ಬೆಂಗಳೂರು (ಮೇ 15); ರಾಜ್ಯದಲ್ಲಿ ನಡೆದ ಲೋಕಸಭಾ ಹಾಗೂ ವಿಧಾನಸಭಾ ಕ್ಷೇತ್ರಗಳ ಉಪ- ಚುನಾವಣೆಯಲ್ಲಿ ಕಾರ್ಯನಿರ್ವಹಿಸಿದ 35 ಶಿಕ್ಷಕರುಗಳು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕರ್ನಾಟಕ ಶಿಕ್ಷಣ ಇಲಾಖೆ ಮೃತಪಟ್ಟ ಶಿಕ್ಷಕರ ಸಂಪೂರ್ಣ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ. ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ ವರದಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಬೆಳಗಾವಿ ಲೋಕಸಭಾ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಉಪ-ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಅನೇಕ ಶಿಕ್ಷಕರು ಕಾರ್ಯನಿರ್ವಹಿಸಿದ್ದರು. ಆದರೆ, ಈ ಪೈಕಿ 35 ಜನ ಶಿಕ್ಷಕರು ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.
ಎಸ್.ಎಸ್.ಭರಾಟೆ (42), ರವೀಂದ್ರನಾಥ್ ಬಶಟ್ಟಿ (58), ಸಂಗಪ್ಪ ವಾನೆ (43), ರಾಜೇಶ್ವರಿ (41), ಶ್ರೀದೇವಿ (52), ಪ್ರಶಾಂತ್ ಮಂತ್ರೆ (36), ಶಿವಕುಮಾರ್ ಭಾವು (53), ನರೇಂದ್ರ ಪಾಟೀಲ್ (47), ಪ್ರಕಾಶ್ ಲಕ್ಕಶೆಟ್ಟಿ (54), ಚಂದ್ರಶೇಖರ ಗಚ್ಚಿಮಠ (51) ಸೇರಿದಂತೆ 35 ಶಿಕ್ಷಕರ ಹೆಸರಿನ ಪಟ್ಟಿ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದೆ.
ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆದಿತ್ತು. ಆದರೆ, ಈ ಚುನಾವಣೆಯಲ್ಲೂ ಪಂಚಾಯತ್ ಚುನಾವಣಾ ಕೆಲಸಕ್ಕೆ ನಿಯೋಜನಗೊಂಡ 135 ವಿದ್ಯಾರ್ಥಿಗಳು, 'ಶಿಕ್ಷಾ ಮಿತ್ರರು' ಮತ್ತು ಚುನಾವಣಾ ಕರ್ತವ್ಯಕ್ಕೆ ನೇಮಕಗೊಂಡ ತನಿಖಾಧಿಕಾರಿಗಳು ಕೋವಿಡ್ ಕಾರಣದಿಂದಾಗಿ ಸಾವನ್ನಪ್ಪಿದ್ದರು. ಹಿಂದಿ ದಿನಪತ್ರಿಕೆ 'ಅಮರ್ ಉಜಲಾ' ಇತ್ತೀಚೆಗೆ ಆಘಾತಕಾರಿ ಸುದ್ದಿಯೊಂದನ್ನು ಭಿತ್ತರಿಸಿತ್ತು. ಈ ಸುದ್ದಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅಲಹಾಬಾದ್ ಹೈಕೋರ್ಟ್, ಉತ್ತರಪ್ರದೇಶ ಚುನಾವಣಾ ಆಯೋಗಕ್ಕೆ ಈ ಸಂಬಂಧ ವಿವರಣೆ ನೀಡುವಂತೆ ಶೋ-ಕಾಸ್ ನೋಟಿಸ್ ನೀಡಿತ್ತು ಎಂಬುದು ಉಲ್ಲೇಖಾರ್ಹ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿದ್ಧಾರ್ಥ್ ವರ್ಮಾ ಮತ್ತು ನ್ಯಾಯಮೂರ್ತಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ರಾಜ್ಯ ಚುನಾವಣಾ ಆಯೋಗಕ್ಕೆ, ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಪಂಚಾಯತ್ ಚುನಾವಣೆಯ ಉಳಿದ ಹಂತಗಳಲ್ಲಿ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶಿಸಿತು, ಇಲ್ಲದಿದ್ದರೆ ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿತ್ತು.
ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ರಾಜ್ಯ ಚುನಾವಣಾ ಆಯೋಗಕ್ಕೆ ಶೋ-ಕಾಸ್ ನೋಟಿಸ್ ನೀಡಿ, ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ವಿಫಲವಾಗಿದ್ದು ಏಕೆ? ಎಂದು ಪ್ರಶ್ನಿಸಿದೆ. ಅಂತಹ ಉಲ್ಲಂಘನೆಗಳಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.
"ಚುನಾವಣಾ ಕರ್ತವ್ಯದಲ್ಲಿರುವ ಜನರನ್ನು ಮಾರಕ ವೈರಸ್ ಸೋಂಕಿಗೆ ಒಳಗಾಗದಂತೆ ರಕ್ಷಿಸಲು ಪೊಲೀಸರು ಅಥವಾ ಚುನಾವಣಾ ಆಯೋಗವು ಏನನ್ನೂ ಮಾಡಿಲ್ಲ" ಎಂದು ಆದೇಶದಲ್ಲಿ ಟೀಕಿಸಲಾಗಿತ್ತು.
ತುರ್ತು ಪರಿಹಾರ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಿದ ನ್ಯಾಯಾಲಯ, "ಕೈಗೊಂಡ ಕ್ರಮಗಳು ಮತ್ತು ಅದರ ಸಮರ್ಪಕತೆಯ ಬಗ್ಗೆ ತೋರಿಸಲು ಯಾವುದೇ ದಾಖಲೆಗಳನ್ನು ಅಥವಾ ಸಾರ್ವಜನಿಕ ಪ್ರಕಟಣೆಗಳನ್ನು ಕೋರ್ಟ್ ಸಹಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ. ರಾಜ್ಯದಲ್ಲಿ 2020ರ ಅಂತ್ಯದ ವೇಳೆಗೆ ವೈರಸ್ ಪ್ರಭಾವ ದುರ್ಬಲಗೊಂಡ ನಂತರ ಮೈಮರೆತ ಸರ್ಕಾರ, ಪಂಚಾಯತ್ ಚುನಾವಣೆ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಿದೆ" ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತ್ತು.
ಭಾರತದಲ್ಲಿ ಕೊರೋನಾ ಆರ್ಭಟ:
ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಏಪ್ರಿಲ್ 4ರಿಂದ ದಿನ ಒಂದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 14ರಿಂದ ದಿನ ಒಂದರಲ್ಲಿ ಎರಡು ಲಕ್ಷಕ್ಕೂ ಹೆಚ್ಚು, ಏಪ್ರಿಲ್ 21ರಿಂದ ದಿನ ಒಂದರಲ್ಲಿ ಮೂರು ಲಕ್ಷಕ್ಕೂ ಹೆಚ್ಚು ಹಾಗೂ ಏಪ್ರಿಲ್ 30ರಿಂದ ದಿನ ಒಂದರಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಕೊರೊನಾ ಸೋಂಕು ಪೀಡಿತರಾಗುತ್ತಿದ್ದರು. ಈಗ ತುಸು ಕಡಿಮೆಯಾಗಿ ಮೂರುವರೆ ಲಕ್ಷದಷ್ಟು ಜನ ಸೋಂಕು ಪೀಡಿತರಾಗುತ್ತಿದ್ದಾರೆ.
ಶುಕ್ರವಾರ 3,43,144 ಪ್ರಕರಣಗಳು ಪತ್ತೆಯಾಗಿವೆ. ಡಿಸ್ಚಾರ್ಜ್ ಆದವರು 3,44,776 ಜನ. ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ 2,40,46,809ಕ್ಕೆ ಏರಿಕೆ ಆಗಿದೆ. ದಿನದಿಂದ ದಿನಕ್ಕೆ ಕೊರೋನಾ ರೋಗಕ್ಕೆ ಬಲಿ ಆಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಶುಕ್ರವಾರ 4,000 ಜನರು ಬಲಿ ಆಗಿದ್ದು ಈವರೆಗೆ ಕೊರೋನಾದಿಂದ ಸತ್ತವರ ಸಂಖ್ಯೆ 2,62,317ಕ್ಕೆ ಏರಿಕೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ