100 ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆ ಆರಂಭಿಸಿದ ಕೊಪ್ಪಳದ ಗವಿಮಠ ಸ್ವಾಮೀಜಿ

ಗವಿಮಠದಲ್ಲಿ ವೃದ್ದಾಶ್ರಮಕ್ಕಾಗಿ ನಿರ್ಮಿಸಿದ್ದ ಕಟ್ಟಡದಲ್ಲಿ 100 ಹಾಸಿಗೆಗಳಿರುವ ಆಸ್ಪತ್ರೆ ಆರಂಭವಾಗಿದೆ. ಇಲ್ಲಿಗೆ ಬೇಕಾಗುವ ಸಿಬ್ಬಂದಿ ಹಾಗು ವೈದ್ಯರನ್ನು ಮಠದ ಆಯುರ್ವೇದ ಮಹಾವಿದ್ಯಾಲಯದಿಂದ ಒದಗಿಸಲು ಸಿದ್ದತೆ ನಡೆದಿದೆ.

ಕೋವಿಡ್ ಕೇರ್ ಸೆಂಟರ್

ಕೋವಿಡ್ ಕೇರ್ ಸೆಂಟರ್

  • Share this:
ಕೊಪ್ಪಳ(ಮೇ 12): ಮಹಾಮಾರಿ ಕೊರೋನಾದಿಂದಾಗಿ ಕೊಪ್ಪಳ‌ ಜಿಲ್ಲೆಯ ಎಲ್ಲಾ ಕೋವಿಡ್ ಆಸ್ಪತ್ರೆಗಳ ಬೆಡ್ ಗಳು ಫುಲ್ ಆಗಿವೆ. ಈಗಲೂ ನಿತ್ಯ ಸಾಕಷ್ಟು ಜನರಿಗೆ ಕೊರೋನಾ ಸೋಂಕು ದೃಢಪಡುತ್ತಿದೆ. ಇಂತಹ ಸಂದರ್ಭದಲ್ಲಿ ಸಮಾಜ ಸೇವೆ, ಭಕ್ತಿ, ದಾಸೋಹದಿಂದಾಗಿ ತ್ರಿವಿಧ ದಾಸೋಹಕ್ಕೆ ಹೆಸರು ವಾಸಿಯಾಗಿರುವ ಕೊಪ್ಪಳದ ಗವಿಮಠದ ಸ್ವಾಮೀಜಿಗಳು 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಆರಂಭಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಈಗ ನಿತ್ಯ 400-500 ಜನರಲ್ಲಿ ಸೋಂಕು ದೃಢಪಡುತ್ತಿದೆ. ನಿತ್ಯ 7-10 ಜನರು ಸೋಂಕಿನಿಂದಾಗಿಯೇ ಉಸಿರು ನಿಲ್ಲಿಸುತ್ತಿದ್ದಾರೆ. ಇಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆದರೆ ಇರೋದು ಬೆಡ್ ಗಳ ಕೊರತೆ. ಕೊಪ್ಪಳ ಜಿಲ್ಲೆಯಲ್ಲಿ 6 ಸರಕಾರಿ ಕೊವಿಡ್ ಆಸ್ಪತ್ರೆ, 4 ಕೊವಿಡ್ ಕೇರ್ ಸೆಂಟರ್ ಹಾಗೂ 10 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ.

ಈಗಿರುವ ಮಾಹಿತಿ ಪ್ರಕಾರ ಸರಕಾರಿ ಆಸ್ಪತ್ರೆಗಳಲ್ಲಿ ಕುಷ್ಟಗಿ ಹಾಗೂ ಮುನಿರಾಬಾದ್ ಗಳ ಆಸ್ಪತ್ರೆಯಲ್ಲಿ ತಲಾ ನಾಲ್ಕು ಬೆಡ್ ಗಳು  ಹೊರತು ಪಡಿಸಿ ಉಳಿದ ಆಸ್ಪತ್ರೆಗಳಲ್ಲಿ ಎಲ್ಲಾ ಬೆಡ್ ಗಳು ಫುಲ್ ಆಗಿವೆ. ಒಟ್ಟು 309 ಬೆಡ್ ಗಳ ಪೈಕಿ 301 ಬೆಡ್ ಗಳು ಭರ್ತಿಯಾಗಿವೆ. ನಾಲ್ಕು ಕೊವಿಡ್ ಕೇರ್ ಸೆಂಟರ್ ಗಳಲ್ಲಿ ಒಟ್ಟು 260 ಹಾಸಿಗೆಯಲ್ಲಿ 15 ಹಾಸಿಗೆಗಳು ಮಾತ್ರ ಭರ್ತಿಯಾಗಿವೆ. ಇನ್ನೂ 10 ಖಾಸಗಿ ಆಸ್ಪತ್ರೆಗಳಲ್ಲಿ 272 ಹಾಸಿಗೆಗಳಲ್ಲಿ 267 ಹಾಸಿಗೆಗಳು ಭರ್ತಿಯಾಗಿ ಕೇವಲ 5 ಹಾಸಿಗೆಗಳು ಮಾತ್ರ ಲಭ್ಯ ಇವೆ.

ಸಾವಿನಲ್ಲೂ ಒಂದಾದ ದಂಪತಿ; ಪತಿ ಸಾವಿನ ಸುದ್ದಿ ಕೇಳಿ ಪತ್ನಿಯೂ ಹೃದಯಾಘಾತದಿಂದ ಸಾವು!

50 ವೆಂಟಿಲೇಟರ್ ಬೆಡ್ ಗಳಲ್ಲಿ 50 ಭರ್ತಿಯಾಗಿವೆ. ಈಗ ಜಿಲ್ಲೆಯಲ್ಲಿ ಕೊವಿಡ್ ಪೇಷಂಟ್ ಗಳ ಸೇವೆಗೆ ಆಸ್ಪತ್ರೆ ಅವಶ್ಯವಿತ್ತು. ಇಂಥ ಸಂದರ್ಭದಲ್ಲಿ ಕೊಪ್ಪಳ ಗವಿಮಠದ ಈಗಿನ ಸ್ವಾಮೀಜಿ ತಾವೇ ಮುಂದೆ ಬಂದು ತಮ್ಮ ಆಯುರ್ವೇದ ಮಹಾವಿದ್ಯಾಲಯದ ಸಿಬ್ಬಂದಿಗಳಿಂದ 100 ಹಾಸಿಗೆಯ ಕೋವಿಡ್ ಆಸ್ಪತ್ರೆ ಆರಂಭಿಸಿದ್ದಾರೆ. ಅದರಲ್ಲಿ 80 ಹಾಸಿಗೆಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.

ಗವಿಮಠದಲ್ಲಿ ವೃದ್ದಾಶ್ರಮಕ್ಕಾಗಿ ನಿರ್ಮಿಸಿದ್ದ ಕಟ್ಟಡದಲ್ಲಿ 100 ಹಾಸಿಗೆಗಳಿರುವ ಆಸ್ಪತ್ರೆ ಆರಂಭವಾಗಿದೆ. ಇಲ್ಲಿಗೆ ಬೇಕಾಗುವ ಸಿಬ್ಬಂದಿ ಹಾಗು ವೈದ್ಯರನ್ನು ಮಠದ ಆಯುರ್ವೇದ ಮಹಾವಿದ್ಯಾಲಯದಿಂದ ಒದಗಿಸಲು ಸಿದ್ದತೆ ನಡೆದಿದೆ. ಈಗಾಗಲೇ ಸಿದ್ದತೆ ಪೂರ್ಣಗೊಂಡಿದ್ದರಿಂದ ನಿನ್ನೆ ಸಂಜೆ ಜಿಲ್ಲೆಯ ಜನಪ್ರತಿನಿಧಿಗಳಾದ ಸಂಸದ ಸಂಗಣ್ಣ ಕರಡಿ, ಶಾಸಕರಾದ ರಾಘವೇಂದ್ರ ಹಿಟ್ನಾಳ,  ಪರಣ್ಣ ಮುನವಳ್ಳಿ ಹಾಗು ಅಮರೇಗೌಡ ಬಯ್ಯಾಪುರ ಸೇರಿದಂತೆ ಅಧಿಕಾರಿಗಳಿಂದ ಆಸ್ಪತ್ರೆಯಲ್ಲಿ ಪೂಜೆ ಸಲ್ಲಿಸಿ ಆಸ್ಪತ್ರೆ ಆರಂಭಿಸಿದ್ದಾರೆ.

ಉದ್ಘಾಟನೆಯ ಸಂದರ್ಭದಲ್ಲಿ ಭಾಗಿಯಾಗಿದ್ದ ಕಲ್ಯಾಣಿ ಕಾರ್ಖಾನೆಯ ಅಧಿಕಾರಿಗೆ ಸ್ವಾಮಿಜಿಗಳು ರಾಜಸ್ಥಾನದಲ್ಲಿ ಚಿಕ್ಕ ಗ್ರಾಮದಲ್ಲಿ ಒಂದೇ ದಿನ ಕೋವಿಡ್ ಆಸ್ಪತ್ರೆ ಆರಂಭಿಸಿದ್ದಾರೆ. ಹತ್ತಾರು ಬೃಹತ್ ಕೈಗಾರಿಕೆಗಳು ಇರುವ ಕೊಪ್ಪಳ ಜಿಲ್ಲೆಯ ಕಾರ್ಖಾನೆಯವರು ಯಾಕೆ ಕೋವಿಡ್ ಆಸ್ಪತ್ರೆ ಆರಂಭಿಸಬಾರದು. ಸಂಕಷ್ಟ ಕಾಲದಲ್ಲಿ ಜನರ ನೆರವಿಗೆ ಬರುವುದು ಸೂಕ್ತವಾದ ಕೆಲಸ ಎಂದು ಹೇಳಿದರು.

ಕೊಪ್ಪಳ ಗವಿಮಠದ ಸ್ವಾಮೀಜಿಗಳು ವೃದ್ದಾಶ್ರಮವನ್ನು ಕೋವಿಡ್ ಆಸ್ಪತ್ರೆ ಯನ್ನಾಗಿ ಮಾಡಿದ್ದಕ್ಕೆ ಸಿಎಂ ಯಡಿಯೂರಪ್ಪ ಟ್ವಿಟ್ಟರ್ ಮೂಲಕ ಸ್ವಾಮೀಜಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ಜನರು ಸಂಕಷ್ಟದಲ್ಲಿರುವಾಗ ಜನರ‌ ನೆರವಿಗೆ ಬಂದಿರುವ ತಮ್ಮ ಸೇವಾಕಾರ್ಯ ಮಾದರಿಯಾಗಿದೆ ಎಂದು ಹೇಳಿದ್ದಾರೆ, ಒಂದೆರಡು ದಿನಗಳಲ್ಲಿ ಗವಿಸಿದ್ದೇಶ್ವರ ಕೊವಿಡ್ ಆಸ್ಪತ್ರೆಗೆ ಸೋಂಕಿತರನ್ನು ದಾಖಲಿಸಬಹುದಾಗಿದೆ.‌
Published by:Latha CG
First published: