ಕೊಡಗು(ಜು.13): ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಆರ್ಭಟಿಸುತ್ತಿದ್ದು, ಇಂದು ಒಂದೇ ದಿನ ಹದಿನೈದು ಜನರಿಗೆ ಅಟ್ಯಾಕ್ ಮಾಡಿದೆ. ಜ್ವರ ಲಕ್ಷಣಗಳಿಂದ ಬಳಲುತ್ತಿದ್ದ 9 ಜನರನ್ನು ಪರಿಶೀಲಿಸಿದಾಗ ಡೆಡ್ಲಿ ವೈರಸ್ ವಕ್ಕರಿಸಿರುವುದು ಗೊತ್ತಾಗಿದೆ.
ಸೋಮವಾರಪೇಟೆ ತಾಲ್ಲೂಕಿನ 9 ಜನರಿಗೆ ಒಂದೇ ದಿನ ಸೋಂಕು ದೃಢಪಟ್ಟಿದೆ. ನೀರುಗುಂದ ಗ್ರಾಮದ 36 ವರ್ಷದ ವ್ಯಕ್ತಿ, ಕಾರೆಕೊಪ್ಪ ಗ್ರಾಮದ 41 ವರ್ಷದ ಮಹಿಳೆ, ಕಕ್ಕೆಹೊಳೆ ಗ್ರಾಮದ 25 ವರ್ಷದ ಮಹಿಳೆ, ಗೋಪಾಲಪುರದ 25 ಯುವಕ, ಚೇರಳ ಶ್ರಿಮಂಗಲದ 62 ವರ್ಷದ ವೃದ್ಧನಿಗೂ ಕೊರೊನಾ ಅಟ್ಯಾಕ್ ಮಾಡಿದೆ. ಅಲ್ಲದೆ ಸುಂಟಿಕೊಪ್ಪದ 59 ವರ್ಷದ ವ್ಯಕ್ತಿಗೂ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.
ಇನ್ನು, ಕುಶಾಲನಗರ ಪಟ್ಟಣದ ಬೈಚನಹಳ್ಳಿ ಬಡಾವಣೆಯ 25 ವರ್ಷದ ಯುವಕ, ಕೋಣಮಾರಿಯಮ್ಮ ದೇವಸ್ಥಾನದ ಬಳಿಯ 56 ವರ್ಷದ ಮಹಿಳೆಗೂ ಕೊವಿಡ್ 19 ಇರುವುದು ದೃಢಪಟ್ಟಿದೆ. ಅರ್ವತೊಕ್ಲು ಗ್ರಾಮದ 18 ವರ್ಷದ ಯುವಕನಿಗೂ ಕೊರೋನಾ ಇರುವುದು ಪತ್ತೆಯಾಗಿದೆ. ಇವರೆಲ್ಲರೂ ಜ್ವರ ಲಕ್ಷಣದಿಂದ ಬಳಲುತ್ತಿದ್ದರು ಎಂದು ಜಿಲ್ಲಾಡಳಿತ ಹೇಳಿದೆ.
ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿಯ ಸೋಂಕಿತ ಆರೋಗ್ಯ ಕಾರ್ಯಕರ್ತನ ಪ್ರಾಥಮಿಕ ಸಂಪರ್ಕದಿಂದ ಆತನ 16 ವರ್ಷದ ಪುತ್ರನಿಗೂ ಸೋಂಕು ಹರಡಿದೆ. ಕುಶಾಲನಗರದ ಬಲಮುರಿ ದೇವಾಲಯದ ಬಳಿಯ 36 ವರ್ಷದ ವ್ಯಕ್ತಿಗೂ ಸೋಂಕು ಇರುವುದು ದೃಢಪಟ್ಟಿದೆ.
ಜೊತೆಗೆ ಮಡಿಕೇರಿ ನಗರದ ಗದ್ದುಗೆ ಬಳಿ 28 ವರ್ಷದ ಯುವಕನಿಗೆ ಕೊರೋನಾ ಮಹಾಮಾರಿ ಹೆಗಲೇರಿರುವುದು ಗೊತ್ತಾಗಿದೆ. ಒಟ್ಟಿನಲ್ಲಿ ಬೆಳಿಗ್ಗೆ ಬರೋಬ್ಬರಿ 10 ಜನರಿಗೆ ಅಟ್ಯಾಕ್ ಮಾಡಿದ್ದ ಕೊರೋನಾ ಮಧ್ಯಾಹ್ನದ ವೇಳೆಗೆ ಮತ್ತೆ ಐವರ ಹೇಗಲೇರಿದೆ. ಇದುವರೆಗೆ ಜಿಲ್ಲೆಯಲ್ಲಿ 184 ಜನರಿಗೆ ಕೊರೋನಾ ಸೋಂಕು ಹರಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ 38 ಸಾವಿರಕ್ಕೂ ಹೆಚ್ಚು ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರ ನಿಯಂತ್ರಣಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಭಾರೀ ಸರ್ಕಸ್ ನಡೆಸುತ್ತಿದೆ. ಈ ಮಾರಕ ಕೊರೋನಾ ವಿರುದ್ಧ ಹೋರಾಡುವು ಹೇಗೆ? ಎಂಬುದನ್ನು ಚರ್ಚಿಸಲು ಸಿಎಂ ಸಾಲುಸಾಲು ಸಭೆಗಳನ್ನು ನಡೆಸಿದ ಬಳಿಕ ಸಿಎಂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಒಂದು ವಾರ ಲಾಕ್ಡೌನ್ ಜಾರಿಗೊಳಿಸಿದ್ದರು. ಈ ಬೆನ್ನಲ್ಲೀಗ ಇಂದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ಸಿಎಂ ಯಡಿಯೂರಪ್ಪ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಸಭೆ ನಡೆಸಿದರು.
ಸಿಎಂ ಯಡಿಯೂರಪ್ಪ ತಮ್ಮ ಮನೆಯಿಂದಲೇ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಜಿಲ್ಲಾಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಎಲ್ಲಾ ಜಿಲ್ಲೆಗಳಲ್ಲಿನ ಸದ್ಯದ ಕೊರೋನಾ ವೈರಸ್ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದರು. ಆಯಾ ಜಿಲ್ಲೆಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಏನು ಕ್ರಮ ತೆಗೆದುಕೊಂಡಿದ್ದೀರಿ? ಸೋಂಕಿನ ಪ್ರಮಾಣ ಎಷ್ಟಿದೆ? ಕೋವಿಡ್-19 ಪೀಡಿತರಿಗೆ ಚಿಕಿತ್ಸೆ ಹೇಗೆ ನೀಡುತ್ತಿದ್ಧಾರೆ? ಎಂದು ಡಿಸಿಗಳಿಂದ ಮಾಹಿತಿ ಪಡೆದರು. ಈ ವೇಳೆ ಕೆಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ