ಸೀಲ್‌ಡೌನ್ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿ ಜನರ ಭೀತಿಯನ್ನು ತೊಲಗಿಸಲಿ; ಹೆಚ್‌ಡಿಕೆ ಆಗ್ರಹ

ಸೀಲ್‌ಡೌನ್‌ ಕುರಿತು ಸರ್ಕಾರ ಕೂಡಲೇ ಅಧಿಕೃತ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಗಾಳಿ ಸುದ್ದಿಗಳು, ಸುಳ್ಳು ಸುದ್ದಿಗಳು ಜನರ ದಿಕ್ಕುತಪ್ಪಿಸಲಿವೆ ಎಂದು ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಹೆಚ್​.ಡಿ. ಕುಮಾರಸ್ವಾಮಿ.

ಹೆಚ್​.ಡಿ. ಕುಮಾರಸ್ವಾಮಿ.

  • Share this:
ಬೆಂಗಳೂರು (ಏಪ್ರಿಲ್. 11);ರಾಜ್ಯದಲ್ಲಿ ಸೀಲ್‌ಡೌನ್ ಮಾಡಲು ಸರ್ಕಾರ ನಿರ್ಧರಿಸಿದೆಯೇ? ಮಾಡುವುದಿದ್ದರೆ ಯಾವ್ಯಾವ ಜಿಲ್ಲೆಗಳಿಗೆ ಇದು ಅನ್ವಯ? ಸೀಲ್‌ಡೌನ್ ಅವಧಿಯಲ್ಲಿ ಏನೆಲ್ಲ ಲಭ್ಯ? ಏನು ಲಭ್ಯವಿರದು ಎಂಬುದರ ಬಗ್ಗೆ ಸರ್ಕಾರ ಕೂಡಲೇ ಅಧಿಕೃತವಾಗಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗಾಳಿ ಸುದ್ದಿಗಳು, ಸುಳ್ಳು ಮಾಹಿತಿಗಳು ಜನರ ದಿಕ್ಕು ತಪ್ಪಿಸಲಿವೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕೊರೋನಾ ವೈರಸ್‌ ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ಈಗಾಗಲೇ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಆದರೂ. ಜನ ಮಾತ್ರ ರಸ್ತೆಗೆ ಇಳಿಯುವುದನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಜನರಿಗೆ ಪರಿಸ್ಥಿತಿಯ ಗಂಭೀರತೆಯನ್ನು ಮನವರಿಕೆ ಮಾಡುವ ಸಲುವಾಗಿ ಸರ್ಕಾರ ಶನಿವಾರದಿಂದ ನಾನಾಕಡೆಗಳಲ್ಲಿ ಸೀಲ್‌ಡೌನ್ ಮಾಡಲಿದೆ ಎಂಬ ಸುದ್ದಿ ಶುಕ್ರವಾರದಿಂದ ಹರಿದಾಡುತ್ತಿದೆ. ಇದು ಸಾಮಾನ್ಯವಾಗಿ ಜನರ ಆತಂಕಕ್ಕೂ ಕಾರಣವಾಗಿದೆ.ಈ ಕುರಿತು ಇಂದು ಸರಣಿ ಟ್ವೀಟ್ ಮಾಡುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿರುವ ಹೆಚ್‌ಡಿಕೆ, “ಸೀಲ್‌ಡೌನ್‌ ಕುರಿತು ಸರ್ಕಾರ ಕೂಡಲೇ ಅಧಿಕೃತ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಗಾಳಿ ಸುದ್ದಿಗಳು, ಸುಳ್ಳು ಸುದ್ದಿಗಳು ಜನರ ದಿಕ್ಕುತಪ್ಪಿಸಲಿವೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

“ಸೀಲ್‌ಡೌನ್ ಭೀತಿ ಜನರನ್ನು ಸಮೂಹ ಸನ್ನಿಗೆ ದೂಡಿರುವಾಗಲೇ, ದಿನಸಿ ಅಂಗಡಿ, ಔಷಧಾಲಯಗಳು ತೆರೆಯಬೇಕೋ ಬೇಡವೋ ಎಂಬ ಅನುಮಾನ ಮಾರಾಟಗಾರರಲ್ಲಿ ಮೂಡಿದೆ. ಹಾಗೇನಾದರೂ ದಿನಸಿ ಅಂಗಡಿಗಳು, ಔಷಧಾಲಯಗಳು ಭೀತಿಯಿಂದ ಮುಚ್ಚಿದರೆ, ಜನರಿಗೆ ಆಹಾರ, ಔಷಧಗಳ ಲಭ್ಯತೆಯಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವ ತುರ್ತು ಎದುರಾಗಿದೆ” ಎಂದು ತಿಳಿಸಿದ್ದಾರೆ.ಮತ್ತೊಂದು ಟ್ವೀಟ್ನಲ್ಲಿ, “ಸೀಲ್‌ಡೌನ್‌ಗೆ ಸಂಬಂಧಿಸಿದಂತೆ ಬಗೆಬಗೆಯ ಸುದ್ದಿಗಳು ಹರಿದಾಡುತ್ತಿವೆ. ಜನರಲ್ಲಿ ಭೀತಿ ಆವರಿಸಿದ್ದು, ಸಮೂಹ ಸನ್ನಿಗೆ ಸಿಲುಕಿದ್ದಾರೆ. ಆಹಾರ, ಔಷಧ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿದ್ದು, ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ. ಇದು ಮತ್ತೊಂದು ಸಮಸ್ಯೆ ಸೃಷ್ಟಿಸುವ ಮುನ್ನ ಸರ್ಕಾರ ಅನುಮಾನಗಳನ್ನು ನೀಗಿಸಬೇಕು”ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಲಾಕ್‌ಡೌನ್; ಸೋಲಿಗರನ್ನು ಇನ್ನೂ ತಲುಪದ ಪಡಿತರ ಧಾನ್ಯ; ಪರಿತಪಿಸುತ್ತಿರುವ ಬುಡಕಟ್ಟು ಸಮಾಜ
First published: