ಕೊರೋನಾ ನಿಭಾಯಿಸಲು ಸರ್ಕಾರ ವಿಫಲ; ಕಾಂಗ್ರೆಸ್​ನಿಂದ ಹೆಲ್ಪ್​ಲೈನ್, ಟ್ಯಾಸ್ಕ್ ಫೋರ್ಸ್ ರಚನೆ: ಡಿಕೆಶಿ

ಮಾರುಕಟ್ಟೆಗಳನ್ನ ಕೂಡಲೇ ತೆರೆಯಬೇಕು. ಪದಾರ್ಥಗಳನ್ನ ಹೆಚ್ಚು ದಿನ ಸಂಗ್ರಹ ಮಾಡಿಕೊಳ್ಳಲು ಆಗುವುದಿಲ್ಲ ಎಂದು ಡಿಕೆಶಿ ಒತ್ತಾಯ ಮಾಡಿದ್ದಾರೆ.

news18-kannada
Updated:March 27, 2020, 1:41 PM IST
ಕೊರೋನಾ ನಿಭಾಯಿಸಲು ಸರ್ಕಾರ ವಿಫಲ; ಕಾಂಗ್ರೆಸ್​ನಿಂದ ಹೆಲ್ಪ್​ಲೈನ್, ಟ್ಯಾಸ್ಕ್ ಫೋರ್ಸ್ ರಚನೆ: ಡಿಕೆಶಿ
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
  • Share this:
ಬೆಂಗಳೂರು(ಮಾ. 27): ಕೊರೋನಾ ಸೋಂಕಿನಿಂದ ತುಮಕೂರಿನಲ್ಲಿ ಇವತ್ತು ಒಬ್ಬ ವ್ಯಕ್ತಿ ಬಲಿಯಾಗಿದ್ಧಾರೆ. ಇದರ ಬೆನ್ನಲ್ಲೇ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು ರಾಜ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಮೊದಲಾದವರು ಪಾಲ್ಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸಿ ಟೀಕೆ ಮಾಡಲಾಗಿದೆ.

ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ ರಾಜ್ಯ ಸರ್ಕಾರ ಎಲ್ಲಾ ಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಇಲ್ಲಿಯವರೆಗೆ ಸರ್ವ ಪಕ್ಷದ ಸಭೆಯನ್ನೇ ಕರೆದಿಲ್ಲ. ಈ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಖಂಡಿಸಿದರು.

ಆಸ್ಪತ್ರೆಗಳಲ್ಲಿ ಸರಿಯಾದ ಕೊರೋನಾ ಕಿಟ್ ವ್ಯವಸ್ಥೆ ಇಲ್ಲ. ಇಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅದನ್ನು ಪರಿಹರಿಸಲು ಸರ್ಕಾರ ಒದ್ದಾಡುತ್ತಿದೆ ಎಂದು ಡಿಕೆಶಿ ಆರೋಪ ಮಾಡಿದರು.

ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರೇಷ್ಮೆ ಸೇರಿದಂತೆ ಹಲವು ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ. ಮಾರುಕಟ್ಟೆಗಳನ್ನ ಕೂಡಲೇ ತೆರೆಯಬೇಕು. ಪದಾರ್ಥಗಳನ್ನ ಹೆಚ್ಚು ದಿನ ಸಂಗ್ರಹ ಮಾಡಿಕೊಳ್ಳಲು ಆಗುವುದಿಲ್ಲ. ರೈತರ ಸಮಸ್ಯೆಗಳ ಬಗ್ಗೆ ಸರ್ಕಾರ ಯೋಚಿಸಿ ಬಗೆಹರಿಸಬೇಕು ಎಂದವರು ಒತ್ತಾಯ ಮಾಡಿದರು.

ಇನ್ನು, ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದ ಕೆಲ ಕ್ರಮಗಳನ್ನ ಕೆಪಿಸಿಸಿ ಅಧ್ಯಕ್ಷರು ಸ್ವಾಗತ ಮಾಡಿದರು. ಇಎಂಐ ಕಟ್ಟುವುದನ್ನು ಮುಂದಕ್ಕೆ ಹಾಕುವಂತೆ ತಾವು ಸಲಹೆ ನೀಡಿದ್ದೆವು. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಅದಕ್ಕೆ ನಾವು ಆ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದೂ ಡಿಕೆಶಿ ತಿಳಿಸಿದರು.

ಕಾಂಗ್ರೆಸ್ ಪಕ್ಷದಿಂದ ಸಹಾಯವಾಣಿ ಮತ್ತು ಕಾರ್ಯಪಡೆ:

ಇದೇ ವೇಳೆ, ಕೊರೋನಾ ಸೋಂಕಿನಿಂದ ದುಸ್ಥಿತಿ ಉದ್ಭವಿಸಿರುವ ಹಿನ್ನೆಲೆಯಲ್ಲಿ ಜನರಿಗೆ ಸಹಾಯ ಮಾಡಲು ಕಾಂಗ್ರೆಸ್ ಪಕ್ಷದಿಂದ ಸಹಾಯವಾಣಿ ತೆರೆಯಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ಧಾರೆ. ನಾವು ಪಕ್ಷದ ಕಡೆಯಿಂದ ಹೆಲ್ಪ್​ಲೈನ್ ಪ್ರಾರಂಭಿಸುತ್ತೇವೆ. ಸಾಧ್ಯವಾದಷ್ಟು  ಜನರಿಗೆ ಸಹಾಯ ಮಾಡುತ್ತೇವೆ. ರಮೇಶ್ ಕುಮಾರ್ ನೇತೃತ್ವದಲ್ಲಿ ಟ್ಯಾಸ್ಕ್ ಫೋರ್ಸ್ ರಚಿಸಿದ್ದೇವೆ. ಕೊರೋನಾ ಪರಿಸ್ಥಿತಿಯಿಂದ ಬಾಧಿತರಾದ ಜನರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು. ಏನು ಸೌಲಭ್ಯ ಕಲ್ಪಿಸಬೇಕು ಎಂಬುದನ್ನು ಕಾರ್ಯಪಡೆ ನಿರ್ಧರಿಸುತ್ತದೆ. ಜನರಿಗೆ ಸಹಾಯವನ್ನೂ ಮಾಡುತ್ತದೆ ಎಂದು ಡಿಕೆಶಿ ವಿವರಿಸಿದರು.ಇನ್ನಷ್ಟು ಬಿಗಿಕ್ರಮಕ್ಕೆ ಸಿದ್ದರಾಮಯ್ಯ ಒತ್ತಾಯ:

ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು 20 ಸಾವಿರಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿದರು.

ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ಆರು ಸಾವಿರ ರೂಪಾಯಿಯನ್ನು ಮೂರು ಕಂತುಗಳಲ್ಲಿ ಕೊಡುತ್ತದೆ. ರಾಜ್ಯ ಸರ್ಕಾರ ಅದಕ್ಕೆ ನಾಲ್ಕು ಸಾವಿರ ಸೇರಿಸಿ ಒಟ್ಟು 10 ಸಾವಿರ ರೂ ಕೊಡುತ್ತದೆ. ಆದರೆ, ಕೇಂದ್ರ ಸರ್ಕಾರ ತಾನು ನೀಡುವ ಹಣವನ್ನು 12 ಸಾವಿರಕ್ಕೆ ಏರಿಸಬೇಕು. ರಾಜ್ಯ ಸರ್ಕಾರ ನಾಲ್ಕು ಸಾವಿರ ಬದಲು ಎಂಟ ಸಾವಿರ ಮಾಡಬೇಕು ಎಂದು ಸಿದ್ದರಾಮಯ್ಯ ಸಲಹೆ ನೀಡಿದರು.

ರೈತರ ಬೆಳೆಗಳನ್ನು ಹಾಪ್​ಕಾಮ್ಸ್ ಮೂಲಕ ಖರೀದಿಸಬೇಕು. ರೇಷ್ಮೆ ಗೂಡನ್ನು ಖರೀದಿಸಬೇಕು. ಹೆಚ್ಚು ದಿನ ರೇಷ್ಮೆಗೂಡನ್ನು ಶೇಖರಿಸಲು ಸಾಧ್ಯವಿಲ್ಲ ಎಂದವರು ಹೇಳಿದರು.

ಕೊರೋನಾ ವೈರಸ್ ಸೋಂಕು ನಿಗ್ರಹಿಸಲು ಸರ್ಕಾರ ಇನ್ನಷ್ಟು ಬಿಗಿ ಕ್ರಮ ಕೈಗೊಳ್ಳಬೇಕು. ಪ್ರತೀ ಜಿಲ್ಲೆಯಲ್ಲಿ 200-300 ಐಸೋಲೇಶನ್ ವಾರ್ಡ್ ನಿರ್ಮಿಸಬೇಕು. ವಿದೇಶದಿಂದ ಬಂದವರನ್ನು ಐಸೋಲೇಶನ್​ನಲ್ಲಿಡಬೇಕು. ಮನೆಮನೆಗೆ ತೆರಳಿ ಜನರಿಗೆ ಮಾಸ್ಕ್ ನೀಡಬೇಕು. ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿಗೆ ಮೊದಲು ಕಿಟ್ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇನ್ನು, ಕೇಂದ್ರ ಸರ್ಕಾರ ಇಡೀ ದೇಶವನ್ನು 21 ದಿನ ಲಾಕ್ ಡೌನ್ ಮಾಡಿದ ಕ್ರಮವನ್ನು ಸಿದ್ದರಾಮಯ್ಯ ಸ್ವಾಗತಿಸಿದರು. ಪ್ರಧಾನಿ ಕ್ರಮಕ್ಕೆ ನಮ್ಮ ಅಭಿನಂದನೆ ಇದೆ. ತಡವಾಗಿಯಾದರೂ ಸರ್ಕಾರ ಉತ್ತಮ ನಿರ್ಧಾರ ಮಾಡಿದೆ ಎಂದು ಅಭಿಪ್ರಾಯಪಟ್ಟರು.
First published:March 27, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading