ಕೋಲಾರ: ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಕಾಂಗ್ರೆಸ್ ನಾಯಕರು ಆಯೋಜಿಸಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಲು ವೇದಿಕೆಯಾಗಿ ಬದಲಾಯಿತು.
ಮಾಜಿ ಸಂಸದ ಕೆಎಚ್ ಮುನಿಯಪ್ಪ ನಿವಾಸದ ಬಳಿ ರಂಜಾನ್ ಪ್ರಯುಕ್ತ ಮುಸ್ಲಿಂ ಸಮುದಾಯದ ಜನರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ, ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್, ಸಲೀಂ ಅಹಮದ್ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ್ಯ ಕೆ ಚಂದ್ರಾರೆಡ್ಡಿ , ಮಾಲೂರು ಶಾಸಕ ಕೆವೈ ನಂಜೇಗೌಡ, ಮಾಜಿ ಅಬಕಾರಿ ಡಿಸಿ ಎಲ್ಎ ಮಂಜುನಾಥ್ ಸೇರಿ ಜಿಲ್ಲಾ, ನಗರ ಕಾಂಗ್ರೆಸ್ ಮುಖಂಡರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಕೋಲಾರ ನಗರದ ಮುಸ್ಲಿಮರಿಗೆ ಕೆಎಚ್ ಮುನಿಯಪ್ಪ ಹಬ್ಬದ ಪ್ರಯುಕ್ತ ದಿನಸಿ ಕಿಟ್ ಗಳನ್ನು ವಿತರಣೆ ಮಾಡಿದರು. ಇನ್ನು ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಾಲೂರು ಶಾಸಕ ಕೆ.ವೈ. ನಂಜೇಗೌಡ ಅವರು ಇದೇ ಮೊದಲ ಬಾರಿಗೆ ಕೋಲಾರ ಜಿಲ್ಲಾಡಳಿತ, ಜಿಲ್ಲೆಯ ಜನಪ್ರತಿನಿಧಿಗಳ ವಿರುದ್ದ ಗಂಭೀರ ಆರೋಪಗಳನ್ನು ಮಾಡಿದರು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಈ ಕೆಲಸ ಮಾಡುತ್ತಿರುವುದು ಗಾಳಿಗೆ ಬಂದ ಜನಪ್ರತಿನಿಧಿಗಳು ಎನ್ನುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್ ಹಾಗೂ ಸಂಸದ ಮುನಿಸ್ವಾಮಿ ಹೆಸರೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಬಹಳ ದಿನಗಳಿಂದ ಜಿಲ್ಲೆಯ ಅಧಿಕಾರಿಗಳ ಬಳಿ ಬಿಜೆಪಿ ಸಚಿವರು, ಸಂಸದರು ಪರ್ಸೆಂಟೇಜ್ ಫಿಕ್ಸ್ ಮಾಡೊಕೆ ಬೆದರಿಕೆ ಹಾಕಿದ್ದಾರೆ. ಅನಿವಾರ್ಯವಾಗಿ ಅಧಿಕಾರಿಗಳು ಈ ಗಾಳಿಗೆ ಬಂದ ಜನಪ್ರತಿನಿಧಿಗಳಿಗೆ ಶರಣಾಗಿದ್ದಾರೆ. ಅಧಿಕಾರಿಗಳು ಬೇರೊಬ್ಬರ ತಾಳಕ್ಕೆ ತಕ್ಕಂತೆ ಕುಣಿದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ನಂಜೇಗೌಡ ಎಚ್ಚರಿಕೆ ನೀಡಿದರು.
ಇದನ್ನು ಓದಿ: ಕಂಟೈನ್ಮೆಂಟ್ ಜೋನ್ಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲ; ಶಿಕ್ಷಣ ಸಚಿವ ಸುರೇಶ್ ಕುಮಾರ್
ಆಂತರಿಕ ಶೀತಲ ಸಮರ
2019 ರ ಲೋಕಸಭೆ ಚುನಾವಣೆ ಕಾಂಗ್ರೆಸ್ ಟಿಕೆಟ್ ಕೆಎಚ್ ಮುನಿಯಪ್ಪಗೆ ಕೊಡಬೇಡಿ ಎಂದು ಬಹಿರಂಗವಾಗಿ ದೆಹಲಿ ನಾಯಕರನ್ನು ಭೇಟಿಯಾಗಿ ಮನವಿ ನೀಡಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಸ್ ಎಮ್ ನಾರಾಯಣಸ್ವಾಮಿ, ನಸೀರ್ ಅಹಮದ್ ಪಕ್ಷ ವಿರೋದಿ ಚಟುವಟಿಕೆ ಮಾಡಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆಂದು ಕೆಎಚ್ ಮುನಿಯಪ್ಪ ಪ್ರತಿಬಾರಿ ಹೇಳುತ್ತಲೆ ಇದ್ದು, ಸೋನಿಯಾ ಗಾಂಧಿಯವರಿಗೆ ಈ ಬಗ್ಗೆ ದೂರು ನೀಡಿ ಎಲ್ಲರನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿದ್ದರು.
ಚುನಾವಣೆ ಮುಗಿದು ವರ್ಷವೇ ಕಳೆಯುತ್ತ ಬಂದರೂ ಇನ್ನೂ ಮುನಿಯಪ್ಪ ವಿರೋಧಿಗಳನ್ನು ಮರೆತಂತೆ ಕಾಣುತ್ತಿಲ್ಲ. ಯಾಕೆಂದರೆ ಮುಸ್ಲಿಂ ಸಮುದಾಯದ ಜನರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದ ಬ್ಯಾನರ್ ನಲ್ಲಿ ರಮೇಶ್ ಕುಮಾರ್, ಎಸ್ ಎಮ್ ನಾರಾಯಣಸ್ವಾಮಿ, ನಸೀರ್ ಅಹಮದ್ ಪೋಟೋಗಳು ಕಾಣಲಿಲ್ಲ. ನಗರಸಭೆ ಸದಸ್ಯರು ಮಾಜಿ ಮುಖಂಡರು ಪೋಟೋಗಳು ಇತ್ತಾದರೂ ಹಿರಿಯ ಶಾಸಕರು ಪೋಟೋಗಳೇ ಮಾಯವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ