ಕೊಡಗು (ಜೂ. 30): ಕೊವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನಲೆಯಲ್ಲಿ ಜುಲೈ 5 ಬಳಿಕವೂ ಕೊಡಗು ಜಿಲ್ಲೆಯಲ್ಲಿ ಅನ್ ಲಾಕ್ ಆಗೋದು ಬಹುತೇಕ ಅನುಮಾನವಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆ ಆಗದಿದ್ದರೆ ಲಾಕ್ ಡೌನ್ ತೆರವು ಮಾಡುವುದು ಬೇಡ ಎಂದು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ತಿಳಿಸಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೆಲವರು ಮಾತ್ರ ಎಲ್ಲಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಹಾಗೆಯೇ ನಮ್ಮ ಜಿಲ್ಲೆಯಲ್ಲೂ ಲಾಕ್ ಡೌನ್ ಸಡಿಲಿಕೆ ಮಾಡಬೇಕು ಎನ್ನುತ್ತಿದ್ದಾರೆ. ಆದರೆ ಜೀವನಕ್ಕಿಂತ ಜೀವ ಮುಖ್ಯ. ಹೀಗಾಗಿ ಕೊವಿಡ್ ಪಾಸಿಟಿವಿಟಿ ರೇಟ್ ಕಡಿಮೆ ಆಗದಿದ್ದರೆ, ಜಿಲ್ಲೆಯಲ್ಲಿ ಲಾಕ್ ಡೌನ್ ಮುಂದುವರೆಸುವುದು ಅನಿವಾರ್ಯ. ಈಗಾಗಲೇ ಮೂರನೇ ಅಲೆ ಆರಂಭವಾಗುತ್ತದೆ ಎಂಬ ಸೂಚನೆಯನ್ನು ತಜ್ಞರ ಸಮಿತಿ ಹೇಳಿದೆ. ಜಿಲ್ಲೆಯಲ್ಲಿ ಕೊವಿಡ್ ಸೋಂಕು ಕಡಿಮೆ ಆಗದಿದ್ದರೆ ಜುಲೈ 5 ರ ನಂತರವೂ ಲಾಕ್ ಡೌನ್ ಅಗತ್ಯ ಎಂದಿದ್ದಾರೆ.
ಜಿಲ್ಲೆಯಲ್ಲಿ ಸೋಂಕು ಕಡಿಮೆಯಾಗದ ಆತಂಕದ ನಡುವೆಯೂ ಬೇರೆ ಜಿಲ್ಲೆಗಳಲ್ಲಿ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಕೊಡಗು ಜಿಲ್ಲೆಗೆ ಪ್ರವಾಸಿಗರು ಎಗ್ಗಿಲ್ಲದೆ ಬರುತ್ತಿದ್ದಾರೆ. ಪ್ರವಾಸಿಗರನ್ನು ನಿಯಂತ್ರಿಸದಿದ್ದರೆ ಕೊಡಗಿನಲ್ಲಿ ಕೊವಿಡ್ ಸೋಂಕು ಕೈಮೀರಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಜುಲೈ 5 ರ ವರೆಗೆ ಲಾಕ್ ಡೌನ್ ಇದ್ದರೂ ಕೆಲವು ಹೋಂ ಸ್ಟೇಗಳು ನಿಯಮ ಉಲ್ಲಂಘಿಸಿ ಪ್ರವಾಸಿಗರಿಗೆ ಅಕ್ರಮವಾಗಿ ಆತಿಥ್ಯ ನೀಡುತ್ತಿವೆ. ಅಂತಹ ಹೋಂಸ್ಟೇ ಮೇಲೆ ದಾಳಿ ಮಾಡಿರುವ ಅಧಿಕಾರಿಗಳು ಈಗಾಗಲೇ ಮೂರು ಹೋಂಸ್ಟೇಗಳ ಮೇಲೆ ಪ್ರಕರಣಗಳನ್ನು ದಾಖಲು ಮಾಡಿದ್ದಾರೆ ಎಂದು ಪ್ರವಾಸೋದ್ಯಮ ಉಪನಿರ್ದೇಶಕ ಮತ್ತು ಕೊಡಗು ಉಪವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: ಸೆ. 18, 19ರಂದು SDA ಪರೀಕ್ಷೆ; ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ KPSC
ಕೊಡಗಿನಲ್ಲಿ ಇರುವ ಲಾಕ್ ಡೌನ್ ಅನ್ನು ಮುಂದುವರೆಸಬೇಕು, ಅದರಲ್ಲೂ ಪ್ರವಾಸೋದ್ಯಮವನ್ನು ಈ ಮಳೆಗಾಲ ಮುಗಿಯುವವರೆಗೆ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ಅಖಿಲ ಕೊಡಗು ಯೂತ್ ವಿಂಗ್ ಕೂಡ ಸಾಕಷ್ಟು ಒತ್ತಾಯಿಸುತ್ತಿದೆ. ಮಳೆಗಾಲ ಮುಗಿಯುವವರೆಗೆ ಪ್ರವಾಸೋದ್ಯಮವನ್ನು ಮುಚ್ಚುವಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗುತ್ತಿದೆ.
ಪ್ರವಾಸೋದ್ಯಮದಿಂದಾಗಿ ಜಿಲ್ಲೆಯ ಬಹುತೇಕ ವ್ಯಾಪಾರ ವಹಿವಾಟುಗಳು ಚುರುಕುಗೊಳ್ಳುತ್ತವೆ. ಆದರೆ ಇದರಿಂದ ಜಿಲ್ಲೆಯಲ್ಲಿ ಸೋಂಕು ಮಿತಿಮೀರಿ ದೊಡ್ಡ ಅನಾಹುತವೇ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಸದ್ಯಕ್ಕೆ ಪ್ರವಾಸೋದ್ಯಮ ಬೇಡ ಎನ್ನೋದು ಜಿಲ್ಲೆಯ ಸಾಕಷ್ಟು ಸಂಘ ಸಂಸ್ಥೆಗಳು ಕೂಡ ಒತ್ತಾಯಿಸುತ್ತಿವೆ. ನಿರೀಕ್ಷೆಯಂತೆ ಕೋವಿಡ್ ಸೋಂಕು ನಿಯಂತ್ರಣ ಆಗಿ ಜಿಲ್ಲೆಯಲ್ಲಿ ಜುಲೈ 5 ರ ಒಳಗೆ ಪಾಸಿಟಿವಿಟಿ ರೇಟ್ ಐದಕ್ಕಿಂತ ಕಡಿಮೆ ಆಗಬೇಕಿತ್ತು. ಆ ಬಳಿಕವಾದರೂ ಕೊಡಗು ಅನ್ ಲಾಕ್ ಆಗುವ ನಿರೀಕ್ಷೆ ಇತ್ತು. ಆದರೆ ನಿತ್ಯ 180 ರಿಂದ 250 ವರೆಗೆ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದು, ಸೋಂಕಿನಿಂದ ನಿತ್ಯ ಒಂದಿಬ್ಬರು ಸಾವನ್ನಪ್ಪುತ್ತಿದ್ದಾರೆ. ಇದೆಲ್ಲವನ್ನೂ ಗಮನಿಸಿದರೆ ಕೊಡಗು ಜಿಲ್ಲೆಯಲ್ಲಿ ಜುಲೈ 5 ರ ಬಳಿಕ ಅನ್ ಲಾಕ್ ಬಹುತೇಕ ಅನುಮಾನ ಎಂಬ ಮಾತು ಹೆಚ್ಚಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ