K Annamalai – ದಿನ 21: ಹೊಸ ಆಲೋಚನೆಯ ನಾಯಕವರ್ಗ ಬೇಕಿದೆ; ಬನ್ನಿ, ನಾವೆಲ್ಲರೂ ನಾಯಕರಾಗೋಣ

ಈ ಸಂದರ್ಭದಲ್ಲಿ ನಮ್ಮ ದೇಶಕ್ಕೆ ನೈಜ ನಾಯಕರ ಕೊರತೆ ಇದೆ. ಹೊಸ ಚಿಂತನೆಯ, ಹೊಸ ಪ್ರವೃತ್ತಿಯ ನಾಯಕರು ಬೇಕಾಗಿದ್ದಾರೆ. ನಾವು, ನೀವು, ನೆರೆಯವರು ಹೀಗೆ ಎಲ್ಲರೂ ಬಲಶಾಲಿಗಳಾದರೆ ದೇಶದ ಪುನರ್ನಿರ್ಮಾಣ ಸಾಧ್ಯ.

ಕೆ ಅಣ್ಣಾಮಲೈ

ಕೆ ಅಣ್ಣಾಮಲೈ

 • Share this:
  ಸ್ನೇಹಿತರೆ, ಈ ಲೇಖನಗಳ ಸರಣಿಯಲ್ಲಿ ನಾವು ಕೊನೆಯ ದಿನಕ್ಕೆ ಬಂದಿದ್ದೇವೆ. ಈ 20 ದಿನದಲ್ಲಿ ನಾವು ಅನೇಕ ಮುಖ್ಯ ವಿಚಾರಗಳನ್ನ ಚರ್ಚಿಸಿದ್ದೇವೆ. ಎಲ್ಲಕ್ಕಿಂತ ಅತಿ ಮುಖ್ಯ ಪಾಠವನ್ನ ಕೊನೆಯ ದಿನಕ್ಕೆ, ಅಂದರೆ ಇವತ್ತಿಗೆಂದು ಇಟ್ಟಿದ್ದೇನೆ. ಅದುವೇ ಪರಿಪೂರ್ಣ ಅಥವಾ ಜಾಗೃತ ನಾಯಕತ್ವ (Enlightened Leadership). ಇದು ಒಂದು ಲೇಖನಕ್ಕೆ ಸೀಮಿತವಾಗುವಷ್ಟು ಸಣ್ಣ ವಿಚಾರವಲ್ಲ. ನಮ್ಮ ಸಮಾಜದ ಪ್ರತಿಯೊಬ್ಬರಲ್ಲೂ ಇರಬೇಕಾದಂಥ ವಿಚಾರ.

  ಇಲ್ಲಿಯವರೆಗಿನ ನಾಯಕತ್ವ:

  ನಮಗೆ ಸ್ವಾತಂತ್ರ್ಯ ತಂದುಕೊಟ್ಟಂತಹ; ನಮ್ಮನ್ನ ಮುನ್ನಡೆಸಿದಂತಹ; ತಾಂತ್ರಿಕವಾಗಿಯೇ ಆಗಲಿ ಆರ್ಥಿಕವಾಗಿಯೇ ಆಗಲಿ ನಮ್ಮ ದೇಶಕ್ಕೆ ಕೊಡುಗೆ ನೀಡಿದಂತಹ; ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸಿದಂತಹ ನಾಯಕರನ್ನ ಕಂಡಿದ್ದೇವೆ. ಇವರಿಂದಾಗಿ ನಾವು ಈ ಮಟ್ಟಕ್ಕೆ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ನಾವು ಸ್ವಾತಂತ್ರ್ಯ ಪಡೆದಾಗ ಈ ದೇಶ ಹೆಚ್ಚು ದಿನ ಬಾಳುವುದಿಲ್ಲ ಎಂದು ಅನೇಕರು ವ್ಯಂಗ್ಯ ಮಾಡಿದ್ದರು. ಬ್ರಿಟನ್​ನ ಮಾಜಿ ಪ್ರಧಾನಿ ಹಾಗೂ ಅಂದಿನ ವಿಪಕ್ಷ ನಾಯಕರಾಗಿದ್ದ ಸರ್ ವಿನ್​ಸ್ಟನ್ ಚರ್ಚಿಲ್ ಅವರಂತೂ, “ಭೂಮಧ್ಯ ರೇಖೆ (Equator)ಗಿಂತ ಭಾರತ ಹೆಚ್ಚೇನಲ್ಲ” ಎಂದು ಹೇಳಿದ್ದರು. ಅಂದರೆ, ಇಲ್ಲಿರುವ ವಿವಿಧ ಜನಾಂಗಗಳು, ವಿವಿಧ ಧರ್ಮಗಳು, ವಿಭಿನ್ನ ವಿಚಾರಗಳು, ಭಿನ್ನಾಭಿಪ್ರಾಯಗಳಿಂದಾಗಿ ಭಾರತ ಬಹಳ ಬೇಗ ಛಿದ್ರಗೊಳ್ಳುತ್ತದೆ ಎಂಬುದು ಚರ್ಚಿಲ್ ಅವರ ಮಾತಿನ ಅರ್ಥವಿತ್ತು. ನಾವು ಅವರ ಮಾತನ್ನ ತಪ್ಪೆಂದು ಸಾಬೀತು ಮಾಡಿದ್ದೇವೆ. ಅಷ್ಟೇ ಅಲ್ಲ, ನಮ್ಮೆಲ್ಲಾ ಸಮಸ್ಯೆಗಳನ್ನ ಒಗ್ಗಟ್ಟಿನಿಂದ ಎದುರಿಸಿದ್ದೇವೆ. ಇದೀಗ ಜಾಗತಿಕವಾಗಿ ಉನ್ನತ ಸ್ತರಕ್ಕೆ ನಾವು ಏರುತ್ತಿದ್ದೇವೆ. ಅದೇ ರೀತಿ ಕೋವಿಡ್-19 ಸಮಸ್ಯೆಯನ್ನೂ ನಾವು ಯಶಸ್ವಿಯಾಗಿ ನಿವಾರಿಸುತ್ತೇವೆ. ಇಷ್ಟು ಆತ್ಮವಿಶ್ವಾಸದಿಂದ ಯಾಕೆ ಹೇಳುತ್ತಿದ್ದೇನೆಂದರೆ, ಈ ಹಿಂದೆ ನಮ್ಮ ಬಗ್ಗೆ ನಿರಾಸೆಯ ಮಾತುಗಳನ್ನಾಡಿದವರ ಭವಿಷ್ಯವಾಣಿಗಳನ್ನೆಲ್ಲಾ ಸುಳ್ಳಾಗಿಸಿದ್ದೇವೆ. ಅದೇ ರೀತಿ ಈ ಹೊಸ ಸಾಂಕ್ರಾಮಿಕ ಪಿಡುಗನ್ನೂ ಹಿಮ್ಮೆಟ್ಟಿಸಬಲ್ಲೆವು. ಇದೇನೇ ಇರಲಿ, ಈಗ ನಮ್ಮ ದೇಶದಲ್ಲಿ ಇರುವ ನಾಯಕತ್ವ ಮತ್ತು ನಾಯಕರ ಸತ್ವ ಎಷ್ಟು ಎಂದು ತಿಳಿದುಕೊಳ್ಳುವ ಸಂದರ್ಭ ಇದಾಗಿದೆ. ಒಂದು ದೇಶದ ನಾಯಕತ್ವವು ಆ ಸಮಾಜದ ಆಂತರ್ಯ ಮತ್ತು ಪ್ರಬುದ್ಧತೆಗೆ ಹಿಡಿದ ಕನ್ನಡಿಯಾಗಿರುತ್ತದೆ ಎಂಬುದು ನನ್ನ ಅನಿಸಿಕೆ. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಈಗಿರುವ ನಾಯಕರಿಂದ ಹೆಚ್ಚೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಕಾರ್ಪೊರೇಟ್ ನಾಯಕರು, ಅಂದರೆ ಬೃಹತ್ ಖಾಸಗಿ ಸಂಸ್ಥೆಗಳ ಮುಖ್ಯಸ್ಥರು ಲಾಭದ ಹಿಂದೆ ಬಿದ್ದಿದ್ದಾರೆ. ಅವರಿಗೆ ಲೋಕಕಲ್ಯಾಣವಾಗಲೀ ಅಥವಾ ಜನಕಲ್ಯಾಣವಾಗಲೀ ಬೇಕಿಲ್ಲ. ಹೀಗಾಗಿಯೇ ನಾವು ಅನೇಕ ಕಂಪನಿಗಳು ಪತನಗೊಳ್ಳುತ್ತಿರುವುದನ್ನು ಹಾಗೂ ಬೃಹತ್ ಉದ್ಯಮಿಗಳೆನಿಸಿಕೊಂಡವರು ಪರಾರಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅವರ ಪತನದ ಜೊತೆಗೆ ಕೋಟ್ಯಂತರ ಜನರ ಕನಸುಗಳೂ ಭಗ್ನಗೊಳ್ಳುತ್ತವೆ. ಇದ್ಯಾಕೆ ಎಂದು ಈ ಮುಂಚೆ ಚರ್ಚಿಸಿದ್ದೇವೆ. ಇನ್ನು, ರಾಜಕೀಯ ಮುಖಂಡರ ಬಗ್ಗೆ ಏನೂ ಹೇಳದಿರುವುದೇ ವಾಸಿ. ತಳಮಟ್ಟದಿಂದ ಮೇಲಿನವರೆಗೂ ನಾನು ನಾನು ಎಂಬವರೇ ಎಲ್ಲಾ. ಅವರದೇ ಲೋಕದಲ್ಲಿ ವಿಹರಿಸುತ್ತಿರುತ್ತಾರೆ. ರಾಜಕೀಯದಿಂದ ನಾವು ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುವಷ್ಟು ಅದು ಕುಲಗೆಟ್ಟು ಹೋಗಿದೆ. ನಿಸ್ವಾರ್ಥತೆಯಿಂದ ಜನಸೇವೆ ಮಾಡುವ ಮತ್ತು ಪ್ರಾಮಾಣಿಕವಾಗಿರುವ ರಾಜಕೀಯ ನಾಯಕರು ಸಿಗುತ್ತಾರೆ ಎಂದು ಜನಸಾಮಾನ್ಯರು ನಿರೀಕ್ಷಿಸಿದರೆ ಅದು ಭ್ರಮೆ ಮಾತ್ರ. ಎಲ್ಲಾ ಕ್ಷೇತ್ರಗಳಲ್ಲಿಯಂತೆ ನಮ್ಮ ಮನೆಗಳಲ್ಲೂ ನಾಯಕತ್ವದ ಕೊರತೆ ಕಾಣಬಹುದು. ಕೌಟುಂಬಿಕ ಹಿಂಸೆ, ವಿವಾಹ ವಿಚ್ಛೇದನ ಹೆಚ್ಚುತ್ತಿರುವುದಾದರೂ ಯಾಕೆ ಗೊತ್ತಾ? ನಾವಿರುವ ಕಾಲಘಟ್ಟವೇ ಇದಕ್ಕೆ ಕಾರಣವಾ? ಅಲ್ಲ, ನಿಜವಾದ ಕಾರಣ ಏನೆಂದರೆ ನಾವು ಸ್ವಾರ್ಥಿಗಳಾಗಿದ್ದೇವೆ, ನಾನತ್ವ ಬೆಳೆಸಿಕೊಂಡಿದ್ದೇವೆ. ನಾವು ಎಂಬುದು ನಾನು ಆಗಿ ಬದಲಾಗಿದೆ. ನಮ್ಮ ಹಿಂದಿನ ತಲೆಮಾರಿನವರಿಗಿಂತ ನಾವುಗಳು ಸಂಕುಚಿತ ಮನೋಭಾವ ಬೆಳೆಸಿಕೊಳ್ಳುತ್ತಿದ್ದೇವೆ. ಒಂದು ವೇಳೆ ಗಾಂಧಿ, ಮಂಡೇಲಾ, ಮಾರ್ಟಿನ್ ಲೂತರ್ ಕಿಂಗ್ ಅವರಂಥ ಶ್ರೇಷ್ಠವರೇಣ್ಯರು ನಮ್ಮಂತೆಯೇ ಸಂಕುಚಿತವಾಗಿ ಯೋಚಿಸಿದ್ದರೆ ನಮ್ಮ ಸಮಾಜ ಬೆಳೆಯಲು ಸಾಧ್ಯವಾಗುತ್ತಿತ್ತಾ? ಸಾಧ್ಯವೇ ಇಲ್ಲ ಅನ್ನೋದು ನನ್ನ ಭಾವನೆ.

  ಇದನ್ನೂ ಓದಿ: K Annamalai – ದಿನ 20: ನಮ್ಮ ಹಾದಿಯಲ್ಲೇ ಮಕ್ಕಳೂ ಹೆಜ್ಜೆ ಹಾಕಬೇಕಾ? ಮಗುವಿನ ಮುಂದಿನ ದಾರಿಗಳೇನು?

  ಜಾಗೃತ ನಾಯಕರ ಕಾಲ:

  ವ್ಯವಹಾರದಿಂದ ಹಿಡಿದು ರಾಜಕಾರಣದವರೆಗೆ ನಮಗೆ ಹೊಸ ಮಾದರಿಯ ನಾಯಕತ್ವ ಬೇಕಾಗಿದೆ. ಬುದ್ಧಿ ಮತ್ತು ಅಂತಃಕರಣದಿಂದ ನಮ್ಮನ್ನು ಮುನ್ನಡೆಸುವಂಥ ನಾಯಕಗಣ ಬೇಕಿದೆ. ಅವರು ನಮ್ಮನ್ನು ಮುನ್ನಡೆಸುವುದು ಮಾತ್ರ ಅಲ್ಲ, ತಮ್ಮ ವೈಯಕ್ತಿಕ ಸುಖಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಜನಸೇವೆಯೇ ಜನಾರ್ದನ ಸೇವೆ ಎಂಬ ಮನೋಭಾವ ಇರುವಂಥವರು ಬೇಕಿದ್ದಾರೆ. ಸಮಾಜದ ಅರಿವಿಗೆ ನಿಲುಕದಿದ್ದರೂ ಸಮಾಜಕ್ಕೆ ಏನು ಅಗತ್ಯವೋ ಅದನ್ನು ನೆರವೇರಿಸುವ ಛಾತಿ ಇರಬೇಕು. ವೈಯಕ್ತಿಕ ಪ್ರತಿಷ್ಠೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ದೂರದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನ ಕೈಗೊಳ್ಳುವ ಧೈರ್ಯ ಇರಬೇಕು. ಈ ವಿಚಾರ ಪ್ರಸ್ತಾಪಿಸಲು ಕಾರಣವಿದೆ. ನಮ್ಮ ಈಗಿನ ಸಮಸ್ಯೆಗಳನ್ನು ಬೇರೆಯೇ ದೃಷ್ಟಿಯಿಂದ ನೋಡಬಲ್ಲಂಥ ಹೊಸ ಮಾದರಿಯ ನಾಯಕರು ಜಗತ್ತಿಗೆ ಬೇಕಿದ್ದಾರೆ. ಈ ಸಮಸ್ಯೆಗಳು ಸಣ್ಣಪುಟ್ಟವಲ್ಲ. ಜಾಗತಿಕ ತಾಪಮಾನ ಏರಿಕೆ; ಅಂತಾರಾಷ್ಟ್ರೀಯ ವ್ಯಾಪಾರ ನೀತಿ; ಬಡವ ಬಲ್ಲಿದರ ಮಧ್ಯೆ ಹೆಚ್ಚುತ್ತಿರುವ ಅಂತರ; ವಿಶ್ವದ ಶೇ. 40ರಷ್ಟು ಜನರಿಗೆ ಒಪ್ಪೊತ್ತಿನ ಊಟಕ್ಕೂ ಗತಿ ಇಲ್ಲದಿರುವುದು; ಧರ್ಮ ಮೊದಲಾದ ಕೃತಕ ವೈಭಿನ್ಯತೆಗಳ ಆಧಾರ ಮೇಲೆ ರೂಪಿತವಾದ ನೀತಿ, ಇವೇ ಮುಂತಾದ ಬೃಹತ್ ಸಮಸ್ಯೆಗಳು ನಮಗೆ ಹಿನ್ನಡೆ ತರುತ್ತಿವೆ. ಆದ್ಯತೆ ಮೇಲೆ ಈ ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕಿದೆ. ನಾವು ಪಾಠ ಕಲಿಯಲು ಇನ್ನೊಂದು ಅವಘಡಕ್ಕೆ ಕಾಯುವುದು ಬೇಡ. ಈ ಸಮಸ್ಯೆಗಳಿಗೆ ಪರಿಹಾರ ಎಂಬುದು ಮೇಲಿಂದ ಕೆಳಗೆ ಬರುವ ಬದಲು ತಳದಿಂದ ಪ್ರಾರಂಭವಾಗಿ ಮೇಲಿನವರೆಗೆ ಹೋಗಲಿ. ಎಲ್ಲಿಯೇ ಆಗಲಿ ಬಡತನ ಮತ್ತು ಸಿರಿತನ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂಬ ಮನೋಭಾವ ಇಟ್ಟುಕೊಂಡು ಬಡತನ ನಿಗ್ರಹಕ್ಕಾಗಿ ಪಣತೊಡಬೇಕಿದೆ. ನಮ್ಮ ಸುತ್ತ ಇರುವ ಬಡವರ ಬಗ್ಗೆ ಕಾಳಜಿ ತೋರದೆ ನಾವು ಶ್ರೀಮಂತರಾಗಿ ಬದುಕುವುದು ಮನುಷ್ಯತ್ವ ಎನಿಸುವುದಿಲ್ಲ. ನಮ್ಮಿಂದಲೇ ಜಾಗೃತ ನಾಯಕತ್ವ ಶುರುವಾಗಬೇಕು. ಈ ಕೆಲಸಕ್ಕೆ ನಮಗೆ ಸ್ಥಾಪಿತ ನಾಯಕರ ಅಗತ್ಯ ಇಲ್ಲ. ಪ್ರತಿಯೊಬ್ಬರನ್ನೂ ನಾಯಕನೆಂದು ಪರಿಭಾವಿಸುವಂಥ ದೃಷ್ಟಿಕೋನ ನಮ್ಮದಾಗಬೇಕು. ಹೆಚ್ಚೆಚ್ಚು ನಾಯಕರ ನಿರ್ಮಾಣ ಸಾಧ್ಯತೆಗೆ ಗಮನ ಕೊಡಬೇಕು. ನಮ್ಮ ಸುತ್ತಲಿನವರು ಪ್ರಬಲಗೊಂಡರೆ ನಾವು ಎದೆಗುಂದಬೇಕಿಲ್ಲ. ಸೂರ್ಯನ ಕಿರಣ ಅತ್ಯುತ್ತಮ ಸೋಂಕುನಿವಾರಕ ಎನ್ನುತ್ತಾರೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಸೂರ್ಯನ ಕಿರಣ ಹರಿಸಿ. ಸಶಕ್ತಗೊಂಡ ಪುರುಷರು ಮತ್ತು ಮಹಿಳೆಯರ ಪ್ರಮಾಣ ಹೆಚ್ಚಾದರೆ ಒಂದು ಅದ್ಭುತವೇ ನಡೆಯಬಲ್ಲುದು. ನಿಮಗಾಗಿ ಕೆಲಸ ಮಾಡುವ ಜನರನ್ನು ತುಚ್ಛರಾಗಿ ಕಾಣದೆ ನಾಯಕರೆಂಬಂತೆ ನೋಡಿ. ಅವರಿಗೆ ನೀವು ಬಲ ನೀಡಿದರೆ ಅವರೊಳಗಿನ ಹನುಮ ಶಕ್ತಿ ಕಂಡು ನಿಮಗೇ ಅಚ್ಚರಿ ಆಗುತ್ತದೆ. ನಿಮ್ಮ ಕಾರಿನ ಡ್ರೈವರ್ ಅಥವಾ ಮನೆಯ ಕೆಲಸದವರು ನಾಯಕರಂತೆ ಯೋಚಿಸಲಿ. ಅವರ ಯೋಚನೆ ವಿಸ್ತಾರವಾದಂತೆಯೇ ಜೀವನ ಕೂಡ ಹೆಚ್ಚೆಚ್ಚು ತೆರೆದುಕೊಳ್ಳುತ್ತದೆ. ಆರ್ಥಿಕವಾಗಿಯೂ ಉನ್ನತ ಬೆಳವಣಿಗೆ ಆಗುತ್ತದೆ. ನಮ್ಮ ದೇಶದಲ್ಲಿ ಎಲ್ಲವೂ ಇದೆ. ಇಲ್ಲಿ ಜನಿಸಿ ಬದುಕುತ್ತಿರುವುದು ನಮ್ಮ ಅದೃಷ್ಟ. ಇದೇ ಪ್ರೇರಕ ಶಕ್ತಿಯಿಂದಲೇ ನಾನು ಇತ್ತೀಚೆಗೆ ಐಪಿಎಸ್ ಹುದ್ದೆ ತ್ಯಜಿಸಿ ನಾಯಕತ್ವ ನಿರ್ಮಾಣದ ಕನಸು ಸಾಕಾರಗೊಳಿಸುವ ಪ್ರಯತ್ನದಲ್ಲಿದ್ದೇನೆ. ತಮಿಳುನಾಡಿನ ಕರೂರು ನನ್ನ ಹುಟ್ಟೂರು. ಇಲ್ಲಿ ನಾವು ಕೆಲ ಸಮಾನ ಮನಸ್ಕರು ಸೇರಿ “ವೀ ದ ಲೀಡರ್ಸ್ ಫೌಂಡೇಶನ್” (www.wetheleader.org) ಸಂಘಟನೆ ಹುಟ್ಟುಹಾಕಿದ್ದೇವೆ. ತಳಮಟ್ಟದಲ್ಲಿ ನಾಯಕಗಣ ನಿರ್ಮಿಸುವುದು ಇದರ ಗುರಿ. ನಾವು ನಿರ್ಮಿಸುವ ನಾಯಕರು ಸಮಾಜದ ವಿವಿಧ ಸ್ತರಗಳಿಗೆ ಹರಡಿ ನಮ್ಮ ರಾಷ್ಟ್ರಕ್ಕೆ ಬದಲಾವಣೆಯ ಪರ್ವ ಪ್ರಾರಂಭಿಸಲಿದ್ದಾರೆ ಎಂಬುದು ನನ್ನ ಬಲವಾದ ವಿಶ್ವಾಸ. ಅಂತಿಮವಾಗಿ ಒಂದು ಮಾತು ಹೇಳುತ್ತೇನೆ: ನಮ್ಮ ಸುತ್ತಲೂ ಇರುವ ಜನರಿಗೆ ಶಕ್ತಿ ತುಂಬಲು ಹೆದರಬಾರದು. ಅಂಥದ್ದೊಂದು ಕಾರ್ಯಕ್ಕೆ ಅವಕಾಶ ಸಿಗುವುದೇ ನಮಗೆ ಒಂದು ಗೌರವ.

  ಅಣ್ಣಾಮಲೈ ಅವರ ಈ ಲೇಖನಮಾಲೆಯ ಎಲ್ಲಾ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

  ನಿಮ್ಮ ಗಮನಕ್ಕೆ: ಈ 21 ದಿನಗಳ ಸರಣಿ ಬರೆದಿರುವುದು ನನ್ನ ಭಾಗ್ಯ. ದಿನವೂ ಬರೆಯುವುದು ಸುಲಭವಲ್ಲ. ಈ ಪುಟ್ಟ ಪ್ರಯಾಣದಲ್ಲಿ ನನ್ನೊಂದಿಗೆ ಬಂದ ಓದುಗರಿಗೆ ಧನ್ಯವಾದ. ಹಾಗೇ ತಮಿಳು, ಕನ್ನಡ ಮತ್ತು ತೆಲುಗಿನಲ್ಲಿ ನನ್ನ ಬರಹಕ್ಕೆ ಸಹಾಯ ಮಾಡಿದ ಎಲ್ಲರಿಗೂ ನನ್ನ ಧನ್ಯವಾದ.

  ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ

  (ಕೋವಿಡ್-19 ಸೋಂಕು ವ್ಯಾಪಿಸದಂತೆ ದೇಶಾದ್ಯಂತ ಲಾಕ್ ಡೌನ್ ವಿಧಿಸಲಾಗಿದೆ. ಅತ್ಯಗತ್ಯ ಸಂದರ್ಭ ಹೊರತುಪಡಿಸಿ ಉಳಿದಂತೆ ಜನರು ಮನೆಯಲ್ಲೇ ಇರುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಲೇಖಕರು ಈ ಲಾಕ್ ಡೌನ್ ಅವಧಿಯನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳುವ 21 ಪಾಠಗಳನ್ನ ನಿತ್ಯ ನೀಡಿದ್ಧಾರೆ. ಇದು ಈ ಸರಣಿಯ ಕೊನೆಯ ಲೇಖನವಾಗಿದೆ.)
  First published: