Indian Economy - ಭಾರತದ ಆರ್ಥಿಕತೆ ತೀರಾ ಕ್ಷೀಣಿಸುವ ಸಾಧ್ಯತೆ ಇಲ್ಲ: ಕೆ.ವಿ. ಕಾಮತ್

ಭಾರತದ ಆರ್ಥಿಕತೆಯ ಗತಿ ಬದಲಾವಣೆಯ ಗ್ರಾಫ್ ಇಂಗ್ಲೀಷ್​ನ U ಅಕ್ಷರದ ಆಕಾರದಲ್ಲಿರುತ್ತದೆ. ಆದರೆ ಆರ್ಥಿಕತೆ ತಳಮುಟ್ಟಿದ ಬಳಿಕ ಒಮ್ಮೆಗೇ ಮೇಲೆ ಚಿಮ್ಮುವುದಿಲ್ಲ. ಸ್ವಲ್ಪ ನಿಧಾನಗತಿಯಲ್ಲಿ ಹಂತ ಹಂತವಾಗಿ, ಸ್ಥಿರವಾಗಿ ಮೇಲೆ ಸಾಗಬಹುದು ಎಂಬುದು ಕೆವಿ ಕಾಮತ್ ಅನಿಸಿಕೆ.

ಕೆವಿ ಕಾಮತ್

ಕೆವಿ ಕಾಮತ್

 • Share this:
  ನವದೆಹಲಿ(ಜುಲೈ 07): ಕೋವಿಡ್-19 ಬಿಕ್ಕಟ್ಟಿನಿಂದ ಭಾರತದ ಆರ್ಥಿಕತೆ ಕ್ಷೀಣಿಸಬಹುದು. ಆದರೆ, ಹಲವು ಆರ್ಥಿಕ ತಜ್ಞರು ಹೇಳಿರುವ ಮಟ್ಟದಷ್ಟು ಪ್ರಪಾತಕ್ಕೆ ಬೀಳುವುದಿಲ್ಲ ಎಂದು ದೇಶದ ಹಿರಿಯ ಬ್ಯಾಂಕಿಂಗ್ ಉದ್ಯಮಿ ಕೆ.ವಿ. ಕಾಮತ್ ಅಭಿಪ್ರಾಯಪಟ್ಟಿದ್ಧಾರೆ. ಸಿಎನ್​ಬಿಸಿ-ಟಿವಿ18 ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು, ಭಾರತದ ಆರ್ಥಿಕತೆ ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ಧಾರೆ.

  ಕೊರೋನಾ ವೈರಸ್ ಬಿಕ್ಕಟ್ಟಿನಲ್ಲಿ ಭಾರತದ ಆರ್ಥಿಕತೆ ಐತಿಹಾಸಿಕ ಅಧಃಪತನವಾಗಬಹುದು ಎಂದು ಅನೇಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 4.5ರಷ್ಟು ನಷ್ಟ ಹೊಂದಬಹುದು ಎಂದು ನಿರೀಕ್ಷಿಸಿದೆ. ಬಹುತೇಕ ಅಂತಾರಾಷ್ಟ್ರೀಯ ರೇಟಿಂಗ್ ಸಂಸ್ಥೆಗಳು ಭಾರತದ ಆರ್ಥಿಕತೆ ಬಗ್ಗೆ ಮಾಡಿರುವ ಅಂದಾಜುಗಳು ಆಶಾದಾಯಕವಾಗಿಲ್ಲ. ಈ ಹತಾಶೆಯ ಸಂದರ್ಭದಲ್ಲಿ 72 ವರ್ಷದ ಕೆ.ವಿ. ಕಾಮತ್ ಅವರು ಭಾರತದ ಆರ್ಥಿಕತೆ ಚೇತರಿಸಿಕೊಳ್ಳಬಹುದು ಎಂಬ ಸುಳಿವನ್ನು ಕಂಡಿದ್ದಾರೆ.

  ಮಂಗಳೂರಿನ ಕೆ.ವಿ. ಕಾಮತ್ ಅವರು ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಸಂಸ್ಥೆಗಳ ನೇತೃತ್ವ ವಹಿಸಿದ್ದಾರೆ. ಬ್ರಿಕ್ಸ್ ರಾಷ್ಟ್ರಗಳು ಸ್ಥಾಪಿಸಿದ ನ್ಯೂ ಡೆವಲಪ್ಮೆಂಟ್ ಬ್ಯಾಂಕ್​ನ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಇವರು ಈಗ ದೇಶದ ಆರ್ಥಿಕತೆ ಬಗ್ಗೆ ಭರವಸೆಯ ಮಾತುಗಳನ್ನಾಡಿರುವುದು ಗಮನಾರ್ಹ.

  ಇದನ್ನೂ ಓದಿ: Ban on Chinese Apps: ಭಾರತ ಬೆನ್ನಲ್ಲೀಗ ಚೀನಾ ಆ್ಯಪ್ಸ್​ ಬ್ಯಾನ್​ ಮಾಡಲು ಅಮೆರಿಕಾ, ಆಸ್ಟ್ರೇಲಿಯಾ ಚಿಂತನೆ

  ಇವರ ಪ್ರಕಾರ, ಭಾರತದ ಆರ್ಥಿಕತೆಯ ಗತಿ ಬದಲಾವಣೆಯ ಗ್ರಾಫ್ ಇಂಗ್ಲೀಷ್​ನ U ಆಕಾರದಲ್ಲಿರುತ್ತದೆ. ಆದರೆ ಆರ್ಥಿಕತೆ ತಳಮುಟ್ಟಿದ ಬಳಿಕ ಒಮ್ಮೆಗೇ ಮೇಲೆ ಚಿಮ್ಮುವುದಿಲ್ಲ. ಸ್ವಲ್ಪ ನಿಧಾನಗತಿಯಲ್ಲಿ ಹಂತ ಹಂತವಾಗಿ, ಸ್ಥಿರವಾಗಿ ಮೇಲೆ ಸಾಗಬಹುದು ಎಂಬುದು ಅವರ ಅನಿಸಿಕೆ.

  ವಾಹನ ತಯಾರಿಕಾ ಕ್ಷೇತ್ರದ ಕಂಪನಿಗಳು, ಪೇಂಟ್ ಕಂಪನಿಗಳು ಹಾಗೂ ಇತರ ಹಲವು ಉದ್ಯಮಗಳ ವ್ಯವಹಾರ ಕಡಿಮೆ ಆಗಿದೆ. ಕೋವಿಡ್ ಪಿಡುಗು ವಕ್ಕರಿಸುವ ಮುನ್ನ ಇದ್ದದ್ದಕ್ಕಿಂತ ಕಡಿಮೆ ವ್ಯವಹಾರ ಇದೆಯಾದರೂ ವರ್ಷದಿಂದ ವರ್ಷದ ಹೋಲಿಕೆಯಲ್ಲಿ ಅಷ್ಟೇನೂ ವ್ಯತ್ಯಾಸವಾಗಿಲ್ಲವೆನ್ನಲಾಗುತ್ತಿದೆ.

  ಈ ವಿಚಾರ ಪ್ರಸ್ತಾಪಿಸಿದ ಕೆ.ವಿ. ಕಾಮತ್, “ಮುಂಚೂಣಿಯ ಕಂಪನಿಗಳ ತಯಾರಿಕಾ ಚಟುವಟಿಕೆ ಶೇ. 80-90ರಷ್ಟರ ಮಟ್ಟಕ್ಕೆ ಚೇತರಿಸಿಕೊಂಡಿವೆ. ಸರಬರಾಜು ಸರಪಳಿ (ಸಪ್ಲೈ ಚೈನ್), ಸೌಕರ್ಯ ಸರಪಳಿ (ಲಾಜಿಸ್ಟಿಕ್ಸ್ ಚೈನ್) ವೇಗವಾಗಿ ಮರುಜೋಡಣೆಗೊಂಡಿದೆ. ವಿದ್ಯುತ್ ಉತ್ಪಾದನೆ ಶೇ. 95ರಷ್ಟು ಆಗುತ್ತಿದೆ. ರೈಲುಗಳ ಸರಕು ಸಾಗಣೆ ಮತ್ತೆ ಹಳೆಯ ಸ್ಥಿತಿಗೆ ಮರಳಿದೆ. ಹೀಗೆ ವಿವಿಧ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ.

  ಇದನ್ನೂ ಓದಿ: Covid-19 test: ಕಳೆದ 24 ಗಂಟೆಯಲ್ಲಿ 2.41 ಲಕ್ಷ ಮಂದಿಗೆ ಕೋವಿಡ್​-19 ಟೆಸ್ಟ್​ - ಐಸಿಎಂಆರ್‌

  “ಉದಾಹರಣೆಗೆ, ದ್ವಿಚಕ್ರ ವಾಹನಗಳ ಮಾರಾಟ ಶೇ. 70-80ರಷ್ಟು ಆಗುತ್ತಿದೆ. ಟ್ರಾಕ್ಟರ್​ಗಳು ಶೇ. 80-90ರಷ್ಟು ಸೇಲ್ ಆಗುತ್ತಿವೆ” ಎಂದು ತಿಳಿಸಿದರು.

  ಕೋವಿಡ್ ಬಿಕ್ಕಟ್ಟಿನ ಮಧ್ಯೆಯೂ ಕೃಷಿ ಕ್ಷೇತ್ರ ಬಹಳ ಕ್ಷಿಪ್ರವಾಗಿ ಚೇತರಿಸಿಕೊಂಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಹೆಚ್ಚು ಬಾಧಿಸಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಋತುಮಾನದಲ್ಲಿ ಬಿತ್ತನೆ ಪ್ರಮಾಣ ದ್ವಿಗುಣಗೊಂಡಿದೆ ಎಂಬುದು ಕೆ.ವಿ. ಕಾಮತ್ ಅನಿಸಿಕೆ.  ಸಿಎಂಐಇ ಬಹಿರಂಗಪಡಿಸಿದ ಮಾಹಿತಿ ಪ್ರಕಾರ ಜೂನ್ ತಿಂಗಳಲ್ಲಿ 7 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಅದರಲ್ಲಿ ಕೃಷಿ ವಲಯದಲ್ಲೇ 1.2 ಕೋಟಿ ಉದ್ಯೋಗಗಳಾಗಿವೆ.
  Published by:Vijayasarthy SN
  First published: