K Annamalai – ದಿನ 19: ಸಂಪನ್ಮೂಲ ಸದ್ಬಳಕೆ – ಪ್ರಕೃತಿ ವಿಕೋಪಕ್ಕೆ ಎಡೆ ಮಾಡಿಕೊಡುವುದೇಕೆ?

ಒಂದು ಶರ್ಟ್​ನಿಂದ ಪ್ರಕೃತಿಗೆ ಎಷ್ಟು ಹಾನಿಯಾಗುತ್ತದೆ? ಅದರ ತಯಾರಿಗೆ ರೈತನ ಬೆಳೆಯಿಂದ ಹಿಡಿದು ನೀರು, ಪೆಟ್ರೋಲ್, ವಿದ್ಯುತ್ ಇತ್ಯಾದಿ ಸಾಕಷ್ಟು ಸಂಪನ್ಮೂಲ ವ್ಯಯವಾಗುತ್ತದೆ ಎಂದು ಲೇಖಕರು ಉದಾಹರಣೆ ಸಮೇತ ವಿವರ ಕೊಟ್ಟಿದ್ದಾರೆ.

ಪ್ರಕೃತಿಯ ಸೊಬಗಿನ ಒಂದು ಪ್ರಾತಿನಿಧಿಕ ಚಿತ್ರ

ಪ್ರಕೃತಿಯ ಸೊಬಗಿನ ಒಂದು ಪ್ರಾತಿನಿಧಿಕ ಚಿತ್ರ

 • Share this:
  ಲಾಕ್​ಡೌನ್ ಅವಧಿಯ 21 ದಿನಗಳ ಈ ಲೇಖನಮಾಲೆ ಮುಕ್ತಾಯಕ್ಕೆ ಇನ್ನು ಮೂರು ಮಾತ್ರ ಬಾಕಿ ಇವೆ. ಲಾಕ್ ಡೌನ್ ಅವಧಿ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆಯಾದರೂ ನನ್ನ ಲೇಖನಗಳನ್ನ 21ಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ಇವತ್ತಿನದೂ ಸೇರಿ ಮುಂದಿನ 3 ಲೇಖನಗಳನ್ನ ಭವಿಷ್ಯದ ರೂಪುರೇಖೆ ರಚನೆಗೆ ಬಳಸೋಣ. ನೇರವಾಗಿಯೋ, ಪರೋಕ್ಷವಾಗಿಯೋ ನಮ್ಮೆಲ್ಲರದೂ ಇಲ್ಲಿ ಪ್ರಮುಖ ಪಾತ್ರ ಇರಲಿದೆ. ಈ ನಿಟ್ಟಿನಲ್ಲಿ ಇವತ್ತಿನ ಮೊದಲನೆಯ ಲೇಖನದಲ್ಲಿ ನಾನು ಸಂಪನ್ಮೂಲದ ಸದ್ಬಳಕೆ (Resource Optimisation) ವಿಚಾರದ ಬಗ್ಗೆ ತಿಳಿಸುತ್ತೇನೆ. ಅಂದರೆ, ಲಭ್ಯ ಇರುವ ಸಂಪನ್ಮೂಲವನ್ನು ನಮ್ಮ ಅಗತ್ಯಗಳಿಗೆ ಹೇಗೆ ಪರಿಪೂರ್ಣವಾಗಿ ವಿನಿಯೋಗಿಸಬಹುದು ಎಂದು ತಿಳಿದುಕೊಳ್ಳೋಣ.

  ಸಂಪನ್ಮೂಲ ಸದ್ಬಳಕೆ:

  ಹಿಂದಿನ 18 ಲೇಖನಗಳಲ್ಲಿ ನಾವು ಈ ವಿಚಾರದ ಬಗ್ಗೆ ಅಲ್ಲಲ್ಲಿ ತಿಳಿದುಕೊಂಡಿದ್ದೇವೆ. ಕಲಿತದ್ದನ್ನ ಹೇಗೆ ಪ್ರಯೋಗಕ್ಕೆ ತರುವುದು ಎಂದು ನೋಡೋಣ. ನಮ್ಮ ಈ ಭೂಮಿ ಸುಮಾರು 4,500 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿದ್ದು. ವಿಕಾಸ ಪ್ರಕ್ರಿಯೆಯಲ್ಲಿ ನಮ್ಮ ಸೃಷ್ಟಿಯೂ ಆಗಿದೆ. ಕೇವಲ ನಾವಷ್ಟೇ ಅಲ್ಲ ಈ ಭೂಮಿಯಲ್ಲಿ ಕೋಟ್ಯಂತರ ಜೀವ ಪ್ರಭೇದಗಳು ಹುಟ್ಟಿಕೊಂಡಿವೆ. ಇದೇ ಭೂಮಿಯಲ್ಲಿ ಲಭ್ಯವಿರುವ ಸಂಪನ್ಮೂಲವನ್ನ ಬಳಸಿಕೊಂಡು ನಾವೆಲ್ಲರೂ ಒಟ್ಟಿಗೆ ವಾಸಿಸುತ್ತಿದ್ದೇವೆ. ಕೆಲ ಸಂಪನ್ಮೂಲಗಳು ಅವಾಗೇ ಮರುಸೃಷ್ಟಿಯಾಗುವಂಥ(Regeneration) ಗುಣ ಭೂಮಿಯಲ್ಲಿದೆ. ಉದಾಹರಣೆಗೆ, ನಾವು ಉಸಿರಾಡುವ ಆಮ್ಲಜನಕ (Oxygen) ಮರಗಳಿಂದ ಮತ್ತೆ ಸೃಷ್ಟಿಯಾಗುತ್ತದೆ; ನಾವು ಸೃಷ್ಟಿಸುವ ಶಾಖವನ್ನು ನಿಯಂತ್ರಿಸಲು ಓಝೋನ್ ಪದರ, ಮರ, ಸಾಂದ್ರೀಕರಣ ಪ್ರಕ್ರಿಯೆ ಇರುವ ಶಾಖ ನಿವಾರಣಾ ವ್ಯವಸ್ಥೆ ಭೂಮಿಯಲ್ಲೇ ಇದೆ. ನಮ್ಮ ಸಂಪನ್ಮೂಲ ಬಳಕೆ ಇತಿಮಿತಿಯಲ್ಲೇ ಇದ್ದರೆ ಅದು ಪುನರ್​ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಸಂಪನ್ಮೂಲ ನಾಶಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ. ಇದಕ್ಕೆ ಒಂದು ಒಳ್ಳೆಯ ನಿದರ್ಶನ ನೀಡಬಲ್ಲೆ. ಈಗ ಒಂದೆಡೆ ನಮ್ಮ ಜನಸಂಖ್ಯೆ ವಿಪರೀತ ಹೆಚ್ಚುತ್ತಿದೆ, ಇನ್ನೊಂದೆಡೆ ನಾವು ಹೆಚ್ಚೆಚ್ಚು ಮರಗಳನ್ನ ನಾಶ ಮಾಡುತ್ತಾ ಬಂದಾಗ ಆಮ್ಲಜನಕವನ್ನ ಹೇಗೆ ಉಳಿಸಿಕೊಳ್ಳಲು ಸಾಧ್ಯ? ಹಾಗೇ, ಒಂದೆಡೆ ವಿವಿಧ ರೀತಿಯ ಮಾಲಿನ್ಯಗಳಿಂದ ನಾವು ಶಾಖ ಸೃಷ್ಟಿಸುತ್ತಾ ಹೋಗುತ್ತೇವೆ, ಮತ್ತೊಂದೆಡೆ ಅರಣ್ಯೀಕರಣವನ್ನೂ ನಿಲ್ಲಿಸುತ್ತೇವೆ. ಇದರಿಂದ ಭೂಮಿಯ ಮೇಲಿರುವ ಓಝೋನ್ ಪದರ ನಾಶವಾಗುತ್ತದೆ. ಆಗ ಉಷ್ಣ ನಿಯಂತ್ರಕ ವ್ಯವಸ್ಥೆಯೇ(ಕೂಲಿಂಗ್ ಮೆಕ್ಯಾನಿಸಮ್) ಕುಸಿದಂತಾಗುತ್ತದೆ.

  ಎಲ್ಲರಿಗೂ ಸಾರ್ವತ್ರಿಕವಾಗಿ ಲಭ್ಯವಿದ್ದು ಯಾವ ವ್ಯಕ್ತಿ ಅಥವಾ ದೇಶದ ನಿಯಂತ್ರಣಕ್ಕೆ ಒಳಪಡದ ಸಂಪನ್ಮೂಲಗಳನ್ನ ಗ್ಲೋಬಲ್ ಕಾಮನ್ಸ್ ಎನ್ನುತ್ತಾರೆ. ಇದನ್ನ ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ‘ನನಗೆ ಅವಶ್ಯ ಇರುವಷ್ಟೇ ನೀರು ಬಳಸುತ್ತೇನೆ; ಹೆಚ್ಚು ನೀರು ಬೇಡ’; ‘ನಡೆಯಬಲ್ಲಷ್ಟು ದೂರದ ಸ್ಥಳಕ್ಕೆ ಹೋಗಲು ನಾನು ವಾಹನ ಬಳಸುವುದಿಲ್ಲ’ ಎಂದು ನಿಮಗೆ ನೀವು ಕಟ್ಟುಪಾಡು ಹಾಕಿಕೊಳ್ಳಿ. ಯಾಕೆಂದರೆ ಭೂ ಗರ್ಭದಿಂದ ಒಂದು ಬ್ಯಾರೆಲ್ ಪೆಟ್ರೋಲಿಯಂ ಹೊರತೆಗೆಯಲು ನಾವು ಭೂತಾಯಿಗೆ ಅದೆಷ್ಟು ಘಾಸಿ ಮಾಡಿರುತ್ತೇವೆ ಅಂದಾಜಿಸಿ. ಈಗ ಪೆಟ್ರೋಲ್ ಉರಿಸುವ ಮೂಲಕ ಮಾಲಿನ್ಯ ಮತ್ತು ಉಷ್ಣಾಂಶ ಹೆಚ್ಚಿಸಿ ಇನ್ನಷ್ಟು ಹಾನಿ ತರುತ್ತಿದ್ದೇವೆ. ಅದೇ ರೀತಿ ಎಲ್ಲಾ ವಿಷಯಗಳಲ್ಲೂ ನಾವು ಹೊಣೆಗಾರಿಕೆಯಿಂದ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಉತ್ತಮ ಜಗತ್ತನ್ನು ನಿರ್ಮಿಸಬಹುದು.

  ಒಂದು ಅಂಗಿಯ ಕಥೆ:

  ನಾವು ಧರಿಸುವ ಶರ್ಟನ್ನು ಹೇಗೆ ತಯಾರು ಮಾಡಲಾಗುತ್ತೆ ಎಂದು ನೋಡೋಣ. ನಮ್ಮದು ಕಾಟನ್ ಶರ್ಟ್ ಎಂದಿಟ್ಟುಕೊಳ್ಳಿ. ಈ ಶರ್ಟ್ ತಯಾರಿಸಲು ಬೇಕಾದ ಕಚ್ಛಾ ಸಾಮಗ್ರಿ ಎಂದರೆ ಹತ್ತಿ ಅಥವಾ ಅರಳೆ. ರೈತರು ಇದನ್ನು ಬೆಳೆಯುತ್ತಾರೆ. ಈ ಹತ್ತಿಯನ್ನು ಜವಳಿ (Textile) ಕಂಪನಿಗೆ ಸಾಗಿಸಲು ವಾಹನ ಬಳಸುತ್ತಾರೆ. ಅದಕ್ಕೆ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಬೇಕು. ನಂತರ ಮೆಷಿನ್​ನಿಂದ ನೂಲುಂಡೆ(Yarn) ಮಾಡಲಾಗುತ್ತದೆ. ಇದಕ್ಕೆ ವಿದ್ಯುತ್ ಬೇಕು. ಬಳಿಕ ಈ ನೂಲಿನಿಂದ ಬಟ್ಟೆ ತಯಾರಾಗುತ್ತದೆ. ಬಟ್ಟೆಗೆ ಬಣ್ಣದ ಡೈ ಹಾಕುವುದು, ನಂತರ ಹೊಲಿದು ಒಂದು ರೂಪ ಕೊಡಲಾಗುತ್ತದೆ. ಈ ಶರ್ಟನ್ನು ಪ್ಯಾಕ್ ಮಾಡಿ ಶೋ ರೂಮಿಗೆ ಕಳುಹಿಸಲಾಗುತ್ತದೆ. ಇವಿಷ್ಟೂ ಪ್ರಕ್ರಿಯೆಯ ಸರಪಳಿಯನ್ನು ಗಮನಿಸಿದಾಗ ವಿದ್ಯುತ್, ನೀರು, ಪೆಟ್ರೋಲ್, ಪ್ಲಾಸ್ಟಿಕ್ ಮತ್ತಿತರ ಮರುಬಳಕೆ ಸಾಧ್ಯವಿಲ್ಲದ ಅನೇಕ ಸಂಪನ್ಮೂಲಗಳನ್ನ ವ್ಯಯಿಸಿರುತ್ತೇವೆ.

  ಈಗ ಈ ಪ್ರಕ್ರಿಯೆಯಲ್ಲಿ ಇನ್ನೂ ಒಂದು ಕಹಿ ವಿಚಾರ ಇದೆ. ಒಂದು ಶರ್ಟ್​ಗೆ ಬೇಕಾದ ಹತ್ತಿಯನ್ನು ಬೆಳೆಯಲು ಅಂದಾಜು 2,700 ಲೀಟರ್ ನೀರು ಬೇಕಾಗುತ್ತದೆ. ವಿದ್ಯುತ್ ಉತ್ಪಾದನೆ ಮತ್ತಿತರ ಪ್ರಕ್ರಿಯೆಗೆ ಬಳಕೆಯಾಗುವ ನೀರನ್ನು ಲೆಕ್ಕ ಹಾಕಿದರೆ ಅದರ ಪ್ರಮಾಣ ಇನ್ನೆಷ್ಟಾಗುತ್ತದೋ..! ಬಟ್ಟೆಗೆ ಡೈ ಅಥವಾ ಬಣ್ಣ ಹಾಕುವ ಕೆಲಸಕ್ಕೆ ಬ್ಲೀಚ್ ಮಾಡಿದ ನೀರನ್ನು ಬಳಸಲಾಗುತ್ತದೆ. ನೋವಿನ ಸಂಗತಿ ಎಂದರೆ ಈ ಬ್ಲೀಚ್ ಆದ ನೀರು ಕಾರ್ಖಾನೆಯಿಂದ ಹೊರಗೆ ಬಂದು ನದಿ ಸೇರಿಕೊಳ್ಳುತ್ತದೆ. ಐರೋಪ್ಯ ರಾಷ್ಟ್ರಗಳಲ್ಲಿ ಈಗೀಗ ಕೆಲವೊಂದಿಷ್ಟು ಜಾಗೃತಿ ಮೂಡುತ್ತಿದೆ. ಅಲ್ಲಿ ಎಲ್ಲಾ ಉತ್ಪನ್ನಗಳಿಗೂ ವಾಟರ್ ಫೂಟ್​ಪ್ರಿಂಟ್ (Water Footprint) ವಿವರ ನಮೂದಿಸಬೇಕು. ಅಂದರೆ, ಆ ಉತ್ಪನ್ನ ತಯಾರಿಸಲು ಎಷ್ಟು ನೀರು ವ್ಯಯವಾಗಿದೆ ಎಂದು ಗ್ರಾಹಕರಿಗೆ ತಿಳಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಕೋವಿಡ್-19 ಬಿಕ್ಕಟ್ಟಿನ ನಂತರ ಇದು ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಈಗ ಕೊಳ್ಳುವಿಕೆಯ ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕಿದೆ. ಉದಾಹರಣೆಗೆ, ಒಂದು ಶರ್ಟ್ ಅಥವಾ ಒಂದು ಸೀರೆ ಕೊಳ್ಳುತ್ತೇನೆಂದು ಭಾವಿಸುವ ಬದಲು, ನನ್ನ ಬಳಿ 19 ಶರ್ಟ್ ಇದೆ, ಈ 20ನೇ ಶರ್ಟ್ ಯಾಕೆ ಎಂದು ಪ್ರಶ್ನಿಸಿಕೊಳ್ಳೋಣ. ನಮಗೆ ಈಗ ಈ ದೃಷ್ಟಿಕೋನ ಅಗತ್ಯ ಇದೆ.

  ಅಣ್ಣಾಮಲೈ ಅವರ ಈ ಲೇಖನಮಾಲೆಯ ಎಲ್ಲಾ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

  ಇದೇ ರೀತಿಯಾಗಿ ಬೇರೆ ಸ್ತರದಲ್ಲಿ ಯೋಚಿಸುತ್ತಾ ಹೋಗೋಣ. ನಮಗೆ ಅರಿವಿಲ್ಲದೇ ನಾವೆಷ್ಟು ಕಾರ್ಬನ್ ಡೈ ಆಕ್ಸೈಡ್ ಬಳಸುತ್ತೇವೆ ನೋಡಿ. ಪ್ರಾಣಿ ಚರ್ಮದಿಂದ (ಲೆದರ್) ತಯಾರಿಸಿದ ವಸ್ತು; ಒಂದು ಡಿಯೋಡರೆಂಟ್; ಒಂದು ಫ್ಯಾನ್, ಒಂದು ಏರ್​ಕಂಡೀಷನರ್ ಇತ್ಯಾದಿಗಳಿಂದ ಅದೆಷ್ಟು ಸಂಪನ್ಮೂಲ ಬಳಕೆಯಾಗುತ್ತದೆ ಮತ್ತು ಅದೆಷ್ಟು ಪರಿಸರ ಹಾನಿಯಾಗುತ್ತದೆ ಎಂಬುದನ್ನು ನಾವು ಗೂಗಲ್ ಮಾಡಿಯೇ ತಿಳಿದುಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಜಾಗತಿಕ ತಾಪಮಾನ ಅಥವಾ ಗ್ಲೋಬಲ್ ವಾರ್ಮಿಂಗ್ ಬಗ್ಗೆ ಗಮನ ಕೊಡಿ. ಧ್ರುವ ಪ್ರದೇಶಗಳ ಹಿಮಗಡ್ಡೆಗಳಿಂದ ಹಿಡಿದು ಮರಗಳ ಹನನದವರೆಗೆ ಈ ಭೂಮಿಗೆ ತೀವ್ರ ಘಾಸಿ ಉಂಟು ಮಾಡುತ್ತಿದ್ದೇವೆ. ಇಂಗಾಲ ಹೀರುವಿಕೆಯ(Carbon sinking) ಸಾಮರ್ಥ್ಯ ಮೀರಿ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತಿದ್ದೇವೆ. ನಮ್ಮ ಸುತ್ತಲಿನ ವಸ್ತುಗಳಿಂದ ಏನೆಲ್ಲಾ ಸಂಪನ್ಮೂಲಗಳು ವ್ಯಯವಾಗಿವೆ ಎಂದು ಹಾಗೇ ಸುಮ್ಮನೆ ವ್ಯವಧಾನದಿಂದ ಯೋಚಿಸಿ ನೋಡೋಣ.

  ನಾವು ಭೂಮಿಗೆ ಘಾಸಿ ಮಾಡಿದರೆ ಅದು ಆಗಾಗ ತಿರುಗೇಟು ನೀಡುತ್ತದೆ. ಚೀನಾದ ವುಹಾನ್ ಪ್ರಾಂತ್ಯದ ಮಾಂಸ ಮಾರುಕಟ್ಟೆಯಿಂದ SARS COVID-19 ರೋಗ ಉದ್ಭವಿಸಿತು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ವಿಸ್ತೃತ ದೃಷ್ಟಿಯಲ್ಲಿ ಈ ಸಾಂಕ್ರಾಮಿಕ ರೋಗವನ್ನು ನೋಡಿದಾಗ ಏನನಿಸುತ್ತದೆ? ಅದು ನಮಗೆ ಕಲಿಸಿರುವ ಪಾಠಗಳು ಹೀಗಿರಬಹುದು:

  1) ಅಂದುಕೊಂಡಷ್ಟು ನಾವು ಬಲಶಾಲಿಗಳಲ್ಲ. ಎಲ್ಲವನ್ನೂ ನಾವು ಸುಲಭವಾಗಿ ಪರಿಣಿಸಿಬಿಟ್ಟಿದ್ದೆವು.

  2) ಭೂಮಿ ನಮಗೆ ತಿರುಗೇಟು ಕೊಡಲು ಆರಂಭಿಸಿದರೆ ಎಲ್ಲೆಲ್ಲಿಂದ ಏಟು ಬೀಳುತ್ತಿದೆ ಎಂದು ಗೊತ್ತಾಗದಷ್ಟು ಪ್ರಬಲವಾಗಿರುತ್ತದೆ ಆ ಏಟು.

  3) ನಮ್ಮ ಜೀವನ ಮತ್ತು ನಾವು ಭೋಗಿಸುವ ವಸ್ತುಗಳ ಬಗ್ಗೆ ಪ್ರಜ್ಞೆ ಇರಬೇಕು. ಈ ಕೋವಿಡ್ ಸಂಕಷ್ಟಕ್ಕೆ ಕಾರಣವಾದ ಚೀನೀಯರ ವಿಚಿತ್ರ ಆಹಾರಕ್ರಮ ನೆನಪಲ್ಲಿರುತ್ತದೆ.

  4) ಪ್ರಕೃತಿ ಮಾತೆಗೆ ಅವಶ್ಯ ಗೌರವ ಕೊಡಲೇಬೇಕು. ದುರಸ್ತಿಗೆ ಸಮಯ ಕೊಡದಷ್ಟು ವೇಗದಲ್ಲಿ ನಾವು ಸಂಪನ್ಮೂಲ ಅನುಭೋಗಿಸಿದರೆ ಪ್ರಕೃತಿಯ ವಿಕೋಪಕ್ಕೆ ಗುರಿಯಾಗಬೇಕಾಗುತ್ತದೆ.

  ಈಗಲೂ ನಾವು ಪಾಠ ಕಲಿಯದಿದ್ದರೆ ಇಂಥ ಸಾಂಕ್ರಾಮಿಕ ರೋಗಗಳ ದಾಳಿಯನ್ನು ಬಾರಿ ಬಾರಿ ಕಾಣಬೇಕಾಗುತ್ತದೆ. ಭವಿಷ್ಯದಲ್ಲಿ ನಿತ್ಯ ನರಕ ಎದುರಿಸಬೇಕಾಗುತ್ತದೆ. ಪರಿಸ್ಥಿತಿ ಕೈ ಮೀರುವ ಮುನ್ನ ಈಗಲೇ ಎಚ್ಚೆತ್ತುಕೊಂಡರೆ ಮನುಷ್ಯಕುಲ ಬದುಕುಳಿಯಬಹುದು.

  ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ

  (ಕೋವಿಡ್-19 ಸೋಂಕು ವ್ಯಾಪಿಸದಂತೆ ದೇಶಾದ್ಯಂತ 21 ದಿನ ಕಾಲ ದಿಗ್ಬಂಧನ ವಿಧಿಸಲಾಗಿದೆ. ಜನರೆಲ್ಲರೂ ಅನವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಮನೆಯಲ್ಲೇ ಇರಬೇಕೆಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಈ ಸಂದರ್ಭದಲ್ಲಿ 21 ದಿನಗಳನ್ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಲೇಖಕರು ತಿಳಿಹೇಳಿದ್ದಾರೆ. ಅವರ ಲೇಖನಮಾಲೆಯ 19ನೇ ಲೇಖನ ಇದು.)
  First published: