ಡೆಹರಾಡೂನ್ (ಏ.14): ದೇಶದಲ್ಲಿ ನಿತ್ಯ ಲಕ್ಷಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದು, ಕೊರೋನಾ ಕಡಿವಾಣಕ್ಕೆ ಅವಿರತವಾಗಿ ಶ್ರಮಿಸಲಾಗುತ್ತಿದೆ. ಬಹುತೇಕ ರಾಜ್ಯಗಳು ಸೋಂಕಿನ ಸರಪಳಿಗೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿವೆ. ಈ ಮಧ್ಯೆ ಉತ್ತರಾಖಂಡ್ನಲ್ಲಿ ನಡೆಯುತ್ತಿರುವ ಕುಂಭಮೇಳ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹರಿದ್ವಾರದಲ್ಲಿ ಸಾಹಿ ಸ್ನಾನ್ (ಪುಣ್ಯ ಸ್ನಾನ)ದಿಂದ ಸೋಂಕು ಸ್ಫೋಟಿಸಿದೆ. ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಗಂಗೆಯಲ್ಲಿ ಲಕ್ಷಾಂತರ ಮಂದಿ ಮಿಂದೆದ್ದ ಬಳಿಕ 1,086 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಏ. 12ರಂದು ಹರಿದ್ವಾರದ ಹರಿ ಕಿ ಪೌರ್ ಘಾಟ್ನಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಪುಣ್ಯ ಸ್ನಾನದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಾಗಾಸಾಧುಗಳು, ಸಾಧು-ಸಂತರು ಹಾಗೂ ಭಕ್ತರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಕೂಡ ಧರಿಸದೇ ಪುಣ್ಯ ಸ್ನಾನವನ್ನು ಕೈಗೊಂಡಿದ್ದರು. ಏ.10ರಿಂದ ಇಲ್ಲಿಯವರೆಗೆ ಕುಂಭಮೇಳ ನಡೆದ ಪ್ರದೇಶದಲ್ಲಿ ನಡೆಸಿದ ಕೋವಿಡ್ ಪರೀಕ್ಷೆಯಲ್ಲಿ 1,086 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದೆ. 100ಕ್ಕೂ ಹೆಚ್ಚು ಯಾತ್ರಾರ್ಥಿಗಳು, 20ಕ್ಕೂ ಹೆಚ್ಚು ಸ್ವಾಮೀಜಿಗಳಿಗೆ ಸೋಂಕು ತಗುಲಿದೆ.
ಉತ್ತರಾಖಂಡ್ ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟಾರೆ 1,925 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, 13 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ4 ದಿನಗಳಲ್ಲಿ ಕುಂಭಮೇಳ ಪ್ರದೇಶದಲ್ಲೇ 1,086 ಪ್ರಕರಣಗಳು ದಾಖಲಾಗಿದೆ. ಕುಂಭಮೇಳದಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸದೇ ಇದ್ದಿದ್ದೇ ಕೊರೋನಾ ಸ್ಫೋಟಕ್ಕೆ ಕಾರಣ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ತಬ್ಲಿಗಿ ವರ್ಸಸ್ ಕುಂಭಮೇಳ ಚರ್ಚೆ ಜೋರಾಗಿದೆ.
ಇದನ್ನು ಓದಿ: ಮಹಾರಾಷ್ಟ್ರದಲ್ಲಿ 15 ದಿನಗಳ ಕಾಲ ಜನತಾ ಕರ್ಫ್ಯೂ; ಯಾವುದಕ್ಕೆಲ್ಲಾ ನಿರ್ಬಂಧ ಗೊತ್ತಾ?
ಕಳೆದ ವರ್ಷ ಸೋಂಕು ಹಬ್ಬಲು ಕಾರಣವಾದ ದೆಹಲಿಯ ನಿಜಾಮುದ್ದೀನ್ ಮರ್ಕಜ್ನ ಘಟನೆಯನ್ನು ಕುಂಭಮೇಳ ಮೀರಿಸಲಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಉತ್ತಾರಾಖಂಡ್ ಸಿಎಂ ತಿರಥ್ ಸಿಂಗ್ ರಾವತ್, ಕುಂಭಮೇಳಕ್ಕೂ ತಬ್ಲಿಘಿ ಜಮಾತ್ಗೂ ಹೋಲಿಕೆ ಬೇಡ. ನಿಜಾಮುದ್ದೀನ್ ಮರ್ಕಜ್ ಮುಚ್ಚಿದ ಪ್ರದೇಶದಲ್ಲಿ ನಡೆದಿತ್ತು. ಅದರಲ್ಲಿ ವಿದೇಶಿಗರು ಭಾಗಿಯಾಗಿದ್ದರು. ಆದರೆ ಕುಂಭಮೇಳ ವಿಸ್ತಾರವಾದ ಪ್ರದೇಶದಲ್ಲಿ ನಡೆದಿದೆ. ಕುಂಭಮೇಳ ಹರಿದ್ವಾರದಲ್ಲಿ ಮಾತ್ರವಲ್ಲ ಹೃಷಿಕೇಶ, ನೀಲಕಂಠ ಭಾಗಗಳಲ್ಲೂ ನಡೆದಿದೆ. ಹರಿಯುವ ಗಂಗಾ ನದಿಯಲ್ಲಿ ಬೇರೆ ಬೇರೆ ಘಾಟ್ಗಳಲ್ಲಿ, ನಿಗದಿತ ಸಮಯದಲ್ಲಿ ಸಾಹಿ ಸ್ನಾನ ನಡೆದಿದೆ. ಇದರಿಂದ ಸೋಂಕು ಹಬ್ಬುವುದಿಲ್ಲ ಎಂದು ರಾವತ್ ಸಮರ್ಥಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಕುಂಭಮೇಳ 4 ತಿಂಗಳುಗಳ ಕಾಲ ನಡೆಯುತ್ತದೆ. ಆದರೆ, ಕೊರೋನಾ ಸಾಂಕ್ರಾಮಿಕ ರೋಗದಿಂದ ಈ ಬಾರಿ ಒಂದು ತಿಂಗಳ ಮಟ್ಟಿಗೆ ಆಚರಿಸಲು ಅನುಮತಿ ನೀಡಲಾಗಿದೆ. ಏ.1ರಿಂದ 30ರವರೆಗೆ ಈ ಬಾರಿ ಕುಂಭಮೇಳ ನಡೆಯುತ್ತಿದೆ. ಮುಂದಿನ ಪುಣ್ಯಸ್ನಾನವನ್ನು ಏ.15 ಹಾಗೂ ಏ.27ರಂದು ನಿಗದಿಪಡಿಸಲಾಗಿದೆ. ಇನ್ನು ಕೊರೋನಾ ಹರಡುವಿಕೆಗೆ ಕಡಿವಾಣ ಹಾಕುವ ದೃಷ್ಟಿಯಿಂದ ಕುಂಭಮೇಳಕ್ಕೆ ಬರುವವರು 72 ಗಂಟೆಗಳ ಹಿಂದಿನ ಕೋವಿಡ್ ನೆಗೆಟಿವ್ ರಿಪೋರ್ಟ್ ತರುವುದು ಕಡ್ಡಾಯ ಎಂದು ಉತ್ತರಾಖಂಡ್ ಹೈಕೋರ್ಟ್ ಮೊದಲೇ ಷರತ್ತು ವಿಧಿಸಿದೆ.
(ವರದಿ: ಕಾವ್ಯಾ. ವಿ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ