ಕೊರೋನಾ ಸೋಂಕಿಗೆ ಕಡಿಮೆ ‌ದರದಲ್ಲಿ ವೆಂಟಿಲೇಟರ್ ಆವಿಷ್ಕಾರ; ಧಾರವಾಡ ಕಾಲೇಜಿನ ಸಾಧನೆ

ದೊಡ್ಡ-ದೊಡ್ಡ ಆಸ್ಪತ್ರೆಗಳಿಗೆ ನಿಖರವಾದ ಕೃತಕವಾದ ಉಸಿರಾಟ ಒದಗಿಸುವ ವೆಂಟಿಲೇಟರ್‌ಗಳನ್ನು ಸಿದ್ಧಪಡಿಸುವ ಕಂಪನಿಗಳಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಏಕಾಏಕಿ ವೆಂಟಿಲೇಟರ್ ಲಭ್ಯತೆ ಇಲ್ಲ.

ಕಡಿಮೆ ದರದ ವೆಂಟಿಲೇಟರ್‌ ಆವಿಷ್ಕರಿಸಿರುವ ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿಗಳು.

ಕಡಿಮೆ ದರದ ವೆಂಟಿಲೇಟರ್‌ ಆವಿಷ್ಕರಿಸಿರುವ ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ಸಿಬ್ಬಂದಿಗಳು.

  • Share this:
ಧಾರವಾಡ (ಮೇ 23); ಕೊರೋನಾ ಮಹಾಮಾರಿಯ ಹೊಡೆತಕ್ಕೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಭಾರತದಲ್ಲೂ ಕೊರೋನಾ ಪ್ರಭಾವ ಕಡಿಮೆ ಏನಲ್ಲ. ಆದರೆ, ಸೋಂಕಿಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ದೇಶದಲ್ಲಿ ವೆಂಟಿಲೇಟರ್‌ಗಳ ಸಂಖ್ಯೆ ತೀರಾ ವಿರಳವಾಗಿದೆ. ಈ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿರುವ ಧಾರವಾಡದ ಇಂಜಿನೀಯರಿಂಗ್ ಕಾಲೇಜೊಂದು ಕಡಿಮೆ ಖರ್ಚಿನಲ್ಲಿ ವೆಂಟಿಲೇಟರ್ ಆವಿಷ್ಕಾರ ಮಾಡಿದೆ.

ಕೊರೋನಾ ವೈರಸ್ ಕಾರಣದಿಂದ ಕೃತಕ ಉಸಿರಾಟ ಒದಗಿಸುವ ವೆಂಟಿಲೇಟರ್‌ಗಳಿಗೆ ಇದೀಗ ಬಹು ಬೇಡಿಕೆ ಬಂದಿದೆ. ಆದರೆ ಬೇಡಿಕೆಗೆ ತಕ್ಕಂತೆ ವೆಂಟಿಲೇಟರ್‌ಗಳ ಲಭ್ಯತೆ ಇಲ್ಲ. ಅದರಲ್ಲೂ ಭಾರತದಲ್ಲಿ ಸೋಂಕಿತರೆಲ್ಲರಿಗೂ ವೆಂಟೆಲೇಟರ್ ಸೌಲಭ್ಯ ನೀಡೋದು ಅಸಾಧ್ಯದ ಮಾತೇ ಸರಿ. ಇದೇ ಕಾರಣಕ್ಕೆ ಅತಿ ಕಡಿಮೆ ಖರ್ಚಿನಲ್ಲಿ ವೆಂಟಿಲೇಟರ್ ನ್ನು ಧಾರವಾಡದ ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಆವಿಷ್ಕಾರ ಮಾಡಿದ್ದಾರೆ.

ಕಾಲೇಜಿನ ಪ್ರಾಧ್ಯಾಪಕ ಡಾ. ಎಂ.ಆರ್. ಕಪ್ಪಾಳಿ ಅವರು ತಮ್ಮ ಕಾಲೇಜುನಲ್ಲಿ ಲಭ್ಯವಿರೋ ವಸ್ತುಗಳನ್ನು ಬಳಸಿ ವಿಶಿಷ್ಟವಾದ ವೆಂಟಿಲೇಟರ್‌ನ್ನು ವಿನ್ಯಾಸ ಮಾಡಿದ್ದಾರೆ. ದೊಡ್ಡ-ದೊಡ್ಡ ಆಸ್ಪತ್ರೆಗಳಲ್ಲಿ ಇರುವ ಅತ್ಯಾಧುನಿಕ ತಂತ್ರಜಾನದ ವೆಂಟಿಲೇಟರ್‌ನಂತೆ ಇದಾಗದಿದ್ದರೂ ಉಸಿರಾಟದ ಸಮಸ್ಯೆಯಿಂದ ಇನ್ನೇನು ವ್ಯಕ್ತಿ ಸತ್ತೇ ಹೋಗುತ್ತಾನೆ ಎನ್ನುವ  ಸಂದರ್ಭದಲ್ಲಿ ಈ ವೆಂಟಿಲೇಟರ್ ಆತನ ಜೀವ ಉಳಿಸುವ ಸಾಧನವಾಗುವುದರಲ್ಲಿ ಸಂಶಯವೇ ಇಲ್ಲ. ಕಾಲೇಜಿನಲ್ಲಿಯೇ ಇರೋ ವಸ್ತುಗಳಿಂದ ತುಂಬ ಕಡಿಮೆ ವೆಚ್ಚದಲ್ಲಿ ಈ ಉಪಕರಣ ವಿನ್ಯಾಸಗೊಳಿಸಿದ್ದು ಜನಾತಾ ವೆಂಟಿಲೇಟರ್ ಎಂದು ಹೆಸರಿಡಲಾಗಿದೆ.

ಸಾಮಾನ್ಯ ಜನರ ಅನುಕೂಲಕ್ಕಾಗಿ ತಯಾರಿಸಲಾಗಿರೋ ಈ ಜನತಾ ವೆಂಟಿಲೇಟರ್ ತೀರಾ ಸರಳವಾಗಿ ಕೆಲಸ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಶ್ವಾಸಕೋಶದ ಸಮಸ್ಯೆ ಇರೋರಿಗೆ ಕೊರೋನಾ ಸೋಂಕು ತಗುಲಿದರೆ ಉಸಿರಾಡೋದೇ ಕಷ್ಟವಾಗಿ ಹೋಗುತ್ತದೆ. ಅಂಥವರೇ ಹೆಚ್ಚು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಹೀಗಾಗಿ ವೆಂಟೆಲೇಟರ್ ಗಳ ಅನಿವಾರ್ಯತೆ ಸಾಕಷ್ಟಿದೆ.

ಸೋಂಕಿತರಿಗೆ ಯಾಂತ್ರಿಕವಾಗಿ ಉಸಿರಾಟ ಮಾಡಿಸಲು ಇಂತಹ ವೆಂಟಿಲೇಟರ್ ಸಾಕಷ್ಟು ಪ್ರಯೋಜನಕಾರಿ. ಆದರೆ, ಈ ವೆಂಟಿಲೇಟರ್ ಅನ್ನು ಸ್ಥಳೀಯ ವಸ್ತುಗಳನ್ನು ಬಳಸುಕೊಂಡು ಆವಿಷ್ಕರಿಸಿದ್ದು ಅಚ್ಚರಿಯ ಸಂಗತಿ. ಕೇವಲ ಏಳು ಸಾವಿರ ರೂಪಾಯಿ ವೆಚ್ಚದಲ್ಲಿ ಇದನ್ನು ಸಿದ್ಧಗೊಳಿಸಬಹುದಾಗಿದೆ.

ಈ ವೆಂಟಿಲೇಟರ್ ವಿದ್ಯುತ್ ಚಾಲಿತವಾಗಿದ್ದರೂ ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆಯುಂಟಾದರೆ ಕೈಯಿಂದಲೂ ಇದನ್ನು ಆಪರೇಟ್ ಮಾಡೋ ಮೂಲಕ ಕೃತಕ ಉಸಿರಾಟದ ಪ್ರಕ್ರಿಯೆಯನ್ನು ಮುಂದುವರೆಸಬಹುದು.

ಮುಖ್ಯವಾಗಿ ಈ ವೆಂಟಿಲೇಟರ್ ನಲ್ಲಿ ಒಂದು ಗಾಳಿ ಚೀಲ ಇರುತ್ತದೆ. ಇದಕ್ಕೆ ಅಂಬು ಬ್ಯಾಗ್ ಎಂದು ವೈದ್ಯಕೀಯ ಭಾಷೆಯಲ್ಲಿ ಕರೆಯುತ್ತಾರೆ. ಈ ಚೀಲವನ್ನು ರೋಗಿಯ ಮೂಗಿಗೆ ಜೋಡಿಸಿರುತ್ತಾರೆ. ಈ ಚೀಲವನ್ನು ಒತ್ತಿದಾಗ ಶುದ್ಧ ಗಾಳಿ ರೋಗಿಯ ಶ್ವಾಸಕೋಶದಲ್ಲಿ ಹೋಗುತ್ತದೆ. ಒತ್ತಡ ತೆಗೆದಾಗ ಗಾಳಿ ಹೊರ ಹೋಗುತ್ತದೆ. ಕೈಯಿಂದಲೇ ಗಾಳಿ ಚೀಲ ಒತ್ತಬಹುದು. ಆದರೆ, ತುಂಬ ಹೊತ್ತು ಈ ಪ್ರಕ್ರಿಯೆ ಕೈಯಿಂದ ಸಾಧ್ಯವಿಲ್ಲ. ಹೀಗಾಗಿ ವಿದ್ಯುತ್ ಮೋಟಾರು, ಕಾಂಪ್ರೆಸ್ಸರ್ ಅಂತಹ ವಿಧಾನ ಬಳಸಿಕೊಳ್ಳಲಾಗಿದೆ.

ಜನತಾ ವೆಂಟಿಲೇಟರ್‌ಗೆ ಇಲೆಕ್ಟ್ರಿಕ್ ಮೋಟಾರನಿಂದ ವೇಗ ಕಡಿಮೆ ಮಾಡಲು ಸೈಕಲ್ ಗಾಲಿ ಮತ್ತು ಕಟ್ಟಿಗೆ ಪುಲ್ಲಿ ಬಳಸಲಾಗಿದೆ. ಇದರಿಂದ ತುಂಡು ತಟ್ಟೆಯನ್ನು ತಿರುಗಿಸಲಾಗುತ್ತದೆ. ಈ ತಟ್ಟೆಯ ವೃತ್ತಾಕಾರದ ಚಲನೆಯನ್ನು ಕ್ಯಾಮ್ ವ್ಯವಸ್ಥೆ ಬಳಸಿ ಹಿಂದೆ-ಮುಂದೆ ಹೋಗುವ ಚಲನೆಯಾಗಿ ಮಾರ್ಪಡಿಸಿ, ಗಾಳಿ ಚೀಲವನ್ನು ಒತ್ತಲಾಗುತ್ತದೆ. ವಿದ್ಯುತ್ ಕೈಕೊಟ್ಟಾಗ ಕೈಯಿಂದಲೇ ತಿರುಗಿಸಿ ಉಸಿರಾಟ ಕ್ರಿಯೆ ನಿಲ್ಲದಂತೆ ಮುಂದುವರೆಸುವ ಅವಕಾಶ ಸಹ ಇದರಲ್ಲಿ ಕಲ್ಪಿಸಲಾಗಿದೆ ಎನ್ನುವುದು ವಿಶೇಷ.

ದೊಡ್ಡ-ದೊಡ್ಡ ಆಸ್ಪತ್ರೆಗಳಿಗೆ ನಿಖರವಾದ ಕೃತಕವಾದ ಉಸಿರಾಟ ಒದಗಿಸುವ ವೆಂಟಿಲೇಟರ್‌ಗಳನ್ನು ಸಿದ್ಧಪಡಿಸುವ ಕಂಪನಿಗಳಿವೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಏಕಾಏಕಿ ವೆಂಟಿಲೇಟರ್ ಲಭ್ಯತೆ ಇಲ್ಲ.

ಆದ್ದರಿಂದ ಲಾಕ್‌ಡೌನ್ ಸಂದರ್ಭದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಈ ವಿಚಾರ ಬಂದು ಜನತಾ ವೆಂಟಿಲೇಟರ್ ವಿನ್ಯಾಸವನ್ನು ರೂಪಿಸಲಾಗಿದೆ ಅನ್ನೋ ಪ್ರಾಧ್ಯಾಪಕರು ಇದನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರಿಗೆ ಉಸಿರಾಟದ ತೊಂದರೆಯಾದರೆ ಬಳಸಿಕೊಳ್ಳುವಂತೆಯೂ ಸಲಹೆ ನೀಡಿದ್ದಾರೆ.

ಅಲ್ಲದೆ ಇದನ್ನು ಗ್ರಾಮೀಣದ ಪ್ರದೇಶದ ತಾಂತ್ರಿಕ ಕರ್ಮಿಗಳಾದ ಬಡಿಗರು, ಮೆಕ್ಯಾನಿಕ್‌ಗಳು ಹಾಗೂ ಇತರೆ ಕುಶಲಕರ್ಮಿಗಳು ಸಹ ಸ್ಥಳೀಯವಾಗಿ ಸಿಗೋ ವಸ್ತುಗಳನ್ನು ಬಳಸಿ ಸಿದ್ಧಪಡಿಸಬಹುದು.

ಒಟ್ಟಿನಲ್ಲಿ ಲಾಕ್‌ಡೌನ್‌ನಿಂದಾಗಿ ಕಾಲೇಜುಗಳು ಬಂದ್ ಆಗಿವೆ. ಆದರೆ, ಈ ನಡುವೆಯೂ ಸುಮ್ಮನೆ ಕೂರದೆ ಇಲ್ಲಿನ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯ ಡಾ. ಗೋಪಿನಾಥ್, ಪ್ರಾಧ್ಯಾಪಕ ಡಾ. ಎಂ.ಆರ್. ಕಪ್ಪಾಳಿ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಸೇರಿ ಜನತಾ ವೆಂಟಿಲೇಟರ್ ಆವಿಷ್ಕರಿಸಿದ್ದು ಸಂತಸದ ಸಂಗತಿಯೇ ಸರಿ.

ಇದನ್ನೂ ಓದಿ : ಜನರ ಭೇಟಿಯಿಲ್ಲದ ಕಬ್ಬನ್ ಪಾರ್ಕ್ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ ಕಬ್ಬನ್ ಪಾರ್ಕ್ ಸದ್ಯದ ಚಿತ್ರಣ...
First published: