ಕೃಷ್ಣ ಟಾಕೀಸ್ ತಾತ್ಕಾಲಿಕ ಸ್ಥಗಿತ; ಕೋವಿಡ್ ಹಾವಳಿ ಕಡಿಮೆಯಾದ ಬಳಿಕ ರಿ-ರಿಲೀಸ್ 

ನಾಳೆಯಿಂದಲೇ ಬಂದ್ ಮಾಡಬೇಕು ಎಂದು ತಿಳಿಸಿದರೂ ನಾವು ಸಿದ್ಧ ಎಂದು ಕೂಡ ಚಿತ್ರತಂಡ ಸ್ಪಷ್ಟಪಡಿಸಿದೆ. ಹೇಗಿದ್ದರೂ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೊರೋನಾ ಹಾವಳಿ ಕಡಿಮೆಯಾಗಿ, ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ  ಮತ್ತೆ ಶೇಕಡಾ 100ರಷ್ಟು ಹೌಸ್‌ಫುಲ್ ಆಗಲು ಅವಕಾಶ ನೀಡಿದ ಬಳಿಕವೇ ಸಿನಿಮಾ ರೀ-ರಿಲೀಸ್ ಮಾಡುವ ಬಗ್ಗೆ ಕೃಷ್ಣ ಟಾಕೀಸ್ ಚಿತ್ರತಂಡ ಚರ್ಚಿಸಿದೆ.

ಕೃಷ್ಣ ಟಾಕೀಸ್.

ಕೃಷ್ಣ ಟಾಕೀಸ್.

  • Share this:
ಕೋವಿಡ್ ಸೋಂಕನ್ನು ಕಟ್ಟಿ ಹಾಕಲು ಕೈಗೊಂಡಿರುವ ಕಠಿಣ ಕ್ರಮಗಳು ಕನ್ನಡ ಚಿತ್ರರಂಗವನ್ನು ಕಟ್ಟಿ ಹಾಕಿವೆ. ಈಗಾಗಲೇ ರಿಲೀಸ್ ಆದ ಒಂದೇ ವಾರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ್ದ ಯುವರತ್ನ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗಿದ್ದು ಗೊತ್ತೇಯಿದೆ. ಅದರ ಬೆನ್ನಲ್ಲೇ ಏಪ್ರಿಲ್ 9ರಂದು ತೆರೆಗೆ ಬಂದ ಕೊಡೆಮುರುಗ ಎಂಬ ಸಿನಿಮಾ ಪ್ರದರ್ಶನವನ್ನೂ ಒಂದು ವಾರದಲ್ಲೇ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗ ಸ್ಯಾಂಡಲ್‌ವುಡ್ ಕೃಷ್ಣ ಅಜೇಯ್ ರಾವ್ ನಟಿಸಿರುವ ಕೃಷ್ಣ ಟಾಕೀಸ್ ಚಿತ್ರತಂಡ ಸಹ ತಾತ್ಕಾಲಿಕವಾಗಿ ಸಿನಿಮಾ ಪ್ರದರ್ಶನವನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಹೌದು, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ, ಕೃಷ್ಣ ರುಕ್ಕು, ಕೃಷ್ಣ ಸನ್ ಆಫ್ ಸಿಎಂ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್ ಕೃಷ್ಣ ಎಂದೇ ಖ್ಯಾತಿಯಾದವರು ನಟ ಅಜೇಯ್ ರಾವ್. ಈ ಕೃಷ್ಣ ಸರಣಿಗೆ ಮತ್ತೊಂದು ಸೇರ್ಪಡೆ ಕೃಷ್ಣ ಟಾಕೀಸ್. ವಿಶೇಷ ಅಂದರೆ ಕೃಷ್ಣ ಸರಣಿಯ ಎಲ್ಲ ಸಿನಿಮಾಗಳೂ ಹಿಟ್ ಎನಿಸಿಕೊಂಡಿದ್ದವು. ಈಗ ಇದೇ ಏಪ್ರಿಲ್ 16ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದ ಕೃಷ್ಣ ಟಾಕೀಸ್ ಚಿತ್ರ ಕೂಡ ಹಿಟ್ ಲಿಸ್ಟ್ ಸೇರುವ ನಿರೀಕ್ಷೆಯಿತ್ತು. ಅದಕ್ಕೆ ಪೂರಕವಾಗಿ ಸಿನಿಮಾ ನೋಡಿದ ಪ್ರೇಕ್ಷಕರೂ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಇದನ್ನು ಓದಿ: ಸೋಶಿಯಲ್ ಮೀಡಿಯಾದಲ್ಲಿ ಗೆಳೆಯ ರೋಹ್ಮಾನ್ ಶಾಲ್ ಕಾಲು ಎಳೆದ ಸುಷ್ಮಿತಾ ಸೇನ್: ಮಾಜಿ ವಿಶ್ವ ಸುಂದರಿಗೆ ನೆಟ್ಟಿಗರ ಸಾಥ್

ಏಪ್ರಿಲ್ 7ರಿಂದ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಶೇಕಡಾ 50ರಷ್ಟು ನಿರ್ಬಂಧ ಹೇರಿದ್ದರೂ, ತಮ್ಮ ಸಿನಿಮಾ ಮೇಲಿದ್ದ ಭರವಸೆಯಿಂದ ಕೃಷ್ಣ ಟಾಕೀಸ್ ಚಿತ್ರತಂಡ ಸಿನಿಮಾ ರಿಲೀಸ್ ಮಾಡಿತ್ತು. ಆದರೆ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಚಿತ್ರತಂಡವನ್ನು ಕಟ್ಟಿ ಹಾಕಿದೆ. ಹೀಗಾಗಿಯೇ ಕೃಷ್ಣ ಟಾಕೀಸ್ ಟೀಮ್ ಇಂದು ಸಭೆ ನಡೆಸಿದ ನಾಯಕ ಅಜೇಯ್ ರಾವ್, ನಿರ್ದೇಶಕ ವಿಜಯಾನಂದ್, ನಿರ್ಮಾಪಕ ಗೋವಿಂದರಾಜು ಆಲೂರು ಹಾಗೂ ವಿತರಕ ಜಗದೀಶ್, ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಏಪ್ರಿಲ್ 20ರವರೆಗೂ ಶೇಕಡಾ 50ರಷ್ಟು ಆಕುಪನ್ಸಿಗೆ ಅನುಮತಿ ನೀಡಲು ಹಾಗೂ ಕೊರೋನಾ ಪರಿಸ್ಥಿತಿ ನೋಡಿಕೊಂಡು ಮುಂದಿನ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರ ತಿಳಿಸಿತ್ತು. ಆದರೆ ದುರಾದೃಷ್ಟವಶಾತ್ ಕೊರೋನಾ ಪ್ರಕರಣಗಳು ಭಾರತದಲ್ಲಿ ಎರಡೂವರೆ ಲಕ್ಷ ದಾಟಿದ್ದು, ಕರ್ನಾಟಕದಲ್ಲೂ 20 ಸಾವಿರ ಮುಟ್ಟಿದೆ. ಹೀಗಿರುವಾಗ ಜನರ ಆರೋಗ್ಯದ ದೃಷ್ಟಿಯಿಂದ ಇದೇ ಏಪ್ರಿಲ್ 22ರ ನಂತರ ಕೃಷ್ಣ ಟಾಕೀಸ್ ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲು ಚಿತ್ರತಂಡ ನಿರ್ಧರಿಸಿದೆ. ಹಾಗೇನಾದರೂ ನಾಳೆಯಿಂದಲೇ ಬಂದ್ ಮಾಡಬೇಕು ಎಂದು ತಿಳಿಸಿದರೂ ನಾವು ಸಿದ್ಧ ಎಂದು ಕೂಡ ಚಿತ್ರತಂಡ ಸ್ಪಷ್ಟಪಡಿಸಿದೆ. ಹೇಗಿದ್ದರೂ ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಕೊರೋನಾ ಹಾವಳಿ ಕಡಿಮೆಯಾಗಿ, ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ  ಮತ್ತೆ ಶೇಕಡಾ 100ರಷ್ಟು ಹೌಸ್‌ಫುಲ್ ಆಗಲು ಅವಕಾಶ ನೀಡಿದ ಬಳಿಕವೇ ಸಿನಿಮಾ ರೀ-ರಿಲೀಸ್ ಮಾಡುವ ಬಗ್ಗೆ ಕೃಷ್ಣ ಟಾಕೀಸ್ ಚಿತ್ರತಂಡ ಚರ್ಚಿಸಿದೆ.
Published by:HR Ramesh
First published: