HOME » NEWS » Coronavirus-latest-news » MAHARASHTRA CM UDDHAV THACKERAY CALLS MEETING WITH ALLIES AFTER RAHUL GANDHIS UPENDING STATEMENT SNVS

ರಾಹುಲ್ ಗಾಂಧಿ ನಿಗೂಢ ಹೇಳಿಕೆ ಬೆನ್ನಲ್ಲೇ ಮಿತ್ರಪಕ್ಷಗಳ ಜೊತೆ ಮಹಾ ಸಿಎಂ ಉದ್ಧವ್ ಠಾಕ್ರೆ ಸಭೆ

ನಿನ್ನೆ ನೀಡಿದ್ದ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಸರ್ವವಿಧದಲ್ಲೂ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಠಾಕ್ರೆ ಅವರಿಗೆ ರಾಹುಲ್ ಭರವಸೆ ನೀಡಿದ್ದಾರೆ.

Vijayasarthy SN | news18
Updated:May 27, 2020, 4:28 PM IST
ರಾಹುಲ್ ಗಾಂಧಿ ನಿಗೂಢ ಹೇಳಿಕೆ ಬೆನ್ನಲ್ಲೇ ಮಿತ್ರಪಕ್ಷಗಳ ಜೊತೆ ಮಹಾ ಸಿಎಂ ಉದ್ಧವ್ ಠಾಕ್ರೆ ಸಭೆ
ಉದ್ಧವ್ ಠಾಕ್ರೆ
  • News18
  • Last Updated: May 27, 2020, 4:28 PM IST
  • Share this:
ಮುಂಬೈ(ಮೇ 27): ಕೊರೋನಾ ವೈರಸ್ ಸೋಂಕಿನ ಅತಿ ಹೆಚ್ಚು ಬಿಸಿ ತಾಕಿಸಿಕೊಂಡಿರುವ ಮಹಾರಾಷ್ಟ್ರ ಸರ್ಕಾರಕ್ಕೆ ನಿನ್ನೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ಶಾಕ್ ಕೊಟ್ಟಿದೆ. ಸೋಂಕು ನಿಯಂತ್ರಣ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಅಸಹಾಯಕವಾಗಿದೆ. ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿ ಪಕ್ಷ ಇಲ್ಲ ಎಂಬರ್ಥದಲ್ಲಿ ರಾಹುಲ್ ಗಾಂಧಿ ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದು ಮಹಾರಾಷ್ಟ್ರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ಸೂಚಿಸುವಂತಿತ್ತು. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಮೈತ್ರಿಕೂಟದಲ್ಲಿರುವ ಶಿವಸೇನೆಯ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಎನ್​ಸಿಪಿ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ, ನಿನ್ನೆ ನಿಗೂಢ ಹೇಳಿಕೆ ಕೊಟ್ಟಿದ್ದ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇವತ್ತು ಉದ್ಧವ್ ಠಾಕ್ರೆಗೆ ದೂರವಾಣಿ ಕರೆ ನೀಡಿ ವಿವಾದ ಶಮನಕ್ಕೆ ಯತ್ನಿಸಿದ್ಧಾರೆ.

ನಿನ್ನೆ ನೀಡಿದ್ದ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಸರ್ವವಿಧದಲ್ಲೂ ಕಾಂಗ್ರೆಸ್ ಬೆಂಬಲ ನೀಡುತ್ತದೆ ಎಂದು ಠಾಕ್ರೆ ಅವರಿಗೆ ರಾಹುಲ್ ಭರವಸೆ ನೀಡಿದರು. ಹಾಗೆಯೇ, ಆಡಳಿತದಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಚಾರದಲ್ಲಿ ಮಿತ್ರ ಪಕ್ಷಗಳಿಗೂ ಸಮಾನ ಪ್ರಾಮುಖ್ಯತೆ ಇದೆ ಎಂದು ಉದ್ಧವ್ ಠಾಕ್ರೆ ಕೂಡ ತಿಳಿಸಿದರು ಎಂದು ಶಿವಸೇನೆಯ ನಾಯಕರೊಬ್ಬರು ಸ್ಪಷ್ಟಪಡಿಸಿದರೆಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ: ಲಡಾಕ್​ನಲ್ಲಿ ಆಗಿದ್ದು ಆಕಸ್ಮಿಕವಲ್ಲ; ಭಾರತೀಯರ ಪೂರ್ವನಿಯೋಜಿತ ತಂಟೆ: ಚೀನೀ ತಜ್ಞರ ಅನಿಸಿಕೆ

ಇದೇ ವೇಳೆ, ಮಹಾ ವಿಕಾಸ್ ಆಘಾಡಿ ಮೈತ್ರಿಕೂಟದಲ್ಲಿ ಯಾವುದೇ ಬಿರುಕು ಇಲ್ಲ ಎಂದು ಕಾಂಗ್ರೆಸ್ ಮತ್ತು ಎನ್​ಸಿಪಿ ಪಕ್ಷಗಳು ಖಚಿತವಾಗಿ ಹೇಳಿವೆ. ಉದ್ಧವ್ ಠಾಕ್ರೆ ಅವರು ತಮ್ಮ ಎರಡೂ ಮಿತ್ರಪಕ್ಷಗಳ ನಾಯಕರ ಜೊತೆ ಈ ವಿಚಾರವಾಗಿ ಚರ್ಚೆ ನಡೆಸಿದರು.

ಉಪಮುಖ್ಯಮಂತ್ರಿ ಹಾಗೂ ಎನ್​ಸಿಪಿ ಮುಖಂಡ ಅಜಿತ್ ಪವಾರ್, ಕಂದಾಯ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಬಾಳಾಸಾಹೇಬ್ ಥೋರಟ್ ಅವರು ಈ ಸಭೆಯಲ್ಲಿದ್ದಾರೆ. ಶಿವಸೇನೆಯಿಂದ ಏಕನಾಥ್ ಶಿಂಧೆ ಮತ್ತು ಸುಭಾಷ್ ದೇಸಾಯಿ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ನಿನ್ನೆ ರಾಹುಲ್ ಹೇಳಿದ್ದೇನು?ರಾಹುಲ್ ಗಾಂಧಿ ನಿನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಹಾರಾಷ್ಟ್ರದಲ್ಲಿ ತೀವ್ರವಾಗಿರುವ ಕೊರೋನಾ ಬಿಕ್ಕಟ್ಟು ಪರಿಸ್ಥಿತಿ ಬಗ್ಗೆ ಮಾತನಾಡಿದ್ದರು. ಮಹಾರಾಷ್ಟ್ರ ಬಹಳ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಕೊರೋನಾ ವಿರುದ್ಧ ಹೋರಾಡಲು ಕೇಂದ್ರದ ಬೆಂಬಲ ಅಗತ್ಯ ಇದೆ ಎಂದಿದ್ದರು. ಅದರ ಜೊತೆಗೆ ಮಹಾರಾಷ್ಟ್ರ ಸರ್ಕಾರದಲ್ಲಿ ತಮ್ಮ ಪಕ್ಷ ಡಿಸಿಶನ್ ಮೇಕರ್ ಅಲ್ಲ ಎಂದು ಅವರ ಆಡಿದ ಒಂದು ಮಾತು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ಮಹಾ ವಿಕಾಸ್ ಆಘಾಡಿ ಒಕ್ಕೂಟ ಸರ್ಕಾರದೊಳಗೆ ಅಸಮಾಧಾನದ ಬೇಗುದಿ ಇದೆಯಾ ಎಂಬ ಅನುಮಾನ ಹುಟ್ಟುವಂತೆ ಮಾಡಿತು.

ಇದನ್ನೂ ಓದಿ: Covid Tests - ಸ್ವಂತ ಬಲವಿಲ್ಲದೆಯೂ ವೈರಸ್ ಹೇಗೆ ಹರಡುತ್ತೆ? ಸೋಂಕು ಪತ್ತೆಗೆ 2 ವಿಧಾನಗಳ್ಯಾವುವು?

“ಮಹಾರಾಷ್ಟ್ರದಲ್ಲಿ ಸರ್ಕಾರಕ್ಕೆ ನಾವು ಬೆಂಬಲ ಕೊಟ್ಟಿದ್ದೇವೆ. ಆದರೆ, ಅಲ್ಲಿ ನಾವು ಪ್ರಮುಖ ನಿರ್ಧಾರಕರಲ್ಲ. ಪಂಜಾಬ್, ಛತ್ತೀಸ್​ಗಡ, ರಾಜಸ್ಥಾನ ಮತ್ತು ಪುದುಚೇರಿಯಲ್ಲಿ ನಾವೇ ನಿರ್ಧಾರಕರು. ಆದರೆ, ಸರ್ಕಾರ ನಡೆಸುವುದು ಬೇರೆ, ಸರ್ಕಾರ ಬೆಂಬಲಿಸುವುದು ಬೇರೆ” ಎಂದು ಹೇಳಿದರೆಂದು ಮಾಧ್ಯಮಗಳಲ್ಲಿ ವರದಿಯಾಯಿತು.

ಮಹಾರಾಷ್ಟ್ರ ರಾಜ್ಯ ಇಡೀ ದೇಶದಲ್ಲಿ ಕೊರೋನಾದಿಂದ ಅತಿ ಹೆಚ್ಚು ಬಾಧಿತವಾಗಿದೆ. ಇಲ್ಲಿ ಬರೋಬ್ಬರಿ 55 ಸಾವಿರ ಸೋಂಕು ಪ್ರಕರಣಗಳು ಈವರೆಗೆ ದಾಖಲಾಗಿವೆ. ಸಾವಿನ ಸಂಖ್ಯೆಯೂ ಇಲ್ಲಿಯೇ ಹೆಚ್ಚು. ಕರ್ನಾಟಕದಲ್ಲಿರುವ ಅರ್ಧದಷ್ಟು ಕೊರೋನಾ ಪ್ರಕರಣಗಳು ಮಹಾರಾಷ್ಟ್ರದಿಂದ ವಲಸೆ ಬಂದವರಿಂದಲೇ ಆಗಿವೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಈ ಸರ್ಕಾರ ಸಮರ್ಪಕವಾಗಿ ಕ್ರಮ ಕೈಗೊಳ್ಳುತ್ತಿದ್ದರೂ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ ಎಂದು ಅನುಕಂಪ ತೋರಿದ್ಧಾರೆ. ವಿಪಕ್ಷ ಬಿಜೆಪಿ ಸೇರಿದಂತೆ ಇನ್ನೂ ಕೆಲವರು ಮಹಾರಾಷ್ಟ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಕ್ಷೇಪಿಸಿದ್ದಾರೆ.

First published: May 27, 2020, 4:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories