾಗಾಗಿ ಜೂನ್ ಕೊನೆವರೆಗೆ ಅಥವಾ ಜುಲೈ ಮೊದಲ ವಾರದವರೆಗೂ ಲಾಕ್​ಡೌನ್ ಇದ್ದೇ ಇರಲಿದೆ. ಅಲ್ಲಿಯವರೆಗೂ ಸಾಮಾಜಿಕ ಅಂತರ ಕಾಯ್ದು

ಕೊಳ್ಳುವುದು ಕಡ್ಡಾಯವಾಗಿರಲಿದೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಮೇ 3ರವರೆಗೆ ಕೊರೋನಾ ಎಷ್ಟರ ಮಟ್ಟಿಗೆ ನಿಯಂತ್ರಣಕ್ಕೆ ಬಂದಿರಲಿದೆ ಎಂಬುದನ್ನು ಆಧರಿಸಿ ಇನ್ನೊಂದು ಹಂತದ ಲಾಕ್​ಡೌನ್ ಸ್ವರೂಪ ಹೇಗಿರಬೇಕು ಎಂಬುದು ನಿರ್ಧಾರ ಆಗುತ್ತದೆ.

 
First published: