ಉತ್ತರಖಾಂಡ ರಾಜ್ಯದ ಮಂತ್ರಿಯೊಬ್ಬರು ಫೇಸ್ಮಾಸ್ಕ್ ಅನ್ನು ಕಾಲಿನ ಹೆಬ್ಬೆರಳ ತುದಿಗೆ ನೇತು ಹಾಕಿ ಪೇಚಿಗೆ ಸಿಲುಕಿದ್ದಾರೆ.
ಕಾಲಿನ ಹೆಬ್ಬೆರಳ ತುದಿಗೆ ಮಾಸ್ಕ್ ಹಾಕಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ವಾಗ್ದಾಳಿ ನಡೆಸಿದ್ದಾರೆ.
ಈ ಎಡವಟ್ಟು ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಮಂತ್ರಿಯೇ ಸ್ವಾಮಿ ಯತೀಶ್ವರಾನಂದ. ಇವರು ಉತ್ತರಾಖಂಡದ ಬಿಜೆಪಿ ಸರ್ಕಾರದ ಕಬ್ಬು ಕಾರ್ಖಾನೆ ಸಚಿವ. ಯಾವುದೋ ಅಧಿಕೃತ ಸಭೆಯಲ್ಲಿ ಭಾಗಿಯಾಗಿದ್ದ ವೇಳೆ ಈ ರೀತಿ ವರ್ತಿಸಿದ್ದು, ಯಾವ ಸಭೆ, ಯಾವ ಸ್ಥಳ ಎಂಬ ಬಗ್ಗೆ ಮಾಹಿತಿ ಇಲ್ಲ.
ಸ್ವಾಮಿ ಯತೀಶ್ವರಾನಂದ ಅವರ ಜೊತೆ ಇನ್ನಿಬ್ಬರು ಮಂತ್ರಿಗಳಾದ ಬಿಶಾನ್ ಸಿಂಗ್ ಮತ್ತು ಸುಬೋದ್ ಉನಿಯಾಳ್ ಹಾಗೂ ಇನ್ನಿತರೆ ಪಕ್ಷದ ಮುಖಂಡರೊಟ್ಟಿಗೆ ಸಭೆ ನಡೆಸಲಾಗಿತ್ತು ಎಂದು ತೋರುತ್ತಿದೆ.
ಯತೀಶ್ವರನಂದಾ ಅವರ ವರ್ತನೆಯನ್ನು ಇದೆಂತಹ ವರ್ತನೆ ಎಂದು ಪ್ರಶ್ನಿಸಿದ ನೆಟ್ಟಿಗರು, ಕೋವಿಡ್ ಮೂರನೇ ಅಲೆ ಮತ್ತು ರೂಪಾಂತರಿ ವೈರಸ್ ಡೆಲ್ಟಾ ಅನ್ನು ಎದುರಿಸುವ ಸುಲಭ ಮಾರ್ಗವನ್ನು ಪ್ರದರ್ಶಿಸುತ್ತಿದ್ದಾರೆ ಎಂದು ದೂಷಿಸಿದ್ದಾರೆ.
ಉತ್ತರಾಖಂಡ ರಾಜ್ಯದ ಸ್ವಾಮಿ ಯತೀಶ್ವರಾನಂದ ಬಿಜೆಪಿ ಕ್ಯಾಬಿನೆಟ್ ಮಂತ್ರಿ, ಅವರು ಮಾಸ್ಕ್ ಅನ್ನು ನೇತುಹಾಕಲು ಅತ್ಯಂತ ಉತ್ತಮ ಸ್ಥಳವನ್ನು ಕಂಡುಕೊಂಡಿದ್ದಾರೆ" ಎಂದು ಹೇಳಿದರು.
ಇವರ ವರ್ತನೆಯನ್ನು ನೋಡಿದರೆ ಮಂತ್ರಿ ಹಾಗೂ ಆ ಪಕ್ಷದವರು ಕೋವಿಡ್ ವಿಷಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂದು ತೋರುತ್ತಿದೆ ಎಂದು ವಾಗ್ದಾಳಿ ನಡೆಸಿದ ಕಾಂಗ್ರೆಸ್ ವಕ್ತಾರ, ಗರಿಮಾ ದಾಸೌನಿ, ಬಿಜೆಪಿಯವರು ಮಾಸ್ಕ್ ಧರಿಸುವಂತೆ ಜಾಗೃತಿ ನೀಡುತ್ತಾರೆ. ಆದರೆ ಅವರು ಸ್ವತಃ ಅನುಸರಿಸುವುದಿಲ್ಲ ಎಂದು ಟೀಕಿಸಿದರು.
ಹರಿದ್ವಾರದ ಕಾಂಗ್ರೆಸ್ನ ಮಾಜಿ ಶಾಸಕ ಕ್ವಾಜಿ ನಿಜಾಮುದ್ದೀನ್, ಸ್ವಾಮಿ ಯತೀಶ್ವರಾನಂದ ಕಾಲಿನ ಹೆಬ್ಬೆರಳ ತುದಿಗೆ ಮಾಸ್ಕ್ ಹಾಕಿರುವ ಫೋಟೋವನ್ನು ಗಮನಿಸಿದರೆ ಅವರು ಮತ್ತು ಅವರ ಸರ್ಕಾರ ಕೋವಿಡ್-19 ಮಾರ್ಗಸೂಚಿಗಳನ್ನು ತಮ್ಮ ಕಾಲಡಿಗೆ ಇಟ್ಟಿರುವುದಾಗಿ ತೋರುತ್ತದೆ ಎಂದು ಹೇಳಿದ್ದಾರೆ.
ಎಎಪಿಯ ರಾಜ್ಯ ವಕ್ತಾರ ಅಮರ್ಜಿತ್ ಸಿಂಗ್ ರಾವತ್,"ಕೇಂದ್ರದಲ್ಲಿ ತಮ್ಮ ಸರ್ಕಾರ ಮಾಡಿದ ಅಸಮರ್ಪಕ ವ್ಯವಸ್ಥೆಗಳಿಂದಾಗಿ ಎರಡನೇ ತರಂಗದಲ್ಲಿ ಅನೇಕರು ಸತ್ತಾಗ ಬಿಜೆಪಿ ನಾಯಕರು ಕೋವಿಡ್ -19 ಮಾರ್ಗಸೂಚಿಗಳ ಬಗ್ಗೆ ಎಷ್ಟು ಕಾಳಜಿ ವಹಿಸುತ್ತಾರೆ ಎಂಬುದನ್ನು ಇದು ತೋರಿಸುತ್ತದೆ. ಸ್ವಾಮಿ ಯತಿಶ್ವರಾನಂದ್ ಅವರು ತಮ್ಮ ಅನುಚಿತ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ನ ಮತ್ತೊಬ್ಬ ಮುಖಂಡ ಪಂಕಜ್ ಪುನಿಯಾ ಅವರು, ಮಾಸ್ಕ್ ಅನ್ನು ಬಳಸುವ ಸರಿಯಾದ ಮಾರ್ಗ ಇಲ್ಲಿದೆ ಎಂದು ಮಂತ್ರಿ ತೋರಿಸಿಕೊಟ್ಟಿದ್ದಾರೆ ಎಂದು ಅಪಹಾಸ್ಯ ಮಾಡಿದರು.
ಯಾರಾದರೂ ಮಾಸ್ಕ್ ಹಾಕದಿರುವ ಬಗ್ಗೆ ಎಚ್ಚರಿಕೆ ನೀಡಿದರೆ ನಾನು ಈ ಫೋಟೋವನ್ನು ಅವರಿಗೆ ತೋರಿಸಬಹುದೇ ಎಂದು ನೆಟ್ಟಿಗರೊಬ್ಬರು ಪ್ರಶ್ನಿಸಿದ್ದಾರೆ.
ಎರಡು ತಿಂಗಳ ಹಿಂದೆ ದೇಶಾದ್ಯಂತ ವ್ಯಾಪಿಸಿರುವ ಕೋವಿಡ್ ಉಲ್ಬಣವನ್ನು ತೀರಾ ಲಘುವಾಗಿ ಪರಿಗಣಿಸಿದ್ದಕ್ಕಾಗಿ ಉತ್ತರಾಖಂಡ ಸರ್ಕಾರವು ಟೀಕೆಗೆ ಗುರಿಯಾಗಿತ್ತು. ಅಲ್ಲದೇ ಈ ವಾರದ ಆರಂಭದಲ್ಲಿ ನಡೆಯಬೇಕಿದ್ದ ಕನ್ವರ್ ತೀರ್ಥಯಾತ್ರೆಯನ್ನು ಕೋವಿಡ್ ಕಾರಣ ರಾಜ್ಯವು ರದ್ದುಗೊಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ