ಕೊಚ್ಚಿ (ಮೇ 26); ಕೊರೋನಾ ಪ್ರಹಾರದಿಂದ ತತ್ತರಿಸಿರುವ ಮಹಾರಾಷ್ಟ್ರಕ್ಕೆ ನೆರವಾಗಲು ಕೇರಳ ಸರ್ಕಾರ ಮುಂದಾಗಿದೆ. ಕೊರೋನಾ ವಿರುದ್ಧ ಹೋರಾಡಲು ಈ ತಿಂಗಳ ಅಂತ್ಯದ ವೇಳೆಗೆ ಕೇರಳ ಸರ್ಕಾರ ಮುಂಬೈಗೆ ನುರಿತ ವೈದ್ಯರ ತಂಡವನ್ನು ಕಳುಹಿಸಲಿದೆ ಎಂದು ಸ್ವತಃ ಪಿಣರಾಯಿ ವಿಜಯನ್ ಸರ್ಕಾರ ಸ್ಪಷ್ಟಪಡಿಸಿದೆ.
ಮುಂಬೈನಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಮಾನವ ಶಕ್ತಿಯ ಕೊರತೆಯನ್ನು ನೀಗಿಸುವ ಸಲುವಾಗಿ ಮಹಾರಾಷ್ಟ್ರ ಸರ್ಕಾರ ಕಳೆದ ವಾರವೇ ಕೇರಳದ ನೆರವು ಕೋರಿತ್ತು.
ಕೇರಳ ಆರೋಗ್ಯ ಸಚಿವೆ ಕೆ ಕೆ ಶೈಲಾಜಾ ಅವರಿಗೆ ಕಳೆದ ವಾರ ಪತ್ರ ಬರೆದಿದ್ದ ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ನಿರ್ದೇಶನಾಲಯ (ಡಿಎಂಇಆರ್), “50 ಜನ ನುರಿತ ವೈದ್ಯರು ಹಾಗೂ 100 ಜನ ದಾದಿಯರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಕ ಮಾಡುವಂತೆ” ಮನವಿ ಮಾಡಿತ್ತು.
ಅಲ್ಲದೆ, ಕೇರಳ ಸಾಧನೆ ಕುರಿತು ಬಹಿರಂಗ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ “ಕೇರಳ ಇತರ ರಾಜ್ಯಗಳಿಗೆ ಹೋಲಿಸಿದರೆ ಕೊರೋನಾವನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಮಹಾರಾಷ್ಟ್ರವು ಕೇರಳದಿಂದ ಪಾಠಗಳನ್ನು ಕಲಿತುಕೊಳ್ಳಬಹುದು” ಎಂದು ಅಭಿಪ್ರಾಯಪಟ್ಟಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಪ್ರಕಟಣೆ ಹೊರಡಿಸುವ ಮೂಲಕ ಮಾಹಿತಿ ನೀಡಿರುವ ಕೇರಳ ಸರ್ಕಾರ, “ನಮ್ಮ ವೈದ್ಯರ ತಂಡ ಈ ವಾರದ ಅಂತ್ಯದ ವೇಳೆಗೆ ಮಹಾರಾಷ್ಟ್ರಕ್ಕೆ ತೆರಳುವ ಸಾಧ್ಯತೆಯಿದೆ. ಈ ವೈದ್ಯರ ತಂಡದಲ್ಲಿ ಶ್ವಾಸಕೋಶಶಾಸ್ತ್ರಜ್ಞರು, ಅರಿವಳಿಕೆ ತಜ್ಞರು, ವೈದ್ಯರು ಮತ್ತು ಕಿರಿಯ ವೈದ್ಯರು ಇರಲಿದ್ದಾರೆ.
ಈ ಹಿಂದೆ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದ ಕಾಸರಗೋಡು ಜಿಲ್ಲೆಯ ವೈದ್ಯಕೀಯ ತಂಡದ ನೇತೃತ್ವ ವಹಿಸಿದ್ದ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ.ಸಂತೋಷ್ ಕುಮಾರ್ ಅವರು ಈ ತಂಡದ ನೇತೃತ್ವ ವಹಿಸಲಿದ್ದಾರೆ” ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಇಂತಹಾ ಕಠಿಣ ಕಾಲದಲ್ಲಿ ಮಹಾರಾಷ್ಟ್ರಕ್ಕೆ ಸಹಾಯ ಮಾಡಲು ಕೇರಳಕ್ಕೆ ಸಾಧ್ಯವಾದರೆ, ಅದು ಉತ್ತಮ ಮಾನವೀಯ ಸೂಚಕವಾಗಿದೆ” ಎಂದು ಡಾ.ಸಂತೋಷ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಕೊರೋನಾ ಪ್ರಹಾರಕ್ಕೆ ಮಹಾರಾಷ್ಟ್ರ ಅಕ್ಷರಶಃ ತತ್ತರಿಸಿಹೋಗಿದೆ. ಭಾರತದಲ್ಲೇ ಅತಿಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ಮಹಾರಾಷ್ಟ್ರ ಒಳಗಾಗಿದೆ. ಈ ರಾಜ್ಯದಲ್ಲಿ ಸುಮಾರು 52,667 ಜನ ಮಾರಣಾಂತಿಕ ಸೋಂಕಿಗೆ ಒಳಗಾಗಿದ್ದು, 1,695 ಜನ ಮೃತಪಟ್ಟಿದ್ದಾರೆ. ಪರಿಣಾಮ ಮಹಾರಾಷ್ಟ್ರದಲ್ಲಿ ಕೊರೋನಾ ಅಂಕೆಗೆ ಸಿಲುಕದಂತಾಗಿದ್ದು, ಕೇರಳ ಸರ್ಕಾರ ನೆರವಿಗೆ ಧಾವಿಸಲು ಮುಂದಾಗಿದೆ.
ಇದನ್ನೂ ಓದಿ : ಲಾಕ್ಡೌನ್ ಮಾಡಿಯೂ ವಿಫಲವಾದ ಏಕೈಕ ದೇಶ ಭಾರತ, ಅದಕ್ಕಾಗಿಯೇ ಮೋದಿ ಹಿಂದೆಸರಿದಿದ್ದಾರೆ: ರಾಹುಲ್ ಗಾಂಧಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ