ಉಡುಪಿ(ಮೇ 23): ಲಾಕ್ ಡೌನ್ನಿಂದಾಗಿ ದೇವಾಲಯಗಳಿಗೆ ಭಕ್ತರ ಪ್ರವೇಶ ನಿರ್ಬಂಧಿಸಿರುವ ಹಿನ್ನಲೆಯಲ್ಲಿ ಮುಜಯಾಯಿ ಇಲಾಖೆ ಆನ್ಲೈನ್ ಸೇವೆ ಶುರುಮಾಡಿದೆ. ಆದ್ರೆ ಇದಕ್ಕೆ ಕರಾವಳಿಯಲ್ಲಿ ವ್ಯಾಪಕ ಆಕ್ಷೇಪ ಕೇಳಿಬಂದಿದ್ದು ಪ್ರಸಾದವನ್ನು ಕೂಡ ಝೊಮೇಟೋದಲ್ಲಿ ಕಳುಹಿಸಿ ಅನ್ನೋ ವ್ಯಂಗ್ಯದ ಮಾತುಗಳು ಕೇಳಿಬಂದಿದೆ. ಈ ಆನ್ಲೈನ್ ಸೇವೆಗಳಿಗೆ ಆಕ್ಷೇಪ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಆನ್ಲೈನ್ ಸೇವೆ ನಮ್ಮ ಇಲಾಖೆಯಲ್ಲಿ ಈ ಮೊದಲೇ ಇದೆ. ಈಗ ಮತ್ತಷ್ಟು ದೇವಸ್ಥಾನಗಳನ್ನು ಆನ್ಲೈನ್ ಸೇವೆಯ ವ್ಯಾಪ್ತಿಗೆ ಇಲಾಖೆ ತರಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕೊಲ್ಲೂರು ದೇವಸ್ಥಾನದಲ್ಲಿ ಕಳೆದ ವರ್ಷ ಮೂರು ಸಾವಿರ ಆನ್ಲೈನ್ ಸೇವೆಗಳಿಗೆ ಆರ್ಡರ್ ಬಂದಿವೆ. ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲೂ ಆನ್ಲೈನ್ ಸೇವೆಯಿದೆ. ಕಳೆದ ವರ್ಷ ಈ ಆನ್ಲೈನ್ ಸೇವೆಯಿಂದ 49.50 ಲಕ್ಷ ರುಪಾಯಿ ಆದಾಯ ಬಂದಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಲಾಕ್ಡೌನ್ನಿಂದ ಭಕ್ತರಿಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಹರಕೆ ಹೊತ್ತ ಭಕ್ತರಿಗೆ ಆನ್ಲೈನ್ ಸೇವೆಯಿಂದ ಅನುಕೂಲವಾಗಲಿದೆ. ಭಕ್ತರಿಗೆ ನೆಮ್ಮದಿ ಸಿಗಲಿ ಎಂಬ ಕಾರಣಕ್ಕೆ ಈ ಕಾರ್ಯ ಆರಂಭಿಸಿದ್ದೇವೆ. ಲಾಕ್ಡೌನ್ವರೆಗಾದರೂ ಆನ್ಲೈನ್ ಸೇವೆ ಅಗತ್ಯವಿದೆ. ಭಕ್ತರ ಕೋರಿಕೆ ಹಿನ್ನೆಲೆಯಲ್ಲಿ ಈ ಸೇವೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೋಗಲಕ್ಷಣ ಇಲ್ಲದ ಸೋಂಕಿತರಿಗೆ ಆಸ್ಪತ್ರೆವಾಸದ ಅವಧಿ ಇಳಿಕೆ? ಹೊರರಾಜ್ಯಗಳಿಂದ ಬಂದವರಿಗೆ ಮನೆಯಲ್ಲೇ ಕ್ವಾರಂಟೈನ್
ಇನ್ನು, ದೇವಸ್ಥಾನಗಳು ಬಾಗಿಲು ಹಾಕಿದ್ದು, ಅಲ್ಲಿ ಪೂಜೆ ಆಗುತ್ತಿಲ್ಲ ಎಂದು ಸುದ್ದಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೋಟ ಶ್ರೀನಿವಾಸ್, ದೇವಸ್ಥಾನಗಳಲ್ಲೂ ಸಾಂಪ್ರದಾಯಿಕ ಪೂಜೆ ನಡೆಯುತ್ತದೆ. ತ್ರಿಕಾಲ, ಕಾಲಮಿತಿಯ ಪೂಜೆಗಳು ನಡೆಯುತ್ತಿವೆ. ಅಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ. ಲಾಕ್ಡೌನ್ ಮುಗಿದ ನಂತರವಷ್ಟೇ ದೇವಸ್ಥಾನ ತೆರೆಯುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ವರದಿ: ಪರೀಕ್ಷಿತ್ ಶೇಟ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ