ನವ ದೆಹಲಿ (ಏಪ್ರಿಲ್ 18); ಭಾರತದಲ್ಲಿ ಕೊರೋನಾ ಎರಡನೇ ಅಲೆ ಮಿತಿಮೀರಿದೆ. ಈ ನಡುವೆ ಉತ್ತರಖಂಡದ ಹರಿದ್ವಾರದಲ್ಲಿ ಕುಂಭಮೇಳ ನಡೆಯುತ್ತಿದ್ದು ಮತ್ತಷ್ಟು ಆತಂಕ ಹೆಚ್ಚಿಸಿದೆ. ಈ ಮೇಳದಲ್ಲಿ ಭಾಗವಹಿಸಿರುವ ಅನೇಕರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ಕುಂಭಮೇಳದಲ್ಲಿ ಭಾಗವಹಿಸಿ ದೆಹಲಿಗೆ ಹಿಂತಿರುಗುವವರಿಗೆ 14 ದಿನಗಳ ಮನೆ ಕ್ವಾರಂಟೈನ್ ಕಡ್ಡಾಯ ಎಂದು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಶನಿವಾರ ಮಧ್ಯರಾತ್ರಿ ಆದೇಶಿಸಿದೆ. ಏಪ್ರಿಲ್ 4 ರಿಂದ 17ರವರೆಗೆ ನಡೆದ ಕುಂಭಮೇಳದಲ್ಲಿ ಭಾಗವಹಿಸಿದವರು ತಮ್ಮ ವಿವರಗಳನ್ನು ದೆಹಲಿ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು, ಅಲ್ಲದೇ ಏಪ್ರಿಲ್ 18ರಿಂದ ಯಾರಾದರೂ ಕುಂಭಮೇಳಕ್ಕೆ ಹೋಗಲು ಯೋಜಿಸಿದ್ದರೆ ಅವರು ಸಹ ವೆಬ್‌ಸೈಟ್ ಮೂಲಕ ದೆಹಲಿ ಸರ್ಕಾರದ ಗಮನಕ್ಕೆ ತರಬೇಕು, ತಪ್ಪಿದವರಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
24 ಗಂಟೆಗಳ ಒಳಗಾಗಿ ಅಂದರೆ ಭಾನುವಾರ ಮಧ್ಯರಾತ್ರಿಯ ಒಳಗಾಗಿ ಕುಂಭಮೇಳಕ್ಕೆ ತೆರಳಿದ ನಿವಾಸಿಗಳು ತಮ್ಮ ವಿವರಗಳನ್ನು ದೆಹಲಿ ಸರ್ಕಾರದ ವೆಬ್‌ಸೈಟ್‌ನಲ್ಲಿ ನೊಂದಾಯಿಸಬೇಕು. ಟೆಸ್ಟ್, ಟ್ರೇಸ್ ಮತ್ತು ಕ್ವಾಂರಟೈನ್‌ಗೆ ಒಳಪಡಿಸಲು ಇದು ಅಗತ್ಯ ಎಂದು ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ತಿಳಿಸಿದ್ದಾರೆ.
ಏಪ್ರಿಲ್ 12 ಮತ್ತು 14 ರಂದು ಕುಂಭಮೇಳದಲ್ಲಿ ನಡೆದ ‘ರಾಯಲ್ ಸ್ನಾನ’ (ಪವಿತ್ರ ಸ್ನಾನ) ದಲ್ಲಿ ಭಕ್ತರು ಭಾಗವಹಿಸಿರುವುದರಿಂದ ಈ ಧಾರ್ಮಿಕ ಸಭೆಯು ಸೂಪರ್ ಸ್ಪ್ರೆಡರ್ ಘಟನೆಯಾಗಿ ಪರಿಣಮಿಸುತ್ತದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಒಂದು ವಾರದಲ್ಲಿಯೇ ಮೇಳದಲ್ಲಿ ಭಾಗವಹಿಸಿದ ಸುಮಾರು 2000 ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇಬ್ಬರು ಸಾಧುಗಳು ನಿಧನರಾಗಿದ್ದಾರೆ.
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ದೆಹಲಿಯು ಕಳೆದ 24 ಗಂಟೆಗಳಲ್ಲಿ 24,375 ಹೊಸ ಪ್ರಕರಣಗಳನ್ನು ದಾಖಲಿಸಿದೆ. "ಕುಂಭಮೇಳದಿಂದ ಆಯಾ ರಾಜ್ಯಗಳಿಗೆ ಹಿಂದಿರುಗುವವರು ಕೊರೊನಾವನ್ನು ‘ಪ್ರಸಾದ’ ಎಂಬಂತೆ ವಿತರಿಸುತ್ತಾರೆ. ಈ ಎಲ್ಲ ಜನರನ್ನು ಆಯಾ ರಾಜ್ಯಗಳಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ನಿರ್ಬಂಧಿಸಬೇಕು. ಮುಂಬೈನಲ್ಲಿಯೂ ಸಹ, ಹಿಂದಿರುಗುವಾಗ ಅವರನ್ನು ಕ್ವಾರಂಟೈನ್‌ಗೆ ಒಳಪಡಿಸುವ ಬಗ್ಗೆ ಯೋಚಿಸುತ್ತಿದ್ದೇವೆ" ಎಂದು ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ನಿನ್ನೆ ಹೇಳಿದ್ದರು.
ದೆಹಲಿಯಲ್ಲಿ ಕೈಮೀರಿದ ಪರಿಸ್ಥಿತಿ:
ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕು ನಾಗಾಲೋಟ ನಡೆಸಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಡ್, ಆಕ್ಸಿಜನ್ ಸಮಸ್ಯೆ ಉದ್ಭವಿಸಿದೆ.ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಶೇ 24ರಷ್ಟು ಸೋಂಕಿತರ ಸಂಖ್ಯೆ ಹೆಚ್ಚಿದೆ. ನಾಲ್ವರಲ್ಲಿ ಒಬ್ಬರು ಸೋಂಕಿಗೆ ತುತ್ತಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 24 ಗಂಟೆಗಳಲ್ಲಿ 24 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗಿದ್ದು, ನಗರದಲ್ಲಿ ಕೋವಿಡ್ ಸೋಂಕಿತರ ಜೀವ ಉಳಿಸುವ ರೆಮ್ಡಿಸಿವಿರ್ ಔಷಧಿ ಕೊರತೆ ಕೂಡ ಉದ್ಭವಿಸಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ಕೆಟ್ಟದಾಗಿದೆ. ಸೋಂಕು ಪ್ರಕರಣಗಳು ಶೀಘ್ರವಾಗಿ ಏರಿಕೆಯಾಗುತ್ತಿದೆ. ಇದೇ ಹಿನ್ನಲೆ ನಾವು ಬೆಡ್, ಆಕ್ಸಿಜನ್ ಕೊರತೆ ಎದುರಿಸುತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಪರಿಸ್ಥಿತಿ ಎಲ್ಲವೂ ನಿಯಂತ್ರಣದಲ್ಲಿತ್ತು. ಆದರೆ, ವೇಗವಾಗಿ ಕೊರೋನಾ ಹರಡುತ್ತಿದ್ದು, ಈಗ ಮತ್ತೊಂದು ಅಲೆಯ ತುದಿಗೆ ಮುಟ್ಟಿದೆ ಎಂದರು. ಯಾವುದೇ ಆರೋಗ್ಯ ಮೂಲಸೌಕರ್ಯಗಳಿಗೆ ಮಿತಿಗಳಿವೆ. ಆದರೂ ಸರ್ಕಾರ ಬೆಡ್ ಸಂಖ್ಯೆಯನ್ನು ಹೆಚ್ಚಸಲು ಅವಿರಹಿತ ಪ್ರಯತ್ನ ನಡೆಸುತ್ತಿದೆ. ಮುಂದಿನ ಎರಡ್ಮೂರು ದಿನಗಳಲ್ಲಿ 6,000 ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.
ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನಲೆ ವಿಕೇಂಡ್ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ದೇಶದಲ್ಲಿ ಪ್ರತಿನಿತ್ಯ 2.3 ಲಕ್ಷ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಸೋಂಕಿನ ಸಂಖ್ಯೆ ಏರಿಕೆಯಾಗುತ್ತಿದ್ದಂತೆ ಆಸ್ಪತ್ರೆಗಳಲ್ಲಿ ಬೆಡ್ ಸೇರಿದಂತೆ ಔಷಧಿಗಳಿಗಾಗಿ ಸೋಂಕಿತರು ಸಮಸ್ಯೆ ಎದುರಿಸುವಂತೆ ಆಗಿದೆ. ಇಂದು ದೇಶದಲ್ಲಿ 2.34 ಲಕ್ಷ ಪ್ರಕರಣ ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ 1.45 ಕೋಟಿ ದಾಟಿದೆ. ಇಂದು 1,341 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟಾರೆ 1,75,649ಜನ ಕೋವಿಡ್ನಿಂದ ಮೃತಪಟ್ಟಿದ್ದಾರೆ.
ದೆಹಲಿಯಲ್ಲಿ ಮಾತ್ರವಲ್ಲದೇ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಮತ್ತು ಪ್ಯಾಬಿಫ್ಲೂನಂತರ ಔಷಧ ಕೊರತೆ ಉಂಟಾಗಿದ್ದು, ಇದು ಕಳ್ಳ ಸಂತೆಯಲ್ಲಿ ಮಾರಾಟವಾಗುವಂತೆ ಪ್ರೇರೇಪಿಸಿದೆ.
ದೇಶದಲ್ಲಿ ಕೊರೋನಾ ಏರಿಕೆ ಪ್ರಕರಣದ ಬಗ್ಗೆ ರೆಡ್ಕ್ರಾಸ್ ಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ ಸ್ಪಾಗಳು, ಸಭಾಂಗಣಗಳು, ಮಾಲ್ಗಳು ಹಾಗೂ ಜಿಮ್ಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.ಈ ವೀಕೆಂಡ್ ಕರ್ಫ್ಯೂ ವೇಳೆ ಮದುವೆ ಸಮಾರಂಭಗಳಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಪಾಸ್ ಹೊಂದಿರಲೇಬೇಕು. ಆ ಪಾಸ್ಗಳನ್ನು ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಇದರ ಜೊತೆಗೆ ರೆಸ್ಟೋರೆಂಟ್ಗಳಲ್ಲಿ ಕೂತು ತಿನ್ನಲು ಅವಕಾಶವಿರುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ