news18-kannada Updated:March 25, 2020, 7:29 PM IST
ಡಿ.ಕೆ. ಶಿವಕುಮಾರ್
ಬೆಂಗಳೂರು (ಮಾ.25) : ತಾವು ಉತ್ಪಾದಿಸಿದ ರೇಷ್ಮೆ ಗೂಡುಗಳನ್ನು ವಿಲೇವಾರಿ ಮಾಡಲಾಗದೆ ರಾಜ್ಯದ ರೇಷ್ಮೆ ಬೆಳೆಗಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಜತೆಗೆ ರೇಷ್ಮೆ ಬಿಚ್ಚಾಣಿಕೆದಾರರೂ ಪರೋಕ್ಷ ಹೊಡೆತಕ್ಕೆ ಸಿಕ್ಕಿ ನಲುಗಿ ಹೋಗಿದ್ದಾರೆ. ಹೀಗಾಗಿ ಅವರ ನೆರವಿಗೆ ರಾಜ್ಯ ಸರ್ಕಾರ ಬರಬೇಕು ಎಂದು ಸಿಎಂ ಯಡಿಯೂರಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪತ್ರ ಬರೆದು ಒತ್ತಾಯಿಸಿದ್ದಾರೆ.
ರಾಮನಗರ, ಚನ್ನಪಟ್ಟಣ, ಕನಕಪುರ, ಮಾಗಡಿ, ಕುಣಿಗಲ್, ಮಳವಳ್ಳಿ, ಮಂಡ್ಯ, ತುಮಕೂರು ಸೇರಿದಂತೆ ರಾಜ್ಯದ ಅನೇಕ ಕಡೆ ರೇಷ್ಮೆ ಬೆಳೆಗಾರರು ಗೂಡುಗಳನ್ನು ಉತ್ಪಾದಿಸಿಟ್ಟಿದ್ದಾರೆ. ಆದರೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಹೇರಿರುವ ಲಾಕ್ಡೌನ್ನಿಂದಾಗಿ ರೈತರು ರೇಷ್ಮೆ ಗೂಡುಗಳನ್ನು ಮಾರುಕಟ್ಟೆಗಳಿಗೆ ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಒಂದು ಕಡೆ ಮಾರುಕಟ್ಟೆ ಬಂದ್ ಆಗಿದೆ. ಇನ್ನೊಂದೆಡೆ ರೈತರು ಮನೆಯಿಂದ ಹೊರಗೆ ಕಾಲಿಡಲಾಗುತ್ತಿಲ್ಲ. ಇದರಿಂದ ಉತ್ಪನ್ನ ಹಾಳಾಗುತ್ತಿದೆ. ಜೊತೆಗೆ ರೇಷ್ಮೆ ಬಿಚ್ಚಾಣಿಕೆದಾರರೂ ಕೆಲಸವಿಲ್ಲದೆ ದಿನನಿತ್ಯದ ಬದುಕಿಗೆ ಪರಿತಪಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಸರಕಾರವೇ ರೈತರಿಂದ ರೇಷ್ಮೆ ಗೂಡುಗಳನ್ನು ಸಂಗ್ರಹಿಸಲು ವ್ಯವಸ್ಥೆ
ಮಾಡಬೇಕಿದೆ. ಇಲ್ಲವೇ ರೈತರು ರೇಷ್ಮೆ ಮಾರುಕಟ್ಟೆಗಳಿಗೆ ಗೂಡುಗಳನ್ನು ತಂದು ಬಿಕರಿ ಮಾಡಲು ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ :
ಅನಗತ್ಯವಾಗಿ ರಸ್ತೆಯಲ್ಲಿ ತಿರುಗಾಡುವವರಿಗೆ ಬಸ್ಕಿ ಶಿಕ್ಷೆ; ಊರಿಗೇ ಬೇಲಿ ಹಾಕಿಕೊಂಡ ಗ್ರಾಮಸ್ಥರು
ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂಬುದು ಸರಿ. ಆದರೆ, ಅದರಿಂದ ರೈತರ ಉತ್ಪನ್ನಗಳು ನಾಶವಾಗಬಾರದು. ಹಾಗೇನಾದರೂ ಆದರೆ ಯಾರಿಗೂ ಲಾಭವಾಗದೆ ರಾಷ್ಟ್ರೀಯ ನಷ್ಟ ಆಗುತ್ತದೆ. ರಾಜ್ಯದಲ್ಲಿ ರೇಷ್ಮೆ ಬೆಳೆಗಾರರು ಹಾಗೂ ರೈತರ ಸಂಕಷ್ಟವೇನೆಂಬುದು ನನಗೆ ಚೆನ್ನಾಗಿ ಗೊತ್ತು. ಬೆಳೆದಿರುವ ರೇಷ್ಮೆ ಗೂಡು ಹಾಳಾಗಬಾರದು. ಹೀಗಾಗಿ ರಾಜ್ಯ ಸರ್ಕಾರವು ರೇಷ್ಮೆಗೂಡು ಖರೀದಿಸುವ ಅಥವಾ ಸೂಕ್ತ ಮಾರುಕಟ್ಟೆ ಒದಗಿಸುವಂತೆ ಕ್ಷಿಪ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ತಮ್ಮ ಪತ್ರದಲ್ಲಿ ಡಿಕೆಶಿ ಒತ್ತಾಯಿಸಿದ್ದಾರೆ.
First published:
March 25, 2020, 7:12 PM IST