ಶಿವಮೊಗ್ಗ (ಏ. 28): ಕೊರೋನಾ ಮಹಾಮಾರಿ ರೈತರ ಪಾಲಿಗೆ ಅಕ್ಷರಶಃ ಯಮ ಸ್ವರೂಪಿಯಾಗಿದ್ದಾನೆ. ಕೊರೋನಾ ಭೀತಿಯಿಂದ ದೇಶವೇ ಲಾಕ್ ಡೌನ್ ಆಗಿದೆ. ಹೀಗಾಗಿ, ರೈತರು ತಾವು ಬೆಳೆದ ಬೆಳೆಗಳನ್ನು ಬೇರೆ ಬೇರೆ ರಾಜ್ಯಗಳಿಗೆ, ಜಿಲ್ಲೆಗಳಿಗೆ ಸಾಗಿಸಲಾಗದೇ ಪರಿತಪಿಸುತ್ತಿದ್ದಾರೆ. ಇದರಿಂದ ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಬೆಳೆಯುವ ಅಡಿಕೆ ಬೆಳೆಗಾರರಿಗೂ ಸಂಕಷ್ಟ ಎದುರಾಗಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಅಡಿಕೆ ಬೆಳೆಯುವ ಜಿಲ್ಲೆಗಳಲ್ಲಿ ಶಿವಮೊಗ್ಗ ಸಹ ಒಂದು. ಕೊರೋನಾ ಲಾಕ್ ಡೌನ್ ಆಗುವುದಕ್ಕಿಂತ ಮುಂಚೆ, ಅಡಿಕೆ ಧಾರಣೆ ದಿನೇದಿನೆ ಏರಿಕೆಯಾಗುತ್ತಿತ್ತು. 43 ಸಾವಿರಕ್ಕೆ ಅಡಿಕೆ ದರ ಏರಿಕೆಯಾಗಿತ್ತು. ಆದರೆ, ಏಕಾಏಕಿ ಲಾಕ್ ಡೌನ್ ಮಾಡಿದ ದಿನದಿಂದ ಇಂದಿನವರೆಗೆ ಜಿಲ್ಲೆಯ ಯಾವುದೇ ಎಪಿಎಂಸಿ ಮಾರುಕಟ್ಟೆಯಲ್ಲಿ ಅಡಿಕೆ ವ್ಯಾಪಾರ ನಡೆಯುತ್ತಿಲ್ಲ. ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದು ರೈತರಿಗೆ ಸೇರಿದಂತೆ ವರ್ತಕರಿಗೆ ಸ್ವಲ್ಪ ಮಟ್ಟಿನ ಹೊಡೆದ ಕೊಟ್ಟಿದೆ.
![]()
ಶಿವಮೊಗ್ಗದ ಮ್ಯಾಮ್ಕೋಸ್
ಇದನ್ನೂ ಓದಿ: ಕೊರೋನಾದಿಂದ ಸಂಕಷ್ಟ ಎದುರಾಗಿದೆ, ಜಿಎಸ್ಟಿಯನ್ನು ಆಯಾ ರಾಜ್ಯಗಳಿಗೆ ಬಿಟ್ಟುಕೊಡಿ; ಮೋದಿಗೆ ಸಿಎಂಗಳ ಆಗ್ರಹ
ಶಿವಮೊಗ್ಗದ ಅಡಿಕೆಗೆ ಮಾರುಕಟ್ಟೆ ಇರುವುದು ಉತ್ತರ ಭಾರತದಲ್ಲೇ. ಸ್ಥಳೀಯ ವರ್ತಕರು ಇಲ್ಲಿ ಖರೀದಿ ಮಾಡಿ, ನಂತರ ಉತ್ತರ ಭಾರತದ ಗುಟ್ಕಾ ಕಂಪನಿಗಳಿಗೆ ಮಾರಾಟ ಮಾಡುತ್ತಿದ್ದರು. ಈಗ ಉತ್ತರ ಭಾರತದ ಎಲ್ಲಾ ಗುಟ್ಕಾ ಕಂಪನಿಗಳು ಮುಚ್ಚಿರುವುದರಿಂದ ಅಡಿಕೆ ವ್ಯಾಪಾರ ಸಂಪೂರ್ಣವಾಗಿ ಸ್ಥಗಿತವಾಗಿದೆ. ಸ್ಥಳೀಯ ರೈತರಿಂದ ಅಡಕೆ ಖರೀದಿ ಮಾಡಲು ವರ್ತಕರು ಸ್ವಲ್ಪ ಯೋಚನೆ ಮಾಡುತ್ತಿದ್ದಾರೆ. ಎಷ್ಟು ಬೆಲೆ ಕೊಟ್ಟು ಖರೀದಿ ಮಾಡಬೇಕು ಎಂಬ ಬಗ್ಗೆ ಅವರಲ್ಲಿ ಆತಂಕವಿದೆ. ಅಲ್ಲದೆ, ಕೊರೋನಾ ಇರುವುದರಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಗುಟ್ಕಾ ಮಾರಾಟಕ್ಕೆ ತಡೆ ಹಿಡಿಯಲಾಗಿದೆ. ಇದರ ಜೊತೆಗೆ ಗುಟ್ಕಾ ಸ್ಥಗಿತಗೊಳಿಸುತ್ತಾರೆ ಎಂಬ ವದಂತಿ ಸಹ ಹಬ್ಬಿದೆ.
ಹೀಗಾಗಿ, ಅಡಿಕೆ ಖರೀದಿಗೆ ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ. ಇನ್ನು ಶಿವಮೊಗ್ಗ ಎಪಿಎಂಸಿ ಮಾರುಕಟ್ಟೆಯಲ್ಲಿ ಪ್ರತಿ ವರ್ಷ 8 ಲಕ್ಷ ಚೀಲ ಅಡಿಕೆ ವ್ಯಾಪಾರ ಆಗುತ್ತದೆ. ಈ ಬಾರಿ ಫೆಬ್ರವರಿ ತಿಂಗಳಲ್ಲಿ ಅಡಕೆ ಧಾರಣೆ ಏರಿಕೆಯಾಗಿತ್ತು. ಈ ವೇಳೆ 50 ಸಾವಿರ ಚೀಲ ಅಡಕೆ ಮಾರಾಟವಾಯಿತು. ಇನ್ನೂ ಬೆಲೆ ಹೆಚ್ಚಾಗಬಹುದು ಎಂದು ರೈತರು ಸ್ವಲ್ಪ ಅಡಕೆ ಹಾಗೇ ಇಟ್ಟುಕೊಂಡರು. ಆದರೆ, ಲಾಕ್ ಡೌನ್ ಆದ ಕಾರಣ, ಈಗ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶೇಕಡಾ 30 ರಷ್ಟು ಅಡಕೆ ಇನ್ನು ಸಹ ರೈತರ ಬಳಿ ಇದೆ. ಅದೇ ರೀತಿ ವರ್ತಕರ ಮಂಡಿಗಳಲ್ಲಿ ಸಹ ಅಡಕೆ ಸ್ಟಾಕ್ ಇದೆ. ವರ್ತಕರು, ಅಡಕೆ ಸಹಕಾರ ಸಂಘ, ಬ್ಯಾಂಕ್ ಗಳು ಅಡಕೆ ಬೆಳೆಗಾರರಿಗೆ ಹಣಕಾಸಿನ ಸಹಾಯವನ್ನು ಮಾಡುತ್ತಿವೆ. ಆದರೆ, ಇದೇ ಬೆಲೆ ಮುಂದೆ ಸಿಗುತ್ತಾ ಎಂಬ ಅನುಮಾನಗಳು ರೈತರು ಸೇರಿದಂತೆ ವರ್ತಕರನ್ನು ಕಾಡುತ್ತಿವೆ.
ಇದನ್ನೂ ಓದಿ: ವಿಶ್ವಾದ್ಯಂತ 30 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೋನಾ; ಅಮೆರಿಕವೊಂದರಲ್ಲೇ 10.10 ಲಕ್ಷ ಸೋಂಕಿತರು
ಇನ್ನು, ಎಪಿಎಂಸಿಯಲ್ಲಿ ಅಡಿಕೆ ಚೀಲದ ಹಮಾಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಹ ಬೀದಿಗೆ ಬಿದ್ದಿದ್ದಾರೆ. ವ್ಯಾಪಾರವೇ ಇಲ್ಲದ ಕಾರಣ ಅವರಿಗೂ ಕೂಲಿ ಕೆಲಸ ಸಹ ಇಲ್ಲವಾಗಿದೆ. ದಿನಸಿ ಲೋಡ್ ಗಳು ಬರುತ್ತಿದ್ದು, ಅದನ್ನು ಲಾರಿಗಳಿಂದ ಗೋದಾಮಿಗೆ ಇಳಿಸುವ ಕೆಲಸ ಮಾಡಿ ಹಮಾಲಿಗಳು ಜೀವನ ನಡೆಸುತ್ತಿದ್ದಾರೆ. ಅಡಕೆ ಬೇಗ ಹಾಳಾಗುವುದಿಲ್ಲ ಎಂಬ ಒಂದು ಅಂಶ ರೈತರಿಗೆ ವರವಾಗಿದೆ ಎಂಬುದು ಬಿಟ್ಟರೆ ಸಂಕಷ್ಟ ಕಟ್ಟಿಟ್ಟ ಬುತ್ತಿಯಾಗಿದೆ. ಉತ್ತರ ಪ್ರದೇಶಕ್ಕೆ ಅಡಕೆ ಸಾಗಾಣಿಕೆಗೆ ಅವಕಾಶ ಸಿಗುವವರೆಗೂ ಜಿಲ್ಲೆಯ ಅಡಿಕೆ ಬೆಳೆಗಾರರ ಆತಂಕ ದೂರವಾಗುವುದಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ