• Home
 • »
 • News
 • »
 • coronavirus-latest-news
 • »
 • K Annamalai - ಅಪ್ಪ, ಅಮ್ಮ, ಮಗು ಎಲ್ಲರೂ ಸೆಲ್ ಫೋನ್​ನಲ್ಲೇ ತಲ್ಲೀನ; ಎಲ್ಲಿಗೆ ಬಂದಿದ್ಧೇವೆ? ಈ ಗೀಳು ಬಿಟ್ಟುಬಿಡಿ

K Annamalai - ಅಪ್ಪ, ಅಮ್ಮ, ಮಗು ಎಲ್ಲರೂ ಸೆಲ್ ಫೋನ್​ನಲ್ಲೇ ತಲ್ಲೀನ; ಎಲ್ಲಿಗೆ ಬಂದಿದ್ಧೇವೆ? ಈ ಗೀಳು ಬಿಟ್ಟುಬಿಡಿ

ಸ್ಮಾರ್ಟ್​ಫೋನ್

ಸ್ಮಾರ್ಟ್​ಫೋನ್

ದಿನ 9 - ಸೋಷಿಯಲ್ ಮೀಡಿಯಾ ಸೇರಿದಂತೆ ಮೊಬೈಲ್ ಫೋನ್​ಗೆ ನಾವೆಷ್ಟು ಅಡಿಕ್ಟ್ ಆಗಿದ್ದೇವೆ? ಅದರಿಂದ ಹೇಗೆ ದೂರವಾಗುವುದು ಎಂಬುದನ್ನು ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ಧಾರೆ. ಹಿಂದಿನ ಸಂಚಿಕೆಯ ಮುಂದುವರಿದ ಭಾಗ ಇದು.

 • Share this:

  ನಾವು ಪರಿಹಾರ ಹುಡುಕುವ ಮುನ್ನ ನಮ್ಮಲ್ಲಿ ಸಮಸ್ಯೆ ಇರುವುದನ್ನು ಮೊದಲು ಒಪ್ಪಿಕೊಳ್ಳೋಣ. ಬಹುತೇಕ ಜನರು ಇದಕ್ಕೆ ಸಿದ್ಧರಿರುವುದಿಲ್ಲ. ಈ ಕೆಳಗಿನ ಅಂಶಗಳನ್ನ ನೋಡಿ ನಿಮಗೆ ಸಮಸ್ಯೆ ಇದೆಯೋ ಎಲ್ಲವೋ ಎಂಬುದನ್ನು ನಿರ್ಧರಿಸಿಕೊಳ್ಳಿ:


  1) ಬೆಳಗ್ಗೆ ಹಾಸಿಗೆಯಿಂದ ಏಳುವ ಮುನ್ನ 15 ನಿಮಿಷ ನನ್ನ ಫೋನ್ ಬಳಸುತ್ತೇನೆ.


  2) ಮಲಗುವ ಮುನ್ನ ಫೋನ್​ನಲ್ಲಿ ಸೋಷಿಯಲ್ ಮೀಡಿಯಾದ ವಿಡಿಯೋ ವೀಕ್ಷಿಸುತ್ತೇನೆ.


  3) ಸೋಷಿಯಲ್ ಮೀಡಿಯಾಗಳಲ್ಲಿ ಪದೇ ಪದೇ ಸ್ಟೇಟಸ್ ಚೇಂಜ್ ಮಾಡುತ್ತಿರುತ್ತೇನೆ. ಫೇಸ್​ಬುಕ್, ಟ್ವಿಟ್ಟರ್ ಮತ್ತು ಇನ್​ಸ್ಟಾಗ್ರಾಮ್​ಗಳಲ್ಲಿ ನಾನೇನು ಮಾಡುತ್ತಿದ್ದೇನೆಂದು ಆಗಾಗ ಅಪ್​ಡೇಟ್ ಮಾಡುತ್ತಿರುತ್ತೇನೆ.


  4) ತಿಂಡಿ, ಊಟ ಮಾಡುವಾಗಲೂ ಸೆಲ್ ಫೋನ್ ಬಳಸುವುದನ್ನು ಮರೆಯುವುದಿಲ್ಲ. ಅಲ್ಲಿಯೂ ಸೋಷಿಯಲ್ ಮೀಡಿಯಾ ವೀಕ್ಷಿಸುತ್ತಿರುತ್ತೇನೆ.


  5) ಸೆಲ್ ಫೋನ್ ನೋಡದೆಯೇ ಯಾರೊಂದಿಗೂ 10 ನಿಮಿಷ ನಿರಂತರವಾಗಿ ನನಗೆ ಮಾತನಾಡಲು ಸಾಧ್ಯವಿಲ್ಲ.


  6) ಪ್ರತೀ ದಿನ ನನ್ನ ಫೋನ್ ಬಳಕೆ 5 ಗಂಟೆಗೂ ಹೆಚ್ಚಿರುತ್ತದೆ.


  ಈ ಮೇಲೆ ನೀಡಿರುವ ಪಟ್ಟಿ ಪರಿಪೂರ್ಣವಲ್ಲ. ಆದರೆ, ನಮಗೆ ಸಮಸ್ಯೆ ಇದೆಯಾ ಎಂಬುದನ್ನು ಅರಿಯಲು ಇದು ಆರಂಭಿಕ ಹೆಜ್ಜೆಯಷ್ಟೇ.


  ಇದನ್ನೂ ಓದಿ: K Annamalai - ತಂತ್ರಜ್ಞಾನ ವ್ಯಸನದಿಂದ ನಾವೆಷ್ಟು ಹಾಳಾಗಿದ್ದೇವೆ? ಈ ದಾಸ್ಯ ಸರಪಳಿ ಕಳಚುವ ಸಮಯ ಇದು


  ಈ ಹಂತಕ್ಕೆ ಬಂದಿದ್ಯಾಕೆ?


  ಸ್ಥಿಮಿತತೆ, ಗುಣಮಟ್ಟ, ನಿಶ್ಚಲತೆಗಿಂತ ನಾವು ವೇಗ, ಚಟುವಟಿಕೆ ಮತ್ತು ಚಲನಶೀಲತೆಗೆ ಹೆಚ್ಚು ಪ್ರಾಧಾನ್ಯತೆ ಸಿಗುತ್ತದೆ ಎಂದು ಭಾವಿಸಿದ್ದೇವೆ. ಆದರೆ ಇದು ನಿಜವಾ? ಇಡೀ ಜಗತ್ತು ಹೀಗೆಯೇ ಇದೆ ಎಂದು ನಾವು ಅಂದುಕೊಂಡಿದ್ದೇವೆ. ನೀವು ಸರಿಯಾಗಿ ಗಮನಿಸಿ ನೋಡಿ. ಸ್ಥಿಮಿತತೆ ಅಥವಾ ಸ್ಥಿರತೆ, ತಾಳ್ಮೆ, ನಿಶ್ಚಲತೆ, ಗುಣಮಟ್ಟಕ್ಕೆ ಜಗತ್ತು ಯಾವಾಗಲೂ ಬೆಲೆ ಕೊಡುತ್ತಾ ಬಂದಿರುವುದನ್ನು ಕಾಣಬಹುದು. ಬದಲಾಗಿರುವುದು ಪ್ರಪಂಚ ಅಲ್ಲ, ನಾವು. ನಮಗಿಂತ ಮುಂಚೆ ಕೋಟ್ಯಂತರ ಜನರು ಈ ಜಗತ್ತಿನಲ್ಲಿ ತಮ್ಮಿಚ್ಛೆಯ ಬದುಕು ಬಾಳಿ ಹೋಗಿದ್ದಾರೆ. ನಿರ್ದಿಷ್ಟ ಗುರಿಯೊಂದಿಗೆ ಸಂತೋಷವಾಗಿ ಬದುಕಿದ್ಧಾರೆ. ಚಟುವಟಿಕೆಯನ್ನೇ ಪ್ರಗತಿ ಎಂದು ಭ್ರಮಿಸಿ ನಿರಂತರವಾಗಿ ಓಡುತ್ತಿದ್ದೇವೆ. ನಾವು ಓಡುತ್ತಿರುವುದು ಅಂತಿಂಥದ್ದರೊಂದಿಗೆ ಅಲ್ಲ, ಹುಲಿಯ ಜೊತೆ. ಇನ್ನೂ ವೇಗವಾಗಿ ಓಡಲು ನಮ್ಮಿಂದಾಗದು, ನಿಧಾನ ಮಾಡಲೂ ಆಗದು. ಈ ಓಡು ಓಡು ಎಂಬ ಸಂಸ್ಕೃತಿಯು ನಮ್ಮ ಜೀವನಶೈಲಿಯನ್ನೇ ಬದಲಿಸುತ್ತಿದೆ. ತಂತ್ರಜ್ಞಾನ ವ್ಯಸನವೂ ಇದರದ್ದೇ ಒಂದು ಭಾಗ. ಇದಕ್ಕೆ ಪರಿಹಾರವಂತೂ ಇದೆ. ಈ ಆಟ ಆಡುವ ರೀತಿಯನ್ನೇ ನಾವು ಬದಲಾಯಿಸಬೇಕು. ನಮ್ಮ ಜೀವನದ ವೇಗಕ್ಕೇ ಕಡಿವಾಣ ಹಾಕಬೇಕು. ನಮ್ಮ ಅಸ್ತಿತ್ವದ ಅರ್ಥ ಕಂಡುಕೊಳ್ಳಬೇಕು. ಇದು ಅಂದುಕೊಂಡಷ್ಟು ಸುಲಭವಲ್ಲ ಎಂಬುದು ನನಗೆ ಗೊತ್ತು.


  ಸಣ್ಣ ಮಕ್ಕಳು, ಹದಿಹರೆಯದವರಲ್ಲಿ ಯಾವ ಮಟ್ಟದ ಗೀಳು ಇದೆ ಗೊತ್ತಾ?


  ನೀವು ಒಂದು ಹೋಟೆಲ್​ಗೆ ಹೋಗಿ ಅಲ್ಲಿ ಒಂದು ಪುಟ್ಟ ಕುಟುಂಬ ಊಟಕ್ಕೆ ಬಂದಿದ್ದರೆ ಹಾಗೇ ಗಮನಿಸಿ ನೋಡಿ. ಅಪ್ಪ ಅಮ್ಮ ಇಬ್ಬರ ಗಮನ ತಮ್ಮ ಕೈಯಲ್ಲಿರುವ ಸೆಲ್ ಫೋನ್ ಮೇಲೆಯೇ ನೆಟ್ಟಿರುತ್ತದೆ. ಅವರ ಜೊತೆ ಇರುವ ಮಗು ಅಥವಾ ಮಕ್ಕಳ ಕೈಗೆ ಒಂದು ಟ್ಯಾಬನ್ನೋ ಅಥವಾ ಫೋನನ್ನೋ ಕೊಟ್ಟಿರುತ್ತಾರೆ. ಆ ಮಗು ವಿಡಿಯೋ ನೋಡುವುದರಲ್ಲಿ ತಲ್ಲೀನವಾಗಿರುತ್ತದೆ. ಆ ಕುಟುಂಬ ಊಟ ತಿಂದು ಮುಗಿಸಿ ಎದ್ದೇಳುವವರೆಗೂ ಈ ದೃಶ್ಯ ಬದಲಾವಣೆ ಇರುವುದಿಲ್ಲ. ಒಂದು ವೇಳೆ, ಊಟದ ಮಧ್ಯೆ ನೀವು ಆ ಮಗುವಿನಿಂದ ಫೋನ್ ಕಿತ್ತುಕೊಳ್ಳಲು ಪ್ರಯತ್ನಿಸಿ ನೋಡಿ. ಆಕಾಶವೇ ಕೆಳಗೆ ಬೀಳುತ್ತಿರುವಂತೆ ಆ ಮಗು ರಾದ್ದಾಂತ ಮಾಡುತ್ತದೆ. ಇದು ಆ ಪೋಷಕರ ನಿರ್ಲಕ್ಷ್ಯತನಕ್ಕೆ ಒಳ್ಳೆಯ ಉದಾಹರಣೆ. ಮಗುವಿನ ಬದಲು ಮೊಬೈಲ್ ಸ್ಕ್ರೀನ್ ಮೇಲೆಯೇ ಇವರ ಗಮನ ಹೆಚ್ಚಾಗಿರುತ್ತದೆ. ಆ ಮಗು ಕೂಡ ಒಂದು ಹಂತದ ಬಳಿಕ ಮೊಬೈಲ್ ಮೇಲೆಯೇ ಅವಲಂಬಿತವಾಗಿಬಿಡುತ್ತದೆ (ಇದನ್ನ ಡಿಪೆಂಡೆನ್ಸಿ ಸಿಂಡ್ರೋಮ್ ಎನ್ನುತ್ತಾರೆ). ಮನೆಯಲ್ಲೂ ಇದೇ ಮಾದರಿ ದೃಶ್ಯವನ್ನು ನೀವು ಕಾಣಬಹುದು. ಮಗು ಅಳುತ್ತದೆ ಎಂದರೆ ಸಾಕು ಅದರ ಕೈಗೆ ಸೆಲ್ ಫೋನ್ ಕೊಟ್ಟು ಸಂಭಾಳಿಸಿಬಿಡುತ್ತಾರೆ.


  ಇನ್ನು, ಹರಿಹರೆಯದವರಲ್ಲಿ ತಂತ್ರಜ್ಞಾನದ ಗೀಳು ವಕ್ಕರಿಸಿರಲು ಸಹಪಾಠಿಗಳ ಪ್ರಭಾವವೇ (Peer Pressure) ಪ್ರಮುಖ ಕಾರಣ. ಇದರ ಜೊತೆಗೆ, ಕ್ಷಣಿಕ ಸುಖ ಬೇಡುವ ಭೋಗ ಸಂಸ್ಕೃತಿಯೂ ಇನ್ನೊಂದು ಕಾರಣ ಇರಬಹುದು. ಮನೆಯಲ್ಲಿ ಪೋಷಕರ ಬೇಜವಾಬ್ದಾರಿ ವರ್ತನೆ ಮತ್ತು ವಿವೇಕತನದ ಕೊರತೆ ಈ ಹದಿಹರೆಯದವರಲ್ಲಿ ಹುಂಬತನವನ್ನ ಹೆಚ್ಚಿಸಬಹುದು. ಜೀವನ ಏನೆಂಬುದು ಇವರಿಗೆ ಸರಿಯಾಗಿ ಅರಿವಿರುವುದಿಲ್ಲ. ಶಾಲೆಯಾಗಲೀ, ಮನೆಯಾಗಲೀ ಇವರಿಗೆ ದೊಡ್ಡ ದೃಷ್ಟಿಕೋನದಲ್ಲಿ ಜೀವನ ನೋಡಬೇಕೆಂಬ ಪಾಠ ಹೇಳಿಕೊಡುವುದೇ ಇಲ್ಲ. ಇದರಿಂದಾಗಿ ಇವರು ಸಾಮಾಜಿಕವಾಗಿ ಬೆರೆಯದೇ ತಮ್ಮದೇ ಏಕಾಂಗಿ ಪ್ರಪಂಚದಲ್ಲಿ ಬೆಳೆಯುತ್ತಾರೆ. ಪರಿಣಾಮವಾಗಿ ಅಪಾಯಕಾರಿ ಮಟ್ಟಕ್ಕೆ ತಂತ್ರಜ್ಞಾನದ ಗೀಳು ಹಚ್ಚಿಕೊಳ್ಳುತ್ತಾರೆ.


  ಇನ್ನು, ಕೌಮಾರ್ಯ (Adolescents – 21 ವರ್ಷದವರೆಗಿನ ಪ್ರಾಯ) ವರ್ಗದವರದ್ದು ಬೇರೆಯೇ ಸಮಸ್ಯೆ. ಯಾವ ಬುನಾದಿ ಇಲ್ಲದೇ, ನಿಜ ಜೀವನದಿಂದ ದೂರವೇ ಉಳಿದು ಬೆಳೆಯುವುದು ಇವರ ಸಮಸ್ಯೆಗೆ ಕಾರಣ. ಸುಂದರವಾಗಿ ಕಾಣಬೇಕು ಎಂದು ಇವರು ತಹತಹಿಸುತ್ತಾರೆ. ಈ ಎಳೆಯ ಯುವಕ, ಯುವತಿಯರ ಜೀವನದಲ್ಲಿ ಸಂತೋಷವೇ ಇಲ್ಲದಂತಿರುತ್ತದೆ. ಕ್ಷಣಿಕ ಸುಖಕ್ಕೆ ಹಾತೊರೆಯುತ್ತಿರುತ್ತಾರೆ.


  ಅಣ್ಣಾಮಲೈ ಅವರ ಈ ಲೇಖನಮಾಲೆಯ ಎಲ್ಲಾ ಲೇಖನಗಳಿಗೆ ಇಲ್ಲಿ ಕ್ಲಿಕ್ಕಿಸಿ


  ಈ ವ್ಯಸನಗಿಂದ ಮುಕ್ತವಾಗಲು ಇಲ್ಲಿವೆ ಕೆಲ ಆಯ್ಕೆಗಳು:


  1) ಈ ಸಮಸ್ಯೆಗೆ ನಿರ್ದಿಷ್ಟ ಪರಿಹಾರ ಎಂಬುದಿಲ್ಲ. ನಾಲ್ಕು ವರ್ಷದ ಮಗುವಿನಿಂದ ಹಿಡಿದು ಮಕ್ಕಳು, ವಯಸ್ಕರು, ವೃದ್ಧರವರೆಗೆ ಪ್ರತಿಯೊಬ್ಬರೂ ವಿಭಿನ್ನ ಜವಾಬ್ದಾರಿ ಹೊರಬೇಕು. ಹಿರಿಯರು ಒಂದನ್ನಂತೂ ಒಪ್ಪಿಕೊಳ್ಳಬೇಕು. ಸೆಲ್ ಫೋನ್ ನಮ್ಮ ಜೀವನದ ಒಂದು ಭಾಗವಾಗಿರುವ ಅನಿವಾರ್ಯ ಪೀಡೆ (Necessary Evil). ಆದರೆ, ಅದೇ ನಮ್ಮ ಜೀವನ ಆಗಬಾರದು ಎಂಬುದನ್ನು ತಿಳಿದಿರಬೇಕು.


  2) ನಾವೆಲ್ಲರೂ ನಮ್ಮ ನಮ್ಮ ಆದ್ಯತೆಗಳೇನು ಎಂಬುದನ್ನು ಗೊತ್ತು ಮಾಡಬೇಕು. ನನ್ನ ವೃತ್ತಿ ಜೀವನದ ಗುರಿ ಏನು? ನನ್ನ ಜೀವನಕ್ಕೆ ಅತ್ಯಾವಶ್ಯಕವಾದುದು ಏನು? ರಾಜಿಯೇ ಆಗಲು ಸಾಧ್ಯವಾಗದ ಅಂಶ ನನ್ನ ಜೀವನದಲ್ಲಿ ಏನಿದೆ? ನನ್ನ ಕುಟುಂಬ, ನನ್ನ ಕೆಲಸ ಮತ್ತು ನನ್ನ ಸಮಾಜಕ್ಕೆ ನಾನೇನು ಕೊಡಬೇಕು? ಇವೇ ಮುಂತಾದ ಪ್ರಶ್ನೆಗಳನ್ನ ಹಾಕಿಕೊಂಡು ಉತ್ತರ ಪಡೆದುಕೊಳ್ಳಿ. ಗ್ರೀಕ್ ಭಾಷೆಯಲ್ಲಿ ಒಂದು ನಾಣ್ನುಡಿ ಇದೆ: “ಪರೀಕ್ಷೆಗೊಳಪಡದ ಜೀವನ ಬಾಳಲು ಯೋಗ್ಯವಲ್ಲ”. ಒಮ್ಮೆ ಆದ್ಯತೆಗಳನ್ನ ಗುರುತಿಸಿದರೆ ನಮ್ಮ ಸಮಯ, ಶಕ್ತಿಯನ್ನು ಕ್ರಮಬದ್ಧವಾಗಿ ವಿನಿಯೋಗಿಸಲು ಸಾಧ್ಯ.


  3) ಎರಡು ವಿಚಾರಗಳನ್ನ ನಿಯಮಿತವಾಗಿ ಪಾಲಿಸಿರಿ: ದಿನದ ಇಂತಿಷ್ಟು ಅವಧಿಯಲ್ಲಿ ಸೆಲ್ ಫೋನ್ ಮುಟ್ಟುವುದಿಲ್ಲ ಎಂಬುದು ಒಂದು. ವಾರದಲ್ಲಿ ಒಂದು ದಿನ ಸೆಲ್ ಫೋನ್ ಅನ್ನೇ ಬಳಸುವುದಿಲ್ಲ ಎಂಬುದು ಇನ್ನೊಂದು ವಿಚಾರ. ನಿಮ್ಮ ಅಗತ್ಯಕ್ಕೆ ತಕ್ಕಂತೆ ನೀವೇ ಸಮಯ ಮತ್ತು ದಿನವನ್ನು ನಿಗದಿಪಡಿಸಿ, ಆ ಎರಡು ವಿಚಾರವನ್ನ ಆಚರಣೆ ತನ್ನಿ. ನೀವು ಹೀಗೆ ಮಾಡುವುದರಿಂದ ಮೆದುಳಿಗೆ ಪುನಶ್ಚೇತನ ನೀಡಿದಂತಾಗುತ್ತದೆ. ಮೊಬೈಲ್ ಇತ್ಯಾದಿ ಬಳಕೆಯಿಂದ ಜಡ್ಡು ಹಿಡಿದು ಹೋಗಿರುವ ಮಿದುಳಿಗೆ ಒಳ್ಳೆಯ ಬ್ರೇಕ್ ಸಿಕ್ಕಿದಂತಾಗುತ್ತದೆ.


  4) ನಿಮ್ಮ ಬೆಡ್​ರೂಮ್​ನಲ್ಲಿ ಸೆಲ್ ಫೋನ್ ಇಟ್ಟುಕೊಳ್ಳುವ ಅಭ್ಯಾಸ ತ್ಯಜಿಸಿಬಿಡಿ. ಇದರಿಂದ ನಿಮಗೆ ಒಳ್ಳೆಯ ನಿದ್ರೆ ಸಿಗುತ್ತದೆ. ಜೊತೆಗೆ, ಮಲಗುವ ಮುನ್ನ ಮತ್ತು ಎದ್ದ ನಂತರ ಸೆಲ್ ಫೋನ್ ನೋಡುವ ಚಟ ತಪ್ಪಿಸಬಹುದು.


  5) ಊಟ ಮಾಡುವಾಗ ಸೆಲ್ ಫೋನ್ ದೂರ ಇಟ್ಟಿರಿ. ಅಥವಾ ಪರದೆ ಕಾಣದಂತೆ ತಿರುಗುಮುರುಗು ಇಟ್ಟುಕೊಳ್ಳಿ. ಯಾರೊಂದಿಗಾದರೂ ಮುಖತಃ ಮಾತನಾಡುತ್ತಿದ್ದಾಗ ಫೋನ್​ನಲ್ಲಿ ಸೋಷಿಯಲ್ ಮೀಡಿಯಾ ನೋಡುವ ಗೀಳು ಬಿಟ್ಟುಬಿಡಿ.


  6) ನಿಮ್ಮ ಸೆಲ್ ಫೋನ್ ಬಳಕೆಯನ್ನು ಮಿತಗೊಳಿಸುವ ಆ್ಯಪ್​ಗಳಿವೆ. ಅದರ ಸಹಾಯ ಬೇಕಾದರೆ ಪಡೆದುಕೊಳ್ಳಬಹುದು. ನಮ್ಮ ಸೆಲ್​ಫೋನ್​ನ ಸೆಟಿಂಗ್​ನಲ್ಲೂ ನಾವು ಸೂಕ್ತ ಬದಲಾವಣೆ ಮಾಡಿಕೊಳ್ಳಬಹುದು ಇದಕ್ಕೆ ಕಡಿವಾಣ ಹಾಕಬಹುದು.


  ಈ ನಿಟ್ಟಿನಲ್ಲಿ ನೀವು ಪ್ರಯತ್ನ ಹಾಕುವ ಮುನ್ನ ಈ ಕೆಳಗಿನ ಸತ್ಯವನ್ನ ಜೀವನದಲ್ಲಿ ಅಳವಡಿಸಿಕೊಳ್ಳಿ: “ಜಗತ್ತಿಗೆ ನಾವು ಏನೂ ಅಲ್ಲ, ನಮಗೆ ಈ ಜಗತ್ತು ಏನೂ ಇಲ್ಲ. ಆದರೆ, ಅಗತ್ಯ ಬಿದ್ದರೆ ನಾನು ಜಗತ್ತಿಗಾಗಿ ನಿಲ್ಲುತ್ತೇನೆ, ಜಗತ್ತು ನನಗಾಗಿ ಇರುತ್ತದೆ”. ಪ್ರತಿಯೊಂದು ವಿಚಾರದಲ್ಲೂ ನನಗನಿಸಿದ್ದನ್ನ ಹೇಳುತ್ತೇನೆ, ಎಲ್ಲರೂ ಅದನ್ನು ಕೇಳಬೇಕು ಎಂಬ ಮಾಸಿಕತೆಯಿಂದ ನಾವು ಹೊರಬರಬೇಕು. ಅಗತ್ಯ ಸಂದರ್ಭ ಬಂದಾಗ ಪ್ರಪಂಚ ನಮ್ಮ ಮಾತನ್ನು ಆಲಿಸುತ್ತದೆ ಎಂಬುದನ್ನು ತಿಳಿಯಿರಿ.


  ನಮ್ಮ ಬಗ್ಗೆ ನಮಗಿರುವ ಆತ್ಮರತಿಯ ಮನಃಸ್ಥಿತಿಯನ್ನು ಇದು ತೊಡೆದುಹಾಕುತ್ತದೆ. ಇದು ಸಾಧ್ಯವಾದಲ್ಲಿ ಬೇರೆಲ್ಲಾ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ.


  ಲೇಖಕರು: ಕೆ. ಅಣ್ಣಾಮಲೈ, ಮಾಜಿ ಐಪಿಎಸ್ ಅಧಿಕಾರಿ


  (ಕೋವಿಡ್-19 ಸೋಂಕು ವ್ಯಾಪಿಸದಂತೆ ದೇಶಾದ್ಯಂತ 21 ದಿನ ಕಾಲ ದಿಗ್ಬಂಧನ ವಿಧಿಸಲಾಗಿದೆ. ಜನರೆಲ್ಲರೂ ಅನವಶ್ಯಕವಾಗಿ ರಸ್ತೆಗೆ ಬರುವಂತಿಲ್ಲ. ಮನೆಯಲ್ಲೇ ಇರಬೇಕೆಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ. ಈ ಸಂದರ್ಭದಲ್ಲಿ 21 ದಿನಗಳನ್ನ ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂದು ಲೇಖಕರು ತಿಳಿಹೇಳಿದ್ದಾರೆ. ಅವರ ಲೇಖನಮಾಲೆಯ 9ನೇ ಲೇಖನ ಇದು.)

  Published by:Vijayasarthy SN
  First published: