ಕೋಲಾರ: ಕೊರೋನಾ ಭೀತಿಯಿಂದ ರಾಜ್ಯಕ್ಕೆ ರಾಜ್ಯವೇ ಲಾಕ್ ಡೌನ್ ಆಗಿದೆ. ಇನ್ನು ನಮ್ಮ ಜನ ರಸ್ತೆಗಿಳಿದು ಪೊಲೀಸರ ಕೈಯಲ್ಲಿ ಲಾಠಿ ಏಟು ತಿಂದು ಮನೆಗೆ ಹೋಗುತ್ತಿದ್ದಾರೆ. ಆದರೆ ಇಲ್ಲೊಂದು ಗ್ರಾಮದಲ್ಲಿ ಜನರು ತಮಗೆ ತಾವೇ ದಿಗ್ಬಂಧನ ಹಾಕಿಕೊಂಡಿದ್ದು, ಊರು ಸುತ್ತ ಚೆಕ್ ಪೋಸ್ಟ್ ನಿರ್ಮಿಸಿ ಯಾರು ಹೊರ ಹೋಗದಂತೆ, ಒಳಗೂ ಬಾರದಂತೆ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ವಿಭಿನ್ನವಾಗಿ ಲಾಕ್ ಡೌನ್ ಆದೇಶವನ್ನು ಗ್ರಾಮದಲ್ಲಿ ಪಾಲಿಸಿದ್ದಾರೆ.
ಮಹಾಮಾರಿ ಕರೋನಾ ಸೋಂಕು ರಾಷ್ಟ್ರವನ್ನೇ ಬೆಚ್ಚಿ ಬೀಳಿಸಿದ್ದು, ಸಂಪೂರ್ಣ ರಾಜ್ಯವನ್ನೆ ಸರ್ಕಾರ ಲಾಕ್ ಡೌನ್ ಮಾಡಿದೆ. ರಾಜ್ಯ ಲಾಕ್ ಡೌನ್ ಆದರೂ ನಮ್ಮ ಜನರಿಗೆ ಇನ್ನು ಕರೋನಾ ಮಹಾಮಾರಿಯ ಭೀತಿ ಇದ್ದಂತೆ ಕಾಣುತ್ತಿಲ್ಲ. ಯುಗಾದಿ ಹಬ್ಬ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಇಂದು ಕೆಲ ಜಿಲ್ಲೆಗಳಲ್ಲಿ ಜನ ಜಂಗುಳಿ ಎಂದಿನಂತೆ ಕಾಣುತ್ತಿದೆ. ಇದಕ್ಕೆ ಕೋಲಾರ ಜಿಲ್ಲೆ ಸಹ ಹೊರತಾಗಿಲ್ಲ. ಆದರೆ ಚಿನ್ನದನಾಡು ಕೋಲಾರ ಜಿಲ್ಲೆಯ ಅದೊಂದು ಗ್ರಾಮದಲ್ಲಿ ಮಾತ್ರ ಜನಸಂಚಾರ ಗ್ರಾಮಕ್ಕೆ ಮಾತ್ರ ಸೀಮಿತವಾಗಿದೆ. ಆ ಗ್ರಾಮದಿಂದ ಜನರು ಹೊರಗೆ ಹೋಗೋಂಗಿಲ್ಲ, ಹೊರಗೆ ಇದ್ದವರು ಒಳಗೆ ಬರೋಂಗಿಲ್ಲ ಎಂಬ ಆದೇಶವನ್ನು ಜನರೇ ತಮಗೆ ವಿಧಿಸಿಕೊಂಡಿದ್ದಾರೆ.
ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಆಂಧ್ರದ ಗಡಿಯಲ್ಲಿರುವ ಎಂ ಗೊಲ್ಲಹಳ್ಳಿ ಗ್ರಾಮದ ಜನ್ರು ತಮ್ಮನ್ನ ತಾವೇ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ 800 ಜನರು ವಾಸವಿದ್ದು ನೆನ್ನೆ ಸಂಜೆವರೆಗೂ ಗ್ರಾಮಕ್ಕೆ ಬರೋರು ಬರಬಹುದು ಇಂದಿನಿಂದ ಯಾರಿಗೂ ಗ್ರಾಮದೊಳಕ್ಕೆ ಪ್ರವೇಶವಿಲ್ಲ ಎಂದು ಗ್ರಾಮದ ಹಿರಿಯರು ನಿಶ್ಚಯ ಮಾಡಿದ್ದರು. ಅದರಂತೆ ಇಂದಿನಿಂದ ಯಾರು ಒಳಗೆ ಬರೋಂಗಿಲ್ಲ, ಇಲ್ಲಿದ್ದವರು ಮುಂದಿನ 2 ತಿಂಗಳು ಹೊರಗು ಹೋಗುವಂತಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಗ್ರಾಮದ ನಿರ್ಧಾರಕ್ಕೆ ನಿವಾಸಿಗಳು ಬೆಲೆ ಕೊಟ್ಡಿದ್ದು ಮುಂದಿನ 2 ತಿಂಗಳಿಗೆ ಆಗುವಷ್ಟು ರೇಷನ್ ಶೇಖರಣೆ ಮಾಡಿಕೊಂಡಿದ್ದಾರೆ.
ಇನ್ನು ಆಂಧ್ರದ ಪುಂಗನೂರು ಗಡಿಯಲ್ಲಿ ಗ್ರಾಮ ಇರುವ ಕಾರಣ ಕೊರೋನಾ ಸೋಂಕು ಹರಡುವ ಭೀತಿಯಲ್ಲಿ ಗ್ರಾಮದ ಹೊರವಲಯದ ರಸ್ತೆಗಳಲ್ಲಿ ಗುರುವಾರದಿಂದ ಚೆಕ್ಪೋಸ್ಟ್ ನಿರ್ಮಿಸಿ ಬೇರೆಯ ಗ್ರಾಮಗಳಿಂದ ಯಾವೊಬ್ಬರು ಗ್ರಾಮಕ್ಕೆ ಬರದಂತೆ ಇಬ್ಬಿಬ್ಬರು ಯುವಕರು ರಾತ್ರಿ ಹಗಲು ಕಾವಲು ಕಾಯಲು ತಿರ್ಮಾನ ಮಾಡಿಕೊಂಡಿದ್ದಾರೆ.
ಗ್ರಾಮದಲ್ಲಿ ಇಂತಹ ನಿರ್ಧಾರ ಕೈಗೊಂಡ ಮೇಲೆ ಕೆಲಸದ ನಿಮಿತ್ತ ಬೇರೆಡೆ ತೆರಳಿದ್ಧ 300ಕ್ಕೂ ಹೆಚ್ಚು ಜನ್ರು ನಿನ್ನೆ ರಾತ್ರಿಯೇ ಗ್ರಾಮಕ್ಕೆ ಬಂದಿದ್ದಾರೆ. ಇನ್ನು ಕೇವಲ 20 ರಿಂದ 25 ಜನ ಗ್ರಾಮದ ಹೊರ ಇದ್ದಾರೆ. ಕೊರೋನಾ ಸೋಂಕು ಕಡಿಮೆ ಆಗುವ ತನಕ ಗ್ರಾಮಕ್ಕೆ ಬರದಂತೆ ಅವರಿಗೂ ತಿಳಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಸ್ಥರಿಂದಲೇ ಮೋರಿ ಸ್ವಚ್ಚತೆ
ಇನ್ನು ಗ್ರಾಮಗಳಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಗ್ರಾಮಸ್ಥರೆ ಖುದ್ದು ಮೋರಿ, ರಸ್ತೆಗಳನ್ನು ಶುಚಿಗೊಳಿಸಿದರು. ದೊಡ್ಡವರು, ಸಣ್ಣವರು ಎಂದು ನೋಡದೆ ಎಲ್ಲರು ರಸ್ತೆ ಬದಿಯಿದ್ದ ಕಸ ತೆರವು ಮಾಡಿದರು, ಗೊಲ್ಲಹಳ್ಳಿ ಗ್ರಾಮ ಆಂಧ್ರದ ಗಡಿ ಹಾಗೂ ಕೋಲಾರ ಜಿಲ್ಲೆಯ ಗಡಿಯಲ್ಲಿರುವ ಕಾರಣ ಇಲ್ಲಿಯ ನಿವಾಸಿಗಳಿಗೆ ಏನಾದರು ಆರೋಗ್ಯದಲ್ಲಿ ವ್ಯತ್ಯಾಸ ಉಂಟಾದ್ರೆ ಆಸ್ಪತ್ರೆಗೆ ಹೋಗೋಕೆ ಪರದಾಡಬೇಕು. ಹೀಗಾಗಿ ತಮ್ಮಆರೋಗ್ಯವನ್ನು ಮಾರಕ ಸೋಂಕಿಂದ ರಕ್ಷಿಸಿಕೊಳ್ಳಲು ಇಂತಹ ಲಾಕ್ ಡೌನ್ ಪ್ರಯತ್ನಕ್ಕೆ ಗ್ರಾಮಸ್ತರು ಕೈ ಹಾಕಿದ್ದು ದೂರದ ಊರಿಂದ ಬಂದವರು ಹಿರಿಯರ ನಿರ್ಧಾರಕ್ಕೆ ಬೆಂಬಲ ಸೂಚಿಸಿದ್ದಾರೆ.
ಇದನ್ನು ಓದಿ: ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ; ಸೋಂಕಿತರ ಸಂಖ್ಯೆ 39ಕ್ಕೇರಿಕೆ
ಕೋಲಾರ ಜಿಲ್ಲೆಯ ಎಂ ಗೊಲ್ಲಹಳ್ಳಿ ಗ್ರಾಮದ ಜನರ ಸ್ವಯಂಪ್ರೇರಣೆಯಿಂದಲೇ ಲಾಕ್ಡೌನ್ ಮಾಡಿಕೊಳ್ಳುವ ಮೂಲಕ ಇತರೆ ಪ್ರದೇಶಗಳಿಗೂ ಮಾದರಿಯೆಂದು ಆರೋಗ್ಯ ಇಲಾಖೆ ಅಭಿಪ್ರಾಯ ಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ