ಬೆಂಗಳೂರು: ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲೇ ಕೊರೋನಾತಂಕ ಕಮ್ಮಿಯಾಯ್ತು ಅಂತಾ ನಿಟ್ಟುಸಿರು ಬಿಟ್ಟಿರೊ ಜನರಿಗೆ ವಿಶ್ವ ಆರೋಗ್ಯ ಸಂಸ್ಥೆ ಆಘಾತಕಾರಿ ಸುದ್ದಿ ನೀಡಿದೆ. ಕೊರೋನಾ ಕಾಮನ್ ಅಂತ ಮಾಸ್ಕ್ ಬಿಚ್ಚಿಟ್ಟು ಒಡಾಡ್ತಿರುವ ಮಂದಿಗೆ ಹೊಸ ವೈರಸ್ ಮಾರಣಾಂತಿಕವಾಗಿ ಪರಿಣಮಿಸಲಿದೆ. ಈಗಾಗಲೇ 9 ದೇಶಗಳು ಮ್ಯೂಟೇಟೆಡ್ ವೇರಿಯಂಟ್ ನ ಕಪಿಮುಷ್ಟಿಯಲ್ಲಿದ್ದು ಇಡೀ ಜಗತ್ತಿಗೆ ಮಾರಕವಾಗಬಹುದು ಎಂದು ಹೇಳಲಾಗ್ತಿದೆ.
ಮತ್ತೆ ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಕೊರೋನಾ.!!
ಯಾರು ಈ ತರಹದ ವೈರಸ್ ಬರುತ್ತೆ ಅಂತಾ ಕನಸಲ್ಲೂ ಎಂದುಕೊಂಡಿರ್ಲಿಕ್ಕಿಲ್ಲ. ಕಳೆದ ಎರಡು ವರ್ಷಗಳಿಂದ ಜನರನ್ನು ಬಿಟ್ಟುಬಿಡದೆ ಕಾಡ್ತಿರುವ ಈ ಕೊರೊನಾ ವೈರಸ್ ಹಲವಾರು ರೂಪಾಂತರದಲ್ಲಿ ಬಂದು ಜನರ ಜೀವನ ಕಿತ್ತುಕೊಂಡಿದೆ. ಹೀಗಿರುವಾಗ ಈ ವೈರಸ್ನ ಹೊಸತಳಿಯೊಂದು ಪತ್ತೆಯಾಗಿದೆ. ಕೋವಿಡ್ನ ಹೊಸ ತಳಿ B.1.1.529, ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್ (Omicron) ಎಂದು ನಾಮಕರಣ ಮಾಡಿದೆ. ಈಗಾಗಲೇ ಬೋಟ್ಸ್ವಾನ (Botswana), ದಕ್ಷಿಣ ಆಫ್ರಿಕಾ ಹಾಗೂ ಹಾಂಕಾಂಗ್ ಸೇರಿದಂತೆ ಜಗತ್ತಿನ 9 ದೇಶಗಳಲ್ಲಿ ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಡೆಲ್ಟಾಗಿಂತ ವೇಗವಾಗಿ ಹರಡಬಲ್ಲ ಈ ಸೋಂಕು ಇಡೀ ವಿಶ್ವವನ್ನೇ ನಡುಗಿಸಿದೆ. ಈ ಬಗ್ಗೆ ಕೇಂದ್ರದಿಂದ ರಾಜ್ಯ ಆರೋಗ್ಯ ಇಲಾಖೆಗೆ ಹೊಸ ತಳಿಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಮಾಹಿತಿ ಬಂದಿದ್ದು, ಈ 9 ದೇಶಗಳಿಂದ ಬರುವವರಿಗೆ ಕಟ್ಟುನಿಟ್ಟಾಗಿ ಕೋವಿಡ್ ಪ್ರೊಟೊಕಾಲ್ ಪಾಲನೆಯಾಗಬೇಕು ಎಂಬ ಸೂಚಿಸಲಾಗಿದೆ.
ಲಸಿಕೆಯನ್ನೂ ಮೀರಿ ಕಂಟಕವಾಲಿದೆಯೇ ಒಮಿಕ್ರಾನ್.!?
ಈ ವೈರಸ್ ತೀವ್ರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಒಮಿಕ್ರಾನ್ ವೈರಸ್ ಅನ್ನು VOC ಎಂದು ಘೋಷಿಸಿದೆ. VOC ಎಂದರೆ variant of concern ಎಂದರ್ಥ. VOC ಅಂತ ಘೋಷಿಸಿದ ಮೇಲೆ ಎಲ್ಲಾ ದೇಶಗಳು ಎಚ್ಚರಿಕೆ ವಹಿಸಬೇಕು. ದೇಶಗಳಲ್ಲಿ ನಡೆಯುವ ಜೀನೋಮ್ ಸೀಕ್ವೆನ್ಸಿಂಗ್ ಮಾಹಿತಿಯನ್ನ WHO ಜೊತೆ ಹಂಚಿಕೊಳ್ಳಬೇಕು. ಹೊಸ ರೂಪಾಂತರಿ ಸೋಂಕಿನ ಬಗ್ಗೆ ರಿಪೋರ್ಟ್ ಮಾಡಬೇಕು. ಅಲ್ಲದೇ ಈ ಹೊಸ ರೂಪಾಂತರಿ ಬಗ್ಗೆ ಹೆಚ್ಚು ಫೀಲ್ಡ್ ವರ್ಕ್ ಮಾಡಬೇಕು. ಹೊಸ ರೂಪಾಂತರಿಯ ತೀವ್ರತೆ, ಸಾವಿನ ಪ್ರಮಾಣದ ಬಗ್ಗೆ ಅಧ್ಯಯನ ನಡೆಸುವಂತೆ ಸೂಚಿಸಿದೆ. ಇತ್ತ ಭಾರತೀಯ ತಜ್ಞರಿಂದಲೂ ಈ ಹೊಸತಳಿಯ ಬಗ್ಗೆ ಆತಂಕ ವ್ಯಕ್ತವಾಗಿದ್ದು, ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿ ಸೋಂಕು ಹರಡಬಹುದು ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ವಿದೇಶಗಳಿಂದ ಬಂದವರಲ್ಲಿ ಕೊವಿಡ್ ಪಾಸಿಟಿವ್ ಬಂದ್ರೆ, ಸ್ಯಾಂಪಲ್ಗಳನ್ನು ಸೀಕ್ವೆನ್ಸಿಂಗ್ ಮಾಡುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Omicron: ದಕ್ಷಿಣ ಆಫ್ರಿಕಾ ವೈರಸ್ಗೆ WHO 'ಓಮಿಕ್ರಾನ್' ಎಂದು ಹೆಸರಿಟ್ಟಿದ್ದು ಈ ಕಾರಣಕ್ಕೆ!
ಮೂರನೇ ಅಲೆಗೆ ಕಾರಣವಾಗುತ್ತಾ ಡೆಡ್ಲಿ ಒಮಿಕ್ರಾನ್.!?
ಇತ್ತ WHO ಘೋಷಣೆ ಹಾಗೂ ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ ಹೊಸತಳಿಯ ಹರಡುವಿಕೆಗೆ ಬ್ರೇಕ್ ಹಾಕಲು ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿದೆ. ಈ ಬಗ್ಗೆ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಏರ್ ಪೋರ್ಟ್ ಗಳಲ್ಲಿ ತೀವ್ರ ನಿಗಾ ವಹಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದ ಪ್ರಯಾಣಿಕರ ಟೆಸ್ಟ್ ನಡೆಸಲಾಗುತ್ತಿದ್ದು, ಪಾಸಿಟಿವ್ ಬಂದರೆ ನೆಗೆಟಿವ್ ರಿಸಲ್ಟ್ ಬರುವವರೆಗೂ ಹೊರ ಹೋಗಲು ಅವಕಾಶ ನೀಡುತ್ತಿಲ್ಲಾ. ಅದರಲ್ಲೂ ಈ ಸೋಂಕು ಹರಡಿರುವ ದೇಶಗಳಿಂದ ಬರುತ್ತಿರುವವರ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ಇನ್ನು ಹೊಸದಾಗಿ ಪತ್ತೆಯಾಗ್ತಿರುವ ಸೋಂಕನ್ನ, ಜಿನೋಮಿಕ್ ಸೀಕ್ವೆನ್ಸಿಂಗ್ ಗೆ ಒಳಪಡಿಸಿ ಅದರ ತೀವ್ರತೆ ಅಧ್ಯಯನ ಮಾಡಲಾಗುತ್ತಿದೆ. ಯಾರು ಆತಂಕ ಪಡದೆ ಎಲ್ಲರೂ ಕೊರೋನಾ ನಿಯಮಗಳನ್ನು ಪಾಲಿಸಿ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ಆಟೋಗಳಿಗೆ ಧ್ವನಿ ವರ್ಧಕ ಕಟ್ಟಿ ರೂಪಾಂತರಿ ಎಮಿಕ್ರಾನ್ ಬಗ್ಗೆ ತಿಳುವಳಿಕೆ.!!
ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾಡಳಿತ ಈ ಬಗ್ಗೆ ಮಹತ್ವದ ಸಭೆ ನಡೆಸಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಮಹಾರಾಷ್ಟ್ರ ಹಾಗೂ ಕೇರಳದಿಂದ ಬರುವ ಪ್ರಯಾಣಿಕರಿಗೆ ರೈಲ್ವೇ & ಬಸ್ ನಿಲ್ದಾಣದಲ್ಲೇ ಕೊರೋನಾ ಟೆಸ್ಟ್ ಗೆ ಬಿಬಿಎಂಪಿ ನಿರ್ಧರಿಸಿದೆ. ಕಳೆದೊಂದು ವಾರದಲ್ಲಿ ನಗರದಲ್ಲಿ 160ರ ಸರಾಸರಿಯಲ್ಲಿ ಸೋಂಕು ಪತ್ತೆಯಾಗಿದೆ. ನಿನ್ನೆ ಒಂದೇ ದಿನ ಬೆಂಗಳೂರಿನಲ್ಲಿ 224 ಕೇಸ್ ದಾಖಲಾಗಿದೆ. ಈ ಪೈಕಿ ಅತಿ ಹೆಚ್ಚು ಸೋಂಕು ಪತ್ತೆಯಾಗಿರುವುದು ಆನೆಕಲ್ ನಲ್ಲಿ.
ಇದನ್ನೂ ಓದಿ: Nude Doctor: ಅರೆ ಬೆತ್ತಲೆಯಲ್ಲಿ ವೈದ್ಯ! ನಟಿಯ ರೋಗ ವಾಸಿ ಮಾಡುವುದಾಗಿ ಹೇಳಿ ಮಂಚವೇರಿ ಸಿಕ್ಕಿಬಿದ್ದ!
ಇದು ಗಡಿಭಾಗ ಆಗಿರುವ ಹಿನ್ನೆಲೆ ಚೆಕ್ ಪೋಸ್ಟ್ ಹಾಕಿ ತಪಾಸಣೆಗೆ ಸೂಚನೆ ಕೊಡಲಾಗಿದೆ. ಈ ಮೂಲಕ ಬರುವ ಕೇರಳ, ತಮಿಳುನಾಡು ಪ್ರಯಾಣಿಕರ ತಪಾಸಣೆ ಕಡ್ಡಾಯ ಮಾಡಲಾಗಿದೆ. ಸದ್ಯ ಬೆಂಗಳೂರಿನಲ್ಲಿ 63 ಆ್ಯಕ್ಟಿವ್ ಕಂಟೈನ್ಮೆಂಟ್ ಝೋನ್ ಗಳಿದ್ದು, ಹೆಚ್ಚಿನ ನಿಗಾ ಇಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೊಸ ರೂಪಾಂತರಿಯನ್ನು ಕಟ್ಟಿಹಾಕಲು ಲಸಿಕೆಯೊಂದೇ ದಾರಿ. ಹೀಗಾಗಿ ವಿಭಿನ್ನ ಮಾದರಿಯಲ್ಲಿ ಲಸಿಕೆ ಪಡೆಯಲು ಉತ್ತೇಜನಾ ಜಾಹಿರಾತು ನಡೆಸಲು ಪಾಲಿಕೆ ನಿರ್ಧರಿಸಿದೆ. ಆಟೋ ಗಳಿಗೆ ಧ್ವನಿ ವರ್ಧಕ ಕಟ್ಟಿ ರೂಪಾಂತರಿ ಎಮಿಕ್ರಾನ್ ಹಾಗೂ ಲಸಿಕೆ ಪಡೆಯುವಂತೆ ಪ್ರೇರಣೆ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಈ ಒಮಿಕ್ರಾನ್ ತಳಿಯಿಂದಲೇ ರಾಜ್ಯದಲ್ಲಿ ಮೂರನೇ ಅಲೆ ಸೃಷ್ಟಿಯಾಗುತ್ತಾ ಎಂಬ ಆತಂಕವೂ ಹೆಚ್ಚಾಗಿದೆ. ಆರೋಗ್ಯ ಸಚಿವರ ಮಾಹಿತಿಯಂತೆ, ರಾಜ್ಯದ 45 ಲಕ್ಷ ಜನರು ಸೆಕೆಂಡ್ ಡೋಸ್ ವ್ಯಾಕ್ಸಿನ್ ಇನ್ನೂ ಪಡೆದಿಲ್ಲ. ಒಟ್ಟು ವ್ಯಾಕ್ಸಿನ್ ಪಡೆದವರಲ್ಲಿ 57% ಮಂದಿ ಮಾತ್ರ ಸಂಪೂರ್ಣವಾಗಿ ವ್ಯಾಕ್ಸಿನೇಟೆಡ್ ಆಗಿದ್ದಾರೆ. ಹೀಗಿರುವಾಗ ಡೆಲ್ಟಾಗಿಂತಲು ಫಾಸ್ಟ್ ಆಗಿರುವ ಈ ಎಮಿಕ್ರಾನ್ ನಮ್ಮ ದೇಶಕ್ಕೂ ಲಗ್ಗೆ ಇಟ್ಟರೆ ಮೂರನೇ ಅಲೆ ಬರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ವರದಿ: ಆಶಿಕ್ ಮುಲ್ಕಿ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ