Covid Warriors: 6 ತಿಂಗಳಿಂದ ರಜೆ ಇಲ್ಲ, ಗುಡ್ಡಗಾಡು ಪ್ರದೇಶದಲ್ಲಿ ಕೋವಿಡ್ ವಾರಿಯರ್ ನಿಸ್ವಾರ್ಥ ಸೇವೆ!

ಮೈಕ್ರೋಬಯಾಲಜಿಸ್ಟ್​​ ಆಗಿರುವ ಜಿತೇಂದ್ರ ಅವರು ಕಳೆದ 6 ತಿಂಗಳಿನಿಂದ ಒಂದು ದಿನವೂ ರಜೆ ತೆಗೆದುಕೊಳ್ಳದೆ ದಿನಕ್ಕೆ 16 ಗಂಟೆಗಳ ಕಾಲ ದುಡಿಯುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಲ್ಮೋರ: ದೇಶ ಹಿಂದೆಂದು ಕಂಡರಿಯದ ಸಂಕಷ್ಟಕ್ಕೀಡಾಗಿದೆ. ದೇಶವಾಸಿಗಳು ಉಸಿರಾಡಲು ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಕೊರೋನಾ 2ನೇ ಅಲೆ ಅಬ್ಬರದಿಂದ ಜನರನ್ನು ರಕ್ಷಿಸಲು ಆರೋಗ್ಯ ಸಿಬ್ಬಂದಿಯೇ ಯೋಧರಾಗಿ ಹೋರಾಡುತ್ತಿದ್ದಾರೆ. ಭಯಂಕರ ಒತ್ತಡದಲ್ಲಿರುವ ದೇಶದ ಆರೋಗ್ಯ ವ್ಯವಸ್ಥೆ ಹಗಲಿರುಳೆನ್ನದೆ ಸೇವೆಗೆ ನಿಂತಿದೆ. ಅದೆಷ್ಟೋ ವೈದ್ಯರು, ನರ್ಸ್​​ಗಳ ನಿಸ್ವಾರ್ಥ ಸೇವೆಯಿಂದ ಇನ್ನೂ ಜನರ ಸಾವಿನ ದವಡೆಯಿಂದ ಪಾರಾಗುತ್ತಿದ್ದಾರೆ. ಉತ್ತರಾಖಂಡ್​ನಲ್ಲಿ ಕೊರೋನಾ ವಾರಿಯರ್​ ಒಬ್ಬರ ನಿಸ್ವಾರ್ಥ ಸೇವೆ ಸದ್ಯ ಎಲ್ಲರ ಮನೆ ಮಾತಾಗಿದೆ. ಅಲ್ಮೋರಾ ಎಂಬ ಗುಡ್ಡಗಾಡು ಪ್ರದೇಶದಲ್ಲಿ ಜಿತೇಂದ್ರ ದೇವರಾರಿ ಎಂಬ 33 ವರ್ಷ ಯುವಕ ಕೊರೋನಾ ವಾರಿಯರ್​​ ಆಗಿ ಸೇವೆ ಸಲ್ಲಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಮೈಕ್ರೋಬಯಾಲಜಿಸ್ಟ್​​ ಆಗಿರುವ ಜಿತೇಂದ್ರ ಅವರು ಕಳೆದ 6 ತಿಂಗಳಿನಿಂದ ಒಂದು ದಿನವೂ ರಜೆ ತೆಗೆದುಕೊಳ್ಳದೆ ದಿನಕ್ಕೆ 16 ಗಂಟೆಗಳ ಕಾಲ ದುಡಿಯುತ್ತಿದ್ದಾರೆ. ಅಲ್ಮೋರ ಗುಡ್ಡಗಾಡು ಪ್ರದೇಶದಲ್ಲಿ ಯಾವುದೇ ಖಾಸಗಿ ಕೋವಿಡ್​ ಟೆಸ್ಟ್​ ಸೆಂಟರ್​ ಇಲ್ಲ. ಇರುವುದು ಅಲ್ಮೋರ ಮೆಡಿಕಲ್​ ಕಾಲೇಜ್​ ಮಾತ್ರ. ಕಾಲೇಜ್​ನಲ್ಲಿ ಮೈಕ್ರೋಬಯಾಲಜಿಸ್ಟ್​​ ಆಗಿರುವ ಜಿತೇಂದ್ರ ಅವರೇ ಕೋವಿಡ್​ ಟೆಸ್ಟ್​ನ ಹೊಣೆ ಹೊತ್ತಿದ್ದಾರೆ. ಖುದ್ದು ಅವರೇ ಇಲ್ಲಿನ ಜನರ ಬಳಿ ಹೋಗಿ ಸ್ಯಾಂಪಲ್​ಗಳನ್ನು ಸಂಗ್ರಹಿಸಿ ತರುತ್ತಾರೆ.

ತಮ್ಮ ಲ್ಯಾಬ್​ನಲ್ಲಿ ನಿತ್ಯ ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸಿ ಕೋವಿಡ್​ ರಿಪೋರ್ಟನ್ನು ಸರ್ಕಾರಕ್ಕೆ ಸಲ್ಲಿಸುತ್ತಾರೆ. ಸೋಂಕಿತರಿಗೂ ಮಾಹಿತಿ ತಿಳಿಸಿ ಮುಂದಿನ ಆರೋಗ್ಯ ಸೇವೆಗೆ ನೆರವಾಗುತ್ತಾರೆ. ಕಳೆದ 6 ತಿಂಗಳುಗಳಿಂದಲೂ ನಿತ್ಯ ಸ್ಯಾಂಪಲ್​ ಸಂಗ್ರಹ, ಕೋವಿಡ್​ ಟೆಸ್ಟ್​ ಮಾಡುತ್ತಿದ್ದಾರೆ. ಇಡೀ ದಿನ ಜನರ ಬಳಿ ಹೋಗಿ ಸ್ಯಾಂಪಲ್​ ಸಂಗ್ರಹಿಸುತ್ತಾರೆ. ಅಂದಿನ ಸ್ಯಾಂಪಲ್​ಗಳನ್ನು ಎಷ್ಟೇ ಹೊತ್ತಾದರು ಅಂದೇ ಟೆಸ್ಟ್​ ಮಾಡಿ ರಿಪೋರ್ಟ್​​ ನೀಡುತ್ತಾರೆ. ಇದಕ್ಕಾಗಿ ಜಿತೇಂದ್ರ ಅವರಿಗೆ ಪ್ರತ್ಯೇಕ ವೇತನವೇನು ಸಿಗುತ್ತಿಲ್ಲ. ಆದರೂ ಜಿತೇಂದ್ರ ಕೊರೋನಾ ಸಂಕಷ್ಟದಲ್ಲಿ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ಜನರ ಸೇವೆಯಲ್ಲಿ ತೊಡಗಿದ್ದಾರೆ. ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಜಿತೇಂದ್ರ ಅವರಿಗೊಂದು ಸಲಾಂ ಹೇಳಲೇಬೇಕು
Published by:Kavya V
First published: