HOME » NEWS » Coronavirus-latest-news » MAHARASHTRA CORONAVIRUS MAHARASHTRA GOVERNMENT MAY ANNOUNCE LOCKDOWN AS COVID19 CASES INCREASES SCT DBDEL

Maharashtra Coronavirus: ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್ ಸಾಧ್ಯತೆ; ಇಂದು ಮಹತ್ವದ ಸಭೆ

ಕೊರೋನಾ ನಿಯಂತ್ರಣ ಮಾಡಲು ಮತ್ತೊಮ್ಮೆ ಲಾಕ್ಡೌನ್ ಮಾಡುವ ಬಗ್ಗೆ ನಿನ್ನೆ ಮಹತ್ವದ ಸಭೆ ನಡೆಸಿದ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಇಂದು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.

news18-kannada
Updated:April 12, 2021, 9:26 AM IST
Maharashtra Coronavirus: ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್​ಡೌನ್ ಸಾಧ್ಯತೆ; ಇಂದು ಮಹತ್ವದ ಸಭೆ
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
  • Share this:
ಮುಂಬೈ, (ಏ. 12): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಕೊರೋನಾ ಸೋಂಕು ಹರಡುವಿಕೆ ಶರವೇಗವನ್ನು ಪಡೆದುಕೊಂಡಿದೆ.‌ ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಕಳೆದ ಭಾನುವಾರದಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದರು. ಬುಧವಾರದಿಂದ ದಿನ ಒಂದರಲ್ಲಿ ಒಂದೂಕಾಲು ಲಕ್ಷಕ್ಕೂ ‌ಹೆಚ್ಚು‌ ಕೊರೋನಾ ಸೋಂಕು ಪೀಡಿತರು ಪತ್ತೆಯಾಗುತ್ತಿದ್ದರು. ಈಗ ದಿನ‌ ಒಂದರಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಕಂಡು ಬರಲು ಆರಂಭಿಸಿವೆ. ಇಂಥ ಪರಿಸ್ಥಿತಿಗೆ ಅರ್ಧದಷ್ಟು ಕೊಡುಗೆ ನೀಡುತ್ತಿರುವುದು ಮಹಾರಾಷ್ಟ್ರ. ಹಾಗಾಗಿ ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್ಡೌನ್ ಘೋಷಣೆ ಮಾಡುವ ಸಂಭವಗಳು ಕಂಡುಬರುತ್ತಿವೆ.

ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಭಾನುವಾರ ಇಡೀ ದೇಶದಲ್ಲಿ 169,243 ಕೊರೋನಾ ಪೀಡಿತ ಪ್ರಕರಣಗಳು ಕಂಡುಬಂದಿವೆ. ಈ ಪೈಕಿ ಮಹಾರಾಷ್ಟ್ರ ಒಂದರಲ್ಲಿ 63,294 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ಗುಣ ಆಗಿರುವವರು 34,008 ಜನ ಮಾತ್ರ. ಇದರಿಂದ ಮಹಾರಾಷ್ಟ್ರದಲ್ಲಿ ಈವರೆಗೆ ಕೊರೋನಾ ಸೋಂಕು ಪೀಡಿತರಾದವರ ಸಂಖ್ಯೆ 34,07,245ಕ್ಕೆ ಏರಿಕೆ ಆಗಿದೆ.‌ ಭಾನುವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ ಕೊರೋನಾಗೆ 349 ಜನರು ಬಲಿ ಆಗಿದ್ದಾರೆ. ಸದ್ಯ ಅಲ್ಲಿ ಮಹಾಮಾರಿ ಕೊರೋನಾಗೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈವರೆಗೆ ಕೊರೋನಾ ರೋಗದಿಂದ ಸತ್ತವರ ಸಂಖ್ಯೆ 57,987ಕ್ಕೆ ಏರಿಕೆ ಆಗಿದೆ. ಇನ್ನೂ 5,65,587 ಸಕ್ರೀಯ ಪ್ರಕರಣಗಳಿವೆ.

ಈ ನಡುವೆ ಮಹಾರಾಷ್ಟ್ರದಲ್ಲಿ ಕೊರೋನಾ ಲಸಿಕೆಗಳ ಕೊರತೆ ಉಂಟಾಗಿದೆ. ಮಹಾರಾಷ್ಟ್ರಕ್ಕೆ ಹೆಚ್ಚಿನ ಪ್ರಮಾಣದ ಲಸಿಕೆ ನೀಡುವಂತೆ ‌ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ನೆರೆಯ ಗುಜರಾತ್ ರಾಜ್ಯಕ್ಕೆ ಹೆಚ್ಚಿನ ಲಸಿಕೆ ನೀಡಲಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಇಲ್ಲ ಎನ್ನುವ ಕಾರಣಕ್ಕೆ ಲಸಿಕೆ ನೀಡುತ್ತಿಲ್ಲ. ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪ ಮಾಡಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೂಡ ಕೊರೋನಾ ಲಸಿಕೆ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ಮಾಡಬಾರದು ಎಂದು ಹೇಳಿದ್ದಾರೆ. ಆದರೂ ಪ್ರಯೋಜನ ಆಗಿಲ್ಲ. ಲಸಿಕೆ ಕೊರತೆ ನೀಗಿಲ್ಲ.

ಈ‌ ಎಲ್ಲಾ ಹಿನ್ನೆಲೆಯಲ್ಲಿ ‌ಮಹಾರಾಷ್ಟ್ರ ಸರ್ಕಾರ ಕೊರೋನಾ ನಿಯಂತ್ರಣ ಮಾಡಲು ಮತ್ತೊಮ್ಮೆ ಲಾಕ್ಡೌನ್ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ನಿನ್ನೆ ಮಹತ್ವದ ಸಭೆ ನಡೆಸಿದ ಮಹಾರಾಷ್ಟ್ರದ ಸಿಎಂ ಉದ್ಧವ್ ಠಾಕ್ರೆ ಇಂದು ಹಣಕಾಸು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಇದಾದ ಮೇಲೆ ರಾತ್ರಿ 8.30ಕ್ಕೆ ಟಾಸ್ಕ್ ಫೋರ್ಸ್ ಜೊತೆ ಸಭೆ ನಡೆಸಲಿದ್ದಾರೆ. ಎರಡೂ ಸಭೆಗಳ ಬಳಿಕ ಲಾಕ್ಡೌನ್ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿ ತಿಳಿದುಬಂದಿದೆ. ಏನೇ ನಿರ್ಧಾರ ಮಾಡಿದರೂ ಜನರಿಗೆ 48 ಗಂಟೆ ಸಮಯಾವಕಾಶ ನೀಡಲಾಗುವುದು ಎಂದು ಕೂಡ ತಿಳಿದುಬಂದಿದೆ.
Published by: Sushma Chakre
First published: April 12, 2021, 9:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories