ಕೊರೋನಾಮುಕ್ತ ಮೈಸೂರಿಗೆ 2 ಹೆಜ್ಜೆ ಬಾಕಿ: ಇಂದಿನಿಂದ ಲಾಕ್‌ಡೌನ್‌ ಸಡಿಲಿಕೆ, ತಿಂಗಳ ನಂತರ ಬಾಗಿಲು ತೆರೆದ ಅಂಗಡಿಗಳು

ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನಸಂಚಾರ ಹೆಚ್ಚಳವಾಗಿದ್ದು, ರಸ್ತೆಗಿಳಿದ  ವಾಹನಗಳು ನಗರದ ಹಳೆ ಸ್ಥಿತಿಯನ್ನು ನೆನಪಿಸುತ್ತಿದ್ದವು. ಕೊರೋನಾ ಆತಂಕ ಬಿಟ್ಟು ರಸ್ತೆಗೆ ಬರುತ್ತಿರುವ ಜನರು ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಒಟ್ಟಾರೆ ಮೈಸೂರು ಸಂಪೂರ್ಣವಾಗಿ ಕೊರೋನಾ ಮುಕ್ತವಾದರೆ ಅದರ ಸಂಪೂರ್ಣ ಯಶಸ್ಸು ಜಿಲ್ಲಾಡಳಿತಕ್ಕೆ ಸಲ್ಲಬೇಕಿದೆ.

ಮೈಸೂರಿನಲ್ಲಿ ವ್ಯಾಪಾರ ವಹಿವಾಟು ಮತ್ತು ವಾಹನ ಸಂಚಾರ ಆರಂಭವಾಗಿರುವುದು.

ಮೈಸೂರಿನಲ್ಲಿ ವ್ಯಾಪಾರ ವಹಿವಾಟು ಮತ್ತು ವಾಹನ ಸಂಚಾರ ಆರಂಭವಾಗಿರುವುದು.

  • Share this:
ಮೈಸೂರು: ಕೊರೋನಾ ಹಾಟ್‌ಸ್ಪಾಟ್‌ ಆಗಿದ್ದ ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದಿನಿಂದ ಬಿಗ್ ರಿಲೀಫ್ ಸಿಕ್ಕಿದೆ. ಇಂದಿನಿಂದ ಮೈಸೂರಿನಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ನೀಡಲಾಗಿದೆ.

14 ದಿನದಿಂದ ಕೊರೋನಾ ಪಾಸಿಟಿವ್ ಪ್ರಕರಣ ಬಾರದ ಹಿನ್ನೆಲೆಯಲ್ಲಿ, ಪಾಲಿಕೆ ಗುರುತಿಸಿದ್ದ 91 ರಸ್ತೆಗಳ ಮೇಲಿನ ನಿರ್ಬಂಧ ತೆರವು ಮಾಡಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಈ ಆದೇಶ ಹೊರಡಿಸಿದ್ದಾರೆ. ನಗರದ 91 ರಸ್ತೆಗಳಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಅಗತ್ಯ ವಸ್ತು ಬಿಟ್ಟು ಬೇರೆ ವಸ್ತುಗಳ ಮಾರಾಟಕ್ಕೆ ನಿರ್ಬಂಧ ಹೇರಲಾಗಿತ್ತು. ಮೇ 3 ರಂದು ಆದೇಶ ಹೊರಡಿಸಿದ್ದ ಮೈಸೂರು ಮಹಾನಗರ ಪಾಲಿಕೆ ಆದೇಶ ವಾಪಸ್ ಪಡೆದಿರುವುದಾಗಿ ಪಾಲಿಕೆಯಿಂದ ಮತ್ತೊಂದು ಆದೇಶ ಹೊರಡಿಸಿದ್ದು, ಇಂದಿನಿಂದ ಮೈಸೂರಿನಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಮುಕ್ತ ಅವಕಾಶ ನೀಡಿದ್ದು, ಯಾವುದೇ ನಿರ್ಬಂಧವಿಲ್ಲದೆ ಅಗತ್ಯವಲ್ಲದ ವಸ್ತುಗಳ ವ್ಯಾಪಾರಕ್ಕೂ ಮುಕ್ತ ಅನುಮತಿ ನೀಡಿಲಾಗಿದೆ.

ಬೆಳಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ವ್ಯಾಪಾರಕ್ಕೆ ಅವಕಾಶ ನೀಡಿದ್ದು, ಸಲೂನ್, ಸ್ಪಾ, ಸಿನಿಮಾ ಮಂದಿರ, ಧಾರ್ಮಿಕ ಕೇಂದ್ರಗಳಿಗೆ ಕೇಂದ್ರ ಸರ್ಕಾರದ ಎಲ್ಲಾ ಲಾಕ್‌ಡೌನ್ ನಿರ್ಬಂಧಗಳು ಅನ್ವಯವಾಗಲಿದೆ. ಆಟೋ, ಟ್ಯಾಕ್ಸಿಗಳ ಸಂಚಾರಕ್ಕೂ ಅವಕಾಶ ಇಲ್ಲ. ಸರ್ಕಾರಿ ಸಾರಿಗೆ ವ್ಯವಸ್ಥೆ ಕೂಡ ಇಲ್ಲ, ಹೋಟೆಲ್‌ಗಳಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ.

ಇನ್ನು ರೆಡ್‌ಜೋನ್ ಪಟ್ಟಿಯಿಂದ ಹೊರಬರಲಿರುವ ಮೈಸೂರು ಜಿಲ್ಲೆ  ಆರೆಂಜ್‌ ಜೋನ್‌ನತ್ತ  ಹೆಜ್ಜೆ ಇಟ್ಟಿದೆ. ಮೈಸೂರಿನಲ್ಲಿ ಬಾಕಿ ಇರೋದು ಕೇವಲ 2 ಆಕ್ಟಿವ್ ಕೇಸ್​ಗಳು ಮಾತ್ರ. ಮೈಸೂರಿನಲ್ಲಿ ಪತ್ತೆಯಾಗಿದ್ದ 90 ಪಾಸಿಟಿವ್ ಕೇಸ್​ಗಳಲ್ಲಿ ಹೊರ ರಾಜ್ಯದ ಎರಡು ಕೇಸ್ ಸೇರಿ 88 ಮಂದಿ ಡಿಸ್ಚಾರ್ಜ್ ಆಗಿದ್ದಾರೆ.  14 ದಿನಗಳಿಂದ ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿಲ್ಲ. ಲಾಕ್‌ಡೌನ್ ನಿಯಮದ ಪ್ರಕಾರ ರೆಡ್‌ ಜೋನ್​ನಿಂದ ಆರೆಂಜ್ ಜೋನ್‌ಗೆ ಬಂದಿರುವ ಮೈಸೂರು ಜಿಲ್ಲೆ ರಾಜ್ಯ ಸರ್ಕಾರದ ಅಧಿಕೃತ ಘೋಷಣೆಗೆ ಕಾಯುತ್ತಿದೆ.

ಕೊರೋನಾ ಕೇಸ್‌ಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಲಾಕ್‌ಡೌನ್ ಸಹ ಸಡಿಲಿಕೆ ಮಾಡಿದ್ದು, ಜಿಲ್ಲೆಯ ಒಳಗೆ ವ್ಯಾಪಾರ ವಹಿವಾಟು ಹಾಗೂ ಸಂಚಾರಕ್ಕೆ ಮುಕ್ತ ಅವಕಾಶ ನೀಡಲಾಗಿದೆ. ಇಂದು ಅಥವಾ ನಾಳೆ ಆರೆಂಜ್ ‌ಜೋನ್ ಎಂದು ಘೋಷಣೆಯಾಗುವ ಸಾಧ್ಯತೆ ಇದ್ದು, ಬಹುತೇಕ ಕೊರೋನಾಮುಕ್ತದತ್ತ ಮೈಸೂರು ಹೊರಟಿದೆ.

ಇತ್ತ 4 ದಿನಗಳಿಂದ ಕೊರೋನಾ ಪತ್ತೆಯಾಗದ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ 3 ತಾಲ್ಲೂಕುಗಳಲ್ಲಿ ಕಂಟೈನ್ಮೆಂಟ್ ಜೋನ್‌ಗಳಲ್ಲಿಯೂ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ.  ಕಂಟೈನ್ಮೆಂಟ್ ಜೋನ್‌ಗಳಿಂದ ಮುಕ್ತವಾದ ಹಲವು ಪ್ರದೇಶಗಳು ಸಹಜ ಸ್ಥಿತಿಗೆ ಮರಳಿದೆ. ಮೈಸೂರು, ನಂಜನಗೂಡು, ಟಿ.ನರಸೀಪುರ ತಾಲ್ಲೂಕಿನ 44 ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಜೋನ್ ಎಂದು ಘೋಷಣೆಯಾಗಿತ್ತು. 14 ದಿನಗಳಿಂದ ಕೊರೋನಾ ಸುಳಿವಿಲ್ಲದ ಹಿನ್ನೆಲೆಯಲ್ಲಿ 23 ಪ್ರದೇಶಗಳು ಕಂಟೈನ್ಮೆಂಟ್ ಜೋನ್ ಮುಕ್ತ ಮಾಡಿದ್ದು, ಉಳಿದ 21 ಪ್ರದೇಶಗಳಲ್ಲಿ ಕಂಟೈನ್ಮೆಂಟ್ ಜೋನ್ ಆದೇಶ ಮುಂದುವರಿಸಲಾಗಿದೆ. ಕಂಟೈನ್ಮೆಂಟ್ ಜೋನ್ ಮುಕ್ತವಾದ ಪ್ರದೇಶಗಳಲ್ಲಿ ಎಲ್ಲ ರೀತಿಯ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.

ಇದನ್ನು ಓದಿ: ಒಂದು ದೇಶ-ಒಂದು ರೇಷನ್ ಕಾರ್ಡ್, ಕಿಸಾನ್ ಕ್ರೆಡಿಡ್ ಕಾರ್ಡ್ ಮೂಲಕ 2.5 ಕೋಟಿ ರೈತರಿಗೆ 2 ಲಕ್ಷ ಕೋಟಿ ರಿಯಾಯಿತಿ ಸಾಲ; ನಿರ್ಮಲಾ ಸೀತಾರಾಮನ್

ಮೈಸೂರು ನಗರದಲ್ಲೂ ಸಹ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ್ದು, ನಗರದ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಆರಂಭವಾದ್ದರಿಂದ ವ್ಯಾಪಾರಸ್ಥರ ಮುಖದಲ್ಲಿ ಸಂತಸ ತಂದಿದೆ. ಇಂದಿನಿಂದ ವ್ಯಾಪಾರ ಆರಂಭಿಸಿದ ವ್ಯಾಪಾರಸ್ಥರು, ಅಂಗಡಿ ಮುಂಗಟ್ಟು ತೆರೆದು ಶುಚಿಗೊಳಿಸಿದರು. ನಗರದ ಪ್ರಮುಖ ವಾಣಿಜ್ಯ ರಸ್ತೆಗಳಲ್ಲಿ ಜನಸಂಚಾರ ಹೆಚ್ಚಳವಾಗಿದ್ದು, ರಸ್ತೆಗಿಳಿದ  ವಾಹನಗಳು ನಗರದ ಹಳೆ ಸ್ಥಿತಿಯನ್ನು ನೆನಪಿಸುತ್ತಿದ್ದವು. ಕೊರೋನಾ ಆತಂಕ ಬಿಟ್ಟು ರಸ್ತೆಗೆ ಬರುತ್ತಿರುವ ಜನರು ತಮಗೆ ಬೇಕಾದ ವಸ್ತುಗಳ ಖರೀದಿಯಲ್ಲಿ ತೊಡಗಿದ್ದಾರೆ. ಒಟ್ಟಾರೆ ಮೈಸೂರು ಸಂಪೂರ್ಣವಾಗಿ ಕೊರೋನಾ ಮುಕ್ತವಾದರೆ ಅದರ ಸಂಪೂರ್ಣ ಯಶಸ್ಸು ಜಿಲ್ಲಾಡಳಿತಕ್ಕೆ ಸಲ್ಲಬೇಕಿದೆ.
First published: