ಲಾಕ್ ಡೌನ್ ವೇಳೆ ಚುರುಕಾದ ರೈಲ್ವೆ ಕಾಮಗಾರಿಗಳು ; ಶಿವಮೊಗ್ಗದಲ್ಲಿ ರೈಲ್ವೆ ಸೇತುವೆ ಹಳಿಗಳ ಮರು ಜೋಡಣೆ

ಬೀರೂರು ಶಿವಮೊಗ್ಗ ವಿಭಾಗದ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ಸಂಖ್ಯೆ 86 ಅನ್ನು ಮರು ಹೊಂದಿಸುವ ಮೆಗಾ ಕೆಲಸವು ಏಪ್ರಿಲ್ ಕೊನೆಯ ವಾರದಲ್ಲಿ 7 ದಿನಗಳ ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿದೆ

ಸೇತುವೆ ಹಳಿಗಳ ಮರುಜೋಡಣೆ ಕೆಲಸ

ಸೇತುವೆ ಹಳಿಗಳ ಮರುಜೋಡಣೆ ಕೆಲಸ

  • Share this:
ಶಿವಮೊಗ್ಗ(ಮೇ.07): ಕೊರೋನಾ ಲಾಕ್​ ಡೌನ್ ಹಿನ್ನಲೆಯಲ್ಲಿ ದೇಶದಲ್ಲಿ ಎಲ್ಲೂ ಸಹ ರೈಲುಗಳು ಸಂಚಾರ ಮಾಡುತ್ತಿಲ್ಲ.  ಸಂಪೂರ್ಣವಾಗಿ ಸಾರ್ವಜನಿಕರಿಗೆ ರೈಲ್ವೆ ಸೇವೆಗಳು ಸ್ಥಗಿತಗೊಂಡಿವೆ. ಇದೇ ಸಮಯದಲ್ಲಿ ರೈಲ್ವೆ ಇಲಾಖೆ ಸಹ ಕಾಮಗಾರಿಗಳನ್ನು ಚುರುಕುಗೊಳಿಸಿದೆ. ದೇಶದಲ್ಲಿ ನೂರಾರು ರೈಲ್ವೆ ಕಾಮಗಾರಿಗಳು ಕೆಲಸಗಳನ್ನು ಲಾಕ್ ಡೌನ್ ಸಮಯದಲ್ಲಿ ಮಾಡಿಕೊಳ್ಳುತ್ತಿದೆ. ಶಿವಮೊಗ್ಗದಲ್ಲಿ ಸಹ ದಾಖಲೆಯ ಸಮಯದಲ್ಲಿ ರೈಲ್ವೆ ಸೇತುವೆ ಹಳಿಗಳ ಮರುಜೋಡಣೆ ಕಾರ್ಯ ಮಾಡಿದೆ.

ರೈಲು ಕಾರ್ಯಾಚರಣೆಯಲ್ಲಿ ಸುರಕ್ಷತೆಯು ಭಾರತೀಯ ರೈಲ್ವೆಗೆ ಅತ್ಯುನ್ನತವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಟ್ರ್ಯಾಕ್ ನಿರ್ವಹಣೆಯನ್ನು ಮುಂದುವರಿಸಲಾಗುತ್ತಿದೆ. ಬೀರೂರು ಶಿವಮೊಗ್ಗ ವಿಭಾಗದ ತುಂಗಾ ನದಿಗೆ ಅಡ್ಡಲಾಗಿ ಸೇತುವೆ ಸಂಖ್ಯೆ 86 ಅನ್ನು ಮರು ಹೊಂದಿಸುವ ಮೆಗಾ ಕೆಲಸವು ಏಪ್ರಿಲ್ ಕೊನೆಯ ವಾರದಲ್ಲಿ 7 ದಿನಗಳ ದಾಖಲೆಯ ಸಮಯದಲ್ಲಿ ಪೂರ್ಣಗೊಂಡಿದೆ. ತುಂಗಾ ನದಿಗೆ ಅಡ್ಡಲಾಗಿರುವ ಸೇತುವೆಯನ್ನು 1,800 ರ  ಉತ್ತರಾರ್ಧದಲ್ಲಿ ಮೈಸೂರು ರಾಜ್ಯ ರೈಲ್ವೆ ಮೀಟರ್ ಗೇಜ್ ರೈಲ್ವೆ ಮಾರ್ಗಕ್ಕಾಗಿ ನಿರ್ಮಿಸಿತ್ತು.

ಸುಮಾರು 350 ಮೀಟರ್ ಉದ್ದದ ಸೇತುವೆ ತಲಾ 18.30 ಮೀಟರ್ 15 ಸ್ಪ್ಯಾನ್​ಗಳನ್ನು ಹೊಂದಿದ್ದು ಮೀಟರ್ ಗೇಜ್ ಗುಣಮಟ್ಟದ್ದಾಗಿತ್ತು. 1994 ರಲ್ಲಿ ಈ ವಿಭಾಗವನ್ನು ಬ್ರಾಡ್ ಗೇಜ್​​ ಪರಿವರ್ತಿಸಿದಾಗ ಅದನ್ನು ಮರು ನಿರ್ಮಾಣ ಮಾಡಲಾಗಿತ್ತು. ಇದೀಗ ಲಾಕ್ ಡೌನ್ ಸಮಯವನ್ನು ಸದುಪಯೋಗ ಮಾಡಿಕೊಂಡಿರುವ  ರೈಲ್ವೆ ಇಲಾಖೆ  7 ದಿನಗಳ  ಅಲ್ವ ಅವಧಿಯಲ್ಲಿ ಅಧಿಕಾರಿಗಳು ಸೇರಿದಂತೆ  120 ಕಾರ್ಮಿಕರು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಸುರಕ್ಷತೆ ಮತ್ತು ಎಚ್ಚರಿಕೆಯಿಂದ 4 ಕ್ರೇನ್​ಗಳನ್ನು ಬಳಸಿ 20 ಅಡಿ ಎತ್ತರದಲ್ಲಿ ರೈಲ್ವೆ ಸೇತುವೆ ಹಳಿಗಳ ಮರು ಜೋಡಣೆ ಕಾರ್ಯ ನಡೆದಿದೆ.

ಇದನ್ನೂ ಓದಿ : 2021ರ ಮಾರ್ಚ್ ವೇಳೆಗೆ ಎತ್ತಿನಹೊಳೆ ಕಾಮಗಾರಿ ಮೊದಲ ಹಂತಕ್ಕೆ ಚಾಲನೆ; ಸಚಿವ ರಮೇಶ್ ಜಾರಕಿಹೊಳಿ

2018 ರಿಂದ 2020 ರ ಅವಧಿಯಲ್ಲಿ ಭದ್ರಾ, ತುಂಗಾ ಭದ್ರಾ ಹಾಗೂ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಎಲ್ಲ ಪ್ರಮುಖ ಮೂರು ರೈಲ್ವೆ ಸೇತುವೆಗಳ ಹಳಿಗಳ ಮರುಹೊಂದಿಸುವ ಕಾರ್ಯ ಪೂರ್ಣವಾಗಿದೆ. 5 ಕೋಟಿ ರೂ. ವೆಚ್ಚದಲ್ಲಿ ತುಂಗಾ ರೈಲ್ವೆ ಸೇತುವೆಯ ಹಳಿಗಳ ಮರು ಜೋಡಣೆ ಕಾರ್ಯ ನಡೆದಿದೆ ಎಂದು ನೈಋತ್ಯ ರೈಲ್ವೆ ವಿಭಾಗೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
First published: