Covid 19: ಈಗಾಗಲೇ ಕೋವಿಡ್ನಿಂದಾಗಿ ಅನೇಕರು ತಮ್ಮ ಹತ್ತಿರದ ಸಂಬಂಧಿಕರನ್ನು ಮತ್ತು ಮನೆಯವರನ್ನು ಕಳೆದುಕೊಂಡು ದುಃಖದಲ್ಲಿದ್ದರೆ, ಇನ್ನೂ ಕೆಲ ಜನರು ಕೋವಿಡ್ ಅಸ್ತ್ರ ಬಳಸಿಕೊಂಡು ದುಡ್ಡು ಮಾಡಲು ಹೊರಟಿರುವ ಘಟನೆಯೊಂದು ತಮಿಳುನಾಡಿನ ಮಧುರೈಯಲ್ಲಿ ನಡೆದಿದೆ.ಮಧುರೈ ನಗರದಲ್ಲಿರುವಂತಹ ಒಂದು ಎನ್‌ಜಿಒ ಒಂದು ವರ್ಷದ ಮಗುವನ್ನು ಬೇರೆ ದಂಪತಿಗೆ ದುಡ್ಡಿಗೆ ಮಾರಿಕೊಂಡು ಆ ಮಗುವಿನ ತಾಯಿಗೆ ಮಗು ಕೋವಿಡ್ನಿಂದಾಗಿ ಮೃತಪಟ್ಟಿದೆ ಎಂದು ಸುಳ್ಳು ಹೇಳಿರುವ ಘಟನೆ ತಡವಾಗಿ ಬೆಳೆಕಿಗೆ ಬಂದಿದ್ದು, ಪೊಲೀಸರು ಮಗುವನ್ನು ರಕ್ಷಿಸಿದ್ದು ಎನ್‌ಜಿಒ ನಿರ್ದೇಶಕ ಮಾತ್ರ ಪೊಲೀಸರಿಗೆ ವಿಷಯ ತಿಳಿದಿದೆ ಎಂದು ತಿಳಿದು ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಪೊಲೀಸರು ಆತನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ತನ್ನ ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬಳನ್ನು ಅವಳ ಮೂರೂ ಮಕ್ಕಳ ಸಮೇತವಾಗಿ ಇದ್ದಾಯಂ ಟ್ರಸ್ಟ್‌ಗೆ ಕಾರ್ಯಕರ್ತ ಅಜರುದ್ಧೀನ್ ಎನ್ನುವವರು ಸೇರಿಸಿದ್ದರು. ಆದರೆ ಜೂನ್ 20ಕ್ಕೆ ಆಕೆಯ ಒಂದು ವರ್ಷದ ಮಗುವನ್ನು ತೆಗೆದುಕೊಂಡು ಹೋಗಿರುವ ವಿಚಾರ ಅಜರುದ್ಧೀನ್ ಗೆ ತಿಳಿಸುತ್ತಾಳೆ.
ಆನಂತರ ಅಜರುದ್ಧೀನ್ ಅವರು ಎನ್‌ಜಿಒ ನಿರ್ದೇಶಕ ಶಿವಕುಮಾರ್ ಅವರನ್ನು ವಿಚಾರಿಸಿದಾಗ ಮಗುವಿಗೆ ಕೋವಿಡ್- 19 ವೈರಸ್ ತಗುಲಿರುವ ಕಾರಣ ಮಗುವನ್ನು ರಾಜಾಜಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿಲಾಗಿದೆ ಎಂದು ಹೇಳುತ್ತಾರೆ. ಆದರೆ ಮಂಗಳವಾರದಂದು ಅಜರುದ್ಧೀನ್ ಅವರಿಗೆ ಮಗು ಆಸ್ಪತ್ರೆಯಲ್ಲಿ ತೀರಿಕೊಂಡಿದ್ದು, ಅದನ್ನು ತಾತನೇರಿ ರುದ್ರಭೂಮಿಯಲ್ಲಿ ಅಂತಿಮ ಕ್ರಿಯೆ ಮಾಡಲಾಗಿದೆ ಎಂದು ತಿಳಿಸಲಾಗುತ್ತದೆ. ಈ ವಿಷಯದ ಕುರಿತು ಅನುಮಾನಸ್ಪದವಾಗಿ ಕಂಡ ಸಂಗತಿಗಳನ್ನು ಅಜರುದ್ಧೀನ್ ಸರ್ಕಾರಿ ಆಸ್ಪತ್ರೆಗೆ ಹೋಗಿ ಆ ದಿನಾಂಕದಂದು ಯಾವುದಾದರೂ ಮಗುವನ್ನು ದಾಖಲಿಸಿದ ಬಗ್ಗೆ ಮಾಹಿತಿ ಕೇಳಿದಾಗ ಅಲ್ಲಿ ಯಾವುದೇ ತರಹದ ದಾಖಲೆಗಳು ಇರುವುದಿಲ್ಲ.
ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಬಗ್ಗೆ ಯಾವುದೇ ಮಾಹಿತಿ ದೊರಕದ ಕಾರಣ ಗೊಂದಲಕ್ಕೀಡಾದ ಅಜರುದ್ಧೀನ್ ತಕ್ಷಣವೇ ಮಧುರೈ ಜಿಲ್ಲಾ ಕಲೆಕ್ಟರ್ ಅನೀಶ್ ಶೇಖರ್ ಗೆ ವಿಷಯ ತಿಳಿಸುತ್ತಾರೆ. ಆನಂತರ ಈ ದೂರನ್ನು ಕೂಲಂಕುಷವಾಗಿ ಪರಿಶೀಲಿಸಿ ವರದಿಯನ್ನು ಒಪ್ಪಿಸುವುದಾಗಿ ತನ್ನ ಕೆಳ ಅಧಿಕಾರಿಗಳಿಗೆ ಸೂಚಿಸುತ್ತಾರೆ. ತಕ್ಷಣವೇ ತಂಡವು ರುಧ್ರಭೂಮಿಗೆ ಭೇಟಿ ನೀಡಿ ಮಗುವಿನ ಅಂತ್ಯಕ್ರಿಯೆ ಮಾಡಿದ ಸ್ಥಳವನ್ನು ನೋಡುತ್ತಾರೆ. ಅಲ್ಲಿ ಯಾವುದೇ ಮಗು ಇಲ್ಲ ಎಂಬುದನ್ನು ಮನಗೊಂಡ ಅಧಿಕಾರಿಗಳು ವಿಚಾರಿಸಿದಾಗ ಮಗುವನ್ನು ದುಡ್ಡಿಗಾಗಿ ಜೂನ್ 13 ರಂದು ಇಸ್ಮಾಯಿಲ್‌ಪುರಂನಲ್ಲಿ ವಾಸವಾಗಿರುವ ದಂಪತಿಗೆ ಮಾರಿರುವ ವಿಷಯ ತಿಳಿದು ಬರುತ್ತದೆ.
ಇದಲ್ಲದೇ ಇನ್ನೊಂದು ಬೇರೆ ಹೆಣ್ಣು ಮಗುವನ್ನು ಸಹ ಇದ್ದಾಯಂ ಟ್ರಸ್ಟ್ನವರು ಇದೇ ಕಾರಣ ಹೇಳಿ ಕ್ರುಪ್ಪಯರಾಣಿ ಊರಿನಲ್ಲಿ ಬೇರೆ ದಂಪತಿಗೆ ಮಾರಿರುವ ಘಟನೆಯು ಸಹ ಪೊಲೀಸರಿಗೆ ಲಭ್ಯವಾಗುತ್ತದೆ. ಆ ಎನ್‌ಜಿಒ ಕಟ್ಟಡವನ್ನು ಖಾಲಿ ಮಾಡಿಸಿ ಅದರಲ್ಲಿ ಇರುವವರೆಲ್ಲರನ್ನೂ ಬೇರೆಡೆಗೆ ಸ್ಥಳಾಂತರಿಸಿ ಆ ಕಟ್ಟಡಕ್ಕೆ ಬೀಗ ಜಡಿಯಲಾಗಿದೆ. ಪೊಲೀಸರು ತಪ್ಪಿಸಿಕೊಂಡ ಎನ್‌ಜಿಒ ನಿರ್ದೇಶಕನನ್ನು ಹುಡುಕುವಲ್ಲಿ ನಿರತರಾಗಿದ್ದಾರೆ.