K Annamalai – ದಿನ 20: ನಮ್ಮ ಹಾದಿಯಲ್ಲೇ ಮಕ್ಕಳೂ ಹೆಜ್ಜೆ ಹಾಕಬೇಕಾ? ಮಗುವಿನ ಮುಂದಿನ ದಾರಿಗಳೇನು?

ನಮ್ಮದೇ ಕಾಲ್ಪನಿಕ ಗಡಿ, ರೇಖೆ ಹಾಕಿಕೊಂಡು ಲೈಫು ಇಷ್ಟೇ ಎಂದು ಭಾವಿಸಿದ್ದೇವೆ. ಅದನ್ನೇ ಮಕ್ಕಳಿಗೂ ಕಲಿಸುತ್ತಿದ್ದೇವೆ. ಇದು ಇಲ್ಲಿಗೇ ನಿಲ್ಲಲಿ, ಮಕ್ಕಳು ಹೊಸ ಜಗತ್ತು ರೂಪಿಸಲಿ ಎಂದು ಹಾರೈಸುತ್ತಿದ್ದಾರೆ ಲೇಖಕ ಅಣ್ಣಾಮಲೈ.

ಮಕ್ಕಳ ಪ್ರಾತಿನಿಧಿಕ ಚಿತ್ರ

ಮಕ್ಕಳ ಪ್ರಾತಿನಿಧಿಕ ಚಿತ್ರ

 • Share this:
  ನಿನ್ನೆಯ ಲೇಖನದ ಮುಂದುವರಿದ ಭಾಗವಾಗಿ, ಅಂದರೆ ಮೂರು ಲೇಖನಗಳ ಪೈಕಿ ಎರಡನೆಯ ಲೇಖನವಾಗಿ ಇವತ್ತು ನಾನು ನಮ್ಮ ಪ್ರಸಕ್ತ ಸಮಸ್ಯೆಗಳ ವಿಚಾರವನ್ನು ಕೈಗೆತ್ತಿಕೊಳ್ಳುತ್ತೇನೆ. ಈ ವಿಚಾರ ಸರಳವಂತೂ ಅಲ್ಲ. ಆದರೂ ಪ್ರಸ್ತಾಪ ಮಾಡಲೇಬೇಕಿದೆ. ನಾವೆಲ್ಲರೂ, ಅದರಲ್ಲೂ ನಗರ ಪ್ರದೇಶದಲ್ಲಿರುವವರಿಗೆ ಎಲ್ಲೋ ಒಂದು ಕಡೆ ಅಭದ್ರತೆಯ ಭಾವನೆ ಕಾಡುತ್ತದೆ. ನೆಲೆ ಇಲ್ಲದಂಥ ಅನಾಥ ಭಾವ ನೆಲಸಿದೆ. ಉದ್ದೇಶವಿಲ್ಲದ ನಮ್ಮ ಜೀವನವೇ ಇದಕ್ಕೆ ಕಾರಣ. ಜೀವನದಲ್ಲಿ ಗೆಲುವು ಸಾಧಿಸಬಲ್ಲ ಬ್ರಹ್ಮಾಸ್ತ್ರವನ್ನು ನಾವು ಗಿಟ್ಟಿಸಿಬಿಟ್ಟಿದ್ದೇವೆಂದು ಭಾವಿಸಿದ್ಧೇವೆ. ಪಠ್ಯ ಪುಸ್ತಕ ಓದು, ಪರೀಕ್ಷೆ ಬರೆ, ಪದವಿ ಪಡೆ, ಒಳ್ಳೆಯ ಸಂಬಳದ ಕೆಲಸ ಸೇರು. ಅಲ್ಲಿಗೆ ಲೈಫ್ ಸೆಟಲ್ ಎಂದು ಮಕ್ಕಳ ಮೇಲೆ ನಿರಂತರವಾಗಿ ಒತ್ತಡ ಹಾಕುತ್ತಲೇ ಇರುವುದೇ ನಮ್ಮ ಪಾಲಿಗೆ ಯಶಸ್ಸಿನ ಬ್ರಹ್ಮಾಸ್ತ್ರ. ಹಾಗೇ, ಕೆಲಸದಲ್ಲಿ ಔನ್ನತ್ಯ ಸಾಧಿಸಬೇಕಾದರೆ ಇನ್ನಷ್ಟು ಶ್ರಮಪಡಬೇಕು. ಕುಟುಂಬದಿಂದಲೂ ದೂರ ಉಳಿಯಬೇಕು ಎಂಬ ಭ್ರಮೆಯನ್ನು ಮಕ್ಕಳಿಗೆ ತುಂಬುತ್ತೇವೆ. ಈ ಮಟ್ಟದ ಯಶ್ಸು ಗಳಿಸಲು ನಾವು ಬಳಲಿ ಬೆಂಡಾಗಿ ಹೋಗುವವರೆಗೂ ನಿರಂತರವಾಗಿ ಕೆಲಸ ಮಾಡುತ್ತಲೇ ಇರಬೇಕು. ಅಷ್ಟರಲ್ಲಿ ನಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಹಾನಿ ಮಾಡಿಕೊಂಡಿರುತ್ತೇವೆ. ನಮ್ಮ ಅಸ್ತಿತ್ವಕ್ಕೆ ಒಂದು ಅರ್ಥ ಕೊಟ್ಟಂತಹ ವಿಚಾರಗಳಿಂದ ನಾವು ದೂರವೇ ಸರಿದುಬಿಟ್ಟಿರುತ್ತೇವೆ. ವೃದ್ಧಾಪ್ಯ ಬಂದಾಗ ಅಯ್ಯೋ ನಮ್ಮ ಜೀವನದಲ್ಲಿ ಏನೆಲ್ಲಾ ಕಳೆದುಕೊಂಡುಬಿಟ್ಟೆವಲ್ಲಾ ಎಂದು ಪರಿತಪಿಸುತ್ತೇವೆ. ಇಂಥದ್ದೊಂದು ಯಾಂತ್ರಿಕ ಜೀವನ ನಮಗೆ ಬೇಕಾ? ಈ ಜೀವನಕ್ಕೆ ಒಂದು ಗೊತ್ತುಗುರಿ ಎಂಬುದು ಬೇಡವಾ? ನಮ್ಮ ಜೀವನಕ್ಕೆ ಏನಾದರೂ ತಿರುವು ತರುವ ಮುನ್ನ ಆರ್ಥಿಕ ಸ್ಥಿತಿ ಬಗ್ಗೆಯೂ ಗಮನಕೊಡಬೇಕೆಂಬುದು ನಿಜವೇ. ಆದರೆ, ಸಮಗ್ರ ದೃಷ್ಟಿಕೋನವಿಟ್ಟುಕೊಂಡು ನಾವು ಸಂಪಾದನೆ ಮಾಡಲು ಪ್ರಯತ್ನಿಸಬಹುದು. ಅದಕ್ಕೆ ನಾವು ಆರ್ಥಿಕತೆ ಬಗ್ಗೆ ನಮಗಿರುವ ಅಭಿಪ್ರಾಯ ಬದಲಿಸಿಕೊಳ್ಳಬೇಕು. ಬೇರೆಯವರು ಮಾಡಿದ್ದೇ, ಬೇರೆಯವರು ಯೋಚಿಸಿದ್ದೇ ಯಶೋಮಾರ್ಗ ಎಂಬಂತೆ ನಾವು ಕುರುಡರಂತೆ ಅನುಸರಿಸಿಕೊಂಡು ಹೋಗುತ್ತೇವಲ್ಲ ಅದೇ ನಮ್ಮ ಸಮಸ್ಯೆಗಳಿಗೆ ಮೂಲ ಕಾರಣ.

  ಪೋಷಕರ ಜವಾಬ್ದಾರಿ ಏನು?

  ಒಳ್ಳೆಯ ಪದವಿ ಪಡೆಯಲು ಮಕ್ಕಳ ಮೇಲೆ ಒತ್ತಡ ಹಾಕುವ ಪೋಷಕರಿಂದ ಈ ಸಮಸ್ಯೆ ಮೊದಲುಗೊಳ್ಳುತ್ತದೆ. ಇದೇ ಯಶಸ್ಸಿನ ದಾರಿ ಎಂದು ಮಕ್ಕಳು ಭಾವಿಸಿಬಿಡುತ್ತವೆ. ತಮಗೆ ಅರಿವಿಲ್ಲದಂತೆಯೇ ಕೋಟ್ಯಂತರ ವಿದ್ಯಾರ್ಥಿಗಳು ಈ ಹಾದಿಗೆ ಜಿಗಿದುಬಿಡುತ್ತಾರೆ. ಅಲ್ಲಿಂದ ಅವರ ಯಾಂತ್ರಿಕ ಜೀವನ ನಿರಂತರವಾಗಿ ಅರೆಯಲು ಪ್ರಾರಂಭಿಸುತ್ತದೆ. ಫ್ಯಾಕ್ಟರಿಗಳಲ್ಲಿ ಮೆಷಿನ್​ಗಳಿಂದ ತಯಾರಾಗುವ ಉತ್ಪನ್ನಗಳ ರೀತಿಯಲ್ಲಿ ಮಕ್ಕಳು ಶಾಲೆಗೆ ಹೋಗುತ್ತವೆ. ಮಕ್ಕಳ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಾಲೆಗಳಿಗೂ ಇಲ್ಲ. ಮಕ್ಕಳ ಮೇಲೆ ನಾವು ಮಾಡುತ್ತಿರುವುದು ಕ್ರೌರ್ಯವಲ್ಲದೇ ಮತ್ತಿನ್ನೇನು? ಇನ್ನೂ ವಿಷಾದಕರ ಸಂಗತಿ ಎಂದರೆ ಪೋಷಕರು ತಮ್ಮದೇ ಜೀವನದ ಜಂಜಾಟಗಳ ಮಧ್ಯೆ ಮಕ್ಕಳಿಗೆ ಅಗತ್ಯವಿರುವ ಜಗತ್ತನ್ನು ತೋರಿಸುವುದೇ ಇಲ್ಲ. ವ್ಯವಸಾಯ, ಪಶುಸಂಗೋಪನೆ ಇತ್ಯಾದಿ ಕೃಷಿ ಕಾರ್ಯ ಮತ್ತಿತರ ಭವಿಷ್ಯದ ಕ್ಷೇತ್ರಗಳ ಬಗ್ಗೆ ಅರಿವೇ ಇಲ್ಲದೆ ಮಕ್ಕಳು ಬೆಳೆಯುತ್ತಾರೆ. ಬೀದಿಯಲ್ಲಿ ಕಸ ಗುಡಿಸುವುದು; ರಕ್ತ ದಾನ ಮಾಡುವುದು ಇತ್ಯಾದಿ ಸಮಾಜ ಸೇವೆಯ ಮಹತ್ವ ಮಕ್ಕಳಿಗೆ ತಿಳಿಸಿಕೊಡುವ ಗೋಜಿಗೆ ನಾವು ಹೋಗೋದಿಲ್ಲ. ಈಗೀಗ ಪ್ರವರ್ದಮಾನಕ್ಕೆ ಬರುತ್ತಿರುವ ಗ್ರಾಮೀಣ ಉದ್ಯಮಶೀಲತೆ ಏನೆಂದು ಮಗುವಿಗೆ ಗೊತ್ತೇ ಇರುವುದಿಲ್ಲ. ಶಾಲೆ, ಮನೆ, ಬೋಧನೆ ಇವಿಷ್ಟೇ ಮಕ್ಕಳ ತಲೆಗೆ ನಾವು ತುಂಬುವುದು. ಇದರಿಂದ ಮಕ್ಕಳು ಹೇಗೆ ಬೆಳವಣಿಗೆ ಸಾಧಿಸುತ್ತಾರೆ? ತಮ್ಮ ಭವಿಷ್ಯ ಹೇಗೆ ಕಂಡುಕೊಳ್ಳುತ್ತಾರೆ? ವೃದ್ಧಾಪ್ಯದವರೆಗೂ ಕಾಯಕ ಮಾಡಲು ಒಂದು ಉದ್ದೇಶ ಹೇಗೆ ಪಡೆಯುತ್ತಾರೆ? ಪೋಷಕರು ಸ್ವಲ್ಪ ಜಾಗೃತಿ ವಹಿಸಬೇಕು. ಮಕ್ಕಳಿಗೆ ಏನು ಇಷ್ಟವೋ ಅದನ್ನು ಮಾಡಲು ಬಿಡಬೇಕು. ಪರೀಕ್ಷಾ ವೇಳೆಯಲ್ಲಿ ಈ ದಿಢೀರ್ ಬದಲಾವಣೆ ಸಾಧ್ಯವಿಲ್ಲ. ಕಾಲಾನುಕ್ರಮದಲ್ಲಿ ನಾವು ಮಗುವಿನ ಆಸೆಗೆ ಪೋಷಣೆ ನೀಡುತ್ತಾ ಬಂದರೆ ಆಗ ಒಂದು ರೂಪ ಸಿಗುತ್ತದೆ. ಯಾರೂ ಸವೆಸದ ಹಾದಿಯಲ್ಲಿ ಹೋಗಬಲ್ಲೆನೆಂಬ ನಂಬಿಕೆ ಮಗುವಿಗೂ ಬರುತ್ತದೆ. ಪೋಷಕರಿಗೂ ವಿಶ್ವಾಸ ಮೂಡುತ್ತದೆ. ಆಗ ನಮ್ಮ ಈ ಮುಂದಿನ ಹೆಜ್ಜೆ ಇರಿಸಲು ಸಾಧ್ಯವಾಗಬಹುದು.

  ಸಮಾಜದ ಹೊಣೆಗಾರಿಕೆ ಏನು?

  ನಮ್ಮ ಸಮಾಜದಲ್ಲಿ ಒಂದು ವಿಶೇಷತೆ ಇದೆ. ಬೇರೆಯವರ ಬಗ್ಗೆಯೆಲ್ಲಾ ತಲೆಕೆಡಿಸಿಕೊಳ್ಳಲು ನಮಗೆ ಸಮಯ ಇರುತ್ತದೆ. ಆದರೆ, ನಮ್ಮನ್ನೇ ನಿರ್ಲಕ್ಷಿಸುತ್ತೇವೆ. ನಮ್ಮ ಯಶಸ್ಸಿನ ಮಾಪನ ಹೇಗಿರುತ್ತದೆ ನೋಡಿ. ನಮ್ಮನ್ನು ಆಧಾರವಾಗಿಟ್ಟುಕೊಂಡು ನಮ್ಮ ಯಶಸ್ಸನ್ನು ಅಳೆಯೋದಿಲ್ಲ. ನೆರೆಮನೆಯವರು ಅಥವಾ ಸಹೋದ್ಯೋಗಿಯ ಯಶಸ್ಸಿನ ಜೊತೆ ನಮ್ಮ ಯಶಸ್ಸನ್ನು ತೂಗುತ್ತೇವೆ. ನಮ್ಮ ಆಸ್ತಿ ಕೂಡ ಬೇರೆಯವರ ಮಾನದಂಡದ ಮೇಲೆಯೇ ಅಳೆಯಲ್ಪಡುತ್ತದೆ. ಕೊನೆಗೆ ಜೀವನದ ಒಟ್ಟಾರೆ ಯಶಸ್ಸಿಗೂ ಇದೇ ಹಣೆಬರಹ. ನಮ್ಮ ನಿಜವಾದ ಬದುಕಿಗೆ ಇದೀಗ ಸಮಯ ಬಂದಿದೆ. ನಮ್ಮ ಜೀವನಕ್ಕೆ ನಾವೇ ಸೂತ್ರಧಾರಿಗಳಾಗೋಣ. ಬೇರೆಯವರೊಂದಿಗೆ ಸ್ಪರ್ಧೆಗಳಿದು, ಬೇರೆಯವರ ಅನುಮೋದನೆಗೆ ಕಾದು ಕುಳಿತಿದ್ದರಿಂದಲೇ ನಾವು ಈ ದುಸ್ಥಿತಿಗೆ ಬಂದುಬಿಟ್ಟಿದ್ದೇವೆ. ಈ ಒಂದು ಬಂಧವನ್ನ ನಾವೀಗ ಕಳಚಿ ಬಿಸುಡಬೇಕಿದೆ. ಸಮಾಜ ಕೂಡ ಸೋಲುಂಡ ಜನರನ್ನ ಒಪ್ಪಿಕೊಳ್ಳಬೇಕು. ಹೀಗಾದಲ್ಲಿ ಒಂದು ಹಂತದ ನಂತರ ಇಸ್ರೇಲ್, ಅಮೆರಿಕದಂಥ ದೇಶಗಳಲ್ಲಿರುವಂತೆ ಅಪಾಯ ಎದುರಿಸುವ ಸಾಹಸ ಪ್ರವೃತ್ತಿಯ ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ. ವೈಫಲ್ಯಗಳನ್ನ ಅಪ್ಪಿಕೊಂಡು, ಸೋತ ವ್ಯಕ್ತಿಯನ್ನು ತಮ್ಮವನೇ ಎಂದು ಸಮಾಜ ಒಪ್ಪಿಕೊಂಡಾಗ ಜನರು ಖುಷಿ ಮತ್ತು ಸಂತೃಪ್ತಿಯಿಂದ ಇರುತ್ತಾರೆ. ಅಂತಿಮವಾಗಿ ಸಮಾಜ ಎಂದರೆ ಏನು? ಸಮಾಜವೆಂದರೆ ಜನರ ಸಮೂಹ. ಜನರೇ ತಮ್ಮ ಹೊಸ ಚಿಂತನೆಗಳಿಂದ ಹೊಸ ಹಾದಿಗಳಿಂದ ಸಮಾಜವನ್ನ ಬದಲಿಸಬಹುದು.

  ಮುಂದೇನು?

  ನಮ್ಮ ಪ್ರಯೋಗವನ್ನು ಮಕ್ಕಳಿಂದಲೇ ಪ್ರಾರಂಭಿಸೋಣ. ಮಕ್ಕಳಿಗೆ ಹೊಸ ಸಾಧ್ಯತೆಗಳನ್ನ ತೆರೆದಿಡೋಣ. ನಮಗಿಂತಲೂ ಭಿನ್ನವಾಗಿ ಮಕ್ಕಳು ಬೆಳೆಯಲಿರುವುದರಿಂದ ಅವರು ನಮಗಿಂತ ಹೆಚ್ಚು ತಿಳಿದುಕೊಂಡಿರುತ್ತಾರೆ. ಈ ಸತ್ಯವನ್ನ ನಾವು ಒಪ್ಪಿಕೊಳ್ಳಬೇಕು. ನಾವು ಅನುಭವ ಮತ್ತು ಜ್ಞಾನವು ಮಕ್ಕಳಿಗೆ ವಿವೇಕ ಮತ್ತು ಮಾರ್ಗದರ್ಶನ ಮಾಡಲು ಮಾತ್ರ ಸೀಮಿತವಾಗಿರಲಿ. ಅಂತಿಮವಾಗಿ ಮಕ್ಕಳಿಗೆ ಏನು ಬೇಕೋ ಅದನ್ನು ಅವರೇ ಆರಿಸಿಕೊಳ್ಳಲಿ. ಭಾರತಕ್ಕೆ ಈಗ ಅಗತ್ಯ ಇರುವುದು ಮುಕ್ತವಾಗಿ ಚಿಂತಿಸಬಲ್ಲ, ತಮ್ಮ ಹಾದಿಯಲ್ಲಿ ದಿಟ್ಟವಾಗಿ ನಡೆಯಬಲ್ಲ ಯುವ ಮತ್ತು ಚೈತನ್ಯಶೀಲ ಮನಸುಗಳು. ಇನ್ನೂ ಪೂರ್ವಗ್ರಹಗಳಿಂದ ಹೊರತಾಗಿಲ್ಲದ ವ್ಯಕ್ತಿಗಳೇ ನಮ್ಮ ಸಮಾಜದಲ್ಲಿ ತುಂಬಿಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ನಾವೀಗ ಭಿನ್ನ ಹೆಜ್ಜೆ ಇರಿಸಬೇಕಿದೆ. ಈ 21 ದಿನ ಮತ್ತು ಇನ್ನೂ 19 ದಿನಗಳ ಲಾಕ್​ಡೌನ್ ಅವಧಿ (ಮೇ 3ರವರೆಗೆ) ನಮಗೆ ಒಂದು ಅದ್ಭುತ ಅವಕಾಶ ತೆರೆದಿಟ್ಟಿದೆ. ನಮ್ಮ ಮನಸ್ಸಿಗೆ ಚಿಕಿತ್ಸೆ ಕೊಡಲು ಮತ್ತು ಜೀವನದ ಸರ್ಕಸ್​ನಿಂದ ಹೊರಬರಲು ಸಹಾಯವಾಗಬಲ್ಲಂಥ ದಿನಗಳು ಇವು. ನಮ್ಮ ಮಕ್ಕಳಿಂದಲೇ ಪ್ರಾರಂಬಿಸೋಣ. ಅವರಿಗೆ ಏನು ಬೇಕೋ ಆ ಹಾದಿಯಲ್ಲಿ ನಡೆಯಲು ಉತ್ತೇಜಿಸೋಣ. ಆ ಹಾದಿಯಲ್ಲಿ ಆರಂಭಿಕ ಹೆಜ್ಜೆಯಲ್ಲೇ ಮಗು ಬೀಳಬಹುದು. ಚಿಂತೆ ಬೇಡ. ಏಳುವುದು ಬೀಳುವುದೇ ಜೀವನಲ್ಲ. ಅದೆಲ್ಲವೂ ಮನಸಿನ ಗ್ರಹಿಕೆ ಎಂಬುದನ್ನು ಮಗು ಮುಂದೆ ಕಲಿತುಕೊಳ್ಳುತ್ತದೆ. ಅವರು ಬಹಳವಾಗಿ ಇಷ್ಟಪಡುವ ವಿಚಾರಗಳನ್ನ ಅರಸಿ ಹೋಗುವುದು ಮುಖ್ಯ. ಇದರಿಂದ ಮಗುವಿಗೆ ಒಂದು ಜೀವನದ ಉದ್ದಿಶ್ಯ ಸಿಕ್ಕಂತಾಗುತ್ತದೆ. ಸ್ವಾತಂತ್ರ್ಯ ಹೊಂದಿದಂತಾಗುತ್ತದೆ.

  ಮಾರ್ಕ್ ಟ್ವೇನ್ ಅವರ ಒಂದು ಜನಪ್ರಿಯ ಮಾತು ಹೀಗಿದೆ: “ನಿಮ್ಮ ಜೀವನದಲ್ಲಿ ಎರಡೇ ಎರಡು ಮುಖ್ಯ ದಿನ. ನೀವು ಜನ್ಮ ಪಡೆದ ದಿನ ಮತ್ತು ನೀವೇಕೆ ಹುಟ್ಟಿದ್ದೀರಿ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡ ದಿನ”. ನಾವು ನಮ್ಮ ಮಕ್ಕಳಿಗೆ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನೆರವಾಗೋಣ. ಆ ಮಕ್ಕಳು ಬದಲಾದರೆ ಇನ್ನಷ್ಟು ಉತ್ತಮ ಸಮಾಜ ಮತ್ತು ಉತ್ತಮ ದೇಶ ನಿರ್ಮಾಣ ಸಾಧ್ಯವಾಗುತ್ತದೆ.

  ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ

  (ಕೋವಿಡ್-19 ಸೋಂಕು ವ್ಯಾಪಿಸದಂತೆ ದೇಶಾದ್ಯಂತ 21 ದಿನ ಕಾಲ ದಿಗ್ಬಂಧನ ವಿಧಿಸಲಾಗಿದೆ. ಜನರೆಲ್ಲರೂ ಅನವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಮನೆಯಲ್ಲೇ ಇರಬೇಕೆಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಈ ಸಂದರ್ಭದಲ್ಲಿ 21 ದಿನಗಳನ್ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಲೇಖಕರು ತಿಳಿಹೇಳಿದ್ದಾರೆ. ಅವರ ಲೇಖನಮಾಲೆಯ 20ನೇ ಲೇಖನ ಇದು.)
  First published: