HOME » NEWS » Coronavirus-latest-news » MAN ISOLATES ON TREE TOP FOR 11 DAYS DUE TO LACK OF SPACE AT HOME IN TELANGANA KVD

ಮರದ ಮೇಲೆಯೇ 11 ದಿನಗಳ ಕಾಲ ಐಸೋಲೇಷನ್​​ಗೆ ಒಳಗಾದ ಬಡ ಯುವಕ!

ಶೆಡ್​ನಂತ ಮನೆಯಲ್ಲಿ ಪ್ರತ್ಯೇಕವಾಗಿ ಐಸೋಲೇಷನ್​ ಆಗುವುದು ಸಾಧ್ಯವೇ ಇರಲಿಲ್ಲ. ಹೀಗಾಗಿ ಶಿವ ಮನೆ ಮುಂದಿದ್ದ ಮರದ ಮೇಲೆಯೇ ಐಸೋಲೇಷನ್​ಗೆ ಒಳಗಾಗಿದ್ದ.

Kavya V | news18-kannada
Updated:May 17, 2021, 6:36 PM IST
ಮರದ ಮೇಲೆಯೇ 11 ದಿನಗಳ ಕಾಲ ಐಸೋಲೇಷನ್​​ಗೆ ಒಳಗಾದ ಬಡ ಯುವಕ!
ಮರದ ಮೇಲೆಯೇ ಐಸೋಲೇಷನ್​​
  • Share this:
ಹೈದ್ರಾಬಾದ್​: ಅನಿವಾರ್ಯತೆಗಳು ಅದೆಷ್ಟೋ ಅವಕಾಶಗಳನ್ನು ಸೃಷ್ಟಿಸುತ್ತೆ ಅನ್ನೋದಕ್ಕೆ ಈ ಸುದ್ದಿಯೇ ಸಾಕ್ಷಿ. ಹಳ್ಳಿಯೊಂದರ ಬಡ ವಿದ್ಯಾರ್ಥಿ ಪ್ರತ್ಯೇಕವಾಗಿ ಐಸೋಲೇಷನ್​​ ಆಗಲು ಸ್ಥಳವಿಲ್ಲದೇ ಮನೆ ಎದುರಿದ್ದ ಮರದ ಮೇಲೆಯೇ 11 ದಿನಗಳ ಕಾಲ ಕಳೆದಿದ್ದಾನೆ. ಸೋಂಕಿಗೆ ಒಳಗಾಗಿದ್ದ ಶಿವ ಎಂಬಾತ ತನ್ನಿಂದ ಮನೆಯವರಿಗೆ ಸೋಂಕು ಹರಡಬಾರದೆಂದು ಬಯಲಲ್ಲೇ ದಿನಗಳನ್ನು ದೂಡಿದ್ದಾನೆ. ಬಡತನವಿದ್ದರೂ, ಸರಿಯಾದ ವ್ಯವಸ್ಥೆ ಇಲ್ಲದಿದ್ದರೂ ಕೊರೋನಾ ನಿಯಮವನ್ನು ಕಟ್ಟುನಿಟ್ಟಿನಿಂದ ಪಾಲಿಸಿದ ಶಿವ ಸದ್ಯ ಇಡೀ ದೇಶದ ಗಮನ ಸೆಳೆದಿದ್ದಾನೆ.

ಕೊರೋನಾ 2ನೇ ಅಲೆ ನಗರದ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮೀಣ ಭಾಗಕ್ಕೂ ಕಾಲಿಟ್ಟಿದೆ. ಆಸ್ಪತ್ರೆಗಳಲ್ಲಿ ಬೆಡ್​ಗಳ ಕೊರತೆ ಎದುರಾಗಿದ್ದು, ಕಡಿಮೆ ರೋಗ ಲಕ್ಷಣಗಳಿರುವವರು ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿ ಎಂದು ಸೂಚಿಸಲಾಗುತ್ತಿದೆ. ನಗರ ಪ್ರದೇಶದಲ್ಲಿನ ಬಹುತೇಕ ಮನೆಗಳಲ್ಲಿ ಪ್ರತ್ಯೇಕ ಕೊಠಡಿಗಳಿರುತ್ತವೆ. ಅಲ್ಲವೇ ಕೋವಿಡ್​ ಕೇರ್​ ಸೆಂಟರ್​ಗಳಲ್ಲಿ ತಂಗಬಹುದಾಗಿದೆ. ಆದರೆ ಮಹಾನಗರಗಳಲ್ಲಿರುವಂತೆ ಗ್ರಾಮೀಣ ಪ್ರದೇಶದಲ್ಲಿ ವ್ಯವಸ್ಥೆಗಳು ಇಲ್ಲ. ಹಳ್ಳಿಗಳಲ್ಲಿ ಪ್ರತ್ಯೇಕವಾಗಿ ಐಸೋಲೇಷನ್​ಗೆ ಒಳಗಾಗುವುದು ನಿಜಕ್ಕೂ ಸವಾಲಿನದ್ದು.

ಇಂಥಹದ್ದೇ ಸವಾಲನ್ನು ತೆಲಂಗಾಣದ ವಿದ್ಯಾರ್ಥಿ ಶಿವ ತನ್ನದೇ ಶೈಲಿಯಲ್ಲಿ ಎದುರಿಸುವ ಮೂಲಕ ಧೈರ್ಯ ಮೆರೆದಿದ್ದಾನೆ. ಹೈದ್ರಾಬಾದ್​ನಲ್ಲಿ ಪದವಿ ಓದುತ್ತಿದ್ದ ಶಿವ ಕೊರೋನಾ ಕರ್ಫ್ಯೂ, ಲಾಕ್​ಡೌನ್​ ಹಿನ್ನೆಲೆ ಹುಟ್ಟೂರಾದ ನೆಲಗೊಂಡ ಜಿಲ್ಲೆಯ ಕೊತ್ತನದಿಕೊಂಡ ಗ್ರಾಮಕ್ಕೆ ಮರಳಿದ್ದ. ಆದರೆ ಹಳ್ಳಿಯಲ್ಲಿದ್ದರೂ ಶಿವ ಕೊರೋನಾ ಸೋಂಕಿಗೆ ತುತ್ತಾಗಿದ್ದ. ಶೆಡ್​ನಂತ ಮನೆಯಲ್ಲಿ ಪ್ರತ್ಯೇಕವಾಗಿ ಐಸೋಲೇಷನ್​ ಆಗುವುದು ಸಾಧ್ಯವೇ ಇರಲಿಲ್ಲ. ಹೀಗಾಗಿ ಶಿವ ಮನೆ ಮುಂದಿದ್ದ ಮರದ ಮೇಲೆಯೇ ಐಸೋಲೇಷನ್​ಗೆ ಒಳಗಾಗಿದ್ದ.

ಮರದ ಮೇಲೆ ಬಿದಿರಿನ ಮೂಲಕ ಮಲುಗುವಷ್ಟು ಸ್ಥಳವನ್ನು ನಿರ್ಮಿಸಿ, ಅದರ ಮೇಲೆ ಹಾಸಿಗೆ ಹಾಕಿಕೊಂಡು ಇರತೊಡಗಿದ. ಬಿಸಿಲು-ಗಾಳಿ ಎನ್ನದೇ ಬರೋಬ್ಬರಿ 11 ದಿನಗಳ ಕಾಲ ಮರದ ಮೇಲೆಗೆ ಕಾಲ ಕಳೆದಿದ್ದಾನೆ. ಮನೆಯವರು ಶಿವನಿಗೆ ಆಹಾರ ನೀಡಿದ್ದಾರೆ. ಶಿವ ಇರುವ ಹಳ್ಳಿಯಿಂದ 5 ಕಿಲೋ ಮೀಟರ್​ ದೂರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಇನ್ನು 30 ಕಿಲೋ ಮೀಟರ್ ದೂರದಲ್ಲಿ ಆಸ್ಪತ್ರೆ ಇದೆ. ಇಂಥ ಕುಗ್ರಾಮದಲ್ಲೂ ಶಿವ ಕೋವಿಡ್​​ ನಿಯಮವನ್ನು ಪಾಲಿಸಿದ್ದಾನೆ. ತನ್ನ ಮನೆಯವರಿಗೆ ಸೋಂಕು ಹರಡದಂತೆ ನೋಡಿಕೊಂಡಿದ್ದಾನೆ.

ಈ ಘಟನೆ ಸುದ್ದಿಯಾಗುತ್ತಿದಂತೆ ಸ್ಥಳೀಯ ಆಡಳಿತದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಯುವಕನಿಗೆ ಒಂದು ಬೆಡ್​ ವ್ಯವಸ್ಥೆ ಮಾಡಲು ಏಕೆ ಸಾಧ್ಯವಾಗಿಲ್ಲ. 11 ದಿನಗಳ ಕಾಲ ಅಮಾನವೀಯವಾಗಿ ಬಡ ಯುವಕ ಮರದ ಮೇಲಿದ್ದರೂ ಜನಪ್ರತಿನಿಧಿಗಳಾಗಲಿ, ಆರೋಗ್ಯ ಇಲಾಖೆಯವರಾಗಲಿ ಏಕೆ ನೆರವಾಗಿಲ್ಲ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ. ಮೇ 4ರಂದು ಸೋಂಕಿಗೆ ಒಳಗಾಗಿದ್ದ ಶಿವ 11 ದಿನಗಳ ಕಾಲ ಮರದ ಮೇಲೆಯೇ ಐಸೋಲೇಷನ್​ ಮುಗಿಸಿ ಗುಣಮುಖನಾಗಿದ್ದಾನೆ. ಮೇ 13ರಿಂದ ನೆಲಗೊಂಡ ಜಿಲ್ಲೆಯಲ್ಲಿ ಕೋವಿಡ್​ ಕೇರ್​ ಸೆಂಟರ್​ ಶುರುವಾಗಿದೆ. ಆದರೆ  ಈ ಭಾಗದ ಹಳ್ಳಿಗಳ ಜನಕ್ಕೆ ಈ ಬಗ್ಗೆ ಸರಿಯಾದ ಮಾಹಿತಿಯೇ ಇನ್ನೂ ಸಿಕ್ಕಿಲ್ಲ.
Published by: Kavya V
First published: May 17, 2021, 6:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories