ಪಿಎಂ ಕೇರ್​ನಿಂದ ಬಂದ ವೆಂಟಿಲೇಟರ್ಸ್ ನಕಲಿ: ಕುಣಿಗಲ್ ಶಾಸಕ ಡಾ. ರಂಗನಾಥ್ ಗಂಭೀರ ಆರೋಪ

ಪಿಎಂ ಕೇರ್ ಸ್ಕೀಮ್​ನಿಂದ ರಾಜ್ಯಕ್ಕೆ ಕೊಡಲಾಗಿರುವ 1500 ವೆಂಟಿಲೇಟರ್​ಗಳು ಜೀವ ಉಳಿಸಲು ಉಪಯೋಗಕ್ಕೆ ಬರುವುದಿಲ್ಲ. ಈಗ ಇನ್ವೇಸಿವ್ ವೆಂಟಿಲೇಟರ್​ಗಳ ಅಗತ್ಯ ಇದೆ ಎಂದು ಕುಣಿಗಲ್ ಶಾಸಕ ಡಾ. ರಂಗನಾಥ್ ಹೇಳಿದ್ದಾರೆ.

ಕುಣಿಗಲ್ ಶಾಸಕ ಡಾ. ರಂಗನಾಥ್

ಕುಣಿಗಲ್ ಶಾಸಕ ಡಾ. ರಂಗನಾಥ್

  • Share this:
ಬೆಂಗಳೂರು(ಏ. 20): ರಾಜ್ಯದಲ್ಲಿ ವೆಂಟಿಲೇಟರ್ಸ್ ಕೊರತೆ ಇಲ್ಲ. ಆರು ಸಾವಿರ ವೆಂಟಿಲೇಟರ್ಸ್ ಇದೆ ಎಂದು ಸರ್ಕಾರ ನೀಡಿರುವ ಹೇಳಿಕೆಯನ್ನು ಕುಣಿಗಲ್ ಶಾಸಕ ಡಾ. ಹೆಚ್ ಡಿ ರಂಗನಾಥ್ ಬಲವಾಗಿ ಅಲ್ಲಗಳೆದಿದ್ದಾರೆ. ರಾಜ್ಯದಲ್ಲಿ ಎಲ್ಲೂ ವೆಂಟಿಲೇಟರ್ಸ್ ಸಿಗುತ್ತಿಲ್ಲ. ಸರ್ಕಾರ ಸುಳ್ಳು ಹೇಳುತ್ತಿದೆ. ನೀವು ಸರ್ಕಾರಿ ಆಸ್ಪತ್ರೆಯಾಗಲೀ ಯಾವುದೇ ಆಸ್ಪತ್ರೆಯಲ್ಲಾಗಲೀ ಒಂದೇ ಒಂದು ವೆಂಟಿಲೇಟರ್ ಬೆಡ್ ಇದ್ದರೆ ಹುಡುಕಿ ಎಂದು ಮಾಧ್ಯಮಗಳಿಗೇ ರಂಗನಾಥ್ ಸವಾಲು ಹಾಕಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕುಣಿಗಲ್ ಕ್ಷೇತ್ರ ಕಾಂಗ್ರೆಸ್ ಶಾಸಕ, ಪಿಎಂ ಕೇರ್ಸ್ ಯೋಜನೆಯಿಂದ ರಾಜ್ಯಕ್ಕೆ ಬಂದಿರುವ 1500 ವೆಂಟಿಲೇಟರ್​ಗಳು ನಕಲಿ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಪಿಎಂ ಕೇರ್​ನಲ್ಲಿ ರಾಜ್ಯಕ್ಕೆ 1500 ವೆಂಟಿಲೇಟರ್ಸ್ ಬಂದಿವೆ. ಆದರೆ, ನಾನೊಬ್ಬ ವೈದ್ಯನಾಗಿ ಹೇಳುತ್ತೇನೆ, ಈ ವೆಂಟಿಲೇಟರ್​ಗಳು ನಕಲಿಯಾಗಿವೆ. ಸರ್ಕಾರಿ ಆಸ್ಪತ್ರೆಯ ವೈದ್ಯರಾದರೂ ಈ ವೆಂಟಿಲೇಟರ್​ಗಳನ್ನ ಬಳಸುತ್ತಿದ್ದಾರಾ ವಿಚಾರಿಸಿ ನೋಡಿ. ಪಿಎಂ ಕೇರ್ ಸ್ಕೀಮ್​ನಲ್ಲಿ ಬಂದಿರುವ ಈ ವೆಂಟಿಲೇಟರ್​ಗಳು ನಾನ್ ಇನ್ವೇಸಿವ್ ವೆಂಟಿಲೇಟರ್​ಗಳಾಗಿವೆ. ಇವುಗಳನ್ನ ಆಕ್ಸಿಜನ್ ನೀಡಲು ಮಾತ್ರ ಬಳಕೆ ಮಾಡಬಹುದು. ಆದರೆ, ಜನರ ಪ್ರಾಣ ಕಾಪಾಡಲು ಇನ್ವೇಸಿವ್ ವೆಂಟಿಲೇಟರ್​ಗಳು ಬೇಕು ಎಂದು ಶಾಸಕ ಡಾ. ಹೆಚ್ ಡಿ ರಂಗನಾಥ್ ಗುಡುಗಿದ್ದಾರೆ.

ಇದನ್ನೂ ಓದಿ: ಮುಖ್ಯಮಂತ್ರಿ ಕೈಮುಗಿದು ಕೇಳಿಕೊಂಡರೂ ದೇಶದ ರಾಜಧಾನಿಯಿಂದ ವಲಸೆ ಹೊರಟಿರುವ ಕಾರ್ಮಿಕರು

ದುಬಾರಿ ಬೆಲೆಗೆ ವೆಂಟಿಲೇಟರ್ಸ್ ಖರೀದಿ ಮಾಡಲು ಸಾಧ್ಯವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಡಾ. ರಂಗನಾಥ್ ಅವರು ಕಾರಿನ ಉದಾಹರಣೆ ನೀಡಿ, “ನಾವು ರೋಲ್ಸ್ ರಾಯ್ಸ್ ಕಾರು ತನ್ನಿ ಎಂದು ಹೇಳುತ್ತಿಲ್ಲ. ಮಾರುತಿ 800 ಕಾರನ್ನಾದರೂ ಕೊಡಿ ಎನ್ನುತ್ತಿದ್ದೇವೆ. ದುಬಾರಿ ಬೆಲೆ ಆಗುತ್ತೆ ಅಂತ ಎತ್ತಿನ ಗಾಡಿ ಕೊಟ್ಟರೆ ಹೇಗೆ” ಎಂದು ಪ್ರಶ್ನಿಸಿದ್ಧಾರೆ.

ಆಕ್ಸಿಜನ್ ಕೊರತೆ ಎದುರಾಗಿರುವುದಕ್ಕೆ ಸರ್ಕಾರವೇ ನೇರ ಹೊಣೆ ಮಾಡಿದ ರಂಗನಾಥ್, ರಾಜ್ಯದಲ್ಲಿ ಇಂಡಸ್ಟ್ರಿಯಲ್ ಆಕ್ಸಿಜನ್ ಸಾಕಷ್ಟಿದೆ. ಇದನ್ನ ಹಾಸ್ಪಿಟಲ್ ಆಕ್ಸಿಜನ್ ಆಗಿ ಪರಿವರ್ತಿಸಬಹುದು. ಆದರೂ ಸರ್ಕಾರ ಈ ಕೆಲಸ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾದ ಮೊದಲ ಅಲೆಗೆ ಚೀನಾ ಕಾರಣವಾದರೆ, ಎರಡನೇ ಅಲೆಗೆ ನಮ್ಮ ಸರ್ಕಾರಗಳೇ ಕಾರಣವಾಗಿವೆ. ಸರ್ಕಾರ ಹೇಳುವುದು ಒಂದು ಮಾಡುವುದು ಇನ್ನೊಂದಾಗಿದೆ. ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಸಾವಿಗೆ ಸರ್ಕಾರವೇ ಹೊಣೆಯಾಗಿದೆ. ಕೂಡಲೇ ಅಗತ್ಯ ಬಿಗಿ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ ಎಂದವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ: Covid Vaccine: ಎರಡನೇ ಡೋಸ್ ಲಸಿಕೆ ಪಡೆಯಲು 28 ದಿನಗಳ ಬದಲು 45 ದಿನ ಬಿಟ್ಟು ಬನ್ನಿ ಎನ್ನುತ್ತಿರುವುದೇಕೆ ಗೊತ್ತಾ? ಇದರ ಹಿಂದಿದೆ ಹೊಸಾ ಸಂಶೋಧನೆ !

ಇಂದು ಆಸ್ಪತ್ರೆಗಳಿಗೆ ಓವರ್ ಬರ್ಡನ್ ಆಗಿದೆ. ವೈದ್ಯರಿಗೆ ಓವರ್ ಬರ್ಡನ್ ಆಗಿದೆ. ವೈದ್ಯರು ಮತ್ತು ಆಸ್ಪತ್ರೆಗಳು ಹತಾಶರಾಗಿದ್ದಾರೆ. ವೈದ್ಯಕೀಯ ಸಿಬ್ಬಂದಿಯ ಕೊರತೆ ಇದೆ ಎಂದು ಸರ್ಕಾರ ಸಬೂಬು ಹೇಳುತ್ತದೆ. ಆದರೆ, ಕೊನೆಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳನ್ನ ಇಂಟರ್ನ್​ಶಿಪ್ ಆಗಿ ಆಸ್ಪತ್ರೆಗಳಿಗೆ ನಿಯೋಜಿಸಲಿ ಎಂದೂ ಕುಣಿಗಲ್ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ. ಹೆಚ್ ಡಿ ರಂಗನಾಥ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ಧಾರೆ.

ರಾಜ್ಯದಲ್ಲಿ ಸತತವಾಗಿ ದಿನವೊಂದಕ್ಕೆ 10 ಸಾವಿರಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೆಂಗಳೂರಿನಲ್ಲೇ ಬಹುತೇಕ ಪ್ರಕರಣಗಳು ವರದಿಯಾಗುತ್ತಿದ್ದು, ಇಲ್ಲಿ ತಲೆಗರೆಗಳು ಉದುರುವಂತೆ ಸಾವುಗಳಾಗುತ್ತಿವೆ. ಆಸ್ಪತ್ರೆಗಳಲ್ಲಿ ವೆಂಟಿಲೇಟರ್​ಗಳು ಇರಲಿ ಬೆಡ್​​ಗಳು ಸಿಗದೇ ರೋಗಿಗಳು ಮರಣವಪ್ಪುತ್ತಿದ್ದಾರೆ. ಸುಮನಹಳ್ಳಿಯ ಚಿತಾಗಾರದಲ್ಲಿ ಮೃತದೇಹಗಳ ದೊಡ್ಡ ಕ್ಯೂ ಇದೆ.

ವರದಿ: ಚಿದಾನಂದ ಪಟೇಲ್
Published by:Vijayasarthy SN
First published: