ನವದೆಹಲಿ(ಮೇ 01): ಮೇ 3ರಿಂದ ಮತ್ತೆ ಎರಡು ವಾರ ಕಾಲ ಲಾಕ್ ಡೌನ್ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಮೇ 17ರವರೆಗೂ ಲಾಕ್ ಡೌನ್ ಮುಂದುವರಿಯಲಿದೆ. ಈ ಮೂರನೇ ಹಂತದ ಲಾಕ್ ಡೌನ್ ಅವಧಿಯಲ್ಲಿ ನಿಯಮಾವಳಿಗಳು ತುಸು ಭಿನ್ನವಾಗಿರಲಿವೆ. ಈ ನಿಯಮಾವಳಿಗಳೇನು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ನೀಡಿದೆ. ಅದರಂತೆ ಹಸಿರು ವಲಯದ ಪಟ್ಟಿಯಲ್ಲಿರುವ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಆರೆಂಜ್ ಜೋನ್ನ ಪಟ್ಟಿಯಲ್ಲಿರುವ ಪ್ರದೇಶಗಳಿಗೂ ವಿನಾಯಿತಿಗಳನ್ನು ಕಲ್ಪಿಸಲಾಗಿದೆ. ಆದರೆ ರೆಡ್ ಜೋನ್ನಲ್ಲಿರುವ ಪ್ರದೇಶಗಳಲ್ಲಿ ಕಠಿಣ ನಿಯಮಗಳು ಮುಂದುವರಿಯಲಿವೆ.
ಕೊರೋನಾ ಸೋಂಕು ಹೆಚ್ಚು ವ್ಯಾಪಿಸುವ ಅಪಾಯದಲ್ಲಿರುವ ಸೂಕ್ಷ್ಮ ಪ್ರದೇಶಗಳನ್ನು ಕಂಟೈನ್ಮೆಂಟ್ ಜೋನ್ ಎಂದು ಪರಿಗಣಿಸಲಾಗಿದೆ. ಇಂಥ ಕಂಟೈನ್ಮೆಂಟ್ ವಲಯಗಳನ್ನು ಆಯಾ ನಗರ ಅಥವಾ ಜಿಲ್ಲಾಡಳಿತಗಳು ಗುರುತಿಸಬೇಕೆಂದು ಕೇಂದ್ರ ಗೃಹ ಸಚಿವಾಲಯ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಈ ಕಂಟೈನ್ಮೆಂಟ್ ಜೋನ್ನಲ್ಲಿ ಆರೋಗ್ಯ ಸೇತು ಮೊಬೈಲ್ ಆ್ಯಪ್ ಸಂಪೂರ್ಣವಾಗಿ ಅಳವಡಿಕೆಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪ್ರತೀ ಮನೆಗೂ ಹೋಗಿ ಪರಿಶೀಲನೆ ನಡೆಸಬೇಕು. ಈ ಸೂಕ್ಷ್ಮ ವಲಯದಲ್ಲಿ ಜನ ಸಂಚಾರಕ್ಕೆ ಕಡಿವಾಣ ಹಾಕಬೇಕು. ಹೊರಗಿನಿಂದ ಯಾರೂ ಒಳಗೆ ಬರದಂತೆ, ಅಥವಾ ಒಳಗಿಂದ ಯಾರೂ ಹೊರಗೆ ಹೋಗದಂತೆ ಎಚ್ಚರ ವಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
ಇದನ್ನೂ ಓದಿ: ರಾಜ್ಯದ 15 ಜಿಲ್ಲೆಗಳು, ಬೆಂಗಳೂರಿನ 15 ವಾರ್ಡ್ಗಳು ರೆಡ್ ಜೋನ್ನಲ್ಲಿ: ಇಲ್ಲಿದೆ ಪಟ್ಟಿ
ದೇಶವ್ಯಾಪಿ ವಿಮಾನ, ರೈಲು, ಮೆಟ್ರೋ, ಅಂತಾರಾಜ್ಯ ರಸ್ತೆ ಇತ್ಯಾದಿ ಸಂಚಾರ ಸ್ಥಗಿತ ನಿರ್ಧಾರ ಮುಂದುವರಿಯಲಿದೆ. ಹಾಗೆಯೇ, ಶಾಲೆ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳು ಇರುವುದಿಲ್ಲ. ಸಿನಿಮಾ ಹಾಲ್, ಮಾಲ್ಗಳು, ಹೊಟೆಲ್, ರೆಸ್ಟೋರೆಂಟ್ಗಳ ಬಂದ್ ಮುಂದುವರಿಯುತ್ತದೆ. ಜನಜಾತ್ರೆ ಸೇರುವ ಕಾರ್ಯಕ್ರಗಳು ನಿಷಿದ್ಧ. ಪೂಜಾ ಮಂದಿರಗಳಿಗೂ ಅವಕಾಶ ಇರುವುದಿಲ್ಲ. ಮೊದಲಿದ್ದ ಇವೆಲ್ಲ ನಿರ್ಬಂಧಗಳು ಮೇ 17ರವರೆಗೂ ಮುಂದುವರಿಯಲಿವೆ.
ಎಲ್ಲಾ ವಲಯಗಳಲ್ಲೂ ಸಂಜೆ 7ರಿಂದ ಬೆಳಗ್ಗೆ 7ರವರೆಗೆ ಅನಗತ್ಯ ಜನಸಂಚಾರವನ್ನು ನಿಷೇಧಿಸಿ. ಸ್ಥಳೀಯ ಆಡಳಿತಗಳು ಸಿಆರ್ಪಿಸಿ ಸೆಕ್ಷನ್ 144 ಬಳಸಿ ನಿಷೇಧಾಜ್ಞೆ ಜಾರಿಗೊಳಿಸಲಿ. 65 ವರ್ಷಕ್ಕಿಂತ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಇವರುಗಳು ಮನೆಯಿಂದ ಹೊರಗೆ ಬರದಂತೆ ಎಚ್ಚರ ವಹಿಸಿ ಎಂದು ಈ ಆದೇಶಪತ್ರದಲ್ಲಿ ತಿಳಿಸಲಾಗಿದೆ.
ಕೆಂಪು ವಲಯಗಳಲ್ಲಿ ಕಂಟೈನ್ಮೆಂಟ್ ಜೋನ್ ಅಲ್ಲದ ಇತರ ಪ್ರದೇಶಗಳಲ್ಲಿ ಸೈಕಲ್ ರಿಕ್ಷಾ, ಆಟೋರಿಕ್ಷಾ, ಟ್ಯಾಕ್ಸಿ, ಓಲಾ ಊಬರ್ ಕ್ಯಾಬ್ ಸೇವೆ, ಬಸ್ ಸೇವೆ, ಕ್ಷೌರದಂಗಡಿ, ಸ್ಪಾ, ಸಲೂನ್ಗಳನ್ನ ನಿಷೇಧಿಸಲಾಗಿದೆ.
ಇದನ್ನೂ ಓದಿ: ಹಳೆ ಶೈಲಿ ರಾಜಕಾರಣ, ಹೊಂದಾಣಿಕೆ ಮತ್ತು ಘನತೆ; ಕೊರೋನಾ ಬಿಕ್ಕಟ್ಟಿನ ನಡುವೆ ಬಿಎಸ್ವೈ ಸಿಎಂ ಸ್ಥಾನ ಭದ್ರಪಡಿಸಿಕೊಂಡ ಬಗೆ
ಕೆಂಪು ವಲಯದಲ್ಲಿ ಯಾವ್ಯಾವುದಕ್ಕೆ ಅವಕಾಶ?
* ಅನುಮಿಸಲಾದ ನಿರ್ದಿಷ್ಟ ಚಟುವಟಿಕೆಗೆ ಹೊರಗೆ ಸಂಚರಿಸಲು ಅವಕಾಶ ಇದೆ. ನಾಲ್ಕು ಚಕ್ರ ವಾಹಗಳಲ್ಲಿ ಡ್ರೈವರ್ ಸೇರಿ ಮೂವರಿಗೆ ಕೂರಲು ಅವಕಾಶ; ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿಗೆ ಅವಕಾಶ ಇಲ್ಲ.
* ಕೈಗಾರಿಕೆಗಳ ಕಾರ್ಯನಿರ್ವಹಣೆಗೆ ಅನುಮತಿ
* ಕೂಲಿ ಕಾರ್ಮಿಕರು ಸ್ಥಳದಲ್ಲೇ ಲಭ್ಯವಿದ್ದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅವಕಾಶ
* ಮಾಲ್ಗಳಂತಹ ದೊಡ್ಡ ಮಳಿಗೆಗಳನ್ನು ಹೊರತಪಡಿಸಿ ಎಲ್ಲಾ ರೀತಿಯ ಸಣ್ಣಪುಟ್ಟ ಅಂಗಡಿಗಳಿಗೆ ತೆರೆಯಲು ಅವಕಾಶ.
* ಇಕಾಮರ್ಸ್ ಕಂಪನಿಗಳು ಅಗತ್ಯ ವಸ್ತುಗಳನ್ನು ಮಾತ್ರ ಪೂರೈಸುವ ಅವಕಾಶ
* ಖಾಸಗಿ ಕಂಪನಿಗಳು ಶೇ. 33ರಷ್ಟು ಸಿಬ್ಬಂದಿಯೊಂದಿಗೆ ಕಚೇರಿಯಲ್ಲಿರಲು ಅನುಮತಿ.
* ರಕ್ಷಣೆ, ಆರೋಗ್ಯ, ಪೊಲೀಸ್, ಬಂದೀಖಾನೆ, ಅಗ್ನಿಶಾಮಕ ಇತ್ಯಾದಿ ಅಗತ್ಯ ಸೇವೆಗಳ ಇಲಾಖೆ ಹಾಗೂ ಎನ್ಸಿಸಿ, ಎನ್ವೈಕೆ ಇತ್ಯಾದಿಗಳ ಕಾರ್ಯನಿರ್ವಹಣೆಗೆ ಅನುಮತಿ
* ಗ್ರಾಮೀಣ ಭಾಗದಲ್ಲಿ ಔದ್ಯಮಿಕ ಮತ್ತು ಕಟ್ಟ ನಿರ್ಮಾಣ ಚಟುವಟಿಕೆಗಳಿಗೆ ಅನುಮತಿ.
* ಗ್ರಾಮೀಣ ಭಾಗದಲ್ಲಿ ಶಾಪಿಂಗ್ ಮಾಲ್ ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿ ಮುಂಗಟ್ಟುಗಳಿಗೆ ಅವಕಾಶ
* ಬ್ಯಾಂಕ್, ಸಹಕಾರಿ ಸಂಘ ಇತ್ಯಾದಿ ಹಣಕಾಸು ಸೇವೆ ಸಂಸ್ಥೆಗಳಿಗೆ ಅವಕಾಶ
ಆರೆಂಜ್ ಜೋನ್ನಲ್ಲಿ ಯಾವ್ಯಾವುದಕ್ಕೆ ಅವಕಾಶ:
* ರೆಡ್ ಜೋನ್ನಲ್ಲಿ ಅನುಮತಿಸಲಾಗಿರುವ ಎಲ್ಲಾ ಚಟುವಟಿಕೆಗಳಿಗೆ ಆರೆಂಜ್ ಜೋನ್ನಲ್ಲೂ ಅವಕಾಶ ಇರುತ್ತದೆ. ಅದರ ಜೊತೆಗೆ ಇನ್ನಷ್ಟು ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
* ಟ್ಯಾಕ್ಸಿ, ಕ್ಯಾಬ್ಗಳಲ್ಲಿ ಒಬ್ಬ ಚಾಲಕ ಮತ್ತು ಒಬ್ಬ ಪ್ರಯಾಣಿಕರಿಗೆ ಅವಕಾಶ
* ಅನುಮತಿಸಲಾದ ಚಟುವಟಿಕೆಗಾಗಿ ಅಂತರಜಿಲ್ಲಾ ಸಂಚಾರಕ್ಕೆ ಅನುಮತಿ
* ಖಾಸಗಿ ನಾಲ್ಕು ಚಕ್ರ ವಾಹನದಲ್ಲಿ ಡ್ರೈವರ್ ಸೇರಿ ಮೂವರಿಗೆ ಕೂರಲು ಅವಕಾಶ
* ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರಿಗೆ ಅನುಮತಿ
ಗ್ರೀನ್ ಜೋನ್ನಲ್ಲಿ ಯಾವ್ಯಾವುದಕ್ಕೆ ಅನುಮತಿ:
ದೇಶವ್ಯಾಪಿ ಸಾಮಾನ್ಯವಾಗಿ ವಿಧಿಸಲಾಗಿರುವ ನಿರ್ಬಂಧಗಳನ್ನ ಹೊರತುಪಡಿಸಿ ಉಳಿದೆಲ್ಲಾ ಚಟುವಟಿಕೆಗಳಿಗೆ ಗ್ರೀನ್ ಜೋನ್ನಲ್ಲಿ ಅನುಮತಿ ಕೊಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ