ದಾರಿ ತಪ್ಪಿ ಕರ್ನಾಟಕಕ್ಕೆ ಬಂದ ವೃದ್ಧನಿಗೆ ಊರ ದಾರಿ ತೋರಿಸಿತು ಲಾಕ್​ಡೌನ್

ಕರ್ನಾಟಕದಲ್ಲಿನ ಭಾಷೆ, ಜನ, ಜಾಗ ಎಲ್ಲವನ್ನ ನೋಡಿದ ಈತನಿಗೆ ಬುದ್ದಿ ಭ್ರಮಣೆಯಾದಂತಾಗಿದೆ. ಏನೂ ತೋಚದಂತಾಗಿ ನಂತರ ನಡೆದುಕೊಂಡು ಬರುವಾಗ ಕಾರೊಂದರ ಸಹಾಯದಿಂದ ಮೈಸೂರಿಗೆ ತಲುಪಿದ್ದಾನೆ

news18-kannada
Updated:May 21, 2020, 1:30 PM IST
ದಾರಿ ತಪ್ಪಿ ಕರ್ನಾಟಕಕ್ಕೆ ಬಂದ ವೃದ್ಧನಿಗೆ ಊರ ದಾರಿ ತೋರಿಸಿತು ಲಾಕ್​ಡೌನ್
ವೃದ್ದ ಕರಮ್‌ ಸಿಂಗ್
  • Share this:
ಮೈಸೂರು(ಮೇ 21): ಈ ಕೊರೋನಾ ಲಾಕ್​ಡೌನ್​​‌ನಿಂದಾಗಿ ಅದೆಷ್ಟೋ ಜನ ಕೆಲಸ ಕಳೆದುಕೊಂಡಿದ್ದಾರೆ. ಅದೇಷ್ಟೋ ಜನ ಬೀದಿಗೆ ಬಂದಿದ್ದಾರೆ, ಇನ್ನ ಕೆಲವರು ಬದುಕಿನ ಕಷ್ಟದ ದಿನಗಳನ್ನ ಈ ಲಾಕ್‌ಡೌನ್‌ನಲ್ಲಿ ನೋಡಿದ್ದಾರೆ. ಆದರೆ, ನೂರರಲ್ಲಿ ಒಂದರಂತೆ ಅಪರೂಪದ ಪ್ರಕರಣವೊಂದು ಮೈಸೂರಿನಲ್ಲಿ ನಡೆದಿದೆ. ದೇಶಕ್ಕೆ ಮಾರಕವಾದ ಲಾಕ್‌ಡೌನ್‌ ಮೈಸೂರಿನಲ್ಲಿ ವೃದ್ದರೊಬ್ಬರಿಗೆ ವರದಾನವಾಗಿದೆ. ಸಾಮಾನ್ಯ ಸ್ಥಿತಿಯಲ್ಲಿ ಬೀದಿಗೆ ಬಂದಿದ್ದು ಬದುಕು, ಲಾಕ್‌ಡೌನ್‌ನಿಂದಾಗಿ ಸರಿಹೋಗಿದೆ. ಕಳೆದುಕೊಂಡಿದ್ದ ಕುಟುಂಬ ಮತ್ತೆ ಸಿಕ್ಕಿದೆ. ಸತ್ತೇ ಹೋಗಿದ್ದಾರೆ ಅಂದುಕೊಂಡಿದ್ದ ಮಕ್ಕಳು ಆ ವೃದ್ದನನ್ನ ಮತ್ತೆ ನೋಡಿ ಸಂತಸದ ತುತ್ತತುದಿಯನ್ನೇರಿದ್ದಾರೆ. ಬೀದಿಯಲ್ಲಿ ಭಿಕ್ಷುಕನಾಗಿದ್ದ ಆ ವೃದ್ದನ ಬದುಕಿಗೆ ಲಾಕ್‌ಡೌನ್‌ ಬಂಗಾರದ ಬೆಳಕು ಚೆಲ್ಲಿದೆ. 

ಈತನ ಹೆಸರು ಕರಮ್‌ ಸಿಂಗ್. ಈತ ಮೂಲತಃ ಉತ್ತರ ಪ್ರದೇಶ ರಾಜ್ಯದ ಸಾರಂಗ್‌ಪುರ ಜಿಲ್ಲೆಯ ರಾಜ್‌ಪುರ ನಿವಾಸಿ. ಎಲ್ಲರಂತೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ 70 ವರ್ಷದ ಈ ವೃದ್ದನಿಗೆ ಇಬ್ಬರು ಮಕ್ಕಳಿದ್ದಾರೆ. ಚೋಟು ಹಾಗೂ ಸಂಜಾ ಹೆಸರಿನ ಇಬ್ಬರು ಮಕ್ಕಳಲ್ಲಿ ಸಂಜಾ ಹೆಸರಿನ ಹಿರಿಯ ಮಗನಿಗೆ ಮದುವೆ ಮಾಡಲು ನಿರ್ಧಾರ ಮಾಡ್ತಾನೆ. ಆದರೆ ಮದುವೆ ಬೇಕಾಗುವಷ್ಟು ಹಣ ಇವರ ಮನೆಯಲ್ಲಿ ಇರೋಲ್ಲ. ಅದೇನು ಯೋಚನೆ ಮಾಡಿದನೋ ಗೊತ್ತಿಲ್ಲ, ನೇರವಾಗಿ ಮಗನ ಮದವೆಗೆ ಬೇಕಾದ ಹಣ ದುಡಿಯೋಕೆ ಅಂತ ಮನೆಬಿಟ್ಟು ಬಂದ ಈ ಕರಮ್‌ ಸಿಂಗ್‌ ದಾರಿ ತಪ್ಪಿ ಉತ್ತರಪ್ರದೇಶದಿಂದ ಹರಿದ್ವಾರದ ರೈಲು ಹತ್ತಿದ್ದಾರೆ.

ಹರಿದ್ವಾರದಲ್ಲಿ ದಾರಿ ತಪ್ಪಿದ್ದೆನೆಂದು ತಿಳಿದಾಗ ವಾಪಸ್‌ ಉತ್ತರಪ್ರದೇಶಕ್ಕೆ ಹೋಗಲು ಮತ್ತೊಂದು ರೈಲು ಹತ್ತಿದ್ದಾಗ ಆತ ಮತ್ತೊಮ್ಮೆ ದಾರಿ ತಪ್ಪಿ ಬೆಂಗಳೂರಿಗೆ ಬಂದಿದ್ದಾನೆ. ಕರ್ನಾಟಕದಲ್ಲಿನ ಭಾಷೆ, ಜನ, ಜಾಗ ಎಲ್ಲವನ್ನ ನೋಡಿದ ಈತನಿಗೆ ಬುದ್ದಿ ಭ್ರಮಣೆಯಾದಂತಾಗಿದೆ. ಏನೂ ತೋಚದಂತಾಗಿ ನಂತರ ನಡೆದುಕೊಂಡು ಬರುವಾಗ ಕಾರೊಂದರ ಸಹಾಯದಿಂದ ಮೈಸೂರಿಗೆ ತಲುಪಿದ್ದಾನೆ. ಮೈಸೂರಿಗೆ ಬಂದು ಮೂರು ವರ್ಷ ಕಳೆಯುತ್ತಿದೆ.  ಮಗನ ಮದುವೆಗೆ ಹಣವಿರಲಿ ತನ್ನ ತುತ್ತು ಊಟಕ್ಕೂ ಭಿಕ್ಷೆ ಬೇಡುವ ಸ್ಥಿತಿಗೆ ಬಂದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ರಸ್ತೆ ರಸ್ತೆಯಲ್ಲೆ ಮಲಗಲಾರಂಭಿಸಿದ್ದಾನೆ.

ಹಂಪಿನಗರದ ಬಸ್‌ ನಿಲ್ದಾಣದಲ್ಲಿ ಮಲಗಿದ್ದ ಕರಮ್‌ಸಿಂಗ್‌ ಬಗ್ಗೆ ಪಾಲಿಕೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಕೊರೊನಾ ಲಾಕ್‌ಡೌನ್‌ ವೇಳೆ ನಿರ್ಗತಿಕರಿಗಾಗಿ ವಸತಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಗರದ ನಾಲ್ಕು ಕಡೆ ತೆರೆದಿದ್ದ ನಗರ ವಸತಿ ರಹಿತರಿಗೆ ಆಶ್ರಯ ಕೇಂದ್ರಕ್ಕೆ ಕರೆತರಲಾಗಿದೆ. ಅಂದಿನ ಕರಮ್ ಸಿಂಗ್ ಸ್ಥಿತಿ ನೋಡಿ ಅವರನ್ನ ನಿರ್ಗತಿಕರ ಕೇಂದ್ರದಲ್ಲಿ ಇಡಲು ಇಲ್ಲಿನ ಸ್ವಯಂ ಸೇವಕರೆ ಚಿಂತಿಸಿದ್ದರು. ನಂತರ ಎರಡು ತಿಂಗಳ ಕಾಲ ಅವರು ನಿರ್ಗತಿಕರ ಕೇಂದ್ರದಲ್ಲೆ ಇದ್ದರು.  ಈ ಕೇಂದ್ರದಲ್ಲಿ ಎಲ್ಲರ ಆರೋಗ್ಯ ವೃದ್ದಿ ಹಾಗೂ ಅವರ ಆತ್ಮಸ್ಥೈರ್ಯ ಹೆಚ್ಚಿಸಿಲು ಮಾಡಿದ ಸಾಮಾಜಿಕ ಹಾಗೂ ದೈಹಿಕ ಕಾರ್ಯಕ್ರಮಗಳು ಕರಮ್‌ಸಿಂಗ್‌ರನ್ನ ಮತ್ತೆ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಿತು.

ಅದೊಂದು ದಿನ ಹಾಡು ಹೇಳುತ್ತಿದ್ದ ಕರಮ್‌ಸಿಂಗ್‌ರನ್ನ ಗಮನಿಸಿ ಅವರ ಕೈಗೆ ಮೈಕ್‌ ಕೊಟ್ಟಾಗ ಎಲ್ಲರಿಗಿಂತ ಚೆನ್ನಾಗಿಯೆ ಹಾಡು ಹೇಳುತ್ತಿದ್ದರು. ಕೊನೆಗೆ ಅವರನ್ನ ಸಂಪೂರ್ಣ ಶುಚಿಗೊಳಿಸಿ ಮಾಹಿತಿ ಕೇಳಿದಾಗ ತನ್ನ ಹಿನ್ನೆಲೆ ಹೇಳಿದ್ದಾರೆ. ತಕ್ಷಣ ಪೊಲೀಸರ ಸಹಾಯದಿಂದ ಉತ್ತರಪ್ರದೇಶದಲ್ಲಿನ ಅವರ ಮಕ್ಕಳ ಸಂಪರ್ಕ ಹುಡುಕಿ ಅವರನ್ನ ವಿಡಿಯೋ ಕಾಲ್‌ನಲ್ಲಿ ಮಾತನಾಡಿಸಿದ್ದಾರೆ. ನಮ್ಮಪ್ಪ ಸತ್ತೇ ಹೋಗಿದ್ದಾರೆ ಅಂದುಕೊಂಡಿದ್ದ ಮಕ್ಕಳಿಗೆ ತಂದೆಯನ್ನ ನೋಡಿ ಅಚ್ಚರಿ ಜೊತೆ ಸಂತಸವಾಗಿದೆ.

ಇದನ್ನೂ ಓದಿ : ತೆಲಂಗಾಣದ ವಲಸೆ ಕಾರ್ಮಿಕರಿಗೆ ಸಹಾಯ ಮಾಡಿ ಮಾನವೀಯತೆ ಮೆರೆದ ಉಡುಪಿ ಯುವತಿ

ಅಂತಿಮವಾಗಿ ಲಾಕ್‌ಡೌನ್‌ನಲ್ಲಿ ವಲಯ ಕಚೇರಿ 6ರ ವ್ಯಾಪ್ತಿಯ ನಿರ್ಗತಿಕರ ಕೇಂದ್ರದ ಉಸ್ತುವಾರಿ ವಹಿಸಿದ್ದ ಕ್ರೆಡಿಟ್‌ ಐ ಸಂಸ್ಥೆ ಕರಮ್ ಸಿಂಗ್ ಅವರನ್ನ ಉತ್ತರ ಪ್ರದೇಶಕ್ಕೆ ಕಳುಹಿಸಲು ನಿರ್ಧಾರ ಮಾಡಿದೆ. ಇನ್ನೆರಡು ದಿನದಲ್ಲಿ ದೆಹಲಿಗೆ ತೆರಳುವ ರೈಲಿನಲ್ಲಿ ಕರಮ್ ‌ಸಿಂಗ್ ತನ್ನೂರಿಗೆ ಹಿಂದಿರುಗಲಿದ್ದಾರೆ. ದೇಶವೇ ಲಾಕ್‌ಡೌನ್‌ನಿಂದ ಪರಿತಪಿಸುತ್ತಿದ್ದರೆ, ಈ ಕರಮ್ ‌ಸಿಂಗ್ ಬಾಳಲ್ಲಿ ಮಾತ್ರ ಲಾಕ್‌ಡೌನ್‌ ವರದಾನವಾಗಿದೆ ಸಿಕ್ಕಿದೆ.
First published: May 21, 2020, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading