ಲಾಕ್ ಡೌನ್ ಮುಂದುವರೆಯುವುದು ಗ್ಯಾರಂಟಿ, ಮಾನಸಿಕವಾಗಿ‌ ಸಿದ್ದರಾಗಿ!

ಇವೆಲ್ಲವುಗಳ ಹೊರತಾಗಿ ಲಾಕ್ ಡೌನ್ ಬೇಡ ಎನ್ನುತ್ತಿರುವವರು ಆರ್ಥಿಕ ತಜ್ಞರು ಮಾತ್ರ. ಅವರು ಸಲಹೆ ನೀಡುತ್ತಿರುವುದು ಈಗಾಗಲೇ ಕೆಟ್ಟ ಪರಿಸ್ಥಿತಿಯಲ್ಲಿ ಇರುವ ದೇಶದ ಆರ್ಥಿಕತೆ ಲಾಕ್ ಡೌನ್ ಮುಂದುವರೆದರೆ ಮತ್ತೂ ಪ್ರಪಾತಮುಖಿಯಾಗುತ್ತದೆ ಎಂಬ ಕಾರಣಕ್ಕೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ: ಏಪ್ರಿಲ್ 14ರ ಬಳಿಕವೂ‌ ಲಾಕ್ ಡೌನ್ ಮುಂದುವರೆಯುವುದು ಗ್ಯಾರಂಟಿ. ಜನ ಈಗ ಮಾನಸಿಕವಾಗಿ ಸಿದ್ದರಾಗಬೇಕಷ್ಟೇ. ಲಾಕ್ ಡೌನ್ ಮುಂದುವರೆಯುತ್ತದೆ ಎನ್ನುವುದಕ್ಕೆ ಹತ್ತು-ಹಲವು ಕುರುಹು‌ಗಳು ಸಿಗುತ್ತಿವೆ.

ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು ರಾಜ್ಯದಲ್ಲಿ ಏಪ್ರಿಲ್ 30ರವರೆಗೂ ಲಾಕ್ ಡೌನ್ ಮುಂದುವರೆಸಲಾಗುವುದು ಎಂದು ಆದೇಶ ಮಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಲಾಕ್ ಡೌನ್ ಮುಂದುವರೆಸಿರುವುದರಿಂದ ತಮ್ಮ‌ ರಾಜ್ಯಕ್ಕೆ ಏಪ್ರಿಲ್ 30ರವರೆಗೂ ರೈಲ್ವೆ ಅಥವಾ ವಿಮಾನ‌ ಸಂಚಾರ ಮಾಡದಂತೆ ಮನವಿ ಮಾಡಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರವು‌ ಕೂಡ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಜೂನ್ 17ರವರೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಗಿತಗೊಳಿಸಿ ಕೂಡ ಆದೇಶ ಮಾಡಿದ್ದಾರೆ. ಒರಿಸ್ಸಾದಲ್ಲೂ ಕೊರೋನಾ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅವರು ಕೇಂದ್ರ ಸರ್ಕಾರದ ಆದೇಶಕ್ಕೂ ಕಾಯದೆ ಲಾಕ್ ಡೌನ್ ಮುಂದುವರೆಸಲು ತೀರ್ಮಾನಿಸಿದ್ದಾರೆ. ಈ ಮೂಲಕ ಒರಿಸ್ಸಾ ಲಾಕ್ ಡೌನ್ ಮುಂದುವರೆಸಲು ನಿರ್ಧರಿಸಿದ ಮೊದಲ ರಾಜ್ಯವಾಗಿದೆ.

ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಎಲ್ಲರಿಗಿಂತ ಮುಂಚಿತವಾಗಿಯೇ 'ಲಾಕ್ ಡೌನ್ ಮುಂದುವರೆಸುವುದೇ ಉತ್ತಮ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮಾತನಾಡಿ ವಿಷಯ ತಿಳಿಸಿದ್ದರು. ಅಷ್ಟೇಯಲ್ಲ ಇಡೀ‌ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್ ಡೌನ್ ಎಂದು ಘೋಷಿಸಿದ್ದಾಗ ಚಂದ್ರಶೇಖರ್ ರಾವ್ ತೆಲಂಗಾಣದಲ್ಲಿ ಏಪ್ರಿಲ್ 16ರವರೆಗೂ ಲಾಕ್ ಡೌನ್ ಇರಬೇಕೆಂದು ಆದೇಶಿಸಿದ್ದರು. 'ಲಾಕ್ ಡೌನ್ ಉಲ್ಲಂಘಿಸುವವರನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಿ ಎಂದು ಆದೇಶಿಸಬೇಕಾಗುತ್ತದೆ' ಎಂದು ಎಚ್ಚರಿಸುವ ಮೂಲಕ ತಾವು ಲಾಕ್ ಡೌನ್ ಗೆ ಎಷ್ಟರಮಟ್ಟಿಗೆ ಬದ್ಧ ಎಂಬುದನ್ನು ತೋರಿಸಿಕೊಟ್ಟಿದ್ದರು. ಆಗಲೇ ಹಾಗೆ ಹೇಳಿದ್ದ ಅವರು ಈಗ ಇಷ್ಟೆಲ್ಲಾ ಮಾಡಿಯೂ ಕೊರೋನಾ ನಿಯಂತ್ರಣಕ್ಕೆ ಬಾರದಿದ್ದಾಗ ಇನ್ಯಾವ ರೀತಿ ನಿಲುವು ತೆಳೆಯಬಲ್ಲರು?

ಇತರೆ ರಾಜ್ಯಗಳಿಗೆ ಹೋಲಿಸಿಕೊಂಡರೆ ಛತ್ತೀಸ್​ಗಢದಲ್ಲಿ ಕೊರೋನಾ ಸೋಂಕು ಹರಡುವಿಕೆ ತೀವ್ರಗತಿಯಲ್ಲಿ ಇಲ್ಲ. ಆದರೂ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಲಾಕ್ ಡೌನ್ ಮುಂದುವರೆಯಲಿ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಒಂದೊಮ್ಮೆ ಲಾಕ್ ಡೌನ್ ಮುಕ್ತಯಗೊಳಿಸಿದರೂ ಅಂತರರಾಜ್ಯ ಸಂಚಾರ ವ್ಯವಸ್ಥೆಯನ್ನು ಬಿಲ್ ಕುಲ್ ನಿಲ್ಲಿಸಿ ಎಂದು ಹೇಳಿದ್ದಾರೆ. ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಕೂಡ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಕರ್ನಾಟಕ, ಕೇರಳ, ಪಂಜಾಬ್, ಮಹಾರಾಷ್ಟ್ರ ಮತ್ತು ರಾಜಸ್ಥಾನಗಳು ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಘೋಷಿಸುವ ಮೊದಲೇ ತಮ್ಮ ರಾಜ್ಯಗಳಲ್ಲಿ ಕೆಲವು ನಿರ್ದಿಷ್ಟ ಪ್ರದೇಶಗಳ ಲಾಕ್ ಡೌನ್ ಮಾಡಿದ್ದವು. ಈಗಲೂ ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಮೊಟಕುಗೊಳಿಸಲಿ ಅಥವಾ ಮುಂದುವರೆಸಲಿ ನಮ್ಮ ನಿಲುವು ನಮಗೆ ಎಂಬ ಧೋರಣೆಯನ್ನೇ ಹೊಂದಿವೆ. ಪಶ್ಚಿಮ ಬಂಗಾಳ ಮತ್ತು ದೆಹಲಿ ನಿಲುವುಗಳೂ ಭಿನ್ನವಾಗಿಲ್ಲ. ಇಷ್ಟರ ನಡುವೆ ಬಿಜೆಪಿ ಆಡಳಿತ ಇರುವ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳು ಕೂಡ ಲಾಕ್ ಡೌನ್ ಮುಂದುವರಿಕೆಗೆ ಮನಸ್ಸು ಮಾಡಿವೆ. ಕಾರಣ ಆ ರಾಜ್ಯಗಳಲ್ಲಿ ಈಗೀಗ ಕೊರೋನಾ ಸೋಂಕು ಹರಡುವಿಕೆ ತೀವ್ರಗೊಳ್ಳುತ್ತಿದೆ.

ಇವೆಲ್ಲವೂ ವಿವಿಧ ರಾಜ್ಯಗಳು ಲಾಕ್ ಡೌನ್ ಮುಂದುವರೆಸುವ ಬಗ್ಗೆ ಹೊಂದಿರುವ ನಿಲುವುಗಳು. ಇವಲ್ಲದೆ ಪ್ರಧಾನಿ ಮೋದಿ ಸಂಸತ್ತಿನ ಸಭಾನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಅವರ ಪೈಕಿ ಕೂಡ ಬಹುತೇಕರು ಲಾಕ್ ಡೌನ್ ಮುಂದುವರೆಸಿ ಎಂಬ ಸಲಹೆಯನ್ನೇ ನೀಡಿದ್ದಾರೆ. ಆ ಸಭೆಯಲ್ಲಿ ಖುದ್ದು ಮೋದಿಯೇ ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯ ಎಂದಿದ್ದಾರೆ. ಕೇಂದ್ರ ಸಚಿವ ಸಂಪುಟ ಸದಸ್ಯರ ತಂಡ (ಗ್ರೂಪ್ ಆಫ್ ದಿ ಮಿನಿಸ್ಟರ್ಸ್) ಕೂಡ ಲಾಕ್ ಡೌನ್ ಮೊಟಕುಗೊಳಿಸುವುದು ಬೇಡ ಎಂಬ ಅರ್ಥದಲ್ಲೇ ಶಿಫಾರಸು ಮಾಡಿದೆ. ಧಾರ್ಮಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಜನಸಂದಣಿ ಇರುವ ಪ್ರದೇಶಗಳಲ್ಲಿ ಮೇ ಎರಡನೇ ವಾರದವರೆಗೂ ಲಾಕ್ ಡೌನ್ ಮಾಡಿ ಎಂದಿದೆ. ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿ ಅಜಯ್ ಬಳ್ಳಾ ನೇತೃತ್ವದ ಸಮಿತಿ ಲಾಕ್ ಡೌನ್ ಮೊಟಕುಗೊಳಿಸುವುದು ಸಾಧ್ಯವೇ ಇಲ್ಲ. ಮೊಟಕುಗೊಳಿಸುವುದೇ ಆದರೆ ಇಡೀ ದೇಶವನ್ನು ಹಸಿರು, ಹಳದಿ ಮತ್ತು ಕೆಂಪು ವಲಯ ಎಂದು ಗುರುತಿಸಿ. ಹಸಿರು ವಲಯಕ್ಕೆ ಸಂಪೂರ್ಣ ಮತ್ತು‌ ಹಳದಿ ವಲಯಕ್ಕೆ ಭಾಗಶಃ ವಿನಾಯಿತಿ ನೀಡಿ. ಕೆಂಪು ವಲಯದಲ್ಲಿ ಕಟ್ಟುನಿಟ್ಟಾಗಿ ಲಾಕ್ ಡೌನ್ ಮುಂದುವರೆಸಿ ಎಂದು ಹೇಳಿದೆ.

ಖ್ಯಾತ ವೈದ್ಯ ಡಾ. ದೇವಿಶೆಟ್ಟಿ ಸೇರಿದಂತೆ ದೇಶದ ಆರೋಗ್ಯ ಕ್ಷೇತ್ರದ ತಜ್ಞರೆಲ್ಲರೂ ಲಾಕ್ ಡೌನ್ ಮುಂದುವರೆಸುವುದೇ ಕ್ಷೇಮ ಎಂಬ ಸಲಹೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಪೂರಕವಾದ ಸಲಹೆ ನೀಡಿದೆ. ಕೊರೋನಾ ಮಹಾಮಾರಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ಚೀನಾದ ವುಹಾನ್ ಪ್ರದೇಶದಲ್ಲಿ ಲಾಕ್ ಡೌನ್ ತೆರವುಗೊಳಿಸಿದ್ದು ಮೊನ್ನೆ.

ಇವೆಲ್ಲವುಗಳ ಹೊರತಾಗಿ ಲಾಕ್ ಡೌನ್ ಬೇಡ ಎನ್ನುತ್ತಿರುವವರು ಆರ್ಥಿಕ ತಜ್ಞರು ಮಾತ್ರ. ಅವರು ಸಲಹೆ ನೀಡುತ್ತಿರುವುದು ಈಗಾಗಲೇ ಕೆಟ್ಟ ಪರಿಸ್ಥಿತಿಯಲ್ಲಿ ಇರುವ ದೇಶದ ಆರ್ಥಿಕತೆ ಲಾಕ್ ಡೌನ್ ಮುಂದುವರೆದರೆ ಮತ್ತೂ ಪ್ರಪಾತಮುಖಿಯಾಗುತ್ತದೆ ಎಂಬ ಕಾರಣಕ್ಕೆ. ಲಾಕ್ ಡೌನ್ ಮುಂದುವರೆದರೆ ಸಹಜವಾಗಿ ಉತ್ಪಾದನೆ ಕುಸಿಯುತ್ತದೆ. ಉತ್ಪಾದನೆ ಕುಸಿದರೆ ಬೇಡಿಕೆ ಹೆಚ್ಚಾಗುತ್ತದೆ. ಉತ್ಪಾದನೆ ಮತ್ತು ಬೇಡಿಕೆ ನಡುವಿನ‌ ಸಮತೋಲನ ತಪ್ಪಿದರೆ ಒಟ್ಟಾರೆ ದೇಶದ ಆರ್ಥಿಕತೆಗೆ ಮೇಲೇಳಲಾರದಂತಹ ಪೆಟ್ಟು ಬೀಳಲಿದೆ ಎಂಬ ಕಾರಣಕ್ಕೆ. ಇವು ಸಕಾರಣಗಳೇ ಅನಿಸಿದರೂ ಕೊರೋನಾ ಸೋಂಕು ತಡೆಯಲು ಲಾಕ್ ಡೌನ್ ಮಾಡದೇ ಬೇರೆ ಮಾರ್ಗವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದಂತೆ ಕಂಡುಬರುತ್ತಿದೆ.

ಇದನ್ನು ಓದಿ: ಹಂತ ಹಂತವಾಗಿ ಲಾಕ್ ಡೌನ್ ಹೀಗೆ ಸಡಿಲಿಸಿ; ತಜ್ಞರ ಸಮಿತಿ ನೀಡಿದ ಸಲಹೆಗಳ ಮುಖ್ಯಾಂಶಗಳಿವು

ಅಜಯ್ ಬಳ್ಳಾ ಸಮಿತಿ ಆಡಳಿತಾತ್ಮಕವಾಗಿ, ಆರ್ಥಿಕ ತಜ್ಞರು ಆರ್ಥಿಕತೆಯ ಹಿನ್ನೆಲೆಯಲ್ಲಿ, ಆರೋಗ್ಯ ಕ್ಷೇತ್ರದ ನಿಪುಣರು ಕೊರೋನಾವನ್ನು‌ ಕೊನೆಗಾಣಿಸುವ ದೃಷ್ಟಿಯಿಂದ, ಬೇರೆ ಬೇರೆ ರಾಜ್ಯಗಳ ಮುಖ್ಯಮಂತ್ರಿಗಳು ಅರವರ ಪರಿಸ್ಥಿತಿಗೆ ಅನುಗುಣವಾಗಿ ಏನೇ ಸಲಹೆ-ಶಿಫಾರಸ್ಸು ಮಾಡಿದ್ದರೂ ಅಂತಿಮವಾಗಿ ಕೇಂದ್ರ ಸರ್ಕಾರ ಅತಾರ್ಥ್ ಪ್ರಧಾನಿ ನರೇಂದ್ರ ಮೋದಿ 'ರಾಜಕೀಯವಾದ ತೀರ್ಮಾನ'ವೊಂದಕ್ಕೇ ಬರಬೇಕಾಗುತ್ತದೆ. ಇದೇ ಹಿನ್ನೆಲೆಯಲ್ಲಿ ಅವರು ಏಪ್ರಿಲ್ 11ರಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಲಿದ್ದಾರೆ.‌ ಲಾಕ್ ಡೌನ್ ಮುಂದುವರೆಸುವ ನಿರ್ಧಾರ 'ಸಭೆಯ' ನಿರ್ಧಾರವಾದರೂ ಆಗಬಹುದು. ಒಟ್ಟಿನಲ್ಲಿ ಲಾಕ್ ಡೌನ್ ಮುಂದುವರಿಕೆ ಆಗುವುದು ಗ್ಯಾರಂಟಿ. ಹೆಚ್ಚೆಂದರೆ ಕೆಲವೆಡೆ ಕೆಲ ವಿನಾಯಿತಿ ಸಿಗಬಹುದು.
First published: