ಕೊಡಗು (ಜೂ. 7): ಕೋವಿಡ್ ಸೋಂಕು ಅನೇಕ ಜೀವಗಳನ್ನು ಬಲಿ ಪಡೆದುಕೊಂಡಿದೆ. ಸೋಂಕಿನಿಂದ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವಿನಲ್ಲಿ ಇಂದು ಬಹುತೇಕ ಜನರಿದ್ದಾರೆ. ಅದೆಷ್ಟೋ ಮುಗ್ಧ ಕಂದಮ್ಮಗಳು ಅಪ್ಪ, ಅಮ್ಮನನ್ನು ಕಳೆದುಕೊಂಡು ತಬ್ಬಲಿಯಾಗಿದ್ದಾರೆ. ಮಾರಕ ಸೋಂಕಿನಿಂದ ಅಮ್ಮನನ್ನು ಕಳೆದುಕೊಂಡ ಬಾಲಕಿಯೊಬ್ಬಳು ಕೂಡ ಅನಾಥವಾಗಿರುವ ಘಟನೆ ಕುಶಾಲನಗರದಲ್ಲಿ ನಡೆದಿದ್ದು, ಈಕೆಯ ಕಥೆ ಎಲ್ಲರಲ್ಲೂ ಕಣ್ಣೀರು ಮೂಡಿಸುತ್ತಿದೆ. ಅಶ್ವಿನಿ ಎಂಬ ಬಾಲಕಿ ಈಗ ಬದುಕಿಗೆ ಆಸರೆಯಾಗಿದ್ದ ಅಮ್ಮನನ್ನು ಕಳೆದುಕೊಂಡು ಜರ್ಜರಿತವಾಗಿದ್ದಾಳೆ. ಕೊಡಗು ಜಿಲ್ಲೆ ಕುಶಾಲನಗರದ ವೆಂಕಟ್ ನಾಗೇಶ್ ಮತ್ತು ಛಾಯ ಅವರ ಒಬ್ಬಳೆ ಮಗಳು. ಕಳೆದ 9 ವರ್ಷದ ಹಿಂದೆ ಅಪ್ಪನನ್ನು ಕಳೆದು ಕೊಂಡಿದ್ದ ಅಶ್ವಿನಿ ಅಮ್ಮನ ಆಸರೆಯಲ್ಲಿದ್ದಳು. ಬದುಕಿಗೆ ಮಗಳೊಬ್ಬಳೆ ಆಸರೆ ಎಂದು ಛಾಯ ಕೂಡ ಆಕೆಯನ್ನು ಜತನದಿಂದ ಕಾಪಾಡುತ್ತ ಬಂದಿದ್ದಳು. ಆದರೆ, ಈ ತಾಯಿ- ಮಗಳ ಅನ್ಯೋನ್ಯತೆಗೆ ಕೊರೋನಾ ಶಾಪ ತಟ್ಟಿದೆ. ಮಗಳನ್ನು ಬಿಟ್ಟ ತಾಯಿ ಈಹಲೋಕ ತ್ಯಜಿಸಿದ್ದಾಳೆ. ಅಪ್ಪನ ಜೊತೆ ಅಮ್ಮನ ಕಳೆದುಕೊಂಡ ಬಾಲಕಿ ಈಗ ದಿಕ್ಕುತೋಚದಂತೆ ಆಗಿದ್ದಾಳೆ
ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಗಂಡನನ್ನು ಕಳೆದುಕೊಂಡ ಛಾಯಾ ಮಗಳನ್ನು ಪ್ರೀತಿಯಿಂದ ಸಾಕುತ್ತಿದ್ದರು. ಮೇ 16 ರಂದು ಶೀತ, ಜ್ವರದಿಂದ ಬಳಲುತ್ತಿದ್ದ ಛಾಯ ಅವರನ್ನು ಮಡಿಕೇರಿಯ ಕೊವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಸ್ವಲ್ಪವೇ ಚೇತರಿಸಿಕೊಂಡಿದ್ದ ಛಾಯ ಅವರು ಮತ್ತೆ ಗಂಭೀರ ಸ್ಥಿತಿ ತಲುಪಿದ್ದರು. ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿಟ್ಟು ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಅದೂ ಫಲಕಾರಿಯಾಗದೆ ಮೇ 24 ರಂದು ಮಗಳೊಬ್ಬಳನ್ನೇ ಬಿಟ್ಟು ಎಂದೂ ಬಾರದ ಲೋಕಕ್ಕೆ ಹೋಗಿದ್ದಾರೆ.
ತಾಯಿಯನ್ನೂ ಕಳೆದುಕೊಂಡಿರುವ ದ್ವಿತೀಯ ಪಿಯುಸಿ ಓದುತ್ತಿದ್ದ ನಾಗ ಅಶ್ವಿನಿ ಪಾಲಿಗೆ ಈಗ ಅಜ್ಜನ ಕಾಲದ ಮನೆಯೊಂದು ಮಾತ್ರವೇ ಆಸರೆ. ಅಮ್ಮ ಜೀವನ ನಿರ್ವಹಣೆಗೆ ಮಾಡುತ್ತಿದ್ದ ಕಾಫಿಪುಡಿ ಅಂಗಡಿ ಈ ಬಾಲಕಿಯ ಪಾಲಿಗಿದೆ. ಆದರೆ ಮಗಳ ಶಿಕ್ಷಣ ಜೀವನ ನಿರ್ವಹಣೆಗೆ ಛಾಯ ಅವರು ಮಾಡಿದ್ದ ಲಕ್ಷಾಂತರ ರೂಪಾಯಿ ಸಾಲವೂ ಇದೆ. ಹೀಗಾಗಿ ಅದನ್ನು ತೀರಿಸುವುದು ಹೇಗೆ ಎನ್ನುವುದು ಈಗ ಯಕ್ಷ ಪ್ರಶ್ನೆಯಾಗಿದೆ.
ಇದನ್ನು ಓದಿ: ಸಿಎಂ ಪರ ರೇಣುಕಾಚಾರ್ಯ ಸಹಿ ಸಂಗ್ರಹ; ಶಾಸಕರ ಪಟ್ಟಿ ಬಹಿರಂಗಪಡಿಸುವಂತೆ ಡಿಕೆಶಿ ಸವಾಲ್
ಇದ್ಯಾವುದರ ಅರಿವಿಲ್ಲದ ಬಾಲಕಿ ನಾಗ ಅಶ್ವಿನಿ ನಾನು ನೋವು ಅನುಭವಿಸುತ್ತಿದ್ದರೂ, ಸಾಕಷ್ಟು ಓದಬೇಕು. ಅಪ್ಪ ಅಮ್ಮನ ಮರ್ಯಾದೆ, ಅವರ ಹೆಸರನ್ನು ಉಳಿಸಬೇಕು ಎಂಬ ಛಲ ಹೊಂದಿದ್ದಾಳೆ. ನನ್ನ ನೆರವಿಗೆ, ಎಲ್ಲರೂ ಇದ್ದಾರೆ. ಸದ್ಯಕ್ಕೆ ನಾನು ಓದಿ ನನ್ನ ಬದುಕು ರೂಪಿಸಿಕೊಳ್ಳಬೇಕು ಎನ್ನುತ್ತಿದ್ದಾಳೆ. ಹೀಗೆ ತಂದೆ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿರುವ ಬಾಲಕಿ ನಾಗ ಅಶ್ವಿನಿಯ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪಡೆದುಕೊಂಡು ಹೋಗಿದ್ದು, ಯಾವ ರೀತಿ ಬಾಲಕಿಯ ನೆರವಿಗೆ ಬರುತ್ತದೆಯೋ ಕಾದು ನೋಡಬೇಕಾಗಿದೆ.
ಅಪ್ಪ ಅಮ್ಮನ ಆಸರೆಯಲ್ಲಿ ಬೆಳೆಯ ಬೇಕಾಗಿದ್ದ ಬಾಲಕಿ ಈಗ ಇಬ್ಬರನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದಾಳೆ. ಈಕೆಯ ಮಾಹಿತಿ ತಿಳಿದು ಯಾರಾದರೂ ದತ್ತು ಪ್ರಕ್ರಿಯೆ ಮುಂದಾಗುತ್ತಾರಾ ಎಂಬುದು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ