ಬಸವನಾಡು ವಿಜಯಪುರಕ್ಕೆ ಮಹಾ ಭಯ; ಮತ್ತಷ್ಟು ಸೋಂಕು ಹೆಚ್ಚಾಗೋ ಭೀತಿ

ಪ್ರತಿದಿನ ವಿಜಯಪುರ ಜಿಲ್ಲಾಡಳಿತ 1000 ದಿಂದ 3000 ವರೆಗೆ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸುತ್ತಿದೆ ಯಾವಾಗ ಯಾವ ವರದಿ ಬರುತ್ತೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.

news18-kannada
Updated:May 26, 2020, 9:36 AM IST
ಬಸವನಾಡು ವಿಜಯಪುರಕ್ಕೆ ಮಹಾ ಭಯ; ಮತ್ತಷ್ಟು ಸೋಂಕು ಹೆಚ್ಚಾಗೋ ಭೀತಿ
ವಿಜಯಪುರ ರೈಲು ನಿಲ್ದಾಣ
  • Share this:
ವಿಜಯಪುರ(ಮೇ.26): ಬಸವನಾಡು ವಿಜಯಪುರ ಜಿಲ್ಲೆಗೆ ಈಗ ಕೊರೋನಾ ವಿಚಾರದಲ್ಲಿ ಮಹಾ ಭಯ ಕಾಡುತ್ತಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಂದ 21, 000 ಕ್ಕೂ ಹೆಚ್ಚು ಕಾರ್ಮಿಕರು ವಾಪಸ್ಸಾಗಿದ್ದು, ಇವರಲ್ಲಿ ಮಹಾರಾಷ್ಟ್ರದಿಂದ ಬಂದವರೇ ಶೇ. 80ರಷ್ಛಿರುವುದು ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ವಿಜಯಪುರ ಜಿಲ್ಲಾಡಳಿತ ಈಗಾಗಲೇ ಸಂಗ್ರಹಿಸಿ ಕಳುಹಿಸಿರುವ 8133 ಜನರ ಕೊರೋನಾ ವರದಿ ಇನ್ನೂ ಬರಬೇಕಿದೆ. ಅಷ್ಟೇ ಅಲ್ಲ, ಸುಮಾರು ಇನ್ನೂ ಸುಮಾರು 11, 000 ಜನರ ಗಂಟಲು ದ್ರವದ ಮಾದರಿ ಸಂಗ್ರಹ ಕಾರ್ಯ ಬಾಕಿ ಇದೆ.

ಮಹಾರಾಷ್ಟ್ರದಿಂದ ಬಂದ ಕಾರ್ಮಿಕರಲ್ಲಿ ಸುಮಾರು 7, 900 ಜನ ಕಾರ್ಮಿಕರು ಅನಧಿಕೃತವಾಗಿ ವಿಜಯಪುರಕ್ಕೆ ವಾಪಸ್ಸಾಗಿದ್ದು, ಇವರೂ ಸೇರಿದಂತೆ ಎಲ್ಲ 21,000ಕ್ಕೂ ಹೆಚ್ಚು ಕಾರ್ಮಿಕರನ್ನು ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ಈಗಾಗಲೇ ಸುಮಾರು 1, 900 ಕ್ಕೂ ಹೆಚ್ಚು ಕಾರ್ಮಿಕರ ವರದಿ ನೆಗೆಟಿವ್ ಬಂದಿದೆ. ಅಷ್ಟೇ ಅಲ್ಲ, ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಸುಮಾರು 2 ಸಾವಿರ ಜನರನ್ನು ಸಾಂಸ್ಥಿಕ ಕ್ವಾರಂಟೈನ್ ನಿಂದ ಬಿಡುಗಡೆ ಮಾಡಿ ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗಿದೆ. ಪ್ರತಿದಿನ ವಿಜಯಪುರ ಜಿಲ್ಲಾಡಳಿತ 1000 ದಿಂದ 3000 ವರೆಗೆ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸುತ್ತಿದೆ ಯಾವಾಗ ಯಾವ ವರದಿ ಬರುತ್ತೋ ಎಂಬ ಆತಂಕ ಎಲ್ಲರನ್ನೂ ಕಾಡುತ್ತಿದೆ.

ವಿಜಯಪುರಕ್ಕೆ ಮುಂಬಯಿ, ಥಾಣೆ, ಪುಣೆಗಿಂತ ಇತರ ಮಾಹಾರಾಷ್ಟ್ರದಿಂದ ಬಂದವರೇ ಹೆಚ್ಚಾಗಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪತ್ತೆಯಾದ ಕೊರೋನಾ ಸೋಂಕಿತರಲ್ಲಿ ಬಹುತೇಕ ಜನರು ಮುಂಬಯಿ, ಥಾಣೆ ಮತ್ತು ಪುಣೆಯಿಂದ ವಾಪಸ್ಸಾದವರಾಗಿದ್ದಾರೆ.  ಆದರೆ, ವಿಜಯಪುರ ಜಿಲ್ಲೆಗೆ ಮುಂಬಯಿ, ಥಾಣೆ ಮತ್ತು ಪುಣೆಯಿಂದ ವಾಪಸ್ಸಾದವರ ಸಂಖ್ಯೆ ಸುಮಾರು 1,000 ಕ್ಕಿಂತಲೂ ಕಡಿಮೆಯಾಗಿದೆ.  ಉಳಿದ ಕಾರ್ಮಿಕರು ಮಹಾರಾಷ್ಟ್ರದ ಕರಾಡ, ರತ್ನಗಿರಿ, ಸಿಂಧುದುರ್ಗ, ಚಿಪ್ಲೂನ್ ಸೇರಿದಂತೆ ಇತರ ಭಾಗಗಳಿಂದ ವಾಪಸ್ಸಾಗಿದ್ದಾರೆ. ಅಲ್ಲದೇ, ಇವರು ಮಹಾರಾಷ್ಟ್ರದ ಗ್ರಾಮೀಣ ಭಾಗದಲ್ಲಿ ನಾನಾ ಗಣಿಗಾರಿಕೆ, ಇಟ್ಟಿಗೆ ತಯಾರಿಕೆ ಸೇರಿದಂತೆ ಇತರ ಕೆಲಸ ಕಾರ್ಯಗಳಲ್ಲಿ ತೊಡಗಿದವರಾಗಿದ್ದಾರೆ.

ಅಷ್ಟೇ ಅಲ್ಲ, ಇವರು ಗ್ರಾಮೀಣ ಭಾಗದಿಂದ ಬಂದಿರುವುದರಿಂದ ಮತ್ತು ಆ ಪ್ರದೇಶಗಳಲ್ಲಿ ಕೊರೋನಾ ಅಷ್ಟೋಂದು ಸದ್ದು ಮಾಡಿರದ ಹಿನ್ನೆಲೆಯಲ್ಲಿ ಇವರಿಗೆ ಕೊರೋನಾ ಸೋಂಕು ತಗುಲಿರುವ ಪ್ರಮಾಣ ಕಡಿಮೆಯಾಗಿರುವ ಸಾಧ್ಯತೆಗಳೇ ಹೆಚ್ಚಾಗಿವೆ. ಹೀಗಾಗಿ ವಿಜಯಪುರ ಜಿಲ್ಲಾಡಳಿತಕ್ಕೆ ಈ ವಿಚಾರ ಸ್ವಲ್ಪ ನೆಮ್ಮದಿ ಉಂಟು ಮಾಡಿದೆ. ಇವರ ಜೊತೆ ಹಸಿರು ವಲಯ ಗೋವಾ ರಾಜ್ಯದಿಂದ 2, 969 ಕಾರ್ಮಿಕರು ವಾಪಸ್ಸಾಗಿದ್ದಾರೆ. ಇವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ವರೆಗೆ ವಾಪಸ್ಸಾಗಿರುವ ಎಲ್ಲ ಜನರ ವರದಿ ಬಂದ ಬಳಿಕವಷ್ಟೇ ಈಗ ಎದುರಾಗಿರುವ ಆತಂಕ ಪೂರ್ಣ ಪ್ರಮಾಣದಲ್ಲಿ ಕಡಿಮೆಯಾಗಲಿದೆ.

ಇದನ್ನೂ ಓದಿ ;  ಚಾಮರಾಜನಗರಕ್ಕೆ ಕೊರೋನಾ ಕಪ್ - ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆದ ವಿವಿಧ ಮೆಸೇಜ್​ಗಳು

ಒಟ್ಟಾರೆ ವಿಜಯಪುರ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ, ಎಸ್ಪಿ ಅನುಪಮ ಅಗರವಾಲ ಮತ್ತು ಜಿ. ಪಂ. ಸಿಇಓ ಗೋವಿಂದರೆಡ್ಡಿ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಡಳಿತ ಕೊರೋನಾಕ್ಕೆ ಶಕ್ತಿಮೀರಿ ಕಡಿವಾಣ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಸಂಖ್ಯೆ ಹೆಚ್ಚಾಗಿರುವ ಜಿಲ್ಲೆಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದ ವಿಜಯಪುರ ಈಗ 13ನೇ ಸ್ಥಾನಕ್ಕೆ ಇಳಿಯುವ ಮೂಲಕ ಗಮನ ಸೆಳೆದಿದೆ.
First published: May 26, 2020, 9:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading