ತಮಿಳುನಾಡು ಗಡಿಭಾಗದ ಗ್ರಾಮದಲ್ಲಿ ಅದ್ದೂರಿ ಮಾರಿ ಹಬ್ಬ; ರಾಮನಗರಕ್ಕೆ ಕೊರೋನಾ ಭೀತಿ

ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಗ್ರಾಮದಲ್ಲಿ ಹಬ್ಬ ಮಾಡಲು ಅನುಮತಿ ಪಡೆದಿದ್ದರಾ? ಇಲ್ಲಾ ಪೊಲೀಸರು ಗೊತ್ತಿದ್ದೂ ಸುಮ್ಮನಾದರಾ ಎಂಬ ಬಗ್ಗೆ ಕೂಡ ತನಿಖೆ ಮಾಡಬೇಕಿದೆ.

news18-kannada
Updated:May 14, 2020, 7:40 PM IST
ತಮಿಳುನಾಡು ಗಡಿಭಾಗದ ಗ್ರಾಮದಲ್ಲಿ ಅದ್ದೂರಿ ಮಾರಿ ಹಬ್ಬ; ರಾಮನಗರಕ್ಕೆ ಕೊರೋನಾ ಭೀತಿ
ಕನಕಪುರದ ಕಳಕೊಂಡನಹಳ್ಳಿ ಗ್ರಾಮದೇವತೆ ಮಾರಿ ಹಬ್ಬ
  • Share this:
ಕನಕಪುರ: ನೂರಾರು ಗ್ರಾಮಸ್ಥರು ಒಂದೇ ಕಡೆ ಸೇರಿ ಅದ್ದೂರಿಯಾಗಿ ಗ್ರಾಮ ದೇವತೆ ಮಾರಿ ಹಬ್ಬವನ್ನ ಆಚರಣೆ ಮಾಡಿದ್ದಾರೆ. ಕೊರೋನಾ ಲಾಕ್ ಡೌನ್ ಇದ್ದರೂ ಆ ನಿಯಮವನ್ನ ಉಲ್ಲಂಘನೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತಮಿಳುನಾಡು ಗಡಿ ಗ್ರಾಮ ಕೊಳಗೊಂಡನಹಳ್ಳಿಯಲ್ಲಿ ನಡೆದಿದೆ.

ಇಡೀ ದೇಶದಲ್ಲಿ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದು ಎಲ್ಲಿಯೂ ಜನರು ಗುಂಪು ಸೇರಬಾರದು ಎಂಬ ಆದೇಶ ಇದೆ. ಆದ್ರೆ, ಕೊಳಗೊಂಡನಹಳ್ಳಿ ಗ್ರಾಮದಲ್ಲಿ ಮಾತ್ರ ಈ ಆದೇಶ ಪಾಲನೆಯಾಗಿಲ್ಲ. ಗ್ರಾಮದಲ್ಲಿ ನೂರಾರು ಜನರು ಗುಂಪು ಗುಂಪಾಗಿ ಒಂದೆಡೆ ಸೇರಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹಬ್ಬ ಮಾಡಿದ್ದಾರೆ. ಯಾವುದೇ ಅನುಮತಿ ಪಡೆಯದೇ ಲಾಕ್ ಡೌನ್ ಉಲ್ಲಂಘಿಸಿ ಗ್ರಾಮದಲ್ಲಿ ಹಬ್ಬ ಮಾಡಿದ್ದಾರೆ ಎಂದು ಸ್ಥಳೀಯ ಜನರು ಆರೋಪಿಸಿದ್ದಾರೆ.

ಒಂದು ಮೂಲದ ಪ್ರಕಾರ ಸ್ಥಳೀಯ ಗ್ರಾಮ ಪಂಚಾಯ್ತಿ ಪಿಡಿಒ ಮಹದೇವ್ ಎಂಬುವರ ಸಹಕಾರದಿಂದ ಜಾತ್ರೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಹದೇವ್ ಸಹ ಇದೇ ಗ್ರಾಮದವರಾಗಿದ್ದಾರೆ. ಆದರೆ ಈಗ ಅವರು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೇಳಿ ಕೇಳಿ ಕೊಳಗೊಂಡನಹಳ್ಳಿ ಗ್ರಾಮ ಕರ್ನಾಟಕ ಮತ್ತು ತಮಿಳುನಾಡಿನ ಗಡಿಗೆ ಕೂಗಳತೆ ದೂರದಲ್ಲಿ ಇದೆ. ಈಗಾಗಲೇ ತಮಿಳುನಾಡಿನಲ್ಲಿ ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚಾಗಿದೆ‌. ಹೇಳಿ ಕೇಳಿ ರಾಮನಗರ ಸದ್ಯ ಗ್ರೀನ್ ಝೋನ್​ನಲ್ಲಿದೆ. ಆದರೆ ಸಾಮೂಹಿಕವಾಗಿ ಜನರು ಸೇರುವುದರಿಂದ ಎಲ್ಲಿ ಕೊರೋನಾ ವ್ಯಾಪಿಸಿ ಬಿಡುತ್ತೋ ಎಂಬ ಆತಂಕ ಈಗ ರಾಮನಗರ ಜಿಲ್ಲೆಯ ಜನರಿಗೆ ಕಾಡುತ್ತಿದೆ.

ಇದನ್ನೂ ಓದಿ: ಕೊರೋನಾಮುಕ್ತ ಮೈಸೂರಿಗೆ 2 ಹೆಜ್ಜೆ ಬಾಕಿ: ಇಂದಿನಿಂದ ಲಾಕ್‌ಡೌನ್‌ ಸಡಿಲಿಕೆ, ತಿಂಗಳ ನಂತರ ಬಾಗಿಲು ತೆರೆದ ಅಂಗಡಿಗಳು

ಈ ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಗ್ರಾಮದಲ್ಲಿ ಹಬ್ಬ ಮಾಡಲು ಅನುಮತಿ ಪಡೆದಿದ್ದರಾ? ಇಲ್ಲಾ ಪೊಲೀಸರು ಗೊತ್ತಿದ್ದೂ ಸುಮ್ಮನಾದರಾ ಎಂಬ ಬಗ್ಗೆ ಕೂಡ ತನಿಖೆ ಮಾಡಬೇಕಿದೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಹಾಗೂ ಕನಕಪುರ ತಹಶೀಲ್ದಾರ್ ವರ್ಷಾ ಒಡೆಯರ್ ಕೂಡ ಮೌನಕ್ಕೆ ಶರಣಾಗಿದ್ದಾರೆ. ಕೋಡಿಹಳ್ಳಿ ಠಾಣೆಯ ಪೊಲೀಸರು ನಮಗೆ ಮಾಹಿತಿಯೇ ಇರಲಿಲ್ಲ ಎಂದಿದ್ದಾರೆ.

ಪೊಲೀಸರು ಹೇಳುವ ಪ್ರಕಾರ, ಅವರು ರಾತ್ರಿ 10 ಗಂಟೆಯವರೆಗೂ ಗ್ರಾಮವನ್ನು ಪರಿಶೀಲಿಸಲಾಗಿತ್ತಂತೆ. ಆ ಸಂದರ್ಭದಲ್ಲಿ ಯಾರೂ ಜಾತ್ರೆಗೆ ಸೇರಿರಲಿಲ್ಲ. ರಾತ್ರಿ 10 ಗಂಟೆಯ ನಂತರದಿಂದ ಮಾರನೆಯ ದಿನ ಬೆಳಗಿನ ಅವಧಿಯೊಳಗೆ ಜನರು ಸೇರಿ ಜಾತ್ರೆ ನಡೆಸಿದ್ದಾರೆ ಎಂಬ ಮಾಹಿತಿ ನ್ಯೂಸ್18ಗೆ ಲಭಿಸಿದೆ.

ವರದಿ: ಎ.ಟಿ. ವೆಂಕಟೇಶ್
First published: May 14, 2020, 7:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading